ಸೋಮವಾರ, ಮೇ 13, 2013

ಕುಮುದ್ವತಿ ನದಿಯ ಪುನಶ್ಚೇತನ

ಬೆಂಗಳೂರು, ಭಾರತ
೧೩ ಮೇ ೨೦೧೩

ವತ್ತು ನಾವು ಕುಮುದ್ವತಿ ನದಿಯ ಯೋಜನೆಯನ್ನು ಆರಂಭಿಸಿದ್ದೇವೆ.  ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ (Volunteer For A Better India) ಎಂಬ ಕಾರ್ಯಕ್ರಮಕ್ಕೆ ಸಜ್ಜಾದ ಗುಂಪು, ಬತ್ತಿಹೋಗಿದ್ದ ಹಾಗೂ ಹಿ೦ದೆ೦ದೋ ಬೆಂಗಳೂರು ನಗರಕ್ಕೆ ನೀರಿನ ಮೂಲವಾಗಿದ್ದ ಒಂದು ನದಿಯನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಅದ್ಭುತವಾಗಿ ನೆರವೇರಿಸಿದೆ. ಈಗ ಒಮ್ಮೆ ಇದು ಪುನಶ್ಚೇತನಗೊಂಡರೆ, ಬೆಂಗಳೂರಿನಲ್ಲಿರುವ ನೀರಿನ ಕೊರತೆಯಲ್ಲಿ ಶೇಕಡಾ ೬೦ರಷ್ಟು ಬಗೆಹರಿಯುವುದು ಮತ್ತು ಇದರಿಂದಾಗಿ ೩೦೦ ಹಳ್ಳಿಗಳಿಗೆ ಲಾಭವಾಗುವುದು.

ಈಗಾಗಲೇ ೨೦ ಸರೋವರಗಳನ್ನು ಪುನಶ್ಚೇತನಗೊಳಿಸಲಾಗಿದೆ ಮತ್ತು ಎಲ್ಲಾ ಕೆಲಸವು ಸ್ವಯಂಸೇವಕರಿಂದ ಮಾಡಲ್ಪಟ್ಟಿತು. ಇದಾಗಲು, ಕಳೆದ ಮೂರು ತಿಂಗಳುಗಳಲ್ಲಿ ಪ್ರತಿ ವಾರವೂ ಏಳರಿಂದ ಎಂಟು ಗಂಟೆಗಳಷ್ಟು ಕಾಲ ಆಸ್ಥೆಯಿಂದ ಕಷ್ಟಪಟ್ಟು ಕೆಲಸ ಮಾಡಿದ ಎಲ್ಲಾ ಸ್ವಯಂಸೇವಕರನ್ನು ನಾನು ಅಭಿನಂದಿಸುತ್ತೇನೆ.

ನೋಡಿ, ಅದುವೇ ಬೇಕಾಗಿರುವುದು - ಆಸಕ್ತಿ, ಒಂದು ರೂಪಾಂತರವನ್ನು ಉಂಟುಮಾಡಲು. ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಳ ಅವಶ್ಯವಿರುವ ಬದಲಾವಣೆಯನ್ನು ಜಾರಿಗೆ ತರಲು ನಮ್ಮಲ್ಲಿ ಆಸಕ್ತಿಯಿರಬೇಕು.

ತಮ್ಮ ಸಾವಯವ ಉತ್ಪನ್ನಗಳಿಗೆ ಸರಿಯಾದ ಬೆಲೆಗಳನ್ನು ಪಡೆಯದೇ ಇರುತ್ತಿದ್ದ ರೈತರು ಚಿಂತಿಸಬೇಕಾಗಿಲ್ಲವೆಂಬ ಕಾರಣಕ್ಕೆ, ಇವತ್ತು ನಾವು ಶ್ರೀ ಶ್ರೀ ಆರ್ಗಾನಿಕ್ಸ್ (ಸಾವಯವ ಉತ್ಪನ್ನಗಳು)ನ್ನು ಕೂಡಾ ಆರಂಭಿಸಿದ್ದೇವೆ. ಅವರು ಕೇವಲ ನಮ್ಮ ಕೃಷಿ ವಿಭಾಗವನ್ನು ಸಂಪರ್ಕಿಸಬೇಕು ಮತ್ತು ನಾವು ಅವರಿಗೆ ಸಹಾಯ ಮಾಡುವೆವು. ಸಾವಯವ ಆಹಾರವನ್ನು ಬೆಳೆಯುವುದು ಹೇಗೆ ಎಂಬುದರ ಬಗ್ಗೆ ನಾವು ಅವರಿಗೆ ಶಿಕ್ಷಣವನ್ನು ಕೂಡಾ ನೀಡುವೆವು ಮತ್ತು ಅವರ ಯೋಜನೆಗಳು ಸಾಮಾನ್ಯ ಜನತೆಯನ್ನು ತಲುಪಲು ಬೇಕಾಗಿರುವ ಅವಕಾಶಗಳನ್ನು ಕೂಡಾ ನೀಡುವೆವು. ಇದು ಕೂಡಾ ಬಹಳ ಮುಖ್ಯವಾಗಿದೆ.

ಆಮೇಲೆ, ಒಂದು ಮನೆಯನ್ನು ಬೆಳಗಿಸಿರಿ ಯೋಜನೆ.  ಯಾವುದೇ ವಿದ್ಯುತ್ ಪೂರೈಕೆ ಇಲ್ಲದೇ ಇದ್ದ ಮನೆಗಳನ್ನು ಬೆಳಗಿಸಲು ನಮ್ಮ ಎಸ್.ಎಸ್.ಆರ್.ಡಿ.ಪಿ. (ಶ್ರೀ ಶ್ರೀ ರೂರಲ್ ಡೆವೆಲಪ್ಮೆಂಟ್ ಪ್ರೋಗ್ರಾಮ್ - ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ) ತಂಡದಿಂದ ಇದನ್ನು ಮಾಡಲಾಗುತ್ತಿದೆ. ಕೇವಲ ಕಳೆದ ಕೆಲವು ತಿಂಗಳುಗಳಲ್ಲಿ ೪೦೦೦ ಮನೆಗಳನ್ನು ಬೆಳಗಿಸಲಾಗಿದೆ. ಇದೊಂದು ಬಹಳ ದೊಡ್ಡ ಸಾಧನೆ.

ಯಾವುದೇ ವಿದ್ಯುತ್ ಪೂರೈಕೆಯಿಲ್ಲದಿದ್ದ ೪೦೦೦ ಮನೆಗಳಲ್ಲಿ ಈಗ ಸೌರ ಪ್ರಕಾಶವಿದೆ; ಹಸಿರು ಶಕ್ತಿ. ಈ ಮನೆಗಳಲ್ಲಿ ಹಲವು ಇರುವುದು, ಯಾವುದೇ ರಸ್ತೆಗಳಿಲ್ಲದ ಜಾಗಗಳಲ್ಲಿ ಮತ್ತು ಈಗ ಈ ಜನರು ವಿದ್ಯುತ್ತನ್ನು ಹೊಂದಿದ್ದಾರೆ. ಇದು ಬಹಳ ಚೆನ್ನಾಗಿದೆ.

ಇವತ್ತು ಬೆಳಗ್ಗೆ ನಾನು ಎದ್ದಾಗ ನನ್ನ ಮನಸ್ಸಿಗೊಂದು ಯೋಚನೆ ಬಂತು, ಏನೆಂದರೆ, ಜ್ಞಾನೋದಯವಾದವರಲ್ಲಿ ಅಥವಾ ಒಳ್ಳೆಯ ಜನರಲ್ಲಿ ದೇವರನ್ನು ನೋಡುವುದು ಕಷ್ಟವಲ್ಲ. ಆದರೆ ಮೂರ್ಖರಲ್ಲಿ, ಪೆದ್ದರಲ್ಲಿ ಮತ್ತು ದುಷ್ಟರಲ್ಲಿ ದೇವರನ್ನು ನೋಡುವುದು ಒಂದು ಸವಾಲಾಗಿದೆ. ಮೂರ್ಖ ಹಾಗೂ ದುಷ್ಟ ಜನರಲ್ಲಿ ದೇವರನ್ನು ನೋಡುವುದು ಬಹಳ ಕಷ್ಟ. ನಮ್ಮ ಮನಸ್ಸಿಗೆ ತೊಂದರೆ ನೀಡುವುದು ಈ ಜನರೇ. ನೀವು ಧ್ಯಾನಕ್ಕೆ ಕುಳಿತುಕೊಳ್ಳುವಾಗ, ಯಾವುದು ನಿಮಗೆ ತೊಂದರೆ ಕೊಡುತ್ತದೆ? ನಿಮಗೆ ತೊಂದರೆ ಕೊಡುವುದು ದುಷ್ಟ ವ್ಯಕ್ತಿ ಅಥವಾ ಮೂರ್ಖ ವ್ಯಕ್ತಿ. ಅವರು ಕೂಡಾ ದೇವರ ಅಭಿವ್ಯಕ್ತಿ ಎಂಬುದನ್ನು ಸುಮ್ಮನೆ ನೋಡಿ, ಆಗ ಮನಸ್ಸು ಇನ್ನೊಂದು ಹಂತದ ಪ್ರಜ್ಞೆಗೆ ವರ್ಗವಾಗುತ್ತದೆ. ನಿಮ್ಮ ಪ್ರಜ್ಞೆಯು ಇನ್ನೊಂದು ಹಂತಕ್ಕೆ ವರ್ಗವಾಗುತ್ತದೆ, ಅಲ್ಲಿ ನೀವು ಎಲ್ಲರಲ್ಲೂ, ಎಲ್ಲದರಲ್ಲೂ ಆ ಏಕತ್ವ, ಆ ಒಂದು ದೈವಿಕತೆಯನ್ನು ನೋಡುತ್ತೀರಿ. ಒಳಕ್ಕೆ ಆಳವಾಗಿ ಹೋಗಲು ಇದು ನಮ್ಮನ್ನು ಶಕ್ತಗೊಳಿಸುತ್ತದೆ.

ಬದಲಿಗೆ ನಾವೇನು ಮಾಡುತ್ತೇವೆ? ನಾವು ಕೆಲಸ ಮಾಡಬೇಕಾಗಿರುವಾಗ, "ಇದು ಸರಿಯಾಗಿಲ್ಲದಿದ್ದರೂ ಕೂಡಾ, ಹೇಗಿದ್ದರೂ ಎಲ್ಲವೂ ದೇವರ ಇಚ್ಛೆ ಮಾತ್ರ" ಎಂದು ಯೋಚಿಸುತ್ತೇವೆ. ನಾವು ಈ ರೀತಿ ಯೋಚಿಸುವಾಗ, ಕೆಲಸ ಮಾಡಲಿರುವ ಆಸಕ್ತಿ ಮತ್ತು ಉತ್ಸಾಹವನ್ನು ನಾವು ಕಳೆದುಕೊಳ್ಳುತ್ತೇವೆ. ಅದೊಂದು ತಪ್ಪು ಮನೋಭಾವ.

ನೀವು ಒಳಮುಖವಾಗಿ ಹೋಗಲು ಬಯಸುವಾಗ (ಧ್ಯಾನ ಮಾಡಲು); ಎಲ್ಲವೂ ಸರಿಯಾಗಿದೆ ಎಂಬ ಮನೋಭಾವ ನಿಮ್ಮಲ್ಲಿರಬೇಕಾದುದು. ನೀವು ಕೆಲಸ ಮಾಡಲು ಬಯಸುವಾಗ ನೀವು ನಿಮ್ಮ ಬುದ್ಧಿಶಕ್ತಿಯನ್ನು; ನಿಮ್ಮ ವಿವೇಕವನ್ನು ಉಪಯೋಗಿಸಬೇಕು. ಏನನ್ನು ಗಮನಿಸಬೇಕಾಗಿದೆ, ಯಾವುದು ಸರಿ, ಯಾವುದು ತಪ್ಪು ಮತ್ತು ನೀವು ವಿಷಯಗಳನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ನೋಡಿ. ಇವುಗಳೆರಡರ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಯಲು ನಮಗೆ ಸಾಧ್ಯವಾದರೆ ನಾವು, ಒಂದು ಬಹಳ ವ್ಯತ್ಯಸ್ತವಾದ ಅರಿವಿನ ಮಟ್ಟಕ್ಕೆ ಏರುವೆವು. ಅಲ್ಲಿ, ನಮ್ಮ ಜೀವನಗಳಲ್ಲಿ ಆ ಆಂತರಿಕ ಶಕ್ತಿಯು ನಿರಂತರವಾಗಿ ಹರಿಯುವುದು.