ಶನಿವಾರ, ಮೇ 11, 2013

ಗೀತಾ ಜ್ಞಾನ - ೩

೧೧ ಮೇ ೨೦೧೩
ಬೆಂಗಳೂರು, ಭಾರತ

ಮಹತ್ತರ ಶಕ್ತಿಯ ರಹಸ್ಯ

ನಂತರ ಬರುವುದು ಮುಂದಿನ ಎರಡು ಶ್ಲೋಕಗಳು,

’ಬೀಜ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ I
 ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ II
 ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ I
 ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ II’  (೭.೧೦ ಮತ್ತು ೭.೧೧)

ಪ್ರತಿಯೊಬ್ಬರಲ್ಲೂ ಒಂದು ಬೀಜವಿರುತ್ತದೆ. ಈ ಪ್ರಪಂಚಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಂದಿಗೆ ಏನನ್ನಾದರೂ ತರುತ್ತಾನೆ (ಗುಣ ಅಥವಾ ಕೊಡುಗೆ). ಇವುಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುವ, ಬದಲಾಗದಿರುವ ಕೆಲವು ಸಹಜ ಗುಣಗಳಾಗಿವೆ.

ಹಲವು ಸಲ ಶಿಕ್ಷಕರು, ’ವಿದ್ಯಾರ್ಥಿಯಲ್ಲಿ ಗುಣವಿದ್ದರೆ ಮಾತ್ರ ನನಗೆ ಅದನ್ನು ಬೆಳೆಸಲು ಸಾಧ್ಯ’ ಎಂದು ಹೇಳುವುದನ್ನು ನೀವು ಕೇಳಬಹುದು. ಮೊದಲಿನಿಂದಲೇ ನಿಮ್ಮಲ್ಲಿ ಕೆಲವು ಬೀಜಗಳಿರುವಾಗ ಮಾತ್ರ ನಿಮಗೆ ಏನನ್ನಾದರೂ ಬೆಳೆಸಲು ಸಾಧ್ಯ. ಶುರು ಮಾಡಲು  ಏನೂ ಇಲ್ಲವಾದಲ್ಲಿ, ಆ ಗುಣಗಳನ್ನು ಅಭಿವೃದ್ಧಿಪಡಿಸಲು ನಿಮಗೆ ಹೇಗೆ ಸಾಧ್ಯವಾಗುವುದು?

ಆದುದರಿಂದ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಪ್ರತಿಯೊಂದು ಜೀವದಲ್ಲೂ ಇರುವ ಈ ಬೀಜವು ಅನಾದಿ ಕಾಲದಿಂದಲೂ ಇದೆ ಮತ್ತು ಅದೇನೋ ಹೊಸತಲ್ಲ. ಅದಕ್ಕೆ ಆರಂಭವಿಲ್ಲ ಮತ್ತು ಅದನ್ನು ಯಾವಾಗ ಬಿತ್ತಲಾಯಿತೆಂಬುದು ಯಾರಿಗೂ ತಿಳಿಯದು. ಎಲ್ಲಾ ಜೀವಿಗಳಲ್ಲಿ ಇರುವ ಈ ಬೀಜವು ನಾನಾಗಿರುವೆನು. ಇದನ್ನೇ ನೀವು ತಿಳಿದಿರಬೇಕಾದುದು ಯಾಕೆಂದರೆ, ಎಲ್ಲಾ ಜೀವಿಗಳಲ್ಲೂ, ಎಲ್ಲಾ ಪ್ರಾಣಿಗಳಲ್ಲೂ; ಅವುಗಳೊಳಗೆ ಒಂದು ಬೀಜವಿದೆ. ಈ ಬೀಜವು ಅನಾದಿ ಕಾಲದಿಂದಲೂ ಇರುವಂತೆಯೇ, ಎಲ್ಲಾ ಜೀವಗಳೂ ಕೂಡಾ ಅನಾದಿ ಕಾಲದಿಂದ ಅಸ್ತಿತ್ವದಲ್ಲಿವೆ.

ಅನಾದಿ ಮತ್ತು ಅನಂತವೆಂದು ತಿಳಿಯಲ್ಪಡುವ ಮೂರು ವಿಷಯಗಳಿವೆ. ಒಂದನೆಯದು ದೇವರು, ಎರಡನೆಯದು ಜೀವ (ಇಲ್ಲಿ ಪ್ರತ್ಯೇಕ ಆತ್ಮ ಅಥವಾ ಪ್ರಜ್ಞೆ ಎಂದು ಅರ್ಥ) ಮತ್ತು ಮೂರನೆಯದು ಪ್ರಕೃತಿ.

ಅಪರ-ಪ್ರಕೃತಿಯು ಅನಾದಿ ಕಾಲದಿಂದಲೂ ಇದೆ. ಅದೇ ರೀತಿಯಲ್ಲಿ ದೇವರು ಮತ್ತು ಜೀವ ಕೂಡಾ. ಹೀಗೆ ಸೃಷ್ಟಿಯು ಒಂದು ವೃತ್ತದಂತೆ; ಒಂದು ವೃತ್ತಕ್ಕೆ ಆರಂಭವೂ ಇಲ್ಲ ಮತ್ತು ಅಂತ್ಯವೂ ಇಲ್ಲ. ಆದರೂ ಪ್ರತಿಯೊಂದು ಬಿಂದುವಿನಲ್ಲೂ ಎರಡೂ ಇದೆ; ಒಂದು ಆರಂಭ ಮತ್ತು ಒಂದು ಅಂತ್ಯ.

ಕೃಷ್ಣ ಪರಮಾತ್ಮನು ಮತ್ತಷ್ಟು ವಿವರಿಸುತ್ತಾನೆ, ’ಓ ಅರ್ಜುನ, ನೀನೊಬ್ಬ ಬುದ್ಧಿವಂತ ವ್ಯಕ್ತಿಯನ್ನು ನೋಡಿದರೆ, ಅವನು ತನ್ನ ಬುದ್ಧಿಶಕ್ತಿಯನ್ನೆಲ್ಲಾ ಸ್ವತಃ ತಾನಾಗಿಯೇ ಗಳಿಸಿರುವನು ಎಂದು ಯೋಚಿಸಬೇಡ. ಬುದ್ಧಿವಂತರ ಬುದ್ಧಿವಂತಿಕೆಯು ನಾನಾಗಿರುವೆನು’.

ಇದು ಪರಮಾತ್ಮನು ಮಾಡಿದ ಬಹಳ ಬುದ್ಧಿವಂತ ವಿಷಯವಾಗಿದೆ. ಎಲ್ಲೆಲ್ಲಾ ಮನಸ್ಸು ಸಿಕ್ಕಿಹಾಕಿಕೊಳ್ಳುವ ಅಥವಾ ಆಕರ್ಷಿತವಾಗುವ ಸಾಧ್ಯತೆಯಿದೆಯೋ, ಆ ಎಲ್ಲಾ ಜಾಗಗಳಿಂದ ಅರ್ಜುನನ ಮನಸ್ಸನ್ನು ಕೃಷ್ಣ ಪರಮಾತ್ಮನು, ತನ್ನ ಮೇಲೆ ಕೇಂದ್ರೀಕರಿಸುವುದಕ್ಕಾಗಿ ಮತ್ತೆ ಮತ್ತೆ ಹಿಂದಕ್ಕೆ ತರುತ್ತಾನೆ.

ನಾವು ಬುದ್ಧಿವಂತ ಜನರಿಂದ ಬಹಳ ಪ್ರಭಾವಿತರಾಗುತ್ತೇವೆ. ’ಈ ವ್ಯಕ್ತಿಯು ಬಹಳ ಬುದ್ಧಿವಂತ. ಅವನ ಬುದ್ಧಿಶಕ್ತಿಯು ಬಹಳ ತೀಕ್ಷ್ಣವಾಗಿದೆ ಮತ್ತು ಅವನು ಬಹಳ ಪ್ರಾಜ್ಞ’ ಎಂದು ನಾವು ಯೋಚಿಸುತ್ತೇವೆ. ಈ ರೀತಿಯಲ್ಲಿ ನಾವು ಆ ವ್ಯಕ್ತಿಯನ್ನು ಹೊಗಳಲು ಪ್ರಾರಂಭಿಸುತ್ತೇವೆ. ಹೀಗೆ, ಮನಸ್ಸನ್ನು ಹಿಂದಕ್ಕೆ ತರಲು ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಎಲ್ಲೆಲ್ಲಾ ನೀನು ಅಂತಹ ಅದ್ಭುತ ಬುದ್ಧಿಮತ್ತೆಯನ್ನು ನೋಡುವಿಯೋ, ಅದು ನಾನೆಂಬುದನ್ನು ತಿಳಿ. ಅದು ಕೇವಲ ನನ್ನದೇ ಆವಿರ್ಭಾವವಾಗಿದೆ’.

ಇದನ್ನು ಹೇಳುವುದರಿಂದ, ಅವನ ಮೇಲೆ ಕೇಂದ್ರಿತಗೊಳಿಸಲು ಅವನು ಮನಸ್ಸನ್ನು ಹಿಂದಕ್ಕೆ ತರುತ್ತಾನೆ. ಅದರರ್ಥ, ಎಲ್ಲೆಲ್ಲಾ ನೀವು ತೀಕ್ಷ್ಣವಾದ ಬುದ್ಧಿಮತ್ತೆಯನ್ನು ನೋಡುವಿರೋ, ಅದು ಕೃಷ್ಣ ಮತ್ತು ಅದು ಕೃಷ್ಣನಿಂದ ಬಂದಿದೆ ಎಂಬುದನ್ನು ತಿಳಿಯಿರಿ. ನೀವಿದನ್ನು ತಿಳಿಯುವಾಗ, ನಿಮ್ಮ ಮನಸ್ಸು ಎಲ್ಲೂ ದಾರಿತಪ್ಪಲು ಸಾಧ್ಯವಿಲ್ಲ (ಎಲ್ಲವೂ ಕೃಷ್ಣ ಪರಮಾತ್ಮನ ಒಂದು ರೂಪವೆಂಬುದು ಅದಕ್ಕೆ ಮನದಟ್ಟಾಗುತ್ತದೆ ಮತ್ತು ಅವನ ಮೇಲೆ ಕೇಂದ್ರಿತವಾಗಿರುತ್ತದೆ).

ಅದೇ ರೀತಿಯಲ್ಲಿ ಅವನು, ’ಶಕ್ತಿವಂತರಲ್ಲಿನ ತೇಜಸ್ಸು ನಾನಾಗಿರುವೆನು. ಒಬ್ಬರ ಮುಖದಲ್ಲಿ ನೀವು ನೋಡುವ ಕಾಂತಿ ನಾನಾಗಿರುವೆನು. ಉತ್ಕಟ ಬಯಕೆಗಳಿಂದ ಬಾಧಿತನಾಗಿರದ ಒಬ್ಬ ವ್ಯಕ್ತಿಯಲ್ಲಿ ನೀವು ನೋಡುವ ಶಕ್ತಿಯು ನಾನಾಗಿರುವೆನು’ ಎಂದು ಹೇಳುತ್ತಾನೆ.

ಒಬ್ಬನು ದ್ವೇಷ ಮತ್ತು ವೈಷಮ್ಯಗಳಿಂದ ಕೂಡಾ ಶಕ್ತಿಯನ್ನು ಪಡೆಯಲು ಸಾಧ್ಯ. ಅಂತಹ ಜನರು ಬಹಳ ಬಲಶಾಲಿಗಳಾಗಿ ತೋರುತ್ತಾರೆ. ಆದರೆ ಅದು ನಾನಲ್ಲ. ಭಯೋತ್ಪಾದಕರು ಮತ್ತು ಹಿಂಸಾಪ್ರವೃತ್ತಿಯ ಜನರು, ದ್ವೇಷದಿಂದ ಮಹತ್ತರವಾದ ಶಕ್ತಿಯನ್ನು ಪಡೆಯುವಂತೆ ತೋರುತ್ತದೆ. ಆದರೆ ಕೃಷ್ಣ ಪರಮಾತ್ಮನು, ’ಆ ಶಕ್ತಿಯು (ನಕಾರಾತ್ಮಕತೆಯಿಂದ ಪಡೆದ) ನಾನಲ್ಲ’ ಎಂದು ಹೇಳುತ್ತಾನೆ.

ಭಯೋತ್ಪಾದಕರು ಬಹಳ ಅಂಜಿಕೆಯೊಂದಿಗೆ ನಡೆಯುತ್ತಾರೆ. ಅವರು ಇತರರಲ್ಲಿ ಭಯಹುಟ್ಟಿಸುತ್ತಾರೆ ಮತ್ತು ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ಆದರೆ ಅಂತಹ ಶಕ್ತಿಯು ಕಾಮ ಮತ್ತು ರಾಗಗಳಿಂದ ಮುಕ್ತವಲ್ಲ. ಎಲ್ಲಿ ರಾಗವಿರುವುದೋ, ಅಲ್ಲಿ ದ್ವೇಷ ಕೂಡಾ ಇರುವುದು. ರಾಗಗಳಿಂದಾಗಿ, ತಮ್ಮ ಶಕ್ತಿಯನ್ನು ಪ್ರದರ್ಶಿಸುವುದರಲ್ಲಿ ಯಾರು ತೊಡಗುವರೋ ಅವರು ಮೂರ್ಖರು.
ಹಾಗೆಯೇ, ಜ್ವರತೆಯ ಬಯಕೆಗಳಿಂದ ಪ್ರೇರಿತರಾದ ಜನರು, ಅಸಾಮಾನ್ಯ ರೂಪದ ಮಹತ್ತರವಾದ ಶಕ್ತಿಯನ್ನು ಪ್ರದರ್ಶಿಸುವಂತೆ ತೋರುತ್ತದೆ. ಸಾಧಾರಣವಾಗಿ ಇವತ್ತು ಪ್ರಪಂಚದಲ್ಲಿ ಕಾಣುವುದು ಇದೇ. ಜ್ವರತೆಯಿಂದ ಪ್ರೇರಿತರಾದ ಜನರು, ತಮ್ಮನ್ನು ತಾವೇ ಬಹಳ ಬಲಶಾಲಿಗಳಾಗಿ ಅಭಿವ್ಯಕ್ತಿಗೊಳಿಸುತ್ತಾರೆ, ಆದರೆ ಅಂತಹ ಶಕ್ತಿಯಿಂದ ಯಾವುದೇ ಪ್ರಯೋಜನವಿಲ್ಲ.

ಜ್ವರತೆಯಿಂದೊಡಗೂಡಿದ ಬಯಕೆಗಳಿಂದ ಬರುವ ಶಕ್ತಿಯು ಬಹಳ ಮೇಲ್ನೋಟದ್ದಾಗಿರುತ್ತದೆ, ಕೇವಲ ಮೇಲ್ಮೈಯಲ್ಲಿ ಮಾತ್ರ. ಈ ಶಕ್ತಿಯು ಒಳಗಿನಿಂದ ಟೊಳ್ಳಾಗಿರುತ್ತದೆ. ಅಂತಹ ಜನರ ಮನಸ್ಸುಗಳಲ್ಲಿ ಆಳವಾದ ಭಯವಿರುತ್ತದೆ ಮತ್ತು ಒಳಗಡೆ ಭಯವಿರುವಾಗ ಒಬ್ಬರಿಗೆ ಶಕ್ತಿಶಾಲಿಯಾಗಿರಲು ಸಾಧ್ಯವಿಲ್ಲ.

ತನ್ನದೇ ಪ್ರಜ್ಞೆಯೊಂದಿಗೆ ಯಾರು ಜೋಡಿಕೊಂಡಿಲ್ಲವೋ ಅವರಿಗೆ ಶಕ್ತಿವಂತರಾಗಿರಲು ಯಾವತ್ತಿಗೂ ಸಾಧ್ಯವಿಲ್ಲ. ತನ್ನ ಕೇಂದ್ರದೊಂದಿಗೆ ಜೋಡಿರದ ಮತ್ತು ತನ್ನ ಇರುವಿಕೆಯ ಬಗ್ಗೆ ಅರಿವಿರದ ಒಬ್ಬ ವ್ಯಕ್ತಿಯು ಹೊರಗಿನಿಂದ ಎಷ್ಟೇ ಮಹತ್ತರವಾದ ಶಕ್ತಿಯನ್ನು ಪ್ರದರ್ಶಿಸಿದರೂ, ಒಳಗಡೆ ಅವನು ಭಯದಿಂದ ಟೊಳ್ಳಾಗಿರುತ್ತಾನೆ.

ಅದೇ ರೀತಿಯಲ್ಲಿ, ದ್ವೇಷ ಮತ್ತು ರಾಕ್ಷಸೀಯ ಪ್ರವೃತ್ತಿಗಳಿಂದ ಬರುವ ಶಕ್ತಿಯು ಕೂಡಾ ಒಳಗಿನಿಂದ ಟೊಳ್ಳಾಗಿದೆ.

’ದ್ವಿತೀಯ ದ್ವೈ ಭಯಂ ಭವತಿ’ ಎಂಬ ಒಂದು ಮಾತಿದೆ. ಅದರರ್ಥ, ಎರಡರ ಇರುವಿಕೆಯು (ಎರಡು; ಇಲ್ಲಿ ಅರ್ಥವೇನೆಂದರೆ ಆತ್ಮದೊಂದಿಗೆ ಯಾರಿಗೆ ಸಂಬಂಧವಿಲ್ಲವೋ ಅದು) ಭಯದ ಕಾರಣವಾಗಿದೆ. ತಮ್ಮೊಳಗಿನ ಪ್ರಜ್ಞೆಯೊಂದಿಗೆ ಒಂದಾಗದ ಜನರು ಮತ್ತು ಒಳಮುಖವಾಗಿ ಆತ್ಮನ ಕಡೆಗೆ ತಿರುಗದ ಜನರು ಶಕ್ತಿಶಾಲಿಗಳೆಂದು ಕರೆಯಲ್ಪಡಲು ಸಾಧ್ಯವಿಲ್ಲ ಹಾಗೂ ಒಬ್ಬರು ಕಡುಬಯಕೆಗಳಿಂದ ಮತ್ತು ಜ್ವರತೆಯಿಂದ ತುಂಬಿರುವಾಗ, ಅವರಿಗೆ ಅಂತರ್ಮುಖವಾಗಿ ಹೋಗಿ ಆತ್ಮದೊಂದಿಗೆ ಒಂದಾಗಲು ಸಾಧ್ಯವಿಲ್ಲ.

ಮಹತ್ತರವಾದ ಶಕ್ತಿಯು ಉದಯಿಸುವುದು ಕೇವಲ ಒಬ್ಬನು ತನ್ನಲ್ಲಿಯೇ ಕೇಂದ್ರಿತನಾದಾಗ ಮಾತ್ರ. ಅಂತಹ ಶಕ್ತಿಯು ಕಡುಬಯಕೆ ಮತ್ತು ಜ್ವರತೆಗಳ ನಕಾರಾತ್ಮಕತೆಯಿಂದ ಮುಕ್ತವಾಗಿರುತ್ತದೆ ಹಾಗೂ ಅವುಗಳು ಅವುಗಳನ್ನು ಮೀರಿದುದಾಗಿರುತ್ತದೆ. ಅದೊಂದೇ ನಿಜವಾದ ಶಕ್ತಿ. ಅದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಎಲ್ಲೆಲ್ಲಾ ನೀನು ಅಂತಹ ಶುದ್ಧವಾದ ಶಕ್ತಿಯನ್ನು ನೋಡುವಿಯೋ, ಅದು ನಾನೆಂಬುದನ್ನು ತಿಳಿ’.

ಈಗ ನೀವು ಕೇಳಬಹುದು, ’ಒಬ್ಬನು ಕಡುಬಯಕೆಗಳಿಂದ ಮತ್ತು ಜ್ವರತೆಯಿಂದ ಮುಕ್ತನಾದಾಗ ಮಾತ್ರ ಮಹತ್ತರವಾದ ಶಕ್ತಿಯು ಬರುವುದೆಂದು ಕೃಷ್ಣ ಪರಮಾತ್ಮನು ಹೇಳಿರುವನು. ಹಾಗಾದರೆ ಎಲ್ಲಾ ಬಯಕೆಗಳು ಕೆಟ್ಟವೇ? ಬಯಕೆಗಳನ್ನು ಹೊಂದಿರುವುದು ತಪ್ಪೇ ಅಥವಾ ಎಲ್ಲರ ಯೋಗಕ್ಷೇಮಕ್ಕಾಗಿ ಒಂದು ಇಚ್ಛೆಯನ್ನು ಹೊಂದಿರುವುದು ಕೂಡಾ ತಪ್ಪೇ? ಅದರರ್ಥ ಒಬ್ಬನು ಯಾವುದೇ ಬಯಕೆಯನ್ನೂ ಹೊಂದಿರಬಾರದೆಂದೇ?’ ಅಲ್ಲ, ಅದು ಹಾಗಲ್ಲ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಧರ್ಮದ ವಿರುದ್ಧವಾಗಿ ಹೋಗದ ಆ ಎಲ್ಲಾ ಬಯಕೆಗಳು ನಾನಾಗಿರುವೆನು.  ಧರ್ಮಕ್ಕನುಸಾರವಾಗಿ ಪ್ರವರ್ತಿಸುವ ಮತ್ತು ತಮ್ಮ ಸ್ವಧರ್ಮವನ್ನು (ಒಬ್ಬನ ಸ್ವಭಾವ ಅಥವಾ ಒಬ್ಬನು ಯಾವ ಕರ್ತವ್ಯಕ್ಕೆ ಜವಾಬ್ದಾರನಾಗಿರುವನೋ ಅದು) ಅನುಸರಿಸುವ ಎಲ್ಲಾ ಜನರಲ್ಲಿ ಏಳುವ ಬಯಕೆಗಳು ನಾನಾಗಿರುವೆನು ಮತ್ತು ನಾನು ಮಾತ್ರವಾಗಿರುವೆನು’.

ನೀವೆಲ್ಲರೂ ಇದನ್ನು ಅನುಭವಿಸಿರಬಹುದು: ಕೆಲವೊಮ್ಮೆ ನಿಮ್ಮ ಹೃದಯದಲ್ಲಿ ಏಳುವ ಒಂದು ಬಯಕೆಗನುಸಾರವಾಗಿ ಪ್ರವರ್ತಿಸಿದಾಗ, ಅದು ನಿಮ್ಮನ್ನು ಮತ್ತು ಇತರರನ್ನು ಕೂಡಾ ಮೇಲೆತ್ತುವುದು ಎಂಬುದು ನಿಮಗೆ ಕಂಡುಬರುತ್ತದೆ.

ಅದರಿಂದಾಗಿ ಎಲ್ಲರಿಗೂ ಲಾಭವಾಗುತ್ತದೆ. ಅಂತಹ ಬಯಕೆಗಳು ದೇವರ ಅಭಿವ್ಯಕ್ತಿಯಾಗಿದೆ. ನಾವು ಧರ್ಮಕ್ಕನುಸಾರವಾಗಿ ಪ್ರವರ್ತಿಸುವಾಗ, ನಾವು ಯಾವುದೇ ತಪ್ಪನ್ನೂ ಮಾಡಲು ಸಾಧ್ಯವಿಲ್ಲ. ಮೇಲಾಗಿ, ಧರ್ಮದೊಂದಿಗೇ ಬಯಕೆಗಳು ಕೂಡಾ ಏಳುತ್ತವೆ. ಆದರೆ ಅಂತಹ ಬಯಕೆಗಳು ದೈವಿಕ ಪ್ರವೃತ್ತಿಯುಳ್ಳವಾಗಿರುತ್ತವೆ(ದೈವೇಚ್ಛೆಯಿಂದ ಪ್ರೇರಿತವಾದವು).

ಅದಕ್ಕಾಗಿಯೇ ವೇದಗಳಲ್ಲಿ, ’ತನ್ಮೇಯಮನಃ ಶಿವಸಂಕಲ್ಪಮಸ್ತು’ ಎಂದು ಹೇಳಲಾಗಿರುವುದು ಎಲ್ಲರಿಗೂ ಒಳಿತನ್ನು ಮಾಡುವ ಮಂಗಳಕರವಾದ ಬಯಕೆಗಳು ನನ್ನಲ್ಲಿರಲಿ. ಸತ್ಯದ ಕಡೆಗೆ ಮತ್ತು ಮಂಗಳಕರವಾಗಿರುವುದೆಲ್ಲದರ ಕಡೆಗೆ ಸಾಗುವ ಬಯಕೆಯು ನನ್ನಲ್ಲಿರಲಿ.

ಈಗ, ಸತ್ಯಕ್ಕಾಗಿರುವ ಬಯಕೆ ಕೂಡಾ ಒಂದು ಬಯಕೆಯಾಗಿದೆ. ಜೀವನದಲ್ಲಿ ನಾವು ಹೆಚ್ಚಿನ ಪ್ರಗತಿಯನ್ನು ಹೊಂದಲು ಬಯಸಿದರೆ, ಅದು ಕೂಡಾ ಒಂದು ಬಯಕೆಯಾಗಿದೆ. ಎಲ್ಲರ ಯೋಗಕ್ಷೇಮದ ಒಂದು ಬಯಕೆಯನ್ನು ಹೊಂದಿರುವುದು, ಪುನಃ ಒಂದು ಬಯಕೆಯಾಗಿದೆ. ಮಂಗಳಕರವಾದ ಬಯಕೆಗಳನ್ನು ಹೊಂದದೆಯೇ (ಎಲ್ಲರಿಗಾಗಿ) ನಿಮಗೆ ಉತ್ಸವಗಳನ್ನು ಆಚರಿಸಲು ಸಾಧ್ಯವಿಲ್ಲ.

ಬಯಕೆಗಳಿಲ್ಲದೆಯೇ ನಿಮಗೆ ನಿಮ್ಮ ಜೀವನದಲ್ಲಿ ಒಂದು ಹೆಜ್ಜೆಯನ್ನು ಕೂಡಾ ನಡೆಯಲು ಸಾಧ್ಯವಿಲ್ಲ. ಜೀವನದಲ್ಲಿ ನೀವು ಮಾಡುವ ಪ್ರತಿ ಕೆಲಸದ ಹಿಂದೆಯೂ ಬಯಕೆಗಳಿವೆ. ಜೀವನದಲ್ಲಿ ನೀವು ಮಾಡುವ ಯಾವುದೇ ಕೆಲಸದ ಹಿಂದೆಯಾದರೂ ಒಂದು ಉದ್ದೇಶವಿದೆ ಮತ್ತು ಆ ಉದ್ದೇಶವೇ ಬಯಕೆಯಾಗಿದೆ. ಹಾಗಾದರೆ ಅದು ಯಾವ ರೀತಿಯ ಬಯಕೆಯಾಗಿರಬೇಕು?

ಧರ್ಮದೊಂದಿಗೆ ಸಂಘರ್ಷದಲ್ಲಿರದ, ಆದರೆ ಅದಕ್ಕನುಸಾರವಾಗಿರುವ ಒಂದು ಬಯಕೆಯಾಗಿರಬೇಕು. ಆದುದರಿಂದ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಧರ್ಮಕ್ಕನುಸಾರವಾಗಿರುವ ಆ ಎಲ್ಲಾ ಬಯಕೆಗಳು ನಾನಾಗಿರುವೆನು’.

ನೀವೆಲ್ಲರೂ ಇದನ್ನು ಯಾವತ್ತಾದರೂ ಅನುಭವಿಸಿರಬೇಕು; ನೀವೊಂದು ಬಯಕೆಗನುಗುಣವಾಗಿ ವರ್ತಿಸಿದಿರಿ ಮತ್ತು ಅದರ ಫಲಿತಾಂಶವು ನೀವು ನಿರೀಕ್ಷಿಸಿದಂತೆಯೇ ಆಯಿತು ಹಾಗೂ ನಿಮ್ಮ ಕೆಲಸದಿಂದಾಗಿ ಹಲವಾರು ಜನರಿಗೆ ಕೂಡಾ ಸಮಾಧಾನವಾಯಿತು. ನಿಮ್ಮಲ್ಲಿ ಏಳುವ ಕೆಲವು ಬಯಕೆಗಳಿರುತ್ತವೆ, ನೀವು ಅವುಗಳಿಗನುಗುಣವಾಗಿ ಕೆಲಸ ಮಾಡಿದಾಗ, ಅದು ನಿಮಗೆ ಮತ್ತು ನಿಮ್ಮ ಸುತ್ತಲಿರುವ ಎಲ್ಲರಿಗೂ ಶಾಂತಿಯನ್ನೂ, ಸುಖವನ್ನೂ ತರುತ್ತದೆ. ಮನಸ್ಸಿನಲ್ಲಿ ಯಾವುದೇ ಸಂಘರ್ಷವನ್ನು ಸೃಷ್ಟಿಸದ ಮತ್ತು ಧರ್ಮಕ್ಕೆ ವಿರುದ್ಧವಾಗಿರದ ಬಯಕೆಗಳು.

ಧರ್ಮದ ವಿರುದ್ಧವಾಗಿ ಹೋಗುವ ನಿಮ್ಮ ಯಾವುದೇ ಕೆಲಸವಾದರೂ ನಿಮ್ಮನ್ನು ಒಳಗಡೆಯಿಂದ ಚುಚ್ಚುವುದು. ಅದು ಒಳಗಿನಿಂದ ನಿಮಗೆ ತೊಂದರೆ ಕೊಡುತ್ತಾ ಇರುವುದು ಮತ್ತು ನಿಮಗೆ, ’ಓ, ನಾನು ನಿಜಕ್ಕೂ ಏನೋ ತಪ್ಪು ಮಾಡಿರಬೇಕು’ ಎಂದು ಅನ್ನಿಸುವುದು. ನಿಮ್ಮ ಆತ್ಮಸಾಕ್ಷಿಯು ನಿಮಗೆ ಇದನ್ನು ಹೇಳುವುದು. ಆದರೆ ನೀವು ಧರ್ಮಕ್ಕನುಸಾರವಾಗಿ ವರ್ತಿಸುವಾಗ, ನಿಮಗೆ ನಿರಾಳತೆಯ ಮತ್ತು ಶಾಂತತೆಯ ಅನುಭವವಾಗುತ್ತದೆ.

’ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ I
ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ II’   (೭.೧೨)

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಓ ಅರ್ಜುನ, ಮೂರು ಗುಣಗಳು; ಸತ್ವ, ರಜಸ್ ಮತ್ತು ತಮಸ್ ಎಲ್ಲಾ ನನ್ನಿಂದ ಹುಟ್ಟಿದವು. ಆದರೆ ನಾನು ಅವುಗಳಲ್ಲೂ ಇಲ್ಲ ಮತ್ತು ಅವುಗಳು ನನ್ನಲ್ಲಿಯೂ ಇಲ್ಲ, ಆದರೂ ಅವುಗಳೆಲ್ಲವೂ ನನ್ನಿಂದ ಬಂದಿವೆ. ಇದನ್ನೇ ನೀನು ತಿಳಿಯಬೇಕಾದುದು’.

ಇದೊಂದು ಬಹಳ ವಿಚಿತ್ರವಾದ ಸಂಗತಿ. ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ನಾನು ಮೂರು ಗುಣಗಳ ಹಿಡಿತಕ್ಕೊಳಗಾಗಿಲ್ಲ ಮತ್ತು ಮೂರು ಗುಣಗಳು ಕೂಡಾ ನನ್ನಲ್ಲಿ ವಾಸಿಸುವುದಿಲ್ಲ, ಆದರೂ ಅವುಗಳು ನನ್ನಿಂದಲೇ ಅಸ್ತಿತ್ವಕ್ಕೆ ಬಂದಿವೆ’. ಇದರ ಹಿಂದೆ ಒಂದು ದೊಡ್ಡ ವೈಜ್ಞಾನಿಕ ಸತ್ಯವಿದೆ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನೀವು ಇನ್ನೂ ಆಳವಾಗಿ ಹೋಗುವಾಗ, ಮೂರು ಗುಣಗಳ ಆಟಕ್ಕೆ ನೀವೊಂದು ಸಾಕ್ಷಿಯಾದಾಗ, ನೀವು ಅವುಗಳೆಲ್ಲದರಿಂದ ಬೇರೆಯಾಗುವಿರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ.

ಆದುದರಿಂದ ಅವನು ಹೇಳುತ್ತಾನೆ, ’ಅವುಗಳು (ಮೂರು ಗುಣಗಳು) ನನ್ನಿಂದ ಬೇರೆಯಾಗಿದ್ದರೂ ಕೂಡಾ ಅವುಗಳು ನನ್ನ ಒಂದು ವಿಸ್ತರಣೆಯಾಗಿವೆ.’

ನಾನು ನನ್ನ ಶರೀರದ ಮೇಲೆ ಬಟ್ಟೆಯನ್ನು ಧರಿಸುತ್ತೇನೆ, ಆದರೆ ನಾನು ಬಟ್ಟೆಯಲ್ಲ ಮತ್ತು ನಾನು ಬಟ್ಟೆಯ ಒಂದು ಭಾಗವೂ ಅಲ್ಲ. ಈ ಉದಾಹರಣೆಯು ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಬಹಳಷ್ಟು ನಿಕಟವಾಗಿದೆ. ನಾವು ನಮ್ಮ ಶರೀರದ ಮೇಲೆ ಹೇಗೆ ಬಟ್ಟೆಗಳನ್ನು ಧರಿಸುತ್ತೇವೆಯೋ ಹಾಗೆಯೇ; ಆದರೆ ನಾವು ನಮ್ಮ ಬಟ್ಟೆಗಳಾಗುವುದಿಲ್ಲ ಮತ್ತು ನಾವು ಬಟ್ಟೆಗಳ ಒಂದು ಭಾಗವೂ ಅಲ್ಲ, ಆದರೂ ಬಟ್ಟೆಗಳು ನಮಗೆ ಸೇರಿದವು. ನಿಮಗಿದು ಅರ್ಥವಾಯಿತೇ?

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಈ ಮೂರು ಗುಣಗಳನ್ನು (ಬಟ್ಟೆ) ಸೃಷ್ಟಿಸಿದುದು ನಾನು, ಮತ್ತು ಅವುಗಳು ನನಗೆ ಸೇರುತ್ತವೆ, ಆದರೂ ನಾನು ಅವುಗಳಿಂದ ಪ್ರಭಾವಿತನಾಗಿಲ್ಲ ಮತ್ತು ಅವುಗಳೂ ನನ್ನಲ್ಲಿ ವಾಸಿಸುವುದಿಲ್ಲ, ಹಾಗೂ ನಾನು ಕೂಡಾ ಈ ಮೂರು ಗುಣಗಳಾಗಿಲ್ಲ. ಆದುದರಿಂದ, ಓ ಧನಂಜಯ (ಅರ್ಜುನನ ಇನ್ನೊಂದು ಹೆಸರು. ಮಹತ್ತಾದ ಸಂಪತ್ತನ್ನು ಜಯಿಸಿದವನೆಂದು ಅರ್ಥ), ನೀನು ಕೂಡಾ ಮೂರು ಗುಣಗಳಿಗೆ ಒಬ್ಬ ಸಾಕ್ಷಿಯಾಗಬೇಕು. ಅವುಗಳು ನನ್ನ ದೈವಿಕ ಗುಣದ ಒಂದು ಭಾಗವೆಂಬುದನ್ನು ನೀನು ಅರ್ಥಮಾಡಿಕೊಳ್ಳಬೇಕು. ಅವುಗಳು ನನ್ನಿಂದ ಸೃಷ್ಟಿಸಲ್ಪಟ್ಟಿವೆ ಮತ್ತು ಅವುಗಳಿಗೆ ಬೆಂಬಲ ನೀಡುವುದು ನಾನೇ, ಆದರೂ ನಾನು ಈ ಮೂರು ಗುಣಗಳಲ್ಲ’.

ಶರೀರದ ಬೇರೆ ಬೇರೆ ಭಾಗಗಳಿಗೆ ನೀವು ಬೇರೆ ಬೇರೆ ಬಟ್ಟೆತುಂಡುಗಳನ್ನು ಹೇಗೆ ಹೊಂದಿರುವಿರೋ; ಪಾದಗಳಿಗೆ ಬೂಟುಗಳು, ಶರೀರಕ್ಕೆ ಒಳ‌ಉಡುಪುಗಳು ಮತ್ತು ಹೊರ‌ಉಡುಪುಗಳು, ತಲೆಗೆ ಒಂದು ಮುಂಡಾಸು; ಅದೇ ರೀತಿಯಲ್ಲಿ ಎಲ್ಲಾ ಗುಣಗಳು ತಮ್ಮದೇ ಆದ ವಿಶಿಷ್ಟ ಗುಣಗಳನ್ನು ಹೊಂದಿವೆ.

ಈಗ ನೀವು ನಿಮ್ಮ ಮುಂಡಾಸನ್ನು ನಿಮ್ಮ ಪಾದಗಳ ಮೇಲೆ ಅಥವಾ ಕೈಗವಸುಗಳನ್ನು ನಿಮ್ಮ ಪಾದಗಳ ಮೇಲೆ ಮತ್ತು ಸಾಕ್ಸನ್ನು ನಿಮ್ಮ ಕೈಗಳ ಮೇಲೆ ಇರಿಸಲು ಪ್ರಯತ್ನಿಸಿದರೆ ಅದು ಸರಿಹೋಗದು. ಬಟ್ಟೆಯ ಪ್ರತಿಯೊಂದು ತುಂಡಿಗೆ ಅದರದ್ದೇ ಆದ ವಿಶಿಷ್ಟ ಸ್ಥಾನವಿದೆ ಮತ್ತು ಬೇರೆಲ್ಲೂ ಅದನ್ನು ಧರಿಸಲಾಗದು. ಆದುದರಿಂದ ಕೃಷ್ಣ ಪರಮಾತ್ಮನು, ’ಮೂರು ಗುಣಗಳಲ್ಲಿ ಪ್ರತಿಯೊಂದೂ ತಮ್ಮದೇ ಆದ ವಿಶಿಷ್ಟ ಗುಣಗಳನ್ನು ಮತ್ತು ತಮ್ಮದೇ ಆದ ಸ್ಥಾನವನ್ನು ಹೊಂದಿವೆ ಹಾಗೂ ಅವುಗಳೆಲ್ಲವೂ ನನ್ನಿಂದ ಬಂದಿವೆ, ಆದರೂ ನಾನು ಇವುಗಳಲ್ಲ. ಆದುದರಿಂದ ಅವುಗಳಲ್ಲಿ ನನ್ನನ್ನು ಹುಡುಕುತ್ತಾ ಹೋಗಬೇಡ, ಯಾಕೆಂದರೆ ನಾನು ಅವುಗಳನ್ನು ಮೀರಿರುವೆನು’ ಎಂದು ಹೇಳುತ್ತಾನೆ.

ಕೃಷ್ಣ ಪರಮಾತ್ಮನು ಏನನ್ನು ಮಾಡುತ್ತಿರುವನೆಂಬುದು ನಿಮಗೆ ತಿಳಿದಿದೆಯೇ? ಅವನು ಅರ್ಜುನನ ಮನಸ್ಸನ್ನು, ಅದು ಯಾವೆಲ್ಲಾ ಜಾಗಗಳಿಗೆ ಆಕರ್ಷಿತವಾಗುವ ಸಾಧ್ಯತೆಯಿದೆಯೋ ಆ ಎಲ್ಲಾ ಜಾಗಗಳಿಂದ ಪುನಃ ಪಡೆದುಕೊಂಡು, ತನ್ನ ಮೇಲೆ ಕೇಂದ್ರಿತವಾಗಲು ಮರಳಿ ತರುತ್ತಿದ್ದಾನೆ. ಅದಕ್ಕಾಗಿಯೇ ಇದರಲ್ಲಿ ಜ್ಞಾನ ಮತ್ತು ವಿಜ್ಞಾನ, ಇವುಗಳೆರಡೂ ಒಳಗೊಂಡಿರುವುದು ಹಾಗೂ ಈ ಪ್ರವಚನದ ವೈಶಿಷ್ಟ್ಯತೆಯೆಂದರೆ ಇದುವೇ.

ಹೀಗೆ ಈ ವಿಶೇಷ ಜ್ಞಾನವನ್ನು ಉಪಯೋಗಿಸಿ ಕೃಷ್ಣ ಪರಮಾತ್ಮನು ಅರ್ಜುನನ ಮನಸ್ಸನ್ನು, ಅದು ಆಕರ್ಷಿತವಾಗಲು ಸಾಧ್ಯವಿರುವ ಯಾವುದೇ ಜಾಗದಿಂದ ಮತ್ತೆ ಮತ್ತೆ ಹಿಂದೆ ತರುತ್ತಾನೆ ಮತ್ತು ಅದನ್ನು ತನ್ನ ಕಡೆಗೆಯೇ ಮರಳಿ ಸೆಳೆದುಕೊಳ್ಳುತ್ತಾನೆ. ಅದರರ್ಥ, ಪ್ರಜ್ಞೆಯ ಮೇಲೆ ಕೇಂದ್ರೀಕರಿಸಲು ಅವನು ಮನಸ್ಸನ್ನು ಪುನಃ ಅಂತರ್ಮುಖವಾಗಿ ತರುತ್ತಾನೆ. ಇದು ಗುರುವಿನ ಕೆಲಸ ಮತ್ತು ಶಿಷ್ಯನ ಜವಾಬ್ದಾರಿಯಾಗಿದೆ.

ಆದುದರಿಂದ ಎಲ್ಲೆಲ್ಲಾ ಒಬ್ಬನು ಮಹತ್ತರವಾದ ಶಕ್ತಿಯನ್ನು ನೋಡುವನೋ, ಅದು ದೇವರಿಗೆ ಸೇರಿದುದೆಂಬುದನ್ನೂ, ಅದನ್ನು ಪ್ರದರ್ಶಿಸುವ ವ್ಯಕ್ತಿಯದಲ್ಲವೆಂಬುದನ್ನೂ ಅವನು ಗುರುತಿಸಬೇಕು. ಎಲ್ಲೆಲ್ಲಾ ಒಬ್ಬನಿಗೆ ಸೌಂದರ್ಯವು ಕಂಡುಬರುವುದೋ, ಅದು ವ್ಯಕ್ತಿಗೆ ಸೇರಿದುದು ಎಂದು ಒಬ್ಬನು ಯೋಚಿಸಬಾರದು, ಆದರೆ ಆ ಸೌಂದರ್ಯದ ಹಿಂದೆ ಇರುವ ದೇವರನ್ನು ಗುರುತಿಸಬೇಕು. ದೇವರಿಲ್ಲದೆ ಯಾವುದೇ ಸೌಂದರ್ಯವಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ, ’ಸತ್ಯಂ ಶಿವಂ ಸುಂದರಂ’ ಎಂದು ಹೇಳಲಾಗಿರುವುದು. ಅಂದರೆ, ಎಲ್ಲೆಲ್ಲಾ ಭಗವಾನ್ ಶಿವನಿರುವನೋ (ದೇವರು), ಅಲ್ಲಿಯೇ ಸೌಂದರ್ಯ ಮತ್ತು ಸತ್ಯ ಇರುವುದು.

ಹೀಗೆ ಇದನ್ನು ಹೇಳುವುದರ ಮೂಲಕ ಕೃಷ್ಣ ಪರಮಾತ್ಮನು ಅರ್ಜುನನ ಮನಸ್ಸನ್ನು ಪ್ರತಿಯೊಂದು ಸಂಭವನೀಯ ಆಕರ್ಷಣೆಯಿಂದ ಮುಕ್ತಗೊಳಿಸುತ್ತಾನೆ ಮತ್ತು ಅದನ್ನು ತನ್ನ ಕಡೆಗೆ ಎಳೆಯುತ್ತಾನೆ.

ಕೃಷ್ಣ ಎಂದರೆ ಆಕರ್ಷಣೆ; ಅದರರ್ಥ, ಎಲ್ಲವನ್ನೂ ತನ್ನ ಕಡೆಗೆ ಆಕರ್ಷಿಸುವ ಒಬ್ಬನು ಎಂದು. ಆಕರ್ಷಣೆಯ ಸಲುವಾಗಿ ಮನಸ್ಸು ಅಲೆದಾಡಬಹುದಾದ ಎಲ್ಲಾ ಸಂಭವನೀಯ ಜಾಗಗಳಿಂದ ಅದನ್ನು ಮುಕ್ತಗೊಳಿಸುವುದು ಮತ್ತು ಅದನ್ನು ಕೇಂದ್ರಕ್ಕೆ ತರುವುದು - ಕೃಷ್ಣ ಪರಮಾತ್ಮನೆಂದರೆ ಇದುವೇ.

ಆದುದರಿಂದ, ಎಲ್ಲೆಲ್ಲಾ ನೀವು, ಒಬ್ಬರು ತೇಜೋಪುಂಜದಂತೆ ಪ್ರಕಾಶಿಸುವುದನ್ನು ನೋಡುವಿರೋ, ಅವರು ಕೃಷ್ಣ ಪರಮಾತ್ಮನೊಂದಿಗೆ ಆಳವಾದ ಪ್ರೇಮದಲ್ಲಿರುವರು ಎಂಬುದನ್ನು ತಿಳಿಯಿರಿ. ಅದಕ್ಕಾಗಿಯೇ ಅವರು ಎಲ್ಲರನ್ನೂ ತಮ್ಮ ಕಡೆಗೆ ಸೆಳೆಯುವುದು. ಇದರರ್ಥ, ಮೂರು ಗುಣಗಳ ಕಾರಣದಿಂದ ಇರುವ ವೈವಿಧ್ಯಮಯ ಪ್ರಪಂಚದಿಂದ ಮನಸ್ಸನ್ನು ಹಿಂದಕ್ಕೆಳೆದುಕೊಳ್ಳುವುದು ಮತ್ತು ಒಳಗಡೆಯಿರುವ ಶುದ್ಧವಾದ ಪ್ರಜ್ಞೆಯ ಕಡೆಗೆ ಅದನ್ನು ಮರಳಿ ತರುವುದು. ಇದೊಂದು ಬಹಳ ಅನನ್ಯವಾದ ಹೆಜ್ಜೆ ಮತ್ತು ಒಂದು ವಿಸ್ಮಯಕಾರಿ ವಿಜ್ಞಾನ.