ಮಂಗಳವಾರ, ಮೇ 28, 2013

ಮನೋವಿಕಾಸದ ಮೂರು ಹಂತಗಳು

ಬೆಂಗಳೂರು, ಭಾರತ
೨೮ ಮೇ ೨೦೧೩

ನಸ್ಸಿನ ವಿಕಾಸದಲ್ಲಿ ಮೂರು ಹಂತಗಳಿವೆ.

ಮೊದಲನೆಯ ಹಂತವೆಂದರೆ, ಮಾಯೆಯಲ್ಲಿರುವುದು ಮತ್ತು ಅದನ್ನು ತಿಳಿಯದಿರುವುದು. ಅದರರ್ಥವೇನೆಂದರೆ, ಒಬ್ಬನು ಮಾಯೆಯಲ್ಲಿ ಎಷ್ಟರ ಮಟ್ಟಿಗೆ ಸಿಕ್ಕಿಹಾಕಿರುತ್ತಾನೆಂದರೆ, ಅವನಿಗೆ ಅದರ ಬಗ್ಗೆ ಅರಿವೂ ಇರುವುದಿಲ್ಲ.

ಉದಾಹರಣೆಗೆ, ಒಬ್ಬನಿಗೆ ತನ್ನ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಭ್ರಮೆಯಿರುತ್ತದೆ ಮತ್ತು ಅದೊಂದು ಭ್ರಮೆಯೆಂಬುದು ಸಹ ಅವನಿಗೆ ತಿಳಿದಿರುವುದಿಲ್ಲ. ಅದು ನಿಜವೆಂಬುದಾಗಿ ಅವನು ಯೋಚಿಸುತ್ತಾನೆ. ಇದು ಮೊದಲನೆಯ ಹಂತ.

ಎರಡನೆಯ ಹಂತವೆಂದರೆ, ಒಬ್ಬನು ಭ್ರಮೆಯಲ್ಲಿ ಸಿಲುಕಿರುತ್ತಾನೆ ಮತ್ತು ಅದು ಭ್ರಮೆಯೆಂಬುದು ಅವನಿಗೆ ತಿಳಿದಿರುತ್ತದೆ.
ಈ ಹಂತದಲ್ಲಿ, ಮಾಯೆಯು ತನ್ನನ್ನು ಸಂಪೂರ್ಣವಾಗಿ ಆವರಿಸಿದೆಯೆಂಬುದು ಮತ್ತು ಅದರಿಂದಾಗಿ ತಾನು ತೊಂದರೆಗೀಡಾಗಿರುವೆನೆಂಬುದು ಆ ವ್ಯಕ್ತಿಗೆ ತಿಳಿದಿರುತ್ತದೆ.

ಮೂರನೆಯ ಹಂತವೆಂದರೆ, ಯಾವುದರಲ್ಲಿ ಒಬ್ಬನು ಮಾಯೆಯಿಂದ ಸಂಪೂರ್ಣವಾಗಿ ಮುಕ್ತನಾಗುವನೋ ಮತ್ತು ಅದರಿಂದ ಅಪ್ರಭಾವಿತನಾಗಿ ಉಳಿಯುವನೋ ಅದು. ಮೂರನೆಯ ಹಂತದಲ್ಲಿ, ಮಾಯೆಯು ತನಗೆ ಏನನ್ನೂ ಮಾಡಲು ಸಾಧ್ಯವಿಲ್ಲವೆಂಬುದು ಆ ವ್ಯಕ್ತಿಗೆ ತಿಳಿದಿರುತ್ತದೆ.

ಹೀಗೆ ಇವುಗಳು ಮೂರು ಹಂತಗಳಾಗಿವೆ. ಮೊದಲನೆಯದೆಂದರೆ, ಯಾವುದರಲ್ಲಿ ಒಬ್ಬ ವ್ಯಕ್ತಿಯು ತನ್ನದೇ ಆದ ಮನಸ್ಸಿನಿಂದಾಗಿ ದುಃಖಿತನಾಗಿರುವನೋ ಅದು. ಅಂತಹ ಒಬ್ಬ ವ್ಯಕ್ತಿಯು ಮೌನವಾಗಿ ಕುಳಿತರೂ ಕೂಡಾ, ಆಗಲೂ ಎಲ್ಲಾ ರೀತಿಯ ಯೋಚನೆಗಳು ಅವನ ಮನಸ್ಸಿಗೆ ಬರುತ್ತವೆ; ಉದಾಹರಣೆಗೆ, "ಇದು ಒಳ್ಳೆಯದು, ಅದು ಒಳ್ಳೆಯದಲ್ಲ; ನಾನು ಇದನ್ನು ಮತ್ತು ಅದನ್ನು ಮಾಡಬೇಕು; ಇಂತಿಂತಹ ವ್ಯಕ್ತಿಯು ಹೀಗೆ, ಹಾಗೆ; ನನಗೇನು ಆಗುವುದು ಅಥವಾ ಏನಾಗದೇ ಇರಬಹುದು", ಮುಂತಾಗಿ.

ಇಂತಹ ಯೋಚನೆಗಳು ವ್ಯಕ್ತಿಯ ಮನಸ್ಸಿಗೆ ಎಲ್ಲೆಡೆಗಳಿಂದಲೂ ಬರುತ್ತಿರುತ್ತವೆ. ಅವನಿಗೆ ಒಂದು ಕ್ಷಣವೂ ಶಾಂತಿ ಸಿಗುವುದಿಲ್ಲ. ಮನಸ್ಸು ಈ ಯೋಚನೆಗಳೊಂದಿಗೆ ಎಷ್ಟು ವ್ಯಸ್ತವಾಗಿಬಿಡುವುದೆಂದರೆ, ಅದು ಭ್ರಮೆಗೆ ಬೀಳುತ್ತದೆ ಮತ್ತು ತಾನು ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಗುರುತಿಸಲು ಕೂಡಾ ಅದಕ್ಕೆ ಸಾಧ್ಯವಾಗುವುದಿಲ್ಲ. ಇದು ಮೊದಲನೆಯ ಹಂತ.

ಸರಿ, ಒಂದು ಕ್ಷಣಕ್ಕೆ ನಾವು ನಮ್ಮನ್ನು ಬದಿಗಿರಿಸೋಣ. ಒಬ್ಬರಲ್ಲ ಒಬ್ಬರು ಭ್ರಮೆಯಲ್ಲಿ ಸಿಲುಕಿರುವುದನ್ನು ನಾವೆಲ್ಲರೂ ನೋಡಿರುವೆವು, ಅಲ್ಲವೇ? ಒಬ್ಬರು ಭ್ರಮೆಯಲ್ಲಿ ಸಿಲುಕಿರುವುದನ್ನು ನೋಡಿ ನಿಮ್ಮಲ್ಲೇ ನೀವು ಯೋಚಿಸುತ್ತೀರಿ, "ಓ, ಅವನೊಂದು ಭ್ರಮೆಯಲ್ಲಿ ಎಷ್ಟರಮಟ್ಟಿಗೆ ಸಿಲುಕಿದ್ದಾನೆಂದರೆ ಅವನಿಗೆ ಸತ್ಯವನ್ನು ಕಾಣಲು ಸಾಧ್ಯವಾಗುತ್ತಿಲ್ಲ."
ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ನೋಡಿರುವಿರಿ? ನಿಮ್ಮ ಕೈಗಳನ್ನೆತ್ತಿ.

(ಹಲವರು ತಮ್ಮ ಕೈಗಳನ್ನೆತ್ತುತ್ತಾರೆ)

ಸಂಪೂರ್ಣ ಜಗತ್ತು ತಮ್ಮ ವಿರುದ್ಧವಾಗಿದೆಯೆಂಬ ಈ ತಪ್ಪುಕಲ್ಪನೆಯನ್ನು ಹೊಂದಿದ ಕೆಲವು ಜನರಿದ್ದಾರೆ. ಮೊದಲನೆಯದಾಗಿ, ಸಂಪೂರ್ಣ ಜಗತ್ತು ಈ ವ್ಯಕ್ತಿಯನ್ನು ತಿಳಿದೂ ಸಹ ಇಲ್ಲ ಮತ್ತು ಈ ವ್ಯಕ್ತಿಯ ಬಗ್ಗೆ ಯೋಚಿಸಲು ಕೂಡಾ ಯಾರ ಬಳಿಯೂ ಸಮಯವಿಲ್ಲ, ಆದರೂ ಸಂಪೂರ್ಣ ಜಗತ್ತು ತನ್ನ ವಿರುದ್ಧವಾಗಿದೆಯೆಂದು ಆ ವ್ಯಕ್ತಿಗೆ ಅನ್ನಿಸುತ್ತದೆ. ಪ್ರತಿಯೊಬ್ಬರೂ ತನ್ನ ಶತ್ರುವೆಂದೂ ಮತ್ತು ತನ್ನ ಜೀವದ ಹಿಂದೆ ಬಿದ್ದಿರುವರೆಂದೂ ಅವನು ಯೋಚಿಸುತ್ತಾನೆ. ಅಂತಹ ಒಂದು ಭ್ರಮೆಯೂ ಕೂಡಾ ಮಾಯೆಯ ಕಾರಣದಿಂದಾಗಿದೆ. ಕೆಲವೊಮ್ಮೆ ಇದರ ವಿರುದ್ಧವೂ ಸಂಭವಿಸುತ್ತದೆ. ಪ್ರತಿಯೊಬ್ಬರೂ ಸದಾ ಕಾಲವೂ ತನ್ನನ್ನೇ ನೋಡುತ್ತಿದ್ದಾರೆಂದು ಒಬ್ಬ ವ್ಯಕ್ತಿಗೆ ಅನ್ನಿಸುತ್ತದೆ. ಅವನು ಹೀಗೆಂದು ಯೋಚಿಸುತ್ತಾನೆ, "ಓ, ಎಲ್ಲರೂ ನನ್ನನ್ನು ಮಾತ್ರ ಹೊಗಳುತ್ತಿದ್ದಾರೆ."

ಅಂತಹ ಜನರು ತಮ್ಮ ಜೀವಮಾನವಿಡೀ ಅಂತಹ ಭ್ರಮೆಗಳಲ್ಲಿ ಜೀವಿಸುತ್ತಾರೆ ಮತ್ತು ಅವರು ಅದರೊಂದಿಗೆಯೇ ಸಾಯುತ್ತಾರೆ ಕೂಡಾ.

ಹೆಚ್ಚಾಗಿ ಜನರಿಗೆ ಇನ್ನೊಬ್ಬ ವ್ಯಕ್ತಿಯ ಭ್ರಮೆಗಳನ್ನು ಬಹಳ ಚೆನ್ನಾಗಿ ಗುರುತಿಸಲು ಸಾಧ್ಯವಾಗುತ್ತದೆ, ಆದರೆ ತಮ್ಮದೇ ಆದವುಗಳನ್ನಲ್ಲ. ತಮ್ಮದೇ ಆದ ಭ್ರಮೆಗಳನ್ನು ಅವರು ನಿಜವೆಂಬುದಾಗಿ ಯೋಚಿಸುತ್ತಾರೆ. ಇನ್ನೊಬ್ಬ ವ್ಯಕ್ತಿಯು ಒಂದು ಭ್ರಮೆಯಲ್ಲಿ ಸಿಲುಕಿರುವಾಗ ನಾವದನ್ನು ಗುರುತಿಸಬಲ್ಲೆವು, ಆದರೆ ನಾವೇ ಒಂದು ಮಾಯೆಯಲ್ಲಿ ಸಿಲುಕಿರುವಾಗ, ನಾವೊಂದು ಮಾಯೆಯಲ್ಲಿ ಸಿಲುಕಿರುವೆವು ಎಂಬುದನ್ನು ಗುರುತಿಸಲು ನಮಗೆ ಸಾಧ್ಯವಾಗುವುದಿಲ್ಲ.

ನಾವು ಇತರ ಜನರ ಬಗೆಗಿನ ಯೋಚನೆಗಳಲ್ಲಿ ಬಹಳ ಮುಳುಗಿಹೋಗುತ್ತೇವೆ. ನಾವು, "ಅವನು ಹೀಗೆ" ಅಥವಾ "ಅವಳು ಹಾಗೆ; ಇದು ಸರಿ, ಅದು ತಪ್ಪು" ಮೊದಲಾಗಿ ಯೋಚಿಸುತ್ತಿರುತ್ತೇವೆ. ನಾವು ಸದಾಕಾಲವೂ ಒಂದಲ್ಲ ಒಂದನ್ನು ಯೋಚಿಸುತ್ತಿರುತ್ತೇವೆ ಮತ್ತು ಮನಸ್ಸು ಒಂದು ಕ್ಷಣವೂ ಶಾಂತವಾಗಿರುವುದಿಲ್ಲ.

ಸತ್ಸಂಗದಲ್ಲಿ ಕೂಡಾ, ಮಾಯೆಯಿಂದಾಗಿ ಮನಸ್ಸು ಯೋಚನೆಗಳ ಒಂದು ಸುಳಿಯಲ್ಲಿ ಸಿಲುಕಿಹಾಕಿರುತ್ತದೆ.  

ಇದು ಮೊದಲನೆಯ ಹಂತವಾಗಿದೆ, ಇಲ್ಲಿ ಒಬ್ಬನು ದುಃಖಿತನಾಗಿರುತ್ತಾನೆ ಮತ್ತು ಮಾಯೆಯಲ್ಲಿ ಸಿಲುಕಿರುವುದರ ಬಗ್ಗೆ ಅರಿತಿರುವುದಿಲ್ಲ.

ಎರಡನೆಯ ಹಂತದಲ್ಲಿ, ಆಗುತ್ತಿರುವುದೆಲ್ಲವೂ ಭ್ರಮೆಯಲ್ಲದೆ ಮತ್ತೇನೂ ಅಲ್ಲ ಮತ್ತು ಅದು ಮಾಯೆಯಿಂದಾಗಿ ಎಂಬುದನ್ನು ಒಬ್ಬನು ಅರಿತಿರುತ್ತಾನೆ, ಆದರೆ ಅವನಿಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ.

ಎರಡನೆಯ ಹಂತದಲ್ಲಿ, ನೀವು ಭ್ರಮೆಯಲ್ಲಿರುವಿರಿ ಎಂಬುದು ನಿಮಗೆ ತಿಳಿದಿರುತ್ತದೆ. ಈ ವ್ಯಕ್ತಿಯ ಮತ್ತು ಆ ವ್ಯಕ್ತಿಯ ಕಡೆಗೆ ನೀವು ತೆಗೆದುಕೊಂಡ ತೀರ್ಮಾನಗಳೆಲ್ಲಾ ಪೂರ್ತಿಯಾಗಿ ತಪ್ಪಾದವು ಎಂಬುದು ನಿಮಗೆ ಕಂಡುಬರುತ್ತದೆ. ಅವರು ಯಾವ ರೀತಿಯವರೆಂದು ನೀವು ಅಂದುಕೊಂಡಿದ್ದಿರೋ ಅವರು ಆ ರೀತಿಯವರಲ್ಲವೆಂಬುದು ನಿಮಗೆ ತಿಳಿಯುತ್ತದೆ.

ಇತರರ ಬಗ್ಗೆ ನೀವು ನಿಮ್ಮ ಮನಸ್ಸಿನಲ್ಲಿ ಯಾವುದೆಲ್ಲಾ ಧಾರಣೆಗಳನ್ನು ಮಾಡಿದ್ದಿರೋ, ಅವುಗಳೆಲ್ಲವೂ ತಪ್ಪೆಂಬುದು ನಿಮಗೆ ಕಂಡುಬರುತ್ತದೆ. ಹೀಗೆ, ಇದೆಲ್ಲವೂ ಭ್ರಮೆಯೆಂದು ತಿಳಿಯಲು ನಿಮಗೆ ಸಾಧ್ಯವಾಗುತ್ತದೆ. ಆದರೆ, ಅದು ಭ್ರಮೆಯೆಂಬುದನ್ನು ತಿಳಿಯುವುದರ ಹೊರತಾಗಿಯೂ, ನಿಮಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಹೀಗೆ, ನೀವು ಭ್ರಮೆಯಲ್ಲಿರುತ್ತೀರಿ ಮತ್ತು ನಿಮಗೆ ಅದರ ಅರಿವಿರುತ್ತದೆ. ಈಗ ನೀವು ಇದರಿಂದ ಹೇಗೆ ಹೊರಬರಬಹುದು?

ನಾವೊಂದು ಭ್ರಮೆಯಲ್ಲಿ ಸಿಲುಕಿಹಾಕಿಕೊಂಡಾಗ ಮತ್ತು ನಮಗೆ ಅದರ ಅರಿವಿಲ್ಲದಿರುವಾಗ, ನಾವು ನಮ್ಮ ಸುತ್ತಲಿನ ಜನರಿಂದ ತೊಂದರೆಯನ್ನು ಅನುಭವಿಸುತ್ತೇವೆ. ಇದು ಮೊದಲನೆಯ ಹಂತ. ಇದೆಲ್ಲವೂ ನಮ್ಮದೇ ಮನಸ್ಸಿನ ಸೃಷ್ಟಿಯೆಂಬುದು ನಮಗೆ ತಿಳಿಯುವಾಗ, ನಾವು ನಮ್ಮ ಮೇಲೆಯೇ ಕೋಪಗೊಳ್ಳುತ್ತೇವೆ ಮತ್ತು ನಮಗೆ ನಮ್ಮದೇ ಮನಸ್ಸಿನಿಂದ ತೊಂದರೆಯಾಗುತ್ತದೆ. ಎಷ್ಟು ಮಂದಿಗೆ ಈ ಅನುಭವವಾಗಿದೆ?

ನೀವು ನಿಮ್ಮದೇ ಮನಸ್ಸಿನಿಂದಾಗಿ ದುಃಖಿತರಾಗಿರುವಿರಿ ಮತ್ತು ಇತರರಿಂದಾಗಿಯಲ್ಲ ಎಂಬುದು ನಿಮಗೆ ತಿಳಿದಿರುತ್ತದೆ. ಇದು ಎರಡನೆಯ ಹಂತ.

ಮೊದಲನೆಯ ಹಂತದಲ್ಲಿ, ಒಬ್ಬ ವ್ಯಕ್ತಿಯು ಭ್ರಮೆಯಲ್ಲಿ ಸಿಲುಕಿಬಿದ್ದಿರುತ್ತಾನೆ ಮತ್ತು ತಾನು ಸಿಲುಕಿಬಿದ್ದಿರುವೆನೆಂಬುದರ ಅರಿವು ಆತನಿಗಿರುವುದಿಲ್ಲ. ಹಾಗಾಗಿ ತನ್ನ ಪರಿಸ್ಥಿತಿಗಳಿಗಾಗಿ ತನ್ನದೇ ಮನಸ್ಸಿನ ಬದಲಾಗಿ ಅವನು ಜಗತ್ತನ್ನು ದೂಷಿಸುತ್ತಾನೆ. ಮತ್ತು ಪ್ರಪಂಚವನ್ನು ಸರಿಪಡಿಸಲು ಅವನಿಗೆ ಸಾಧ್ಯವಿಲ್ಲದಿರುವುದರಿಂದ, ಅವನು ಅಸಹಾಯಕತೆ ಮತ್ತು ಕೋಪವನ್ನು ಅನುಭವಿಸಲು ತೊಡಗುತ್ತಾನೆ ಹಾಗೂ ಇದು ಅವನಲ್ಲಿ ಹಿಂಸಾತ್ಮಕ ಪ್ರವೃತ್ತಿಗಳನ್ನು ಹೆಚ್ಚಿಸುತ್ತದೆ.

ತಮ್ಮದೇ ಮನಸ್ಸಿನಿಂದ ತಾವು ತೊಂದರೆಗೊಳಗಾಗಿರುವೆವು ಎಂಬುದನ್ನಾದರೂ ಅರಿತಿರುವವರು, ಮೊದಲನೆಯ ಹಂತದಲ್ಲಿರುವವರಿಗಿಂತ ಸ್ವಲ್ಪ ಹೆಚ್ಚು ಬುದ್ಧಿವಂತರು. ಅಂತಹ ಜನರು ತಮ್ಮ ಪರಿಸ್ಥಿತಿಗಳಿಗೆ ಅಥವಾ ತಮ್ಮ ದುಃಖಗಳಿಗೆ ಪ್ರಪಂಚವನ್ನು ದೂಷಿಸುವುದಿಲ್ಲ. ಬದಲಾಗಿ, ಅವರು ತಮ್ಮನ್ನೇ ದೂಷಿಸಿಕೊಳ್ಳಲು ತೊಡಗುತ್ತಾರೆ ಮತ್ತು ಇಲ್ಲಿಯೇ ಅವರು ಸಿಕ್ಕಿಬೀಳುವುದು. ಅವರು ತಮ್ಮನ್ನೇ ದೂಷಿಸಿಕೊಳ್ಳುತ್ತಾರೆ ಮತ್ತು ಪಾಪಪ್ರಜ್ಞೆಯ ಭಾವನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಈ ಎರಡು ಹಂತಗಳಿಗಿಂತ ಮೇಲಿರುವ ಮೂರನೆಯ ಹಂತದಲ್ಲಿಯೇ ಒಬ್ಬನು ಮಾಯೆಯಿಂದ ಬಾಧಿತನಾಗದಿರುವುದು.
ಈ ಹಂತದಲ್ಲಿ, ಆಗುವುದೆಲ್ಲವೂ ಮಾಯೆಯಿಂದಾಗಿ ಅಥವಾ ಮನಸ್ಸಿನಿಂದಾಗಿ ಎಂದು ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಅವನು ಅದರೊಳಕ್ಕೆ ಸಿಕ್ಕಿಬೀಳುವುದಿಲ್ಲ.

ಇದು ಮನಸ್ಸಿನ ಸ್ವಭಾವ ಮತ್ತು ಭ್ರಮೆಯೆಂಬುದು ಮಾಯೆಯ ಸ್ವಭಾವವೆಂಬುದು ಅವನಿಗೆ ತಿಳಿದಿರುತ್ತದೆ. ಆದರೂ, ತಾನು ಮನಸ್ಸೂ ಅಲ್ಲ ಮತ್ತು ತಾನು ಮಾಯೆಯಲ್ಲಿ ಸಿಲುಕಿದವನೂ ಅಲ್ಲವೆಂಬುದು ಕೂಡಾ ಅವನಿಗೆ ತಿಳಿದಿರುತ್ತದೆ. ಹಾಗಾಗಿ ಅವನು ಮನಸ್ಸಿನ ಸ್ವಭಾವವನ್ನು ವಿರೋಧಿಸುವುದಿಲ್ಲ ಅಥವಾ ಅದಕ್ಕೆ ಅಡ್ದಿಯಾಗುವುದಿಲ್ಲ ಮತ್ತು ಅವನು ಮಾಯೆಯಲ್ಲಿ ಸಿಕ್ಕಿಹಾಕಿಕೊಳ್ಳುವುದೂ ಇಲ್ಲ. ಅವನು ಅವುಗಳೆರಡೂ ತಾವು ಕೆಲಸ ಮಾಡುವ ರೀತಿಯಲ್ಲಿ ಕೆಲಸ ಮಾಡಲು ಬಿಡುತ್ತಾನೆ.

ಅಂತಹ ಜ್ಞಾನಿಗಳು, ಮನಸ್ಸನ್ನು ಹಲವಾರು ಅಂಶಗಳಿಂದ ಪ್ರಭಾವಿತಗೊಳಿಸಬಹುದು ಎಂಬುದನ್ನು ಅರಿತಿರುತ್ತಾರೆ. ಇದಕ್ಕಿರುವ ಒಂದು ಒಳ್ಳೆಯ ಉದಾಹರಣೆಯೆಂದರೆ, ನೀವು ಸೇವಿಸುವ ಆಹಾರ. ’ಜೈಸಾ ಅನ್ನ್ ವೈಸಾ ಮನ್’ ಎಂಬ ಒಂದು ಮಾತಿದೆ (ಅಂದರೆ, ’ಅನ್ನದಂತೆ ಮನಸ್ಸು’ ಎಂದು. ಇಲ್ಲಿನ ಅರ್ಥವೆಂದರೆ, ನೀವು ಏನನ್ನು ತಿನ್ನುವಿರೋ ಅದು ನಿಮ್ಮ ಮನಸ್ಸು ಮತ್ತು ನಿಮ್ಮ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ).  

ಹೀಗೆ ಮನಸ್ಸು ನೀವು ತಿನ್ನುವ ಆಹಾರದಿಂದ, ನೀವಿರುವ ಪರಿಸರದಿಂದ ಮತ್ತು ನೀವಿರಬಹುದಾದ ನಿರ್ದಿಷ್ಟ ಕಾಲಘಟ್ಟದಿಂದ ಪ್ರಭಾವಿತವಾಗುತ್ತದೆ.

ಸಮಯವು ಕೂಡಾ ಮನಸ್ಸಿನ ಮೇಲೆ ಒಂದು ಪ್ರಭಾವವನ್ನು ಬೀರುತ್ತದೆ. ನೀವಿರುವ ಕಾಲಘಟ್ಟದ ಕಾರಣದಿಂದಾಗಿ ನಿಮ್ಮ ಮನಸ್ಸು ಭಾವನೆಗಳ ಬಿರುಗಾಳಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಿದರ್ಶನಗಳಿವೆ.

ಹೀಗೆ, ಸಮಯ, ಆಹಾರ ಮತ್ತು ಪರಿಸರ - ಇವುಗಳು ಮನಸ್ಸಿನ ಮೇಲೆ ಪ್ರಭಾವ ಬೀರುವ ಮೂರು ಅಂಶಗಳಾಗಿವೆ.
ಈ ರೀತಿಯಲ್ಲಿ, ಮಾಯೆಯು ತನ್ನ ಸ್ವಭಾವಕ್ಕನುಸಾರವಾಗಿ ಕೆಲಸ ಮಾಡುತ್ತಿದೆಯೆಂಬುದನ್ನು ಜ್ಞಾನಿಯು ತಿಳಿದಿರುತ್ತಾನೆ ಮತ್ತು ಹಾಗಾಗಿ ಅವನು ಸುಮ್ಮನೆ ವಿಶ್ರಾಮ ಮಾಡುತ್ತಾನೆ ಹಾಗೂ ಆತ್ಮನಲ್ಲಿ ವಿರಮಿಸುತ್ತಾನೆ.

ಇದು ನಿಜವಾದ ಜ್ಞಾನ. ಈ ಜ್ಞಾನದಿಂದ ಮನಸ್ಸು ಶುದ್ಧಗೊಳ್ಳುತ್ತದೆ (ಮಾಯೆಯ ಕೊಳೆಯಿಂದ) ಮತ್ತು ಮಾಯೆಯಲ್ಲಿ ಸಿಲುಕಿಕೊಂಡಿರುವುದರಿಂದ ಮುಕ್ತವಾಗುತ್ತದೆ. ಈ ಜ್ಞಾನದಿಂದ ಬುದ್ಧಿ ಕೂಡಾ ಶುದ್ಧಗೊಳ್ಳುತ್ತದೆ ಮತ್ತು ಸ್ವತಃ ತನ್ನನ್ನು ಮಾಯೆಯಿಂದ ಬೇರ್ಪಡಿಸಿಕೊಳ್ಳುತ್ತದೆ.

ಅಂತಹ ಬುದ್ಧಿಶಕ್ತಿಯ ಪರಿಶುದ್ಧತೆಯಿರುವ ಜನರು ಏನೇ ಕಾರ್ಯಗಳನ್ನು ಮಾಡಲಿ ಬಾಧಿತರಾಗದೇ ಉಳಿಯುತ್ತಾರೆ.