ಸೋಮವಾರ, ಮೇ 27, 2013

ಜ್ಯೋತಿಷ್ಯ - ಜ್ಞಾನದ ಕಣ್ಣು

ಬೆಂಗಳೂರು, ಭಾರತ
೨೭ ಮೇ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಜ್ಯೋತಿಷ್ಯದ ಪ್ರಕಾರ ನಾನು ರಾಹು-ಶನಿ ಗ್ರಹ ಸಂಯೋಜನೆಯ ಪ್ರಭಾವದಲ್ಲಿರುವೆನು. ಹೆಚ್ಚಾಗಿ ಇದು ನನ್ನನ್ನು ಹತಾಶನನ್ನಾಗಿ, ಕೋಪಗೊಳ್ಳುವಂತೆ ಮತ್ತು ಕಿರಿಕಿರಿಯಾಗುವಂತೆ ಮಾಡಿದೆ. ನಾನು ಆಧ್ಯಾತ್ಮಿಕ ಪಥದಿಂದ ದೂರ ಸರಿಯುತ್ತಿದ್ದೇನೆ ಮತ್ತು ನನ್ನ ಸುತ್ತಲಿರುವ ಇತರರಿಗೆ ತೊಂದರೆ ಸೃಷ್ಟಿಸುತ್ತಿದ್ದೇನೆ. ದಯವಿಟ್ಟು ಸಹಾಯ ಮಾಡಿ. 

ಶ್ರೀ ಶ್ರೀ ರವಿ ಶಂಕರ್: ಕನಿಷ್ಠಪಕ್ಷ ನಿನ್ನಲ್ಲಿ ಈ ಜ್ಞಾನವಿದೆ. ನೀನು ಇಷ್ಟನ್ನು ಅರ್ಥಮಾಡಿಕೊಂಡಿರುವುದಾದರೆ, ಆಗ ನಿನಗೆ, ಈ ಎಲ್ಲಾ ನಕಾರಾತ್ಮಕ ಭಾವನೆಗಳು ಕೇವಲ ಒಂದು ಹಾದುಹೋಗುವ ಹಂತವೆಂಬುದು ತಿಳಿದಿರುತ್ತದೆ. ಇದು ಯಾವುದೋ ಗ್ರಹಗತಿಯಿಂದ ಎಂಬುದು ನಿನಗೆ ತಿಳಿದಿದೆ. ಇಲ್ಲಿಯೇ ಜ್ಯೋತಿಷ್ಯವು ಒಂದು ದೊಡ್ಡ ರೀತಿಯಲ್ಲಿ ನಿನ್ನ ಸಹಾಯಕ್ಕೆ ಬರುವುದು. ಇದು ಈ ಗ್ರಹಗತಿಗಳ ಕಾರಣದಿಂದಾಗಿ ಎಂಬುದು ನಿನಗೆ ತಿಳಿದಿರಲಿಲ್ಲವೆಂದು ಇಟ್ಟುಕೊಳ್ಳೋಣ, ನಿನಗೇನಾಗಬಹುದು? ಸಂಪೂರ್ಣ ಪ್ರಪಂಚವನ್ನು ನಕಾರಾತ್ಮಕವೆಂದು ನೀನು ಬ್ರ್ಯಾಂಡ್ ಮಾಡಬಹುದು. ನೀನು ನಕಾರಾತ್ಮಕವೆಂದು ನೀನು ಯೋಚಿಸುವೆ ಮತ್ತು ಎಂದೆಂದಿಗೂ ನೀನು ದುಃಖಿತನಾಗಿರುವೆ, ಅಲ್ಲವೇ?

ಅದಕ್ಕಾಗಿಯೇ ಜ್ಯೋತಿಷ್ಯವು ಜ್ಞಾನದ ಕಣ್ಣು ಎಂದು ಕರೆಯಲ್ಪಡುವುದು. ಅದು, ನೀವು ನಿಮ್ಮ ತಕ್ಷಣದ ಪರಿಸ್ಥಿತಿಯಾಚೆಗೆ ನೋಡುವಂತೆ ಮತ್ತು ಅದು ಕೇವಲ ಅಲ್ಪ ಕಾಲದ ವರೆಗೆ ಎಂಬುದನ್ನೂ, ಅದು ಬದಲಾಗಲಿದೆಯೆಂಬುದನ್ನೂ ತಿಳಿಯುವಂತೆ ಮಾಡುತ್ತದೆ. ಇದರಿಂದ ನಿಮಗೆ ಯಾವುದೋ ತಿಳಿಯದ ಆಂತರಿಕ ಶಕ್ತಿಯು ಲಭಿಸುತ್ತದೆ. ನೀವು ನಿಮ್ಮನ್ನೇ ಅಥವಾ ನಿಮ್ಮ ಸುತ್ತಲಿರುವ ಜನರನ್ನು ದೂಷಿಸಲು ತೊಡಗಲಾರಿರಿ. ಗ್ರಹಗಳನ್ನು ದೂಷಿಸುವುದು ಯಾವತ್ತಿಗೂ ಉತ್ತಮ ಯಾಕೆಂದರೆ, ಅವುಗಳು ಬಹಳ ದೂರದಲ್ಲಿವೆ. ನೀವು ಅವುಗಳ ಬಗ್ಗೆ ಏನನ್ನೂ ಮಾಡಲಾರಿರಿ. ಅವುಗಳು ಅವುಗಳದ್ದೇ ಆದ ಗತಿಯಲ್ಲಿ ಚಲಿಸುತ್ತವೆ, ಅವುಗಳ ಚಲನೆಯ ವೇಗವನ್ನು ಹೆಚ್ಚಿಸಲು ನಿಮಗೆ ಸಾಧ್ಯವಿಲ್ಲ.

ಯಾವಾಗೆಲ್ಲಾ ಸಂಗತಿಗಳು ಕೆಟ್ಟದಾಗುತ್ತವೆಯೋ, ಸ್ವಾಭಾವಿಕ ಪ್ರವೃತ್ತಿಯೆಂದರೆ ನಿಮ್ಮನ್ನೇ ದೂಷಿಸುವುದು ಅಥವಾ ಇತರರನ್ನು ದೂಷಿಸುವುದು. ಎರಡೂ ಸಂದರ್ಭಗಳಲ್ಲಿ ನಷ್ಟವಾಗುವುದು ನಿಮಗೆ. ಆದರೆ ನೀವು ಗ್ರಹಗಳ ಮೇಲೆ ಆಪಾದನೆಯನ್ನು ಹಾಕಿದಾಗ, ಇತರರನ್ನು ದೂಷಿಸುವುದರಿಂದ ಮತ್ತು ನಿಮ್ಮನ್ನೇ ದೂಷಿಸುವುದರಿಂದ ನೀವು ಮುಕ್ತರಾಗುತ್ತೀರಿ. ಹೀಗೆ ಒಂದು ನಿರ್ದಿಷ್ಟ ಮಟ್ಟದ ವಿವೇಕವು ನಿಮ್ಮ ಜೀವನದಲ್ಲಿ ಬರುತ್ತದೆ. ಇದು ಅದರ ಒಂದು ಪ್ರಯೋಜನ.
ಇದಕ್ಕೆ ಯಾವತ್ತೂ ಒಂದು ಪರಿಹಾರವಿದೆಯೆಂಬುದನ್ನು ನೀನು ತಿಳಿದಿರಬೇಕು. ಅದು ಯಾವುದು? ದೈವವನ್ನು ಆರಾಧಿಸುವುದು.

ಎಲ್ಲಾ ಗ್ರಹಗಳ ಮೇಲೆ ಇರುವುದು ಭಗವಾನ್ ಶಿವ ಅಥವಾ ಶಿವ ತತ್ವ. ಆದುದರಿಂದ, ಓಂ ನಮಃ ಶಿವಾಯ ಎಂದು ಜಪಿಸುವುದರಿಂದ, ನೀನು ಇದೆಲ್ಲದರ ಮೇಲಿಂದ ತೇಲಿಹೋಗುವೆ.

ನಾನು ಹೇಳುತ್ತೇನೆ ಕೇಳು, ಈ ಯಾವುದೇ ಅನಾನುಕೂಲ ಪರಿಸ್ಥಿತಿಗಳಲ್ಲಿಯಾದರೂ ಅಲ್ಲಿ ಯಾವತ್ತೂ ಒಂದು ಪ್ರಯೋಜನವಿದೆ, ಅಂದರೆ ಹೆಚ್ಚು ಅಂತರ್ಮುಖವಾಗಿ ತಿರುಗುವುದು ಮತ್ತು ಹೆಚ್ಚು ಆಧ್ಯಾತ್ಮಿಕವಾಗುವುದು. ಅನುಕೂಲಕರ ಪರಿಸ್ಥಿತಿಗಳಲ್ಲಿ ನಿನ್ನ ಮನಸ್ಸು ಬಹಿರ್ಮುಖವಾಗಿರುವುದು, ಆದುದರಿಂದ ಕಡಿಮೆಪಕ್ಷ ಅನಾನುಕೂಲ ಪರಿಸ್ಥಿತಿಗಳಲ್ಲಿ ನೀನು ನಿನ್ನ ಮನಸ್ಸನ್ನು ಅಂತರ್ಮುಖವಾಗಿ ತಿರುಗಿಸಿ, ಈ ಸಮಯವನ್ನು ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ ಬಳಸಬಹುದು.

ಇವುಗಳೆಲ್ಲವೂ, ರಾಹುಭುಕ್ತಿ, ಶನಿಭುಕ್ತಿ, ಕೇತುಭುಕ್ತಿ, ಮೊದಲಾದವೆಲ್ಲಾ ಆಧ್ಯಾತ್ಮಿಕ ಪ್ರಗತಿಗೆ ಬಹಳ ಒಳ್ಳೆಯದು. ಶನಿಯ ಮುಖ್ಯ ಉದ್ದೇಶವೆಂದರೆ, ನಿಮ್ಮನ್ನು ಹೆಚ್ಚು ಆಧ್ಯಾತ್ಮಿಕರನ್ನಾಗಿಸುವುದು, ಮತ್ತು ಅವನು ಅದನ್ನು ಹೇಗೆ ಮಾಡುತ್ತಾನೆ? ನೀವು ಬಾಹ್ಯಕ್ಕೆ ಅಂಟಿಕೊಂಡಿರುವಾಗ, ನಿಮ್ಮನ್ನು ಅಂತರ್ಮುಖವಾಗಿ ತರಲು ಅವನು ಅಲ್ಲಿ ಸಮಸ್ಯೆಯನ್ನು ತರುತ್ತಾನೆ.
ನೀವು ಈಗಾಗಲೇ ಅಂತರ್ಮುಖವಾಗಿದ್ದರೆ, ಅವನಿಗೆ ಹೆಚ್ಚಿನದೇನೂ ಮಾಡಲು ಇರುವುದಿಲ್ಲ. ಅವನ ಕೆಲಸವು ಮುಗಿಯಿತು, ಹಾಗಾಗಿ ಅಲ್ಲಿ ಯಾವುದೇ ಸಮಸ್ಯೆ ಕೂಡಾ ಇರದು. ಸಮಸ್ಯೆಗಳಿದ್ದರೂ ಕೂಡಾ ಅವುಗಳು ಕನಿಷ್ಠವಾಗಿರುವುವು, ಅವುಗಳು ಸುಮ್ಮನೆ ಬರುವುವು ಮತ್ತು ಹೋಗುವುವು. ಹೀಗೆ, ಪ್ರತಿಯೊಂದು ಪರಿಸ್ಥಿತಿಯನ್ನೂ ಒಬ್ಬರ ಲಾಭಕ್ಕಾಗಿ ಬಳಸಬಹುದು.

ಪ್ರಶ್ನೆ: ಗುರುದೇವ, ನಮ್ಮಲ್ಲಿ ಕೆಲವು ರಾಪಿಡ್ ಫಯರ್ ಪ್ರಶ್ನೆಗಳಿವೆ.

ಶ್ರೀ ಶ್ರೀ ರವಿ ಶಂಕರ್: ಮುಂದುವರೆಸಿ!

ಜ್ಞಾನ?

ಜೀವನದಲ್ಲಿ ಆವಶ್ಯಕ.

ಸಂಬಂಧಗಳು?

ಅದನ್ನು ಸಮರಸವಾಗಿ ಇಟ್ಟುಕೊಳ್ಳುವುದು ಕಷ್ಟ. ಆದಾಗ್ಯೂ ನೀವು ಪ್ರಯತ್ನ ಮಾಡಬೇಕು.

ಫ್ಯಾನ್‌ಗಳು?

ಕೆಲವೊಮ್ಮೆ ಬಿಸಿಯಾಗಿ ಬೀಸುತ್ತವೆ ಮತ್ತು ಕೆಲವೊಮ್ಮೆ ತಣ್ಣಗೆ ಬೀಸುತ್ತವೆ.

ಮ್ಯಾಜಿಕ್?

ಜೀವನದಲ್ಲಿ ಯಾವತ್ತೂ ಇದೆ, ವಿಶೇಷವಾಗಿ ಆರ್ಟ್ ಆಫ್ ಲಿವಿಂಗ್‌ನಲ್ಲಿ.

ಎಸ್.ಎಮ್.ಎಸ್.?

ಅದು ಚಿಕ್ಕದಾಗಿ ಮತ್ತು ಚುರುಕಾಗಿರಲಿ.

ಸಂಸ್ಕೃತ?

ಎಲ್ಲಾ ಭಾಷೆಗಳ ತಾಯಿ. ಬುದ್ಧಿವಂತರು ಅದನ್ನು ಅಭ್ಯಸಿಸುತ್ತಾರೆ.

ಪರಿಸರ?

ಸಂರಕ್ಷಣೆಯ ಅಗತ್ಯವಿದೆ.

ಹಣ?

ಕೇವಲ ಒಂದು ದಾರಿ, ಅದುವೇ ಒಂದು ಕೊನೆಯಲ್ಲ.

ಶಕ್ತಿ ಡ್ರಾಪ್ಸ್?

ಎಲ್ಲರೂ ಅದನ್ನು ಸೇವಿಸಬೇಕು.

ಪ್ರಾರ್ಥನೆಗಳು?

ಅದು ಪ್ರಾಮಾಣಿಕವಾಗಿರುವಾಗ, ಉತ್ತರಿಸಲ್ಪಡುವುದು.

ಕರ್ಮ?

ಜೀವನದ ಭಾಗ. ಒಳ್ಳೆಯ ಕರ್ಮವು ಆನಂದ ತರುತ್ತದೆ.

ಭಾನು ಅಕ್ಕ?

ಎಲ್ಲರಿಗೂ ಅಚ್ಚುಮೆಚ್ಚು.

ನಿಮ್ಮ ಕಾರ್ಯದರ್ಶಿಗಳು?

ಬಹಳ ಪರಿಶ್ರಮ ಪಡುವರು. ಅದೊಂದು ದೊಡ್ಡ ಸವಾಲು.

ತೃಪ್ತಿ?

ತೃಪ್ತಿ ಬರುವುದು ಸೇವೆಯಿಂದ.

ಆಶೀರ್ವಾದಗಳು?

ನಿಮಗೆ ಧಾರಾಳವಾಗಿ ಇದೆ.

ಬೆಂಗಳೂರು ಆಶ್ರಮ?

ಭೂಮಿಯ ಮೇಲಿನ ಸ್ವರ್ಗ.

ತಂತ್ರಜ್ಞಾನ?

ಸುಖವನ್ನು ತರುವುದು ಅದರ ಉದ್ದೇಶ.

ಆಯುರ್ವೇದ?

ಮುಂದಿನ ಶತಮಾನದ ಔಷಧಿ ಮತ್ತು ಹಿಂದಿನ ಕಾಲದ ಔಷಧಿ.

ಆಟಿಕೆಗಳು?

ದೇವರ ಕೈಗಳಲ್ಲಿ ನೀವು ಒಂದು ಎಂಬುದನ್ನು ನೆನಪಿಡಿ. ನಿಮ್ಮ ಭಾವನೆಗಳ ಆಟಿಕೆಯಾಗಿರುವುದರಿಂದ ದೇವರ ಒಂದು
ಆಟಿಕೆಯಾಗಿರುವುದರತ್ತ ಸಾಗಿರಿ.

ದೇಶಭಕ್ತಿ?

ಇದನ್ನು ನಾವು ಈಗ ಜಾಗೃತಗೊಳಿಸಬೇಕು. ಇದು ಅಗತ್ಯದ ಸಮಯ. ಭಾರತಕ್ಕೆ ಅದರ ಅಗತ್ಯವಿದೆ.

ಯೋಗ?

ನಿಮ್ಮನ್ನು ಬುದ್ಧಿವಂತರನ್ನಾಗಿಸುವುದು ಮತ್ತು ಬುದ್ಧಿವಂತರು ಅದನ್ನು ಮಾಡುತ್ತಾರೆ.

ಅಹಂ?

ನಿಮಗದು ಸಿಕ್ಕಿದರೆ, ಅದನ್ನು ಇಟ್ಟುಕೊಳ್ಳಿ. ಅದನ್ನು ತೊಡೆದು ಹಾಕಲು ಪ್ರಯತ್ನಿಸಬೇಡಿ.

ಪ್ರೇಮ?

ನಿಮ್ಮ ಸ್ವಭಾವ.

ಶಿವ?

ಇರುವ, ಮುಂದೆ ಇರಲಿರುವ ಮತ್ತು ಹಿಂದೆ ಇದ್ದ ಎಲ್ಲವೂ.

ಶಾಪಿಂಗ್?

ಕಡಿಮೆಪಕ್ಷ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅದನ್ನು ತರಬೇಡಿ.

ನಮ್ರತೆ?

ಪ್ರೌಢ ವ್ಯಕ್ತಿಯ ವರ್ತನೆ.

ಪ್ರಜ್ಞೆ?

ಸೌಂದರ್ಯ, ಸತ್ಯ ಮತ್ತು ಜ್ಞಾನ.

ಆರ್ಟ್ ಆಫ್ ಲಿವಿಂಗ್?

ದಾರಿ, ಗುರಿ.