ಮಂಗಳವಾರ, ಮೇ 14, 2013

ಗೀತಾ ಜ್ಞಾನ - ೫


ಬೆಂಗಳೂರು, ಭಾರತ
೧೪.೦೫.೧೩

ನಿಮ್ಮನ್ನು ದುಃಖಿಯನ್ನಾಗಿ ಮಾಡುತ್ತಿರುವುದು ಏನದು?

ಪ್ರೊಫೆಸರ್ ಡಿಹೂರ್ ಎಂಬ ಒಬ್ಬ ಮಹಾನ್ ವಿಜ್ಞಾನಿ ಆಶ್ರಮಕ್ಕೆ ಬಂದಿದ್ದರು. ಅವರೊ ಒಬ್ಬ ವಿಜ್ಞಾನಿ ಮತ್ತು ಭೌತಶಾಸ್ತ್ರದಲ್ಲಿ ಒಬ್ಬ ಮೇಧಾವಿ. ಈ ಬ್ರಹ್ಮಾಂಡವು ಮೂರು ಶಕ್ತಿಗಳಿಂದ ಒಂದಾಗಿ ನಿಂತಿದೆ ಎಂದು ಅವರು ಹೇಳಿದರು. ಮೂರರ ಬದಲು ಎರಡು ಶಕ್ತಿಗಳಿದ್ದರೆ, ಈ ಲೋಕವು ಕುಸಿದು ಬೀಳುತ್ತಿತ್ತು. ಈ ಮೂರು ಶಕ್ತಿಗಳು ಜೊತೆಯಲ್ಲಿ ಈ ಬ್ರಹ್ಮಾಂಡವನ್ನು ಸ್ಥಿರವಾಗಿಡುತ್ತವೆ.

ಅವರು ಒಂದು ಮಾದರಿಯನ್ನು ಬಿಡಿಸಿ ಇದನ್ನು ತೋರಿಸಿದರು. ಒಂದು ಸೀಲಿಂಗ್ ಫ್ಯಾನ್ ಗೆ(ಸೂರು ಪಂಖ) ಮೂರು ರೆಕ್ಕೆಗಳಿದ್ದಂತೆ, ಈ ಮೂರು ಶಕ್ತಿಗಳು ಜೊತೆಯಾಗಿ ಈ ಬ್ರಹ್ಮಾಂಡವನ್ನು ಸಮತೋಲನದಲ್ಲಿಡುತ್ತವೆ. ವಾಯುಗಾಲಿಯ(ವಿಂಡ್ ಮಿಲ್ಲ್) ರೆಕ್ಕೆಗಳಂತೆ, ಒಂದು ರೆಕ್ಕೆ ಮೇಲೆ ಸಾಗಿದಾಗ ಉಳಿದ ಎರಡು ರೆಕ್ಕೆಗಳು ಕೆಳ ಸಾಗುತ್ತವೆ, ಮತ್ತೆ ಅದು ತಿರುಗುತ್ತದೆ ಹಾಗೂ ಮೇಲಿದ್ದ ರೆಕ್ಕೆ ಕೆಳ ಬರುತ್ತಿದ್ದಂತೆ ಉಳಿದೆರಡು ಮೇಲೆ ಹೋಗುತ್ತವೆ, ಹಾಗೆ ಈ ಚಲನವು ಸಮತೋಲನವನ್ನು ಕಾಪಾಡುತ್ತದೆ. ಅದೇ ರೀತಿ ಮೂರು ಶಕ್ತಿಗಳು ಜೊತೆಯಲ್ಲಿದ್ದಾಗ ಮಾತ್ರ ಏನಾದರೂ ನಿರಂತರವಾಗಿ ಕೆಲಸ ಮಾಡಲು ಸಾಧ್ಯ, ಇಲ್ಲದಿದ್ದರೆ ಅದು ಸಾಧ್ಯವಿಲ್ಲ.

ಒಂದು ಲೋಲಕ ಗಡಿಯಾರದಲ್ಲಿ, ಲೋಲಕದಂಡವು ಎರಡು ನಿರ್ದಿಷ್ಟ ಸ್ಥಾನಗಳ ಮಧ್ಯೆ ಮಾತ್ರ ತೂಗುತ್ತದೆ, ಮತ್ತು ಅದು ಸುತ್ತಿಡಲ್ಪಟ್ಟಷ್ಟು(ವೈಂಡಿಂಗ್) ಸಮಯ ತೂಗುತ್ತಿರುತ್ತದೆ. ಅದರಲ್ಲಿ ಸುತ್ತುಗಳು ಮುಗಿದಾಗ, ಲೋಲಕವು ನಿಂತು ಹೋಗುತ್ತದೆ. ಆದರೆ ಈ ಮೂರು ಶಕ್ತಿಗಳು ಒಂದರಿಂದ ಒಂದು ಸಮಾನಾಂತರದಲ್ಲಿ ಕೆಲಸ ಮಾಡುತ್ತವೆ ಹಾಗು ಈ ರೀತಿ ಈ ಬ್ರಹ್ಮಾಂಡವನ್ನು ಸಮತೋಲನದಲ್ಲಿಡುತ್ತವೆ.

ಹಾಗಾಗಿ ಅವರು ಹೇಳಿದ್ದು ಈ ಬ್ರಹ್ಮಾಂಡವು ಈ ಮೂರು ಶಕ್ತಿಗಳಿಂದ ಸಮತೋಲನದಲ್ಲಿ ಇಡಲ್ಪಟ್ಟಿದೆ, ಅದರಿಂದಲೇ ಅದೂ ಇಷ್ಟೊಂದು ಸಮಯದಿಂದ ಅಸ್ತಿತ್ವದಲ್ಲಿರಲು ಮುಂದುವರೆದಿದೆ.

ನಾನು ಹೇಳಿದೆ ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಇದನ್ನೇ ಹೇಳಿರುವುದು ಎಂದು.

ಶ್ರೀ ಕೃಷ್ಣ ಹೇಳುತ್ತಾನೆ, ’ಈ ಮೂರು ಗುಣಗಳಾದ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಲ್ಲವೂ ನನ್ನಿಂದ ಹುಟ್ಟಿರುವವು, ಆದರೆ ನಾನು ಅವುಗಳನ್ನು ಮೀರಿದ್ದೇನೆ ಮತ್ತು ಅವುಗಳಿಂದ ಪ್ರಭಾವಿಸಲ್ಪಡುತ್ತಿಲ್ಲ.’

ಮುಂದಿನ ಶ್ಲೋಕದಲ್ಲಿ ಶ್ರೀ ಕೃಷ್ಣನು ಹೇಳುತ್ತಾನೆ,

"ತ್ರಿಭಿರ್ಗುಣ ಮಾಯೈರ್ಭಾವೈರೇಭಿಃ ಸರ್ವಮಿದಂ ಜಗತ್ |
ಮೋಹಿತಂ ನಾಭಿಜ್ಞಾನಾತಿ ಮಾಂ ಏಭ್ಯಃ ಪರಾಅವ್ಯಯಂ ||" (೭.೧೩)

ಅವನು ಹೇಳುತ್ತಾನೆ, ’ಈ ಸಂಪೂರ್ಣ ಜಗತ್ತು ಮೂರು ಗುಣಗಳ ಪ್ರಭಾವಕ್ಕೊಳಪಟ್ಟಿದೆ. ಆದರೆ ಈ ಮೂರು ಗುಣಗಳಲ್ಲಿ ಬಹಳವಾಗಿ ಸಿಕ್ಕಿಕೊಂಡವನಿಗೆ ಇದು ಅರಿಯಲು ಆಗುವುದಿಲ್ಲ. ಅವನು ಮೂರ್ಖ. ಯಾರು ಮೋಹದಲ್ಲಿ ಬೀಳುತ್ತಾಓ, ಅವನಿಗೆ ನನ್ನ ನಿಜವಾದ ಪ್ರಕೃತಿಯನ್ನು ಅರಿಯಲು ಸಾಧ್ಯವಿಲ್ಲ.’

ಮೋಹವೆಂದರೆ ಸೀಮಿತ ದೃಷ್ಟಿ. ಒಬ್ಬ ತಾಯಿ ತನ್ನ ಮಗುವಿಗೆ ಎಷ್ಟು ಮಮತೆಯಿಂದ ಮೋಹಿತಳಾಗಿರುತ್ತಾಳೆಂದರೆ ತನ್ನ ಮಗುವಿಗಾಗಿ ಅವಳ ದೂರದೃಷ್ಟಿ ಸೀಮಿತವಾಗುತ್ತದೆ. ಇದು ಪ್ರೀತಿ ಮತ್ತು ಮೋಹಕ್ಕಿರುವ ವ್ಯತ್ಯಾಸ. ಮೋಹವು ಬರೇ ನೋವನ್ನುಂಟು ಮಾಡುತ್ತದೆ. ಅದು ಸಂತೋಷದ ಆಶ್ವಾಸನೆ ನೀಡುತ್ತದೆ ಆದರೆ ವಾಸ್ತವದಲ್ಲಿ ಯಾವುದೇ ಸಂತೋಷವನ್ನು ಕೊಡುವುದಿಲ್ಲ. ಸಂತೋಷದ ಆಸೆಯಿಟ್ಟುಕೊಂಡು ದುಃಖವನ್ನು ಅನುಭವಿಸುವುದೇ ಮೋಹ.

ಶ್ರೀ ಕೃಷ್ಣನು ಹೇಳುತ್ತಾನೆ, ’ನನ್ಗೆ ಕೊನೆಯಿಲ್ಲ(ಅವ್ಯಯ) ಮತ್ತು ನಾನು ಶಾಶ್ವತ. ಇದು ಉಳಿದವರಿಗೆ ತಿಳಿಯದಿರುವುದು’.
ಎಲ್ಲಾ ದುಃಖ ಮೋಹದಿಂದ ಬರುತ್ತದೆ. ನೀವು ಅನುಭವಿಸುವ ಎಲ್ಲಾ ಭಾವನೆಗಳು ಈ ಮೂರು ಗುಣಗಳ ಫಲ. ಆದರೆ ಇದರ ಅರ್ಥೆ ನಾವು ಅವೆಲ್ಲವನ್ನೂ ದೂರಮಾಡಬೇಕೆಂದೇ? ಅಲ್ಲ, ಅವನು ಇಲ್ಲಿ ಹೇಳುತ್ತಿರುವುದು ಅದಲ್ಲ. ಆ ಮೂರು ಗುಣಗಳು ಮುಖ್ಯವಾಗಿವೆ.

ಅವನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ, ದೈವಿಃ-ಏಷಗುಣ-ಮಯಿ ಮಮ ಮಾಯಾದುರತ್ಯಯಾ \
ಮಾಂ ಏವ ಯೇ ಪ್ರಪದ್ಯಂತೇ ಮಾಯಾಮೇತಂ ತರಂತಿ ತೇ’. (೭.೧೪)

ಅವನು ಒಂದು ಬಹಳ ಆಶ್ಚರ್ಯಕರ ವಿಷಯವನ್ನಿಲ್ಲಿ ಹೇಳಿದ್ದಾನೆ.

ಸಾಮಾನ್ಯವಾಗಿ ಜನರು ಲೋಕವನ್ನು ದೂರುತ್ತಾರೆ(ತಮ್ಮ ಸ್ವಂತ ಪರಿಸ್ಥಿತಿಗಳಿಂದ) ಮತ್ತು ಅದರಿಂದ ದೂರ ಓಡ ಬಯಸುತ್ತಾರೆ. ಅವರು ಯೋಚಿಸುತ್ತಾರೆ, ’ಈ ಲೋಕ ಕೆಟ್ಟದು, ಅದು ಅಸುಂದರ ಹಾಗೂ ಭ್ರಷ್ಟ.’ ಅಂಥವರು ಎಂದೂ ಭಗವದ್ಗೀತೆಯನ್ನು ಓದಿಲ್ಲ. ಅವರು ಓದಿದ್ದರೂ, ಅದರ ನಿಜವಾದ ಸಂದೇಶವನ್ನು ಅವರು ಅರ್ಥಮಾಡಿಕೊಂಡಿಲ್ಲ. ಶ್ರೀ ಕೃಷ್ಣ ಹೇಳುತ್ತಾನೆ, ’ಈ ಮೂರು ಗುಣಗಳು ಬಂದು ಹೋಗುತ್ತವೆ, ಆದರೂ ನಾನು ಅವುಗಳಿಂದ ನಿರ್ಲಿಪ್ತನಾಗಿದ್ದೇನೆ. ನಾನು ಶಾಶ್ವತ ಹಾಗೂ ನಿರ್ಲಿಇಪ್ತ. ನಾನು ಎಂದಿನಂತೆಯೇ ಇಂದು, ನಿತ್ಯ.’

ಹಾಗಾಗಿ ದುಃಖ ನಿಮ್ಮ ಅಸ್ತಿತ್ವವನ್ನು ಯಾವುದೇ ರೀತಿಯಲ್ಲಿ ಕುಗ್ಗಿಸಲಾಗುವುದಿಲ್ಲ, ಅಲ್ಲದೇ ಸಂತೋಷವೂ ಅದನ್ನು ವೃದ್ಧಿಪಡಿಸಲೂ ಆಗುವುದಿಲ್ಲ. ನೀನೇ ಸ್ಥಿರವಾದ ಶಾಶ್ವತ ಆತ್ಮ - ಸುಖಕಾಲದಲ್ಲೂ ದುಃಖದಲ್ಲೂ ನಿರ್ಲಿಪ್ತವಾಗಿರುವ ಆತ್ಮ.
ಇದೇ ರೀತಿಯಲ್ಲಿ ನಿಮ್ಮಲ್ಲಿ ಬಹಳ ಭಾವನೆಗಳು ಹುಟ್ಟುತ್ತವೆ, ಉದಾಹರಣೆಗೆ ಕ್ರೋಧ. ಕ್ರೋಧವು ನಿಮ್ಮಲ್ಲಿ ಒಂದು ಬಿರುಗಾಳಿಯಂತೆ ಏಳುತ್ತದೆ ನಂತರ ಹೋಗುತ್ತದೆ, ಆದರೆ ನೀನು ಎಂದಿಗೂ ಹೇಗಿರುವೆಯೋ ಹಾಗೆಯೇ ಇರುತ್ತಿ. ನೀನು (ಚೈತನ್ಯವಾಗಿ ಅಥವಾ ಆತ್ಮವಾಗಿ) ಯಾವುದೇ ನಷ್ಟವನ್ನು ಅನುಭವಿಸುವುದಿಲ್ಲ. ಹೌದು ನಿನ್ನ ಶರೀರ ಅದರಿಂದಾಗಿ ನೋವು ಮತ್ತು ದುಃಖವನ್ನು ಅನುಭವಿಸುತ್ತದೆ. ಆದರೆ ನಿನ್ನೊಳಗಿನ ಚೈತನ್ಯ ಶಕ್ತಿಯು ದುಃಖದಿಂದಾಗಿ ಕುಗ್ಗುವುದೂ ಇಲ್ಲ ಅಥವಾ ಸುಖದಿಂದಾಗಿ ವೃದ್ಧಿಯಾಗುವುದೂ ಇಲ್ಲ. ಈ ಚೈತನ್ಯ ಶಕ್ತಿಯೇ ಭಗವಾನ್ ಶ್ರೀ ಕೃಷ್ಣ.

ಇಲ್ಲಿ ಶ್ರೀ ಕೃಷ್ಣನು ತನ್ನನ್ನೇ ’ನಾನು, ನನ್ನದು’ ಎಂದು ಹೇಳುತ್ತಾ ಸಂಬೋಧಿಸುತ್ತಾನೆ. ನೀವು ಭಗವಂತ, ಗುರು ತತ್ತ್ವ ಮತ್ತು ಆತ್ಮತತ್ತ್ವದಲ್ಲಿ ವ್ಯತ್ಯಾಸವನ್ನು ಕಾಣಬಾರದು. ಅವೆಲ್ಲವೂ ಒಂದೇ.

ಹಾಗಾಗಿ ಇಲ್ಲ, ಶ್ರೀ ಕೃಷ್ಣನು ಅರ್ಜುನನೊಂದಿಗೆ ಮಾತನಾಡುತ್ತ ತನ್ನನ್ನು ಸಂಬೋಧಿಸಲು ’ನಾನು, ನನ್ನದು’ ಎಂಬಂಥ ಪದಗಳನ್ನು ಉಪಯೋಗಿಸುತ್ತಿದ್ದಾನೆ. ಆ ’ನಾನು’ ಕೇವಲ ಶ್ರೀ ಕೃಷ್ಣ ಅಲ್ಲ, ಅದು ನಮ್ಮ ಆತ್ಮವೂ ಕೂಡ ಆಗಿದೆ, ಮತ್ತು ಅದು ಪರಮಾತ್ಮವೂ ಕೂಡ ಆಗಿದೆ. ಅವನು ಇಲ್ಲಿ ಮಾತನಾಡುತ್ತಿರುವುದು ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ, ಆದರೆ ಆ ದೈವೀ ಶಕ್ತಿಯು ಈ ಜ್ಞಾನವನ್ನು ಕೊಡುತ್ತಿರುವುದು. ಮತ್ತು ಅದೇ ದಿವ್ಯ ಶಕ್ತಿಯು ಈ ಜ್ಞಾನವನ್ನು ಅರ್ಜುನನ(ಇಲ್ಲ, ಒಂದು ವೈಯಕ್ತಿಕ ಚೈತನ್ಯದ ಸಂಕೇತ) ಮೂಲಕ ಕೇಳಿಸಿಕೊಳ್ಳುತ್ತಿರುವುದು.

ಇದನ್ನು ಇನ್ನೊಂದು ರೀತಿಯಲ್ಲೂ ಅರ್ಥ ಮಾಡಿಕೊಳ್ಳುವುದು ಸಾಧ್ಯವಿದೆ.

ನೀವು ಶಾಶ್ವತ, ಆದರೆ ನಿಮಗೆ ಇದರ ಅರಿವಿಲ್ಲ, ಅದರಿಂದಲೇ ನೀವು ಭಾವೋದ್ವೇಗಗಳಿಂದ - ದುಃಖದಿಂದ, ಸಂತೋಷದಿಂದ ವಿಚಲಿತಗೊಳ್ಳುವಿರಿ. ಹೀಗಾಗುವುದು ನೀವು ಮೋಹದಲ್ಲಿ ಸಿಕ್ಕಿಕೊಂಡಿರುವುದರಿಂದ. ಅದು ನಿಮ್ಮ ಮಕ್ಕಳ ಮೇಲಿನ ಮೋಹವಿರಬಹುದು, ನಿಮ್ಮ ಗಂಡ ಅಥವಾ ಹೆಂಡತಿ, ನಿಮ್ಮ ಸ್ನೇಹಿತರು, ಅಥವಾ ಸಂಪತ್ತಿನ ಮೇಲೆ ಅಥವಾ ಇನ್ಯಾವುದರ ಮೇಲಿನ ಮೋಹವಾದರು ಇರಬಹುದು.

ನೀವು ಮೋಹದಲ್ಲಿ ಸಿಕ್ಕಿಕೊಂಡಿರುವುದರಿಂದ, ನಿಮಗೆ ನಿಮ್ಮ ನಿಜ ಚೈತನ್ಯವನ್ನು ಗುರುತಿಸಲಾಗುತ್ತಿಲ್ಲ. ಅಂಥ ಕ್ಷಣಗಳಲ್ಲಿ, ನಿಮ್ಮ ಪರಿಸ್ಥಿತಿ ನಿಮಗೆ ಎಷ್ಟು ದೊಡ್ಡದಾಗಿ ಕಾಣುತ್ತದೆಂದರೆ ನಿಮಗೆ ಬೇರೇನನ್ನೂ ನೋಡಲು ಸಾಧ್ಯವಾಗುತ್ತಿರುವುದಿಲ್ಲ.

ಉದಾಹರಣೆಗೆ, ಯಾರ ಮನಸ್ಸಿನಲ್ಲಿ ದುಡ್ಡಿನ ಜ್ವರತೆಯಿದೆಯೋ ಅವನಿಗೆ ಬೇರೆ ಯಾವ ಯೋಚನೆಯೂ ಬರುವುದಿಲ್ಲ. ಅವನಿಗೆ ಅವನ ಸಂಬಂಧಗಳು, ಸ್ನೇಹಿತರು ಮತ್ತು ಕುಟುಂಬದ ಬಗ್ಗೆ ಯೋಚನೆ ಮಾಡಲಾಗುವುದಿಲ್ಲ, ಅವನ ಸ್ವಂತ ಆರೋಗ್ಯ ಮತ್ತು ಒಳ್ಳೆಯ ಜೀವನದ ಬಗ್ಗೆಯೂ ಯೋಚಿಸಲಾಗುವುದಿಲ್ಲ. ಅಂಥ ವ್ಯಕ್ತಿಯು ಮೋಹದಲ್ಲಿ ಸಿಕ್ಕಿಕೊಂಡಿರುವುದರಿಂದ ಎಲ್ಲವನ್ನೂ ಕಳೆದುಕೊಳ್ಳುವವನಾಗುತ್ತಾನೆ.

ಸಹೋದರರು ಹಣದಿಂದಾಗಿ ತಮ್ಮೊಳಗೆ ಜಗಳ ಮಾಡಿಕೊಳ್ಳುತ್ತಾರೆ. ಮಕ್ಕಳು ತಮ್ಮ ಪೋಷಕರೊಂದಿಗೆ ಹಣದಿಂದಾಗಿ ಜಗಳ ಮಾಡಿಕೊಳ್ಳುತ್ತಾರೆ.

ಧರ್ಮದ ಮೇಲಿನ ಮೋಹವೂ ದುಃಖವನ್ನು ತರುತ್ತದೆ. ಎಲ್ಲಾ ನೋವಿನ ಅನುಭವ ಮೋಹದಿಂದಾಗಿ ಉಂಟಾಗುತ್ತವೆ. ಶ್ರೀ ಕೃಷ್ಣ ಹೇಳುತ್ತಾನೆ, ’ಯಾರು ಅಂಥ ಮೋಹದಿಂದ ಭ್ರಾಂತಿಗೊಂಡಿದ್ದಾರೋ, ಅವರು ನನ್ನ ನಿಜವಾದ ಸ್ವಭಾವವನ್ನು ಅರಿತಿಲ್ಲ.

ನಾನು ಶಾಶ್ವತ ಮತ್ತು ನಿರ್ಲಿಪ್ತ ಎಂದು ಅವರು ಮರೆಯುತ್ತಾರೆ. ನಾನು(ಶುದ್ಧ ಚೈತನ್ಯ ಸ್ವರೂಪಿ) ಯಾವುದರಿಂದಲೂ ಹಿಗ್ಗುವುದಿಲ್ಲ ಅಥವಾ ಕುಗ್ಗುವುದಿಲ್ಲ. ನಾನು ಎಲ್ಲದರ ಹಿಂದಿನ ಪರಮ ಶಕ್ತಿ, ಆದರೆ ಜನರು ಇದನ್ನು ಅರಿಕೊಳ್ಳುವುದಿಲ್ಲ’.

ಹಾಗಾದರೆ ಅದರ ಅರ್ಥ ದೇವರನ್ನು ಸಾಕ್ಷಾತ್ಕರಿಸಬೇಕಾದರೆ ನಾವು ಸಂಬಂಧಗಳನ್ನಿಟ್ಟುಕೊಳ್ಳಬಾರದು ಅಥವಾ ಗೃಹಸ್ಥರಾಗಿರಬಾರದು ಎಂದೇ? ಅಲ್ಲ, ಅಲ್ಲವೇ ಅಲ್ಲ. ನೀವು ನಿಮ್ಮ ಜವಾಬ್ದಾರಿಗಳನ್ನು ಬಿಟ್ಟು ಮನೆಯಿಂದ ದೂರ ಓಡಿಹೋಗ ತಕ್ಕದ್ದಲ್ಲ. ಕೇವಲ ಇಷ್ಟು ಅರ್ಥ ಮಾಡಿಕೊಳ್ಳಿ, ನಿಮ್ಮ ಮುಂದೆ ನಡೆಯುವುದೆಲ್ಲಾ ಈ ಮೂರು ಗುಣಗಳ ಪ್ರಭಾವದಿಂದ ನಡೆಯುವಂಥದ್ದು.

ಶ್ರೀ ಕೃಷ್ಣ ಹೇಳುತ್ತಾನೆ, ’ನೀವು ಈ ಮೂರು ಗುಣಗಳನ್ನು ನಿಂದಿಸಬಾರದು/ಶಪಿಸಬಾರದು ಏಕೆಂದರೆ ಅವು ದೈವಿಕ, ಅವು ನನಗೆ ಸೇರಿದವು ಮತ್ತು ನನ್ನಿಂದ ಹುಟ್ಟಿರುವವು. ಈ ಸಂಪೂರ್ಣ ಸೃಷ್ಟಿ ಮತ್ತು ಅದರಲ್ಲಿರುವ ಎಲ್ಲವೂ ನನ್ನಿಂದ ಜನಿಸಿರುವುದು, ಅದು ಕೇವಲ ನನ್ನಿಂದಲೇ ಜನಿಸಿರುವುದು ಎಂದು ನೀನು ತಿಳಿದುಕೊಂಡೆ, ಹಾಗಿರುವಾಗ ನೀನದನ್ನು ಹೇಗೆ ಶಪಿಸಬಹುದು?’

ಉದಾಹರಣೆಗೆ, ನೀವೊಂದು ಚಿತ್ರವನ್ನು ಶಪಿಸಿದರೆ, ನೀವು ವಾಸ್ತವದಲ್ಲಿ ಅದನ್ನು ರಚಿಸಿದ ಕಲಾವಿದನನ್ನು ಶಪಿಸುತ್ತಿದ್ದೀರಿ.

ಸೃಷ್ಟಿಯನ್ನು ಆದರಿಸುವುದು ಎಂದರೆ ಭಗವಂತನನ್ನು ಆದರಿಸುವುದು, ಯಾಕೆಂದರೆ ಸೃಷ್ಟಿಯು ಭಗವಂತನಿಂದ ಹುಟ್ಟಿರುವುದು ಮತ್ತು ಭಗವಂತನಲ್ಲಿ ಲೀನವಾಗಿರುವುದು.