ಶುಕ್ರವಾರ, ಮೇ 10, 2013

ಗೀತಾ ಜ್ಞಾನ - ೧

ಬೆಂಗಳೂರು, ಭಾರತ
೧೦.೦೫.೧೩
ವಾಸ್ತವ ಪಥದಲ್ಲಿ ಕ್ರಮಿಸು

ಗವದ್ಗೀತೆಯ ೧೭ನೇ ಅಧ್ಯಾಯದಲ್ಲಿ, ಶ್ರೀ ಕೃಷ್ಣನು ಹೀಗೆ ಹೇಳುತ್ತಾ ಪ್ರಾರಂಭ ಮಾಡುತ್ತಾನೆ,

" ಮಯ್ಯಾಸಕ್ತ ಮನಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ |
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಚ್ರುಣು || " (೭.೧)

ಅವನು ಹೇಳುತ್ತಾನೆ, ’ನಿನ್ನ ಸಂಪೂರ್ಣ ವಾತ್ಸಲ್ಯವನ್ನು ನನ್ನ ಮೇಲೆ ಇಡುವುದರಿಂದ, ಮತ್ತು ನಾನು ನಿರೂಪಿಸಿದಂತೆ ಯೋಗ ಮಾರ್ಗವನ್ನು ಅಭ್ಯಾಸ ಮಾಡುವುದರಿಂದ, ಈಗ ನಾನು ನಿನಗೆ ನನ್ನನ್ನು ಸಂಪೂರ್ಣವಾಗಿ ತಿಳಿಯುವುದು ಹೇಗೆ ಎಂದು ವಿವರಿಸುತ್ತೇನೆ’.

ಇಲ್ಲಿ ಆಸಕ್ತಿ ಎಂದರೆ ವಾತ್ಸಲ್ಯ, ಮತ್ತು ಆಶ್ರಯವೆಂದರೆ ನಾವು ಯಾವುದರ ಮೇಲೆ ಅವಲಂಬಿಸಿದ್ದೇವೋ ಅದು. ನಾವು ಪ್ರೀತಿಸುವವರ ಮೇಲೆ ವಾತ್ಸಲ್ಯವಿರುತ್ತದೆ, ಮತ್ತೆ ನಾವು ಅವಲಂಬಿಸಿರುವಂಥ ಜನರು ಇದ್ದಾರೆ. ಮತ್ತು ನಾವು ಯಾವುದರೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತೇವೋ, ಅದನ್ನು ಯೋಗ ಎನ್ನಲಾಗುತ್ತದೆ.

ಹಾಗಾಗಿ ಇಲ್ಲಿ, ಶ್ರೀ ಕೃಷ್ಣ ಎಲ್ಲವನ್ನು ಒಳಪಡಿಸುತ್ತಾನೆ. ನಿಮ್ಮ ಹೃದಯ ಮತ್ತು ನಿಮ್ಮ ಮನಸ್ಸು, ಎರಡೂ ತೊಡಗಿಕೊಳ್ಳುತ್ತವೆ.

ಉದಾಹರಣೆಗೆ, ನಿಮ್ಮ ಕೆಲಸವು ನಿಮ್ಮ ಹವ್ಯಾಸಕ್ಕಿಂತ ಬೇರೆಯಾಗಿದೆ. ನಿಮ್ಮ ಹವ್ಯಾಸದ ಬಗ್ಗೆ ಆಸಕ್ತಿಯಿದೆ, ಆದರೆ ನೀವು ನಿಮ್ಮ ಕೆಲಸವನ್ನು ಮಾಡಬೇಕಾಗಿದೆ. ಆದ್ದರಿಂದ ಮಾಡುವುದು. ಹಾಗೆ, ಏನಿರಬಹುದಿತ್ತು ಎಂಬುದನ್ನು ಯೋಚಿಸದೆ ನಿಮ್ಮ ಕೆಲಸವನ್ನು ಮಾಡುವುದು ಕರ್ಮ ಯೋಗ (ನಮ್ಮ ಕರ್ತವ್ಯವನ್ನು ಮಾಡುವ ಮಾರ್ಗ).

ನಾವು ಮಾಡಬೇಕಾಗಿರುವುದರಿಂದ ನಮ್ಮ ಕೆಲಸವನ್ನು ಮಾಡುತ್ತಿದ್ದಂತೆ, ನಮ್ಮ ಆಸಕ್ತಿ ಬೇರೆ ಕಡೆ ಇದೆ ಅಥವಾ ಇನ್ನೊಂದು ವಿಷಯದ ಕೆಡೆ ಇದೆ.

ಹಾಗಾಗಿ ಇಲ್ಲಿ ಕೃಷ್ಣನು ಹೀಗೆ ಹೇಳುತ್ತಾ ಆರಂಭಿಸುತ್ತಾನೆ, ’ಯಾರು ಸಂಪೂರ್ಣವಾಗಿ ನನ್ನನ್ನು ಪ್ರೀತಿಸುತ್ತಾರೋ, ಯಾರು ನನ್ನ ಮೇಲೆ ಅವಲಂಬಿಸಿದ್ದಾರೋ, ಯೋಗಾಭ್ಯಾಸದಿಂದ (ಶ್ರೀ ಕೃಷ್ಣನು ತಾನೇ ನಿರೂಪಿಸಿದಂತೆ) ನನ್ನೊಂದಿಗೆ ಒಂದಾಗುವುದರಲ್ಲಿ ನಿರಂತರವಾಗಿ ಸಮರ್ಪಿತವಾಗಿದ್ದಾರೋ, ಮತ್ತು ಸಂಶಯಗಳಿಂದ ಮುಕ್ತರಾಗಿದ್ದಾರೋ; ಅಂಥ ವ್ಯಕ್ತಿ ನನ್ನನ್ನು ಮತ್ತು ನನ್ನ ನಿಜ ಸ್ವರೂಪವನ್ನು ಸಂಪೂರ್ಣವಾಗಿ ಹೇಗೆ ತಿಳಿಯಬಹುದು, ನಾನು ಈಗ ಅದನ್ನು ನಿನಗೆ ವಿವರಿಸುತ್ತೇನೆ’.

ಶ್ರೀ ಕೃಷ್ಣನು ಅರ್ಜುನನಿಗೆ ಬಹಳ ಸಲ ಹೇಳಿದನು, ’ಕೇವಲ ನನ್ನ ಮೇಲೆ ಮಾತ್ರ ನಿನ್ನ ಮನಸ್ಸನ್ನಿಡು, ಅಲ್ಲಿ ಇಲಿ ಅಲ್ಲ’.

ಅವನು ಯಾಕೆ ಇದನ್ನು ಅಷ್ಟೊಂದು ಸಲ ಹೇಳಿದನು? ಅದು ಯಾಕೆಂದರೆ ಅರ್ಜುನನು ತನ್ನ ಸಂಶಯಗಳಿಂದ ಅಷ್ಟೊಂದು ನಿರಾಸೆ ಮತ್ತು ಕ್ಷೋಭೆಗೊಂಡಿದ್ದನು.

ಯಾರ ಸಂಶಯಗಳು ಇಲ್ಲವಾಗಿವೆಯೋ, ಅವನು ಮಾತ್ರ ಜ್ಞಾನ ಹೊಂದಲು ಸಾಧ್ಯ.

ಸಾಮಾನ್ಯವಾಗಿ ನಾವು ತದ್ದ್ವಿರುದ್ಧವಾಗಿ ಯೋಚಿಸುತ್ತೇವೆ. ಯಾರು ಜ್ಞಾನ ಪಡೆಯುತ್ತಾರೋ, ಅವರು ತಮ್ಮ ಎಲ್ಲಾ ಸಂಶಯಗಳಿಂದ ಮುಕ್ತರಾಗುತ್ತಾರೆ. ಇಲ್ಲಿ, ಎರಡು ವಿಷಯಗಳಿವೆ.

ಮೊದಲನೆಯದಾಗಿ, ಯಾರು ಜ್ಞಾನವನ್ನು ಪಡೆಯುತ್ತಾನೋ, ಅವರು ಎಲ್ಲಾ ಸಂಶಯಗಳಿಂದ ಮುಕ್ತನಾಗುತ್ತಾನೆ - ಇದು ಭೌತಿಕ ಜಗತ್ತಿಗೆ ಸಂಬಂಧಿಸಿದ್ದು; ಇದು ಸೀಮಿತವಾಗಿದೆ.

ಎರಡನೆಯದು, ಯಾರು ಸಂಶಯಗಳಿಂದ ಮುಕ್ತರಾಗಿದ್ದಾರೋ, ಅಂದರೆ ಯಾರ ಪ್ರಾಣಶಕ್ತಿಯು ಪ್ರಬಲವಾಗಿದೆಯೋ, ಅವರು ಜ್ಞಾನವನ್ನು ಇನ್ನೂ ಆಳವಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗುತ್ತಾರೆ. ಅಂಥ ವ್ಯಕ್ತಿಯು ನಿಜವಾಗಿ ತಿಳಿದಿರುವ ವ್ಯಕ್ತಿ.

ನಾವು ಸಾಮಾನ್ಯವಾಗಿ ಯೋಚಿಸುವುದು, ನಮ್ಮ ಸಂಶಯಗಳನ್ನು ಪ್ರಶ್ನೆ ಹಾಗೂ ಉತ್ತರಗಳಿಂದ ಪರಿಹರಿಸಬಹುದು ಅಂದುಕೊಳ್ಳುತ್ತೇವೆ, ಅಲ್ಲವೇ? ಆದರೆ ವಾಸ್ತವ ಹಾಗಲ್ಲ. ಒಂದು ಪ್ರಶ್ನೆಯನ್ನು ಉತ್ತರಿಸುವುದರಿಂದ ಮನಸ್ಸಿನಲ್ಲಿ ಹತ್ತು ಬೇರೆ ಪ್ರಶ್ನೆಗಳನ್ನು ಅದು ಹುಟ್ಟುಹಾಕುತ್ತದೆ.

ಒಂದು ಜೋಡಿ ಪ್ರಶ್ನೋತ್ತರದಿಂದ ಇನ್ನು ಹತ್ತು ಪ್ರಶ್ನೋತ್ತರಗಳು ಹುಟ್ಟಿಕೊಳ್ಳುತ್ತವೆ, ಮತ್ತು ಈ ಪ್ರಶ್ನೋತ್ತರಗಳ ಸರಮಾಲೆ ಮುಗಿಯದಷ್ಟು ಉದ್ದಕ್ಕೆ ಮುಂದುವರಿಯುತ್ತದೆ, ಆದರೆ ಸಂಶಯ ಹೋಗುವುದಿಲ್ಲ.

ನಾವು ಪ್ರಶ್ನೆ ಕೇಳುವ ಮೂಲ ಉದ್ದೇಶವೇ ನಮ್ಮ ಸಂಶಯಗಳನ್ನು ನಿರ್ಮೂಲನಗೊಳಿಸಲು. ಆದರೆ ಇಲ್ಲಿ, ಶ್ರೀ ಕೃಷ್ಣ ಹೇಳುತ್ತಿರುವುದು, ಯಾರು ಎಲ್ಲಾ ಸಂಶಯಗಳಿಂದ ಮುಕ್ತನಾಗಿದ್ದಾನೆಯೋ ಅವನು ತಿಳಿಯಲು (ಸತ್ಯವನ್ನು) ಸಮರ್ಥನಾಗಿದ್ದಾನೆ.

ಸಂಶಯ ಎಂದರೆ ನಿಮ್ಮ ಪ್ರಾಣವು ಸಂಪೂರ್ಣವಾಗಿ ಅರಳಿಲ್ಲ; ಅದು ಉನ್ನತಿ ಹೊಂದಿಲ್ಲ. ಪ್ರಾಣವು ಶರೀರದಲ್ಲೆಲ್ಲೋ ಸಿಕ್ಕಿಕೊಂಡಿದೆ.

ನೀವು ಪ್ರಾಣದಿಂದ ತುಂಬಿಕೊಂಡಿರುವಾಗ, ಎಲ್ಲಾ ಸಂಶಯಗಳು ತಾವಾಗಿಯೇ ಮಾಯವಾಗುತ್ತವೆ. ಹಾಗಾಗಿಯೇ ನೀವು ಬಹಳ ಸಂತೋಷದಿಂದ ಇರುವಾಗ, ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂಶಯಗಳಿರುವುದಿಲ್ಲ. ನೀವು ಪ್ರೀತಿಯ ಆಳದಲ್ಲಿರುವಾಗ, ನಿಮ್ಮಲ್ಲಿ ಯಾವುದೇ ಸಂಶಯಗಳು ಹುಟ್ಟುವುದಿಲ್ಲ.

ಸಂಶಯವೆಂದರೆ ನೀವು ಯಾವುದನ್ನೋ ಭಾಗಶಃ ನಂಬುತ್ತೀರಿ ಮತ್ತು ಅದನ್ನು ಭಾಗಶಃ ಸಂಶಯದಿಂದಲೂ ನೋಡುತ್ತೀರಿ.
ನೀವು ಏನನ್ನಾದರೂ ಪೂರ್ಣವಾಗಿ ನಂಬದೇ ಇದ್ದರೆ, ಆಗ ಸಂಶಯವಿರುವುದಿಲ್ಲ, ಮತ್ತು ನೀವು ಏನನ್ನಾದರೂ ಪೂರ್ಣವಾಗಿ ನಂಬಿದರೆ, ಆಗಲೂ ನಿಮ್ಮಲ್ಲಿ ಯಾವುದೇ ಸಂಶಯವಿರುವುದಿಲ್ಲ. ಹಾಗಾಗಿ ಸಂಶಯ ಹುಟ್ಟುವುದು ನೀವು ಏನನ್ನಾದರು ನಂಬಿ ಅದನ್ನು ನಂಬದೇ ಇದ್ದಾಗ.

ಈಗ, ಒಬ್ಬ ವ್ಯಕ್ತಿ ಎಲ್ಲಾ ಸಂಶಯಗಳಿಂದ ಮುಕ್ತವಾಗಿ ಏನನ್ನಾದರೂ ಸಂಪೂರ್ಣವಾಗಿ ತಿಳಿಯುವುದು ಹೇಗೆ? ಶ್ರೀ ಕೃಷ್ಣನು ಮಾತನಾಡುವುದು ಅದರ ಬಗ್ಗೆಯೇ.

’ ಜ್ಞಾನಂ ತೇ’ಹಂ ಸಾ ವಿಜ್ಞಾನಮಿದಂ ವಕ್ಶಾಮ್ಯಶೇಷತಃ |
ಯಜ್ಜ್ಞಾತ್ವಾ ನೇಹ ಭೂಯೋನ್ಯಜ್ಜ್ಞಾತವ್ಯಮವಶಿಷ್ಯತೇ || ’ (೭.೨)

ಅವನು ಹೇಳುತ್ತಾನೆ, ’ಇದು ಬಹಳ ಗಹನವಾದ ಜ್ಞಾನ ಆದರೆ ಅದರಲ್ಲಿ ವಿಜ್ಞಾನವೂ ಇದೆ. ನಾನೀಗ ನಿನಗೆ ಅದನ್ನೇ ಹೇಳುತ್ತೇನೆ, ಅದನ್ನು ತಿಳಿದ ನಂತರ ಇನ್ನೂ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ’.

ಶ್ರೀ ಕೃಷ್ಣನು ಹೇಳುತ್ತಾನೆ, ’ನಿನ್ನಿಂದ ನಾನು ಏನನ್ನೂ ಮುಚ್ಚಿಡುವುದಿಲ್ಲ. ನಾನು ನಿನಗೆ ಸಂಪೂರ್ಣ ಜ್ಞಾನವನ್ನು ನೀಡುತ್ತಿದ್ದೇನೆ’.

ಈ ಜ್ಞಾನದ ಒಂದು ಭಾಗವನ್ನು ನಿನಗೆ ಈಗ ಹೇಳುತ್ತೇನೆ, ಇನ್ನೊಂದು ಭಾಗ ನಾಳೆ ಹೇಳುತ್ತೇನೆ ಎಂದು ಅವನು ಹೇಳುವುದಿಲ್ಲ. ಸಾಮಾನ್ಯವಾಗಿ ಸಂಗೀತ ಶಿಕ್ಷಕರು ಮತ್ತು ವಿದ್ವಾಂಸರು ಇದನ್ನು ಮಾಡುತ್ತಾರೆ. ಅವರು ಜ್ಞಾನವನ್ನು ಭಾಗದಿಂದ ಬಾಗವಾಗಿ ಬಹಳ ಜಿಪುಣ ರೀತಿಯಿಂದ ಕೊಡುತ್ತಾರೆ. ಅವರು ನಿಮಗೆ ಹಾಡಿನ ಎರಡು ಸಾಲುಗಳನ್ನು ಹೇಳಿಕೊಟ್ಟು ನಂತರ ಅದನ್ನು ಅಭ್ಯಾಸ ಮಾಡಲು ಹೇಳಿ ಮಾರನೇ ದಿನ ಬರಲು ಹೇಳುತ್ತಾರೆ. ನಂತರ ಅವರು ನಿಮಗೆ ಇನ್ನೆರಡು ಸಾಲುಗಳನ್ನು ಹೇಳಿಕೊಟ್ಟು ಮತ್ತೊಮ್ಮೆ ಅಭ್ಯಾಸ ಮಡಿಸುತ್ತಾರೆ.

ಅವರು ಒಂದು ದಿನ ನಿಮಗೆ ಪಲ್ಲವಿ ಹೇಳಿಕೊಡುತ್ತಾರೆ, ಮುಂದಿನ ದಿನ ಅನುಪಲ್ಲವಿ ಹೇಳಿಕೊಡುತ್ತಾರೆ. ಹಾಗೆ ಅವರು ವಿದ್ಯಾರ್ಥಿಗೆ ಸಂಪೂರ್ಣವಾಗಿ ಹೇಳಿಕೊಡುವುದಿಲ್ಲ. ಅವರು ವಿದ್ಯಾರ್ಥಿಯನ್ನು ಬಹಳ ಸಲ ಪರೀಕ್ಷಿಸಿ ನೋಡುತ್ತಿರುತ್ತಾರೆ, ಆನಂತರ ಸಂಪೂರ್ಣ ಜ್ಞಾನವನ್ನು ಕೊಡುತ್ತಾರೆ. ಆದರೆ ಇಲ್ಲಿ ಶ್ರೀ ಕೃಷ್ಣನು ಅರ್ಜುನನನ್ನು ಪರೀಕ್ಷಿಸುವುದಿಲ್ಲ, ಯಾಕೆಂದರೆ ಅವನಿಗೆ ಮೊದಲೇ ಎಲ್ಲ ತಿಳಿದಿದೆ (ಅರ್ಜುನನ ಬಗ್ಗೆ); ಹಾಗಾಗಿ ಪರೀಕ್ಷಿಸುವ ಅಗತ್ಯವಿಲ್ಲ.

ಹೇಗಿದ್ದರೂ, ಅರ್ಜುನ ಆಗಲೇ ಖಿನ್ನನಾಗಿದ್ದಾನೆ, ಹಾಗಿರುವಾಗ ಅವನನ್ನು ಇನ್ನೂ ಪರೀಕ್ಷಿಸಿ ಏನು ಪ್ರಯೋಜನ. ಹಾಗಾಗಿ ಅವನು ಅರ್ಜುನನಿಗೆ ಹೇಳುತ್ತಾನೆ, ’ಚಿಂತಿಸಬೇಡ. ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ, ಹಾಗೂ ನೀನೇ ತಿಳಿಯಬೇಕಾಗುವಂತೆ ಏನನ್ನೂ ಉಳಿಸುವುದಿಲ್ಲ. ಮತ್ತು ಅವನು ಹೇಳುತ್ತಾನೆ, ಈ ಜ್ಞಾನ ಎಷ್ಟೊಂದು ವಿಶಾಲವಾಗಿದೆ ಎಂದರೆ, ಅದನ್ನು ತಿಳಿದ ಅನಂತರ, ಇನ್ನೂ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ.

ಒಬ್ಬ ವಿದ್ಯಾರ್ಥಿಗೆ ಬಹಳ ಗಹನವಾದ ಜ್ಞಾನವನ್ನು ನೀಡಲಾಗುತ್ತದೆ ಎಂದು ಹೇಳಿದಾಗ, ಅವನು ಚುರುಕಾಗುತ್ತಾನೆ. ಇದನ್ನು ಕೇಳುತ್ತಿದ್ದಂತೆಯೇ ಅವನು ಎಚ್ಚರವಾಗಿ ನಿಲ್ಲುತ್ತಾನೆ, ನಿರೀಕ್ಷೆಯಲ್ಲಿ ರೋಮವೆದ್ದು ನಿಲ್ಲುತದೆ. ಆಗ ಅವನು ಜಾಗರೂಕನಾಗಿ ಸಂಪೂರ್ಣ ಗಮನದಿಂದ ಕೇಳಿಕೊಳ್ಳುತ್ತಾನೆ. ಹಾಗಾಗಿ ಶ್ರೀ ಕೃಷ್ಣನು ಇನ್ನೂ ಹೇಳುವುದರ ಮೊದಲು ಈ ಮಾತನ್ನು ಸೇರಿಸಿರುತ್ತಾನೆ.

ಯಾರಾದರೂ ನಮಗೆ ಸಾಮಾನ್ಯವಾಗಿ ಒಂದು ವಿಷಯವನ್ನು ಹೇಳಿದಾಗ, ಬಹಳ ಸಲ ನಾವು ಅವರ ಮಾತನ್ನು ಗಮನ ಕೊಟ್ಟು ಕೇಳಿರುವುದೂ ಇಲ್ಲ. ಆದರೆ ಅವರು, ’ಇಲ್ಲಿ ಬಾ! ನಿನಗೊಂದು ಗುಟ್ಟು ಹೇಳುವುದಿದೆ’ ಎಂದರೆ, ಆಗ ನೀವು ತತ್ಕ್ಷಣ ’ಹಾ ಹಾ! ಏನದು? ನನಗೆ ಹೇಳು’ ಎಂದು ಪ್ರತಿಕ್ರಿಯೆ ನೀಡುತ್ತೀರಿ.

ಆ ಕ್ಷಣದಲ್ಲಿ ನೀವು ಸಂಪೂರ್ಣವಾಗಿ ಎಚ್ಚರವಾಗಿರುತ್ತೀರಿ. ಇದು ನಿಮಗೆ ಆಗುತ್ತದೋ ಇಲ್ಲವೋ?

ಅವರು ನಿಮಗೆ ಬಹಳ ಮಾಮೂಲಿನ ವಿಷಯ ಹೇಳ ಬಯಸುತ್ತಿರಬಹುದು, ಆದರೆ ಅದರ ಮೊದಲು ಅವರು ’ಕೇಳು!  ನಾನು ನಿನಗೆ ಹೇಳಬೇಕೆಂದಿರುವ ಗುಟ್ಟೊಂದಿದೆ. ಇದು ಬಹಳ ತುರ್ತು’ ಎಂದು ಹೇಳಿದರೆ, ಆಗ ನೀವು ಬಹಳ ಚುರುಕಾಗಿ ಗಮನ ವಹಿಸುತ್ತೀರಿ, ಮತ್ತು ಕೇಳಿಕೊಳ್ಳಲು ಸಂಪೂರ್ಣವಾಗಿ ತಯಾರಾಗಿರುತ್ತೀರಿ.

ಹಾಗಾಗಿ ಅದೇ ರೀತಿಯಲ್ಲಿ, ಇಲ್ಲಿ ಗುರು (ಶ್ರೀ ಕೃಷ್ಣ) ತನ್ನನ್ನು ಗಮನವಿಟ್ಟು ಕೇಳಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಯನ್ನು ತಯಾರಿಸುತ್ತಿದ್ದಾನೆ. ಇಲ್ಲವಾದರೆ ಗುರು ಮಾತಾನಾಡುತ್ತಾ ಇರುತ್ತಾನೆ ಮತ್ತು ವಿದ್ಯಾರ್ಥಿಗಳು ನಿದ್ದೆ ಹೋಗುತ್ತಾರೆ. ಸಾಮಾನ್ಯವಾಗಿ ಆಗುವುದು ಇದು.

ಬಹಳ ಸಲ, ನಾವು ಗಹನ ಜ್ಞಾನ ಕೇಳಲು ಒಂದು ಸಭೆಗೆ ಹೋಗುತ್ತೇವೆ, ಆದರೆ ಮರಳಿ ಬಂದು ನಾವು ಹೇಳುವುದು, ’ಓ! ಆ ಜ್ಞಾನವು ಎಷ್ಟು ಆಳವಾಗಿತ್ತೆಂದರೆ ನನಗೆ ಏನೂ ಅರ್ಥವಾಗಲಿಲ್ಲ. ಎಲ್ಲವೂ ನನ್ನ ತಲೆಯ ಮೇಲಿಂದ ಹಾದು ಹೋಯಿತು’.

ಹೀಗೇಕಾಗುತ್ತದೆ ಎಂದು ನಿಮಗೆ ಗೊತ್ತೇ? ನಾವು ಸುಮ್ಮನೆ ಕೇಳಿಸಿಕೊಳ್ಳದೆ ಇರುತ್ತೇವೆ, ಅದರಿಂದ. ನಮ್ಮ ಮನಸ್ಸು ಯಾವಾಗಲೂ ಎಷ್ಟೊಂದು ಚಿಂತೆಗಳಿಂದ ತುಂಬಿಕೊಂಡಿರುತ್ತದೆ; ಒಂದಾ ನಮ್ಮ ಬಗ್ಗೆಯೇ ಅಥವಾ ನಮ್ಮ ಸುತ್ತಲಿನವರ ಬಗ್ಗೆ. ನಮಗೆ ಚಿಂತೆ ಮಾಡದೇ ಬದುಕಲಾಗುಗುವುದಿಲ್ಲ. ಮತ್ತು ತೊಂದರೆಗಳೇ ಇಲ್ಲದಿದ್ದರೆ, ನಮಗಾಗಿ ತೊಂದರೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ನಾವು ಚಿಂತೆ ಮಾಡಿಕೊಳ್ಳಲು ಸಾವಿರ ಕಾರಣಗಳನ್ನು ಹುಡುಕಿಕೊಳ್ಳುತ್ತೇವೆ.

ಮುಂದಿನ ಶ್ಲೋಕದಲ್ಲಿ, ಶ್ರೀ ಕೃಷ್ಣನು ಹೇಳುತ್ತಾನೆ,

’ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ |
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ’. (೭.೩)

ಕೋಟ್ಯಂತರ ಜನರಲ್ಲಿ, ಬಹಳ ಕಡಿಮೆ ಜನ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುತ್ತಾರೆ ಮತ್ತು ವಾಸ್ತವ ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಬಹಳ ಕಡಿಮೆ ಜನ ಯೋಗ ಮಾರ್ಗವನ್ನು ಅನುಸರಿಸುತ್ತಾರೆ.

ಆ ದಿನಗಳಲ್ಲೂ, ಆಧ್ಯಾತ್ಮಿಕತೆಯ ಸ್ಥಿತಿ ಅದೇ ಆಗಿತ್ತು.

ಮಹಾಭಾರತ ಅಂದು ನಡೆಯಿತು, ಮತ್ತು ಇಂದೂ ನಡೆಯುತ್ತಿದೆ. ಹಿಂದೆ ಅದು ಕುರುಕ್ಷೇತ್ರ ರಣಭೂಮಿಯಲ್ಲಿ ನಡೆದಿತ್ತು, ಮತ್ತು ಇಂದು ಅದು ನಮ್ಮ ಸಂಸತ್ತಿನಲ್ಲಿ ನಡೆಯುತ್ತಿದೆ, ಅಷ್ಟೇ.

ದೆಹಲಿ ಹೇಗಿದ್ದರೂ ಕುರುಕ್ಷೇತ್ರದಿಂದ ೧೦೦ಕಿ.ಮೀ. ದೂರವಷ್ಟೇ ಇದೆ. ಇಂದಿನ ಒಂದೇ ವ್ಯತ್ಯಾಸವೆಂದರೆ, ಅಲ್ಲಿ ಗೀತಾ ಜ್ಞಾನದ ಪಠಣವಾಗುತ್ತಿಲ್ಲ.

ನೀವು ಗಮನಿಸಿದರೆ, ಇಂದು ಪ್ರತಿ ಮನೆಯಲ್ಲಿ ಕುರುಕ್ಷೇತ್ರ ನಡೆಯುತ್ತಿದೆ (ನೀತಿ ವಿರಸದ ಕುರಿತು ಹೇಳುತ್ತಾ). ಹಾಗಾಗಿ ಶ್ರೀ ಕೃಷ್ಣನು ಹೇಳುತ್ತಾನೆ, ಕೋಟ್ಯಂತರ ಜನರಲ್ಲಿ, ಬಹಳ ಕಡಿಮೆ ಮಂದಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುತ್ತಾರೆ, ಮತ್ತು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವವರಲ್ಲಿ, ಇನ್ನೂ ಬಹಳ ವಿರಳವಾಗಿ ಜನರು ನನ್ನನ್ನು ಅರಿತು ನನ್ನ ನಿಜ ಸ್ವರೂಪವನ್ನು (ತತ್ತ್ವ) ಸಂಪೂರ್ಣವಾಗಿ ತಿಳಿಯುತ್ತಾರೆ.

ಉಳಿದವರು ಬರುತ್ತಾರೆ, ಸುಮ್ಮನೆ ಕೇಳಿಸಿಕೊಂಡು ಏನನ್ನೂ ಗ್ರಹಿಸಿಕೊಳ್ಳದೇ ಹೋಗುತ್ತಾರೆ. ಕೇವಲ ಸ್ವಲ್ಪ ವಿರಳ ಜನರು ಮಾತ್ರ ನನ್ನನ್ನು ನನ್ನ ನಿಜ ಸ್ವಭಾವದಿಂದ (ತತ್ತ್ವ ಜ್ಞಾನ ಅಂದರೆ ಅತ್ಯಂತ ಗಹನ ತತ್ತ್ವ ಅಥವಾ ಮೂಲಾಂಶದ ತಿಳುವಳಿಕೆ) ತಿಳಿದುಕೊಳ್ಳಲು ಸಮರ್ಥ ರಾಗುತ್ತಾರೆ.

ಇದು ಮಹತ್ತರವಾದ ಒಂದು ರಹಸ್ಯ. ಮತ್ತು ಶ್ರೀ ಕೃಷ್ಣನು ಇಲ್ಲಿ ಮಾತನಾಡುತ್ತಿರುವಂಥ ತತ್ತ್ವ ಏನದು? ಅವನಿದನ್ನು ನಾಲ್ಕನೇ ಶ್ಲೋಕದಲ್ಲಿ ವಿವರಿಸುತ್ತಾನೆ:

’ಭೂಮಿರಾಪೋನಲೋ ವಾಯುಃ ಖಮ್ಮನೋಬುದ್ಧಿರೇವ ಚ |
ಅಹಂಕಾರೈತೀಯಂ ಮೇ ಭಿನ್ನಪ್ರಕೃತಿರಷ್ಟಧಾ || ’(೭.೪)

ಅವನು ಹೇಳುತ್ತಾನೆ, ’ನಾನು ಕೇವಲ ಈ ಭೌತಿಕ ಶರೀರವೆಂದು ಯೋಚಿಸಿದ್ದೀಯೇ? ಇಲ್ಲ! ನಾನು ಭೂಮಿ, ನಾನು ಅಗ್ನಿ, ನಾನು ವಾಯು ಮತ್ತು ನಾನು ಆಕಾಶ. ಈ ಮನಸ್ಸು, ಬುದ್ಧಿ ಮತ್ತು ಅಹಂಕಾರ ನಾನು. ಇವು ಅಷ್ಟ ವಿಧದ ಶಕ್ತಿಗಳು, ಮತ್ತು ಅವು ನಾನು, ಮತ್ತು ನಾನು ಇವನ್ನು ನನ್ನ ಅಪರಾ-ಪ್ರಕೃತಿ (ದೈವಿಕತೆಯು ಭೌತಿಕವಾಗಿ ವ್ಯಕ್ತವಾಗುವ ಎಂಟು ಬಗೆ) ಎಂದು ಕರೆಯುತ್ತೇನೆ. ನಾನು ಈ ಎಂಟೂ ಆಗಿದ್ದೇನೆ. ನಾನು ಈ ಭೂಮಿಯ ಪ್ರತಿ ರೇಣುವಿನಲ್ಲೂ, ಮತ್ತು ನೀರಿನ ಪ್ರತಿ ಕಣದಲ್ಲೂ ಇದ್ದೇನೆ.

ನೀರು ಎಲ್ಲ ಕಡೆಯೂ ಇದೆ - ಭೂಮಿಯಲ್ಲಿ, ಆಕಾಶದಲ್ಲಿ, ಗಾಳಿಯಲ್ಲಿ ಮತ್ತು ಸಮುದ್ರದಲ್ಲಿ; ಅದು ಎಲ್ಲ ಕಡೆಯೂ ಇದೆ. ನಿಮಗೆ ಗೊತ್ತೇ, ಶೇಕಡಾ ೬೦ರಷ್ಟು ನಿಮ್ಮ ಶರೀರ ನೀರನ್ನು ಹೊಂದಿದೆ. ಹಾಗಾಗಿ ಇಲ್ಲಿ ನೆರೆದಿರುವ ಎಲ್ಲಾ ಜನರು, ಎಷ್ಟೊ ಲೀಟರ್ ನೀರು ಅಷ್ಟೇ ಆಗಿದ್ದಾರೆ(ನಗು).

ನಿಮ್ಮ ತೂಕ ೬೦ಕೆ.ಜಿ. ಇದ್ದರೆ, ಸುಮಾರು ೩೬ಕೆ.ಜಿ.ಯಷ್ಟು ನಿಮ್ಮ ದೇಹ ಭಾರ ನೀರೇ ಆಗಿದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ನೀರಿನಿಂದ ತುಂಬಿರುವ ಮಣ್ಣಿನ ಮಡಿಕೆಯಂತೆ. ಅದೇ ರೀತಿ, ಶೇಕಡಾ ೧೫ರಷ್ಟು ನಿಮ್ಮ ಶರೀರ ವಾಯು ಧಾತುವಿನಿಂದ ಮಾಡಲ್ಪಟ್ಟಿದೆ. ನಿಮ್ಮ ಶರೀರವು ಭೂ ಧಾತುವನ್ನೂ ಹೊಂದಿದೆ ಮತ್ತು ಇವೆಲ್ಲವೂ ಅಗ್ನಿ ಧಾತುವಿನಿಂದ ಹಿಡಿದಿಟ್ಟುಕೊಳ್ಳಲ್ಪಟ್ಟಿವೆ, ಮತ್ತು ಅದರಿಂದಲೇ ಶರೀರದಲ್ಲಿ ಉಷ್ಣವಿರುವುದು. ಹಾಗಾಗಿ ಅಗ್ನಿ ಧಾತುವಿನಿಂದಾಗಿ ಶರೀರದಲ್ಲಿ ಉಷ್ಣವಿದೆ.

ಮತ್ತೆ ಶ್ರೀ ಕೃಷ್ಣನು ಇನ್ನೂ ಹೇಳುತ್ತಾನೆ, ’ನಾನು ಮನಸ್ಸು, ಬುದ್ಧಿ ಮತ್ತು ಅಹಂಕಾರ’.

ಬಹಳ ಸಲ ಜನರು ನನ್ನ ಬಳಿ ಬಂದು ಹೇಳುತ್ತಾರೆ, ’ಗುರೂಜಿ, ನನಗೆ ನನ್ನ ಅಹಂಕಾರದಿಂದ ಮುಕ್ತಿ ಬೇಕಾಗಿದೆ’.
ನಿಮಗೆ ಯಾವುದರಿಂದ ತಪ್ಪಿಸಿಕೊಳ್ಳಬೇಕಾಗಿದೆ? ಅಹಂಕಾರವೂ ಭಗವಂತನ ಒಂದು ಸ್ವರೂಪವಾಗಿದೆ, ಹಾಗಾಗಿ ಅದನ್ನು ಸುಮ್ಮನೆ ಇರಲು ಬಿಡಿ. ನಿಮ್ಮಾಳದಲ್ಲಿ ಕುಳಿತಿರುವ ಅಹಂಕಾರವೂ ದೈವಿಕತೆಯ ಒಂದು ರೂಪವಾಗಿದೆ.

ಅವನು ಹೇಳುತ್ತಾನೆ, ’ಈ ಎಲ್ಲಾ ಎಂಟು ರೀತಿಯ ಸ್ವಭಾವ ನಿನ್ನೊಳಗೆ ಇವೆ, ಮತ್ತು ಅವೆಲ್ಲವೂ ನನ್ನ ವಿವಿಧ ಸ್ವರೂಪಗಳಲ್ಲದೇ ಬೇರೇನಲ್ಲ’, ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವುದು ಇದನ್ನು.

ನೀನು ನಿನ್ನ ಮನಸ್ಸಲ್ಲ, ನೀನು ನಿನ್ನ ಬುದ್ಧಿಯಲ್ಲ. ನೀನು ನಿನ್ನ ಅಹಂಕಾರವಲ್ಲ. ಹಾಗಾದರೆ ಉಳಿಯುವುದೇನು?
ಮುಂದಿನ ಶ್ಲೋಕದಲ್ಲಿ ಅವನು ಹೇಳುತ್ತಾನೆ,

’ಅಪರೇಯಮಿತಸ್ತ್ವಾನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಂ |
ಜೀವಭೂತಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ || ’(೭.೫)

ಅಪರಾ ಪ್ರಕೃತಿ ಎಂದು ಕರೆಯಲ್ಪಡುವ ಈ ಎಂಟು ವಿಧ ಸ್ವಭಾವಗಳಲ್ಲದೇ, ಇನ್ನೊಂದು ಇನ್ನೂ ಶ್ರೇಷ್ಠ ಪ್ರಕೃತಿಯಿದೆ, ಅದನ್ನು ಪರಾ ಎಂದು ಕರೆಯಲಾಗುತ್ತದೆ.  ಈ ಸೃಷ್ಟಿಯಲ್ಲಿನ ಎಲ್ಲವೂ ಈ ಪರಾ ಪ್ರಕೃತಿಯಿಂದ ಹಿಡಿದಿಡಲ್ಪಟ್ಟಿದೆ. ಈ ಜಗತ್ತಿನಲ್ಲಿ ಕಾಣುವ ಎಲ್ಲಾ ರೂಪಗಳನ್ನು ಧರಿಸಿರುವಂಥದ್ದು; ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲದಕ್ಕೂ ಕಾರಣವಾಗಿರುವಂಥದ್ದು, ಸೂರ್ಯ ಬೆಳಗುವುದಕ್ಕೆ ಮತ್ತು ಚಂದ್ರ ತಿರುಗುವುದಕ್ಕೆ ಕಾರಣವಾಗಿರುವಂಥದ್ದು ಪರಾ ಪ್ರಕೃತಿ. ಅದು ಭೌತಿಕ ಸೃಷ್ಟಿಯಲ್ಲಿ ನಡೆಯುತ್ತಿರುವ ಎಲ್ಲದಕ್ಕೂ ಮೂಲ ಕಾರಣವಾಗಿದೆ.

ಹಾಗಾಗಿ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, ’ಯಾವುದರ ಅಸ್ತಿತ್ತ್ವವಿಲ್ಲದೇ, ಯಾವುದೇ ಜೀವಿ ಅಥವಾ ಮಾನವ, ಅಥವಾ ಭೂಮಿಯೂ, ಬ್ರಹ್ಮಾಂಡವೂ ಅಥವಾ ಈ ಸಂಪೂರ್ಣ ಸೃಷ್ಟಿಯು ಇರಲು ಸಾಧ್ಯವಿಲ್ಲವೋ, ಆ ತತ್ತ್ವ, ಅಂದರೆ ಪರಾ ಪ್ರಕೃತಿಯು ನಾನು. ಯಾವುದನ್ನು ನೋಡಲು ಸಾಧ್ಯವಿಲ್ಲವೋ, ಆದರೂ ಇರುವಂಥದ್ದು, ಮತ್ತು ಅಸ್ತಿತ್ತ್ವದಲ್ಲಿರುವ ಎಲ್ಲದಕ್ಕೂ ಮೂಲವಾಗಿರುವುದೋ, ಆ ಪರಾ ಪ್ರಕೃತಿಯು ನಾನು, ಮತ್ತು ನೀನು ತಿಳಿದುಕೊಳ್ಳಬೇಕಾಗಿರುವುದು ಇದನ್ನೇ’.

ಈ ಸಂಪೂರ್ಣ ಸೃಷ್ಟಿಯು ಈ ಪರಾ ಪ್ರಕೃತಿಯ ಮೇಲೆ ಆಧರಿಸಿದೆ, ಇಂದಿನ  ವಿಜ್ಞಾನಿಗಳು ’ಡಾರ್ಕ್ ಮ್ಯಾಟರ್ ಅಥವಾ ಡಾರ್ಕ್ ಎನರ್ಜಿ’ ಎಂದು ಕರೆಯಲ್ಪಡುವಂಥದ್ದು ಅದೇ.

ವಿಜ್ಞಾನಿಗಳು ಇಂದು ಹೇಳುವುದೇನಂದರೆ, ಸೂರ್ಯನು ಗೋಲಾಕಾರವಾಗಿರುವುದು ಏಕೆಂದರೆ, ಎಲ್ಲ ದಿಕ್ಕುಗಳಿಂದಲೂ ಶಕ್ತಿಯ ಬಹಳ ಗಾಢವಾದ ಒತ್ತಡವಿರುವುದರಿಂದ. ಮತ್ತು ಸೂರ್ಯನ ಸುತ್ತ ಈ ಖಾಲಿ ಜಾಗದಲ್ಲಿರುವ ಶಕ್ತಿಯು, ಸ್ವಯಂ ಸೂರ್ಯನಿಗಿಂತ ಬಹಳ ಶಕ್ತಿಯುತವಾದುದು. ಇದು ನೀವು ನೀರಿನ ಬಾಟಲಿಯೊಳಗಿನ ಗುಳ್ಳೆಯನ್ನು ನೋಡಿದಂತೆ. ಗುಳ್ಳೆಯು ಯಾಕೆ ಗೋಲಾಕಾರವಾಗಿದೆ? ಯಾಕೆಂದರೆ ಅದರ ಸುತ್ತಲಿನ ನೀರು ಎಲ್ಲಾ ದಿಕ್ಕುಗಳಿಂದ ಒತ್ತಡ ಹಾಕುತ್ತಿದೆ.

ಅದರಿಂದಲೇ, ಗೋಲಾಕಾರವಿರುವ ಯಾವುದೇ ವಸ್ತು, ಹಾಗಿರುವುದು ಅದರ ಸುತ್ತಲಿನ ಖಾಲಿ ಸ್ಥಳದ (ಕಣ್ಣಿಗೆ ಕಾಣಿಸದ) ಶಕ್ತಿಯ ಒತ್ತಡದಿಂದ ಮಾತ್ರ, ಮತ್ತು ಆ ಖಾಲಿ ಸ್ಥಳದ ಶಕ್ತಿಯು ಆ ವಸ್ತುವಿನ ಶಕ್ತಿಗಿಂತ ನೂರು ಪಟ್ಟು ಹೆಚ್ಚಿರುತ್ತದೆ.

ನಿಮಗೆ ಕಾಣುತ್ತಿರುವ ಈ ಎಲ್ಲಾ ಖಾಲಿ ಸ್ಥಳ ವಾಸ್ತವದಲ್ಲಿ ಖಾಲಿಯಾಗಿಲ್ಲ. ಇದು ’ಡಾರ್ಕ್ ಎನರ್ಜಿ’ ಮತ್ತು ’ಡಾರ್ಕ್ ಮ್ಯಾಟರ್’ ಎಂದು ಕರೆಯಲ್ಪಡುವ ಶಕ್ತಿಯಿಂದ ತುಂಬಿಕೊಂಡಿದೆ.

’ಯಾವುದು ಕಾಣುವುದಿಲ್ಲವೋ ಅದು ಸತ್ಯ’ ಎಂದು ಹೇಳಲಾಗುತ್ತದೆ.ಯಾಕೆಂದರೆ, ನಿಮಗೆ ಕಾಣಿಸುವ ಎಲ್ಲವೂ, ವಾಸ್ತವದಲ್ಲಿ ಇರುವುವುದರ ಒಂದು ಸಣ್ಣ ಭಾಗವಷ್ಟೆ.

ಆಕಾಶದಲ್ಲಿ ನಿಮಗೆ ಕಾಣುವ ಎಲ್ಲಾ ನಕ್ಷತ್ರಗಳು ಮತ್ತು ಗ್ರಹಗಳು, ಅವುಗಳ ಸುತ್ತಲಿರುವ ಅದೃಶ್ಯ ಶಕ್ತಿ ಮತ್ತು ಖಾಲಿ ಜಾಗಕ್ಕಿಂತ ಬಹಳ ಚಿಕ್ಕದಾಗಿವೆ, ಮತ್ತು ಆ ಅದೃಶ್ಯ ಶಕ್ತಿಯು ಆ ನಕ್ಷತ್ರಗಳಿಗಿಂತ ಬಹಳ ಶಕ್ತಿಶಾಲಿಯಾಗಿದೆ. ಹಾಗಾಗಿ ಇಂದಿನ ವಿಜ್ಞಾನಿಗಳು ಹೇಳಿರುವುದು ಇದನ್ನೇ, ಮತ್ತು ಶ್ರೀ ಕೃಷ್ಣನು ಇದನ್ನೇ ಹೇಳಿದ್ದನು.

ಅವನು ಹೇಳುತ್ತಾನೆ, ’ಈ ಸೃಷ್ಟಿಯನ್ನು ಹಿಡಿದಿಟ್ಟುಕೊಂಡಿರುವ ಮತ್ತು ಯಾವುದರ ಮೇಲೆ ಈ ಸೃಷ್ಟಿಯು ಆಧರಿಸಿದೆಯೋ ಆ ಪರಾ ಪ್ರಕೃತಿಯು ನಾನಾಗಿದ್ದೇನೆ.’

ಹಾಗಾಗಿ ಇಂದಿನ ವಿಜ್ಞಾನಿಗಳು ಸೂಚಿಸಿರುವಂಥ ’ಡಾರ್ಕ್ ಎನರ್ಜಿ’ ಶ್ರೀ ಕೃಷ್ಣನಾಗಿದ್ದಾನೆ. ಕೃಷ್ಣ ಎಂಬ ಪದದ ಅರ್ಥವೂ ಕಪ್ಪು/ಗಾಢ ವರ್ಣ ಎಂದು.

ಯಾವುದನ್ನು ನೋಡಲಾಗುವುದಿಲ್ಲವೋ ಅದು ಎಲ್ಲದರ ಆಧಾರವಾಗಿದೆ, ಮತ್ತು ಯಾವುದನ್ನು ನಾವು ನೋಡುತ್ತೇವೋ ಅದು ನಿಜವಾಗಿ ಏನೂ ಅಲ್ಲ! (ನಗು)

ನಮಗೇನು ನೋಡಲಾಗುತ್ತದೋ - ಮರಗಳು, ಹೂಗಳು - ಇವು ಅಸ್ತಿತ್ತ್ವದ ಒಂದು ಸಣ್ಣ ಭಾಗವಾಗಿವೆ. ಇದು ಅಪರಾ ಪ್ರಕೃತಿಯ  ವ್ಯಕ್ತರೂಪವಾಗಿವೆ. ಆದರೆ ಈ ಅಪರಾ ಪ್ರಕೃತಿಯು, ಕಣ್ಣಿಗೆ ಕಾಣಿಸದ ಪರಾ ಪ್ರಕೃತಿಯ ಒಳಗಡೆ ಇದೆ. ಹಾಗೆ ಶ್ರೀ ಕೃಷ್ಣನು ಇವೆರಡನ್ನೂ ಹೇಳುತ್ತಾನೆ.

ಉದಾಹರಣೆಗೆ, ನಿಮ್ಮೊಳಗಿರುವ ಚೈತನ್ಯವನ್ನು ನಿಮಗೆ ನೋಡಲಾಗುವುದಿಲ್ಲ. ಆದರೆ ನಿಮ್ಮ ಚೈತನ್ಯದ ವ್ಯಕ್ತತೆಯನ್ನು ನಿಮ್ಮ ಮನಸ್ಸು, ಬುದ್ಧಿ ಮತ್ತು ಅಹಂಕಾರಗಳ ಮೂಲಕ ನೀವು ಗ್ರಹಿಸಬಹುದು. ಅಲ್ಲವೇ?

ಹಾಗಾಗಿ, ಶ್ರೀ ಕೃಷ್ಣನು ತತ್ತ್ವ ಜ್ಞಾನ ಎನ್ನುವುದು ಇದೇ ಅರ್ಥದಲ್ಲಿ.

ಭಾರತೀಯ ಆಧ್ಯಾತ್ಮಿಕತೆಯ ವೈಶಿಷ್ಟ್ಯವೆಂದರೆ, ಅದು ಎಂದೂ ವಿಜ್ಞಾನವನ್ನು ಅಲ್ಲಗಳೆಯಲಿಲ್ಲ. ವಾಸ್ತವದಲ್ಲಿ, ವಿಜ್ಞಾನಕ್ಕೆ ಭಾರತೀಯ ಅಧ್ಯಾತ್ಮದಲ್ಲಿ ಸಮಾನ ಪ್ರಾಮುಖ್ಯ ನೀಡಲಾಗಿದೆ.

ಇದರಿಂದಾಗಿಯೇ ’ತತ್ತ್ವ ಜ್ಞಾನ’ ಎಂದು ಹೇಳಲಾಗಿದೆ, ಮೊದಲು ಈ ಸೃಷ್ಟಿಯು ಐದು ಧಾತುಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶದ ವ್ಯಕ್ತ ರೂಪವಾಗಿದೆ ಎಂದು ಅರಿತುಕೊಳ್ಳಿ. ಈ ಜ್ಞಾನವನ್ನು (ಅಪರಾ ಪ್ರಕೃತಿ) ಅರ್ಥ ಮಾಡಿಕೊಳ್ಳುವುದರಿಂದ, ನಿಮಗೆ ಇನ್ನೂ ಉನ್ನತ ಜ್ಞಾನವಾಗಿರುವ ಪರಾ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲಾಗುತ್ತದೆ. ತತ್ತ್ವ ಜ್ಞಾನ ಎಂದರೆ ಇದೇ ಆಗಿದೆ.

ಭಗವಂತನನ್ನೂ ಒಂದು ತತ್ತ್ವ ಎಂದು ಗುರುತಿಸಲಾಗಿದೆ. ಆದ್ದರಿಂದಲೇ ಭಾರತೀಯ ಆಧ್ಯಾತ್ಮಿಕತೆಯು ಆಧ್ಯಾತ್ಮಿಕ ಜ್ಞಾನ ಮತ್ತು ವೈಜ್ಞಾನಿಕ ತತ್ತ್ವಗಳ ಒಂದು ಸಂಯೋಗವಾಗಿದೆ.