ಬುಧವಾರ, ಮೇ 8, 2013

ಸ್ವರ ವ್ಯಂಜನಗಳ ಸುತ್ತಮುತ್ತ

ಬೆಂಗಳೂರು, ಭಾರತ
೮ ಮೇ ೨೦೧೩

ನಾನು ನಿಮಗೊಂದು ಸವಾಲು ಕೊಡಲಿದ್ದೇನೆ. ಒಂದು ಸವಾಲನ್ನು ತೆಗೆದುಕೊಳ್ಳಲು ನೀವು ಸಿದ್ಧರಿರುವಿರಾ? ’ಆ’ ಎಂದು ಹೇಳದೆಯೇ ’ಕಾ’  ಎಂದು ಹೇಳಿ. ನೀವದನ್ನು ಮಾಡಬಲ್ಲಿರಾ? ನೀವದನ್ನು ಮಾಡಲಾರಿರಿ. ’ಆ’ ಎಂದು ಹೇಳದೆಯೇ ನಿಮಗೆ ’ಕಾ’ ಎಂದು ಹೇಳಲು ಸಾಧ್ಯವಿಲ್ಲ. ಸರಿ, ನಾವು ’ಆ’  ಇಲ್ಲದೆಯೇ ’ಗಾ’ ಅಥವಾ ’ಚಾ’ ಎನ್ನಲು ಪ್ರಯತ್ನಿಸೋಣ. ನೀವದನ್ನು ಮಾಡಬಲ್ಲಿರಾ? ಇಲ್ಲ! ಸಂಸ್ಕೃತ ಭಾಷೆಯಲ್ಲಿ ವ್ಯಂಜನಗಳು ಮತ್ತು ಸ್ವರಗಳನ್ನು ಜೋಡಿಸಿಡಲಾದುದು ಹೀಗೆಯೇ.

ಅ, ಆ, ಇ, ಈ, ಉ, ಊ, ಋ, ೠ, ಳ್, ಏ, ಐ, ಓ, ಔ, ಅಂ, ಅಃ - ಇವುಗಳು ಸ್ವರಗಳಾಗಿವೆ. ವ್ಯಂಜನಗಳು, ಕ, ಖ, ಗ, ಘ, ಙ,  ಚ, ಛ, ಜ, ಝ, ಞ, ಟ, ಠ, ಡ, ಢ, ಣ, ತ, ಥ, ದ, ಧ, ನ, ಪ, ಫ, ಬ, ಭ, ಮ, ಯ, ರ, ಲ, ವ, ಶ, ಷ, ಸ, ಹ

ಒಂದು ಸ್ವರವಿಲ್ಲದೆಯೇ ನಿಮಗೆ ವ್ಯಂಜನಗಳನ್ನು ಹೇಳಲು ಸಾಧ್ಯವಿಲ್ಲ. ತಿಳಿಯಿತೇ?

ನೀವು ’ಕಿ’ ಎಂದು ಹೇಳುವಾಗ ಅಲ್ಲಿ ’ಇ’  ಇರಲೇಬೇಕು.

ಇದನ್ನು ಬಹಳ ವೈಜ್ಞಾನಿಕವಾಗಿ ಜೋಡಿಸಲಾಗಿದೆ, ಅದಕ್ಕಾಗಿಯೇ ಸಂಸ್ಕೃತವು ದೇವ ಭಾಷೆ ಎಂದು ಕರೆಯಲ್ಪಡುವುದು; ದೇವರ ಭಾಷೆ ಯಾಕೆಂದರೆ ಅದು ಪ್ರಕೃತಿಯೊಂದಿಗೆ ಹೊಂದಿಕೊಂಡಿದೆ.

ನೀವು ’ಆ’ ಎಂದು ಹೇಳುವಾಗ, ಅದು ಸೃಷ್ಟಿ, ಎಲ್ಲವೂ ತೆರೆಯುತ್ತದೆ. ನೀವು ’ಊ’ ಎಂದು ಹೇಳುವಾಗ, ಅದು ಮುಂದುವರಿಯುತ್ತದೆ ಮತ್ತು ನೀವು ’ಮ್’ ಎಂದು ಹೇಳುವಾಗ, ಅದು ಮುಚ್ಚುತ್ತದೆ.

ಒಂದು ಶಬ್ದವು ಹೇಗೆ ಉತ್ಪತ್ತಿಯಾಗುತ್ತದೆ? ಋಷಿಗಳಲ್ಲೊಬ್ಬರಿಂದ ಇದು ಬಹಳ ಸುಂದರವಾಗಿ ವಿವರಿಸಲ್ಪಟ್ಟಿದೆ.

ಬುದ್ಧಿಶಕ್ತಿಯೊಂದಿಗೆ ತನ್ನನ್ನು ಒಂದುಗೂಡಿಸಿದ ಆತ್ಮವು, ಮತ್ತೆ ಮನಸ್ಸಿನೊಂದಿಗೆ ಕೈಜೋಡಿಸಿದಾಗ, ಅದು ಶರೀರದಲ್ಲಿನ ಶಾಖ ಅಥವಾ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಆ ಶಕ್ತಿಯು, ಧ್ವನಿಪೆಟ್ಟಿಗೆಯ ಮೂಲಕ ಗಾಳಿ ಸಂಚರಿಸುವಂತೆ ಮಾಡುತ್ತದೆ ಮತ್ತು ಶಬ್ದವು ಉತ್ಪತ್ತಿಯಾಗುತ್ತದೆ.

ಹೀಗೆ, ಶಬ್ದವು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ಬಹಳ ಸುಂದರವಾಗಿ ಮತ್ತು ವೈಜ್ಞಾನಿಕವಾಗಿ ಹೇಳಲಾಗಿದೆ.
ಈ ಜ್ಞಾನವಿರುವುದು ಕೇವಲ ಹೃದಯ ಅಥವಾ ಕೇವಲ ತಲೆಗೆ ಅಲ್ಲ. ಅದು ತಲೆ ಮತ್ತು ಹೃದಯಗಳ ಒಂದು ಪರಿಪೂರ್ಣ ಸಂಯೋಜನೆಯಾಗಿದೆ. ಅದು ಆಧ್ಯಾತ್ಮಿಕ ಜ್ಞಾನವಾಗಿದೆ.

ಹಾಗೆಯೇ, ನೀವು ಸಂಗೀತದ ಸ್ವರಗಳನ್ನು ಗಮನಿಸಿದರೆ, ಸ ರಿ ಗ ಮ ಪ ಧ ನಿ, ಅದೆಲ್ಲವೂ ನಿರ್ದಿಷ್ಟ ಪ್ರಾಣಿಗಳ ರಾಗಕ್ಕೆ ಸಂಬಂಧಿಸಿದೆ. ’ಸ’ ವು ನವಿಲುಗಳ ರಾಗಕ್ಕೆ ಅನುರೂಪವಾಗಿದೆ. ’ರಿ’  ಹಸುಗಳಿಗೆ; ’ಗ’ ಮೇಕೆಗಳಿಗೆ; ’ಪ’ ಕೋಗಿಲೆಗಳಿಗೆ; ’ಧ’ ಕುದುರೆಗಳಿಗೆ ಮತ್ತು ’ನಿ’  ಆನೆಗಳಿಗೆ. ಆನೆಗಳು ಬಹಳ ದೊಡ್ಡದಾಗಿದ್ದರೂ ಸಹ, ಅವುಗಳ ಶಬ್ದವು ಬಹಳ ಉನ್ನತವಾದ ಪಿಚ್ ಹೊಂದಿದೆ ಮತ್ತು ಬಹಳ ಚಿಕ್ಕದಾಗಿದೆ.

ಹೀಗೆ ಸ ರಿ ಗ ಮ ಪ ಧ ನಿ - ಈ ಸಂಗೀತದ ಸ್ವರಗಳು ಪ್ರತಿಯೊಂದು ಪ್ರಾಣಿಗಳ ಶಬ್ದವಾಗಿದೆ.

ಅದೇ ರೀತಿಯಲ್ಲಿ, ವ್ಯಂಜನಗಳು ಪ್ರಾಣಿಗಳೊಂದಿಗೆ ಜೋಡಿಸಲ್ಪಟ್ಟಿವೆ. ’ಕ’ ಮತ್ತು ’ಚ’ ವು ಪಕ್ಷಿಗಳೊಂದಿಗೆ ಸಂಬಂಧ ಹೊಂದಿವೆ. ಗಿಳಿಗಳು ಮತ್ತು ಮೈನಾಗಳನ್ನು ಹೊರತುಪಡಿಸಿ, ಪಕ್ಷಿಗಳು ಈ ಎರಡು ಶಬ್ದಗಳನ್ನು ಮಾತ್ರ ಮಾಡುತ್ತವೆ. ಗಿಳಿ ಮತ್ತು ಮೈನಾಗಳಿಗೆ ನಾವು ತರಬೇತಿ ನೀಡಿದಾಗ ಅವುಗಳು ಇಡಿಯ ಭಾಷೆಯನ್ನು ಮಾತನಾಡಬಲ್ಲವು. ನಂತರ ಬರುವುದು ’ತ’ ಮತ್ತು ’ಥ’, ಈ ವ್ಯಂಜನಗಳು ಉಭಯಚರಗಳಿಗೆ ಸಂಬಂಧಿಸಿವೆ. ಕಪ್ಪೆಗಳು ಮತ್ತು ಇತರ ಪ್ರಾಣಿಗಳಂತೆ, ನೀರಿನಲ್ಲಿ ಮತ್ತು ನೆಲದ ಮೇಲಿರುವ ಉಭಯಚರಗಳು ’ತ’ ಮತ್ತು ’ಥ’ ಹೇಳುತ್ತವೆ.

ಕೊನೆಯ ಗುಂಪಿನ ವ್ಯಂಜನಗಳು, ಅಂದರೆ ಪ, ಫ, ಬ, ಭ, ಮ - ಇದರಲ್ಲಿರುವುದು ಕೇವಲ ಸಸ್ತನಿಗಳು. ಮೇಕೆಗಳು, ಕುರಿಗಳು, ಹಸುಗಳು, ಅವುಗಳೆಲ್ಲಾ ಈ ಶಬ್ದಗಳನ್ನು ಮಾಡುತ್ತವೆ.

ಹೀಗೆ, ವ್ಯಂಜನಗಳೆಲ್ಲಾ ಜೋಡಿಸಲ್ಪಟ್ಟಿರುವ ರೀತಿಯು ಪ್ರಕೃತಿಗೆ ಬಹಳ ಹತ್ತಿರವಾಗಿದೆ. ಇದನ್ನು ಯಾರೂ ಮಾಡಲಿಲ್ಲ, ಇದೊಂದು ಉಡುಗೊರೆಯಾಗಿದೆ; ಅಥವಾ ಡೌನ್‌ಲೋಡ್ ಮಾಡಲ್ಪಟ್ಟಿದ್ದು. ವೇದಗಳು ಶ್ರುತಿಗಳೆಂದು ಕರೆಯಲ್ಪಡುತ್ತವೆ ಯಾಕೆಂದರೆ ಅದನ್ನು ಯಾವ ಋಷಿಯೂ ಬೌದ್ಧಿಕವಾಗಿ ಬರೆಯಲಿಲ್ಲ, ಆದುದರಿಂದ ಅವರು, ಅದನ್ನು ತಾವು ಮಾಡಿದುದು ಎಂದು ಹೇಳಿಕೊಳ್ಳಲಿಲ್ಲ. ಅವರು ಕೇವಲ, ನಾನು ಧ್ಯಾನದಲ್ಲಿ ಆಳವಾಗಿ ಹೋದೆ ಮತ್ತು ನಾನದನ್ನು ಡೌನ್‌ಲೋಡ್ ಮಾಡಿಕೊಂಡೆ; ನಾನದನ್ನು ಕೇಳಿಸಿಕೊಂಡೆ ಎಂದು ಹೇಳಿದರು. ಆದುದರಿಂದ ಅವುಗಳು ಶ್ರುತಿಗಳೆಂದು ಕರೆಯಲ್ಪಡುತ್ತವೆ; ಯಾವುದು ಆಳವಾದ ಧ್ಯಾನದಲ್ಲಿ ಕೇಳಿಸಿತೋ ಅದು. ಆಳವಾದ ಧ್ಯಾನದಲ್ಲಿ ಕೇಳಿಸಿದುದು ಸಂಸ್ಕೃತ ಮಂತ್ರಗಳಾಗಿದ್ದವು. ಹೇಳಲಾಗಿರುವುದು ಇದನ್ನು.

ಪ್ರಶ್ನೆ: ಗುರುದೇವ, ಅನುಗ್ರಹ ಎಂದರೇನು? ನಾವದನ್ನು ಹೇಗೆ ಮತ್ತು ಯಾವಾಗ ಪಡೆಯಬಹುದು?

ಶ್ರೀ ಶ್ರೀ ರವಿ ಶಂಕರ್: ಅನುಗ್ರಹವೆಂದರೆ ಕೃಪೆ. ಅನುಗ್ರಹವಿಲ್ಲದೆ ಜೀವನದಲ್ಲಿ ಯಾವುದೂ ಸಾಧ್ಯವಿಲ್ಲ.

ಪ್ರಯತ್ನಪಡದೆಯೇ ನೀವು ಬಹಳಷ್ಟನ್ನು ಪಡೆಯುವಾಗ, ನೀವು ಅನುಗ್ರಹದಿಂದ ಹರಸಲ್ಪಟ್ಟಿರುವಿರಿ ಎಂದು ಹೇಳಲಾಗುತ್ತದೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ಸಾಧಾರಣವಾಗಿ ನೀವು ನಿಮ್ಮ ನೌಕರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತೀರಿ ಮತ್ತು ನಂತರ ನಿಮ್ಮ ವೇತನವನ್ನು ಪಡೆಯುತ್ತೀರಿ. ಹಾಗಾಗಿ ನೀವು, "ನಾನು ನನ್ನ ಹಣವನ್ನು ಸಂಪಾದಿಸಿದ್ದೇನೆ" ಎಂದು ಹೇಳುತ್ತೀರಿ. ಆದರೆ ಒಬ್ಬರು ನಿಮಗೆ ಒಂದು ಉಡುಗೊರೆಯನ್ನು ನೀಡಿದರೆ ನೀವು, "ನಾನು ಈ ಉಡುಗೊರೆಗಳನ್ನು ಸಂಪಾದಿಸಿದ್ದೇನೆ" ಎಂದು ಹೇಳುವುದಿಲ್ಲ.

ಸಂಪಾದಿಸಿರುವ ಯಾವುದನ್ನಾದರೂ ಒಂದು ಉಡುಗೊರೆಯೆಂದು ಕರೆಯಲು ಸಾಧ್ಯವೇ? ಇಲ್ಲ. ಉಡುಗೊರೆಗಳನ್ನು ನೀವು ಯಾವುದೇ ಪ್ರಯತ್ನಗಳಿಲ್ಲದೆಯೇ ಪಡೆಯುತ್ತೀರಿ.

ಹೀಗೆ, ನಿಮಗೆ ಅರ್ಹತೆಯಿಲ್ಲದೆಯೇ ನೀವೊಂದು ಮಹತ್ತರವಾದ ಉಡುಗೊರೆಯನ್ನು ಅಥವಾ ಪ್ರಶಸ್ತಿಯನ್ನು ಪಡೆದಿರುವಿರೆಂದು ನಿಮಗೆ ಅನ್ನಿಸಿದರೆ, ಅದು ಅನುಗ್ರಹವೆಂದು ಕರೆಯಲ್ಪಡುತ್ತದೆ.

ನಾವು ಯಾವುದಕ್ಕೆ ಅರ್ಹರಲ್ಲವೋ ಅಥವಾ ಯಾವುದು ನಮ್ಮ ಸಾಮರ್ಥ್ಯವನ್ನು ಮೀರಿದುದೋ ಅದು ನಮಗೆ ಸಿಗುವಾಗ, ಅದನ್ನೇ ಅನುಗ್ರಹ ಎಂದು ಕರೆಯುವುದು. ನಮ್ಮ ಜೀವನದಲ್ಲಿ, ನಮ್ಮ ಅರ್ಹತೆಗಿಂತ ಅಥವಾ ನಮ್ಮ ಸಾಮರ್ಥ್ಯಕ್ಕಿಂತ ಎಷ್ಟೋ ಹೆಚ್ಚಿನದನ್ನು ನಾವು ಪಡೆದಿರುವೆವು ಎಂಬುದನ್ನು ನಾವು ಕಾಣುವಾಗ, ನಮ್ಮಲ್ಲಿ ಕೃತಜ್ಞತೆಯು ಉದಯಿಸುತ್ತದೆ. ನಾವು ಕೃತಜ್ಞರಾಗುತ್ತೇವೆ, ದೂರುಗಳು ಮಾಯವಾಗುತ್ತವೆ ಮತ್ತು ಸಮೃದ್ಧಿಯು ಬೆಳೆಯುತ್ತದೆ.

ಕೃತಜ್ಞನಾಗಿರುವ ಒಬ್ಬ ವ್ಯಕ್ತಿಯು ಯಾವತ್ತೂ ಯಾವುದರ ಕೊರತೆಯನ್ನೂ ಅನುಭವಿಸುವುದಿಲ್ಲ. ಜೀವನದಲ್ಲಿ ಒಂದು ಕೊರತೆಯನ್ನು ಯಾರು ಅನುಭವಿಸುತ್ತಾರೆ? "ನಾನು ಬಹಳ ಸಮರ್ಥನು, ಆದರೂ ನನಗೆ ಏನೂ ಸಿಗಲಿಲ್ಲ" ಎಂದು ಯೋಚಿಸುವವನೊಬ್ಬನು.

ಒಮ್ಮೆ, ಪ್ರಧಾನ ಮಂತ್ರಿಯಾಗಲು ಬಯಸಿದ ಒಬ್ಬ ವ್ಯಕ್ತಿಯಿದ್ದನು. ಕತ್ತೆಗಳ ಒಂದು ಮಂದೆಯನ್ನು ನೋಡಿಕೊಳ್ಳಲಿರುವ ಸಾಮರ್ಥ್ಯವೂ ಅವನಲ್ಲಿರಲಿಲ್ಲ, ಆದರೂ ಅವನು ಪ್ರಧಾನ ಮಂತ್ರಿಯಾಗಲು ಬಯಸಿದ್ದ. ಈಗ, ಅಂತಹ ಒಬ್ಬ ವ್ಯಕ್ತಿಗೆ ನೀವು ಏನನ್ನು ಹೇಳುವಿರಿ? ಅವನ ದೂರುಗಳು ಕಡಿಮೆಯಾಗುವುದೇ ಇಲ್ಲ. ಅವನು ಅದರಿಂದ ತುಂಬಿರುವನು. ಕೃತಜ್ಞನಾಗಿರುವುದು ಎಂದರೆ, ಜೀವನದಲ್ಲಿನ ನಿಮ್ಮ ಎಲ್ಲಾ ದೂರುಗಳು ಸುಮ್ಮನೇ ಮಾಯವಾಗುವುದು. ನಿಮಗೆ ಯಾವತ್ತೂ ನೀವು ಕೇಳಿದುದಕ್ಕಿಂತಲೂ ಅಧಿಕವಾಗಿ ಅಥವಾ ನಿಮ್ಮ ಅರ್ಹತೆಗಿಂತಲೂ ಅಧಿಕವಾಗಿ ಸಿಕ್ಕಿದೆಯೆಂಬ ಭಾವನೆಯು ನಿಮ್ಮ ಹೃದಯದಲ್ಲಿರುವಾಗ, ಆಳವಾದ ಕೃತಜ್ಞತೆಯು ನಿಮ್ಮಲ್ಲಿ ಏಳುತ್ತದೆ. ಕೃತಜ್ಞತೆಯಿರುವಾಗ, ಜೀವನದಲ್ಲಿ ಯಾವತ್ತೂ ಯಾವುದರ ಒಂದು ಕೊರತೆಯೂ ಇರಲಾರದು. ಅಂತಹ ಒಬ್ಬ ವ್ಯಕ್ತಿಗೆ, ಅವನು ಯಾವುದನ್ನೆಲ್ಲಾ ಬಯಸುವನೋ ಅದೆಲ್ಲಾ ಈಡೇರುತ್ತಾ ಹೋಗುವುದು.

ಈಗ, ಇದು ಸ್ವಲ್ಪ ಕಷ್ಟವೆಂದು ನೀವು ಹೇಳಬಹುದು. ಹೌದು, ಅದು ಕಷ್ಟ. ಏನನ್ನಾದರೂ ಸಾಧಿಸುವುದು ಯಾವತ್ತೂ ಸುಲಭವಲ್ಲ. ಆದರೆ ನೀವು ಇದರ ಕಡೆಗೆ ಒಂದು ಹೆಜ್ಜೆಯನ್ನು ತೆಗೆದುಕೊಂಡಾಗ, ಅದು ಬಹಳ ಸುಲಭವೆಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರಶ್ನೆ: ಗುರುದೇವ, ಮಾತು ನಾಲ್ಕು ರೀತಿಯವು ಎಂದು ಹೇಳಲಾಗಿದೆ; ಪರ, ಪಶ್ಯಂತಿ, ಮಧ್ಯಮ ಮತ್ತು ವೈಖರಿ. ಸಾಧನೆಯಲ್ಲಿ (ಆಧ್ಯಾತ್ಮಿಕ ಅಭ್ಯಾಸಗಳು) ಅವುಗಳ ಮಹತ್ವವೇನು? 

ಶ್ರೀ ಶ್ರೀ ರವಿ ಶಂಕರ್: ನಾವೀಗ ಮಾಡುತ್ತಿರುವ ಸಂಭಾಷಣೆಯು ವೈಖರಿಯಾಗಿದೆ. ಈ ವೈಖರಿ ಮಾತಿನ ಪ್ರಕ್ರಿಯೆಯನ್ನು ಉಪಯೋಗಿಸುವ ಮೂಲಕ ಮಾತ್ರ ಮನುಷ್ಯರು ಪರಸ್ಪರ ಒಡನಾಡಬಲ್ಲರು.

’ಚತ್ವರಿ ವಾಕ್ ಪರಿಮಿತಾ ಪಾದನಿ ತನಿ ವಿದುರ್ ಬ್ರಹ್ಮಣಾ ಯೆ ಮನಿಷಿನಃ

ಗುಹ ತ್ರಿಣಿ ನಿಹಿತಾ ನೆಂಗಯಂತಿ ತುರಿಯಂ ವಾಚೋ ಮನುಷ್ಯ ವದಂತಿ’ ಎಂದು ಹೇಳಲಾಗಿದೆ. (ಋಗ್ವೇದ ಸಂಹಿತಾ ೧.೧೬೪.೪೫)
ಹೀಗೆ ಮಾನವರು ಪರಸ್ಪರರೊಂದಿಗೆ ಮಾತನಾಡುವುದು ನಾಲ್ಕನೆಯ ರೀತಿಯ ಸಂಭಾಷಣೆಯನ್ನು ಉಪಯೋಗಿಸಿ. ಇತರ ಮೂರು: ಪರ, ಮಧ್ಯಮ ಮತ್ತು ಪಶ್ಯಂತಿ, ಇವುಗಳು ಬಹಳಷ್ಟು ಹೆಚ್ಚಿನ ಆಳವಾದ ಮಟ್ಟದಲ್ಲಿರುವ ಸಂಪರ್ಕಗಳಲ್ಲಿ ಬಳಸಲ್ಪಡುತ್ತವೆ. ಇಲ್ಲಿ ಯಾವುದೇ ಭಾಷೆಯನ್ನು ಬಳಸಲಾಗುವುದಿಲ್ಲ.

ಎಲ್ಲಿ ಯಾವುದೇ ಭಾಷೆಯನ್ನು ಬಳಸಲಾಗುವುದಿಲ್ಲವೋ, ಆದರೂ ಇಡೀ ಸಾರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗುವುದೋ, ಆ ಸ್ಥಿತಿಯು ಪರ ವಾಣಿ ಎಂದು ಕರೆಯಲ್ಪಡುತ್ತದೆ.

ಸಾವಿನ ನಂತರ ಒಬ್ಬ ವ್ಯಕ್ತಿಯು ತನ್ನ ಶರೀರವನ್ನು ಬಿಟ್ಟು ಹೋಗುವಾಗ ಅವನು, ಭಾಷೆಯನ್ನುಪಯೋಗಿಸಿ ಸಂಪರ್ಕಿಸುವ ತನ್ನ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಾನೆ. ಆ ಅವಸ್ಥೆಯಲ್ಲಿ, ಆಗುವುದನ್ನೆಲ್ಲಾ ಅವನು ಸುಮ್ಮನೆ ಗಮನಿಸುತ್ತಾನೆ ಮತ್ತು ಗಮನಿಸುವುದರ ಮೂಲಕ ಅವನು ಜ್ಞಾನವನ್ನು ಗಳಿಸುತ್ತಾನೆ. ಇದು ಪಶ್ಯಂತಿ ಎಂದು ಕರೆಯಲ್ಪಡುತ್ತದೆ. (’ಪಶ್ಯ’ ಎಂಬ ಸಂಸ್ಕೃತ ಪದದಿಂದ ಪಡೆದದ್ದು; ಅಂದರೆ ನೋಡುವುದು ಅಥವಾ ಗಮನಿಸುವುದು ಎಂದು ಅರ್ಥ).

ಮಧ್ಯಮ ರೀತಿಯ ಮಾತು, ಪರ ಮತ್ತು ಪಶ್ಯಂತಿ ಸ್ಥಿತಿಗಳ ನಡುವಿದೆ.

ಹಲವಾರು ಸಲ ಏನಾಗುತ್ತದೆಯೆಂದರೆ, ಒಬ್ಬರು ನಿಮಗೆ ತಿಳಿಯದಿರುವ ಒಂದು ಭಾಷೆಯಲ್ಲಿ ಮಾತನಾಡುತ್ತಿರುತ್ತಾರೆ, ಆದರೂ ಅವರು ಏನು ಹೇಳಲು ಪ್ರಯತ್ನಿಸುತ್ತಿರುವರೆಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ಮಧ್ಯಮವೆಂಬುದು ಅಂತಹ ಒಂದು ಸ್ಥಿತಿ.

ಉದಾಹರಣೆಗೆ, ಮಗುವು ತಾಯಿಯ ಗರ್ಭದಲ್ಲಿರುವಾಗ, ಮಗುವೂ ತಾಯಿಯನ್ನು ನೋಡಿರುವುದಿಲ್ಲ, ಮತ್ತು ತಾಯಿಯೂ ಮಗುವನ್ನು ನೋಡಿರುವುದಿಲ್ಲ. ಆದರೂ ಅವರು ಪರಸ್ಪರರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆ ಸ್ಥಿತಿಯಲ್ಲಿ, ಯಾವುದೇ ಭಾಷಾವಿನಿಮಯವಿರುವುದಿಲ್ಲ, ಹಾಗಿದ್ದರೂ ಭಾಷೆಯನ್ನು ಮೀರಿದ ಸಂಪರ್ಕವಾಗುತ್ತದೆ. ಇದು ಮಧ್ಯಮ.

ಅದಕ್ಕಾಗಿಯೇ ಈ ಇಡೀ ಸೃಷ್ಟಿಯು ಹಿರಣ್ಯಗರ್ಭವೆಂದು ಕರೆಯಲ್ಪಡುವುದು (ಅಂದರೆ ಚಿನ್ನದ ಗರ್ಭ). ನಾವೆಲ್ಲರೂ ಈ ಬ್ರಹ್ಮಾಂಡದ ಗರ್ಭದೊಳಗಿದ್ದೇವೆ ಮತ್ತು ಇದರ ಹೊರಗಡೆ ಏನಿದೆಯೆಂಬುದು ನಮಗೆ ತಿಳಿಯದು.

ಹೇಗೆ ತನ್ನ ಗರ್ಭದೊಳಗಿರುವ ಮಗುವನ್ನು ತಾಯಿಯು ಬಲ್ಲವಳಾಗಿದ್ದರೂ ಮಗುವಿಗೆ ತಾಯಿಯ ಬಗ್ಗೆ ಅರಿವಿರುವುದಿಲ್ಲವೋ; ಅದೇ ರೀತಿಯಲ್ಲಿ ದೇವರು ನಮ್ಮನ್ನು ತಿಳಿದಿದ್ದಾನೆ, ಆದರೂ ನಮಗೆ ಅವನಾರೆಂದು ತಿಳಿಯದು. ಅದಕ್ಕಾಗಿಯೇ ಅವನು ಅಜ್ಞೇಯ (ಯಾವತ್ತಿಗೂ ಇರುವ, ಆದರೂ ತಿಳಿಯದಿರುವ) ಎಂದು ಕರೆಯಲ್ಪಡುವುದು. ನಿಮಗೆ ಯಾವತ್ತಿಗೂ ದೇವರನ್ನು ತಿಳಿಯಲು ಸಾಧ್ಯವಿಲ್ಲ, ಆದರೆ ನೀವು ಅದನ್ನು ಅನುಭವಿಸಬಹುದು ಮತ್ತು ನೀವದನ್ನು ಹೇಗೆ ಅನುಭವಿಸಬಹುದು? ನಿಮ್ಮಲ್ಲೇ ವಿಶ್ರಾಂತಿ ತೆಗೆದುಕೊಳ್ಳುವುದರಿಂದ. ಆದುದರಿಂದ, ಪರ ವಾಣಿಯೆಂದರೆ, ಯಾವುದೇ ಭಾಷೆಯನ್ನು ಯಾವುದರಲ್ಲಿ ಬಳಸಲಾಗುವುದಿಲ್ಲವೋ ಆ ಮಾತು ಮತ್ತು ಅದು ಭಾವನೆಗಳಾಚಿನದು ಕೂಡಾ ಆಗಿದೆ. ಪಶ್ಯಂತಿಯಲ್ಲಿ ನಾವು ನಮ್ಮ ಭಾವನೆಗಳನ್ನು ಕೂಡಾ ಉಪಯೋಗಿಸಿ ಸಂಪರ್ಕಿಸುತ್ತೇವೆ.

ನಾವು ಪ್ರಜ್ಞೆಯ ಆಳವಾದ ಹಂತಗಳಿಗೆ ಹೋದಂತೆ, ನಮ್ಮ ಶರೀರದ ಪ್ರತಿಯೊಂದು ಜ್ಞಾನೇಂದ್ರಿಯವು ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಸಮರ್ಥವಾಗುತ್ತದೆ. ಅಂದರೆ, ಎಲ್ಲಾ ಐದು ಜ್ಞಾನೇಂದ್ರಿಯಗಳ ಕೆಲಸಗಳು ಒಂದು ಅಂಗದ ಮೂಲಕ ಆಗುತ್ತವೆ.

ಆದುದರಿಂದ, ಅಂತಹ ಒಂದು ಸ್ಥಿತಿಯಲ್ಲಿ, ಒಂದೇ ಒಂದು ಸ್ಪರ್ಶದ ಮೂಲಕ ನಿಮಗೆ ಅನುಭವಿಸಲು, ನೋಡಲು, ರುಚಿನೋಡಲು ಮತ್ತು ವಸ್ತುವಿನ ಬಗೆಗಿನ ಸಂಪೂರ್ಣ ಜ್ಞಾನವನ್ನು ಗಳಿಸಲು ಕೂಡಾ ಸಾಧ್ಯವಾಗುತ್ತದೆ.
ಪ್ರತಿಯೊಂದು ಇಂದ್ರಿಯವು, ಐದು ಇಂದ್ರಿಯಗಳ ಎಲ್ಲಾ ಕಾರ್ಯಗಳನ್ನು (ನೋಡುವುದು, ಆಘ್ರಾಣಿಸುವುದು, ರುಚಿನೋಡುವುದು, ಕೇಳುವುದು ಮತ್ತು ಅನುಭವಿಸುವುದು) ನಿರ್ವಹಿಸಲು ಸಮರ್ಥವಾಗುತ್ತದೆ. ಹೀಗೆ ಪಂಚೇಂದ್ರಿಯಗಳು ವಿಲೀನವಾಗಿ ಒಂದಾಗುವಾಗ, ಆ ಸ್ಥಿತಿಯು ಪರ-ಚೇತನದ ಸ್ಥಿತಿಯಾಗಿದೆ. ಅದು ಪರವಾಣಿ ಮಾತಾಗಿದೆ. ಅದಕ್ಕಾಗಿಯೇ, ’ಜಾನತ್ ತುಮ್ ಹಿ ತುಮ್ ಹಿ ಹೋ ಜಾಯೆ’ ಎಂದು ಹೇಳಲಾಗಿದೆ (ತಿಳಿಯುವವನು, ತಿಳಿವು ಮತ್ತು ತಿಳಿದದ್ದು ಎಲ್ಲವೂ ಒಂದಾಗುವುದು). ಅದಕ್ಕಾಗಿಯೇ ನಾವು, ಯಾರು ದೇವರ ಪ್ರತಿ ಆಳವಾಗಿ ಭಕ್ತಿಯುಳ್ಳವನಾಗುವನೋ ಅವನು ದೇವರೇ ಆಗುವನು ಎಂದು ಹೇಳುವುದು.

ಅದೇ ರೀತಿಯಲ್ಲಿ ಬ್ರಹ್ಮನ ಜ್ಞಾನವನ್ನು ಗಳಿಸಿದವನೊಬ್ಬನು ಬ್ರಹ್ಮನಾಗುತ್ತಾನೆ. ಅಂತಹ ಒಂದು ಸ್ಥಿತಿಯಲ್ಲಿ, ಪ್ರೇಮಿ, ಪ್ರೇಮಿಸಲ್ಪಟ್ಟವನು ಮತ್ತು ಪ್ರೇಮ - ಇವುಗಳು ಒಂದು ಇನ್ನೊಂದರಿಂದ ಬೇರೆಯಲ್ಲ. ಅವುಗಳೆಲ್ಲವೂ ವಿಲೀನವಾಗಿ ಒಂದಾಗುತ್ತವೆ. ಇದು ಪರವಾಣಿಯ ಸ್ಥಿತಿಯಾಗಿದೆ.

ನೀವು ಭಾಷೆಯ ಬಗ್ಗೆ ಯೋಚಿಸುವಾಗ, ಅಲ್ಲಿ ಮಾತನಾಡುವವನೊಬ್ಬನು ಹಾಗೂ ಕೇಳಿಸಿಕೊಳ್ಳುವ ಇನ್ನೊಬ್ಬನು ಇರಬೇಕಾಗುತ್ತದೆ. ಇದಕ್ಕೆ ಇಬ್ಬರ ಅಗತ್ಯವಿದೆ. ಇಲ್ಲಿಯೇ ನಿಮಗೆ ವೈಖರಿಯ ಅಗತ್ಯವಿರುವುದು. ವೈಖರಿಯೆಂದರೆ ನಿಮ್ಮ ಸುತ್ತಲೂ ಇರುವ ವೈವಿಧ್ಯತೆ. ಅದಕ್ಕಾಗಿಯೇ ಪ್ರಪಂಚದಲ್ಲಿ ಕೇವಲ ಒಂದಲ್ಲ, ಅಷ್ಟೊಂದು ಭಾಷೆಗಳಿರುವುದು. ಆದರೆ ಒಂದೇ ಒಂದು ಪರ ವಾಣಿಯಿರುವುದು ಮತ್ತು ಎಲ್ಲವೂ ಅದರಲ್ಲಿ ಒಳಗೊಂಡಿರುವುದು.

ಪರ ವಾಣಿಯಲ್ಲಿ, ಒಂದು ಪದ ರೂಪುಗೊಳ್ಳುವ ಮೊದಲೇ ನಿಮಗೆ ಕೂಡಲೇ ಅದರ ಅರ್ಥ ತಿಳಿದಾಯಿತು. ಆದುದರಿಂದ, ಪದಗಳು ಬೇಕಾಗಿಯೇ ಇಲ್ಲ.

ಇದೆಲ್ಲವೂ ತಿಳಿದುಕೊಳ್ಳಲು ಬಹಳ ವೈಜ್ಞಾನಿಕವಾಗಿ ತೋರುತ್ತದೆ. ಆದುದರಿಂದ ನಿಮ್ಮಲ್ಲೊಂದು ವೈಜ್ಞಾನಿಕ ಹೊರನೋಟವಿರುವಾಗ, ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ಪ್ರಶ್ನೆ: ಗುರುದೇವ, ಮೀರಾಬಾಯಿಯಾಗಲೀ, ಸಂತ ತುಕಾರಾಮರಾಗಲೀ ಶಾಸ್ತ್ರೀಯ ಸಂಗೀತವನ್ನು ಕಲಿತಿರಲಿಲ್ಲ. ಆದರೂ ಇವತ್ತಿಗೂ ಅವರನ್ನು ಅವರ ಭಜನೆಗಳಿಗಾಗಿ ನೆನೆಯಲಾಗುತ್ತದೆ. ನನಗೂ ಹಾಡುವುದು ಹೇಗೆಂದು ತಿಳಿಯದು. ನನಗೆ ಯಾವತ್ತಾದರೂ ನನ್ನ ಭಕ್ತಿಯನ್ನು ವ್ಯಕ್ತಪಡಿಸಲು ಒಂದು ಅವಕಾಶವು ಸಿಗುವುದೇ ಎಂಬುದನ್ನು ದಯವಿಟ್ಟು ಹೇಳಿ. 

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತಾ! ಅದನ್ನು ಈಗಾಗಲೇ ಮಾಡಿಯಾಗಿದೆ.

ಒಂದು ಹೂವು ತನ್ನ ಪರಿಮಳವನ್ನು ಹರಡಲು ಒಂದು ಅವಕಾಶಕ್ಕಾಗಿ ಕೇಳಿಕೊಳ್ಳುವುದಿಲ್ಲ ಅಥವಾ ಕಾಯುವುದಿಲ್ಲ. ಎಲ್ಲಿ ಹೂವಿರುವುದೋ ಅಲ್ಲಿ ಪರಿಮಳ ಹರಡುವುದು, ಅದು ಅನಿವಾರ್ಯ. ಆದುದರಿಂದ ಎಲ್ಲೆಲ್ಲಾ ಪ್ರೀತಿ ಮತ್ತು ಭಕ್ತಿಯಿರುವುದೋ, ಅದನ್ನು ಯಾರಿಂದಲೂ ಅಡಗಿಸಿಡಲು ಸಾಧ್ಯವಿಲ್ಲ.

ನೋಡಿ, ಪ್ರೀತಿಯೆಂಬುದು ಅಡಗಿಸಿಡಲಾಗದಂತಹದ್ದು. ನಿಮಗೆ ಪ್ರೀತಿಯನ್ನು ಅಡಗಿಸಿಡಲೂ ಸಾಧ್ಯವಿಲ್ಲ, ನಿಮಗೆ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಪ್ರತಿಸಲವೂ ನಾವು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಯತ್ನಿಸುವಾಗ, ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ನಮಗೆ ಸಾಧ್ಯವಾಗುತ್ತಿಲ್ಲವೆಂದು ನಮಗೆ ಅನ್ನಿಸುತ್ತದೆ, ಮತ್ತು ಇದುವೇ ಪ್ರತಿಯೊಬ್ಬ ಪ್ರೇಮಿಯ ಸಮಸ್ಯೆಯಾಗಿದೆ. ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಎಷ್ಟೇ ಪ್ರಯತ್ನಿಸಿದರೂ, ಅದು ಅಪೂರ್ಣವೆಂದು ಅವರಿಗೆ ಕಾಣಿಸುತ್ತದೆ.

ಪ್ರಶ್ನೆ: ಗುರುದೇವ, ವರ್ಷಗಳ ಕಾಲ ನಾವು ನಿಮ್ಮಿಂದ ಅಷ್ಟೊಂದು ಸುಂದರವಾದ ಜ್ಞಾನವನ್ನು ಕೇಳಿಸಿಕೊಂಡಿದ್ದೇವೆ. ಆದರೆ ನನಗೆ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಜ್ಞಾನವನ್ನುಅಳವಡಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುವುದರಲ್ಲಿ ನೀನು ಸಿಕ್ಕಿಹಾಕಿಕೊಂಡಿರುವೆ. ಸುಮ್ಮನೇ ವಿಶ್ರಾಮ ಮಾಡು. ನೀನು ಏನೂ ಮಾಡಬೇಕಾದ ಅಗತ್ಯವಿಲ್ಲ! ಎಲ್ಲವೂ ಅದರಷ್ಟಕ್ಕೇ ಆಗುತ್ತಿದೆ.