ಬುಧವಾರ, ಮೇ 15, 2013

ಅನೇಕ ಜನ್ಮಾನಂತರ

ಬೆಂಗಳೂರು, ಭಾರತ
೧೫ ಮೇ ೨೦೧೩

’ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ I
ಪ್ರಿಯೋ ಹಿ ಜ್ಞಾನಿನೋತ್ಯರ್ಥಮಹಂ ಸ ಚ ಮಮ ಪ್ರಿಯಃ II’ (೭.೧೭)

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ನನ್ನಲ್ಲಿ ಭಕ್ತಿಯನ್ನು ಹೊಂದಿದ ನಾಲ್ಕು ರೀತಿಯ ಜನರಿದ್ದಾರೆ. ದುಃಖಿತರು; ಐಹಿಕ ಬಯಕೆಗಳ ಪೂರೈಸುವಿಕೆಯನ್ನು ಅನ್ವೇಷಿಸುವವರು; ಜಿಜ್ಞಾಸುಗಳು ಮತ್ತು ಜ್ಞಾನಿಗಳು. ಇವರಲ್ಲಿ, ಜ್ಞಾನಿಯು ನನಗೆ ಅತ್ಯಂತ ಪ್ರಿಯನು ಯಾಕೆಂದರೆ ಅವನ ಭಕ್ತಿಯು ನನ್ನ ಕಡೆಗೆ ನೆಟ್ಟಿರುತ್ತದೆ. ಆಗಿರುತ್ತದೆ.’

ಅದೇ ರೀತಿ ಕೆಲವು ಐಹಿಕ ಬಯಕೆಗಳ ಈಡೇರುವಿಕೆಗಾಗಿ ದೇವರ ಬಳಿಗೆ ಬರುವ ಜನರು. ಆ ಸಮಯದಲ್ಲಿ ಅವರು ಮಹಾನ್ ಭಕ್ತಿಯನ್ನು ತೋರಿಸುತ್ತಾರೆ.

ಪರೀಕ್ಷೆಯ ಸಮಯದಲ್ಲಿ, ಎಲ್ಲಾ ವಿದ್ಯಾರ್ಥಿಗಳು ದಿನವೂ ದೇವಸ್ಥಾನಗಳಿಗೆ ಹೋಗುತ್ತಿರುತ್ತಾರೆ (ಒಳ್ಳೆಯ ಫಲಿತಾಂಶಗಳಿಗಾಗಿ ಪ್ರಾರ್ಥನೆ ಮಾಡಲು). ಒಮ್ಮೆ ಪರೀಕ್ಷೆಗಳು ಮುಗಿದರೆ, ದೇವಸ್ಥಾನ ಎಲ್ಲಿರುವುದೆಂಬುದನ್ನು ಅವರು ಮರೆತುಬಿಡುತ್ತಾರೆ. ನಂತರ ಅವರಿಗೆ ಕಾಣಿಸುವುದೆಲ್ಲವೂ ಚಲನಚಿತ್ರ ಮಂದಿರಗಳು ಮಾತ್ರ! (ನಗು) ಅಂತಹ ಜನರು ಸ್ವಾರ್ಥಪರರು ಮತ್ತು ಒಂದು ಉದ್ದೇಶಕ್ಕಾಗಿ ಮಾತ್ರ ಬರುತ್ತಾರೆ.

ಜಿಜ್ಞಾಸುವು ಕೂಡಾ ದೇವರ ಕಡೆಗೆ ತಿರುಗುವುದು, ತನ್ನದೇ ಆದ ಅನ್ವೇಷಣೆಯನ್ನು (ಜ್ಞಾನದ ಬಗೆಗಿನ) ಪೂರ್ಣಗೊಳಿಸಲು. ಜಿಜ್ಞಾಸುವು ಕೂಡಾ ತನ್ನ ಮೇಲೆಯೇ ಕೇಂದ್ರೀಕೃತನಾಗಿರುತ್ತಾನೆ, ಅದಕ್ಕಾಗಿಯೇ ದೇವರ ಕಡೆಗಿರುವ ಅವನ ಭಕ್ತಿಯಲ್ಲಿ ಕೂಡಾ ಏನೋ ಒಂದು ಕೊರತೆಯಿರುತ್ತದೆ.

ಆದರೆ ಜ್ಞಾನಿಯ ವಿಷಯದಲ್ಲಿ ಹೀಗಲ್ಲ. ಜ್ಞಾನಿಯಾಗಿರುವವನೊಬ್ಬನು ತೃಪ್ತನಾಗಿರುತ್ತಾನೆ ಮತ್ತು ಯಾವತ್ತೂ ತೃಪ್ತನಾಗಿರುವಂತಹ ಒಬ್ಬ ವ್ಯಕ್ತಿಯ ಭಕ್ತಿಯು ಸ್ಥಿರವಾಗಿ, ಅನನ್ಯವಾಗಿ ಹಾಗೂ ಏಕ ಗುರಿ ಹೊಂದಿರುತ್ತದೆ. ಅವನಿಗೆ ಈಡೇರಿಸಬೇಕಾಗಿರುವ ಕೆಲವು ಬಯಕೆಗಳು ಇದ್ದರೂ ಅಥವಾ ಇಲ್ಲದಿದ್ದರೂ, ಅವನ ಭಕ್ತಿಯು ಬದಲಾಗುವುದಿಲ್ಲ, ಅದು ಹಾಗೆಯೇ ಇರುತ್ತದೆ. ಆನಂದವಿರಲಿ ಅಥವಾ ದುಃಖವಿರಲಿ, ದೇವರ ಕಡೆಗಿರುವ ಅವನ ಭಕ್ತಿಯು ಹಾಗೆಯೇ ಇರುತ್ತದೆ. ಅವನು ಏನನ್ನಾದರೂ ಗಳಿಸಲಿ ಅಥವಾ ಏನನ್ನಾದರೂ ಗಳಿಸದೇ ಇರಲಿ, ಅವನ ಭಕ್ತಿಯು ಅಪ್ರಭಾವಿತವಾಗಿ ಉಳಿಯುತ್ತದೆ.

ಹಾಗಾಗಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಅಂತಹ ಜ್ಞಾನಿಯು ಯಾವತ್ತೂ ನನ್ನೊಂದಿಗೆ ಸಂಬಂಧ ಹೊಂದಿರುತ್ತಾನೆ ಮತ್ತು ನಾನು ಯಾವತ್ತೂ ಅವನೊಂದಿಗೆ ಜೋಡಿಕೊಂಡಿರುತ್ತೇನೆ. ಯಾರು ಯಾವತ್ತೂ ನನ್ನೊಂದಿಗೆ ಜೋಡಿಕೊಂಡಿರುವನೋ, ಅವನು ನಿಜವಾಗಿಯೂ ಜ್ಞಾನಿಯು ಮತ್ತು ಅಂತಹ ಒಬ್ಬ ಜ್ಞಾನಿಯ ಭಕ್ತಿಯು ಯಾವಾಗಲೂ ಸ್ಥಿರವಾಗಿಯೂ, ಏಕ ಗುರಿಯನ್ನು ಹೊಂದಿಯೂ ಇರುತ್ತದೆ. ಅಂತಹ ಒಬ್ಬ ಜ್ಞಾನಿಯು ನನಗೆ ಬಹಳ ಪ್ರಿಯನು ಮತ್ತು ನಾನು ಅವನಿಗೆ ಅತಿ ಪ್ರಿಯನು. ನಾನಲ್ಲದೆ ಬೇರೆ ಯಾವುದರಲ್ಲೂ ಅವನಿಗೆ ಆಸಕ್ತಿಯಿರುವುದಿಲ್ಲ. ಅವನಿಗೆ, ನಾನೇ ಎಲ್ಲವೂ. ಒಬ್ಬರಿಗೆ ನಾನು ಅಷ್ಟೊಂದು ಪ್ರಿಯವಾಗಿರುವಾಗ, ಅವರು ಕೂಡಾ ನನಗೆ ಅತ್ಯಂತ ಪ್ರಿಯರಾಗುತ್ತಾರೆ.’

’ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಂ I
ಅಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಂ II’  (೭.೧೮)

ಅವನನ್ನುತ್ತಾನೆ, ’ಇದರರ್ಥ ಇತರ ಜನರು ಒಳ್ಳೆಯವರಲ್ಲವೆಂದಲ್ಲ. ಇಲ್ಲ, ಅವರೆಲ್ಲರೂ ಒಳ್ಳೆಯವರು ಮತ್ತು ಮನುಷ್ಯರಲ್ಲಿ ಅವರು ಅತ್ಯುತ್ತಮರು. ಒಬ್ಬರು ನನ್ನ ಬಳಿಗೆ ದುಃಖಿತರಾಗಿ ಬರುತ್ತಾರೋ ಅಥವಾ ಪ್ರಾಪಂಚಿಕ ಬಯಕೆಗಳ ಈಡೇರುವಿಕೆಗಾಗಿ ಬರುತ್ತಾರೋ ಅಥವಾ ಅನ್ವೇಷಕ ಪ್ರವೃತ್ತಿಯಿಂದಲಾದರೂ ಬರುತ್ತಾರೋ, ಅವರೆಲ್ಲರೂ ಅತ್ಯುತ್ತಮರು ಮತ್ತು ಅತ್ಯಂತ ಗುಣವಂತರು. ಅವರು ಅಯೋಗ್ಯರೆಂದು ಯೋಚಿಸಬೇಡ.’

ಸಾಧಾರಣವಾಗಿ, ಒಬ್ಬರನ್ನು ನಾವು ಶ್ರೇಷ್ಠರೆಂದು ಪರಿಗಣಿಸುವಾಗ, ಇತರೆಲ್ಲರನ್ನೂ ನಾವು ನಿರರ್ಥಕರೆಂದು ಪರಿಗಣಿಸುತ್ತೇವೆ. ಕ್ರಮೇಣವಾಗಿ ನಮಗೆ ಇದೊಂದು ಅಭ್ಯಾಸವಾಗಿಬಿಡುತ್ತದೆ. ಒಬ್ಬರು ಒಳ್ಳೆಯವರಾಗಿದ್ದರೆ, ಆಗ ಇತರರು ಕೆಟ್ಟವರಾಗಿರಲೇಬೇಕು. ಅದಕ್ಕಾಗಿಯೇ ಕೃಷ್ಣ ಪರಮಾತ್ಮನು ಕೂಡಲೇ ಸೇರಿಸುತ್ತಾನೆ, ’ಈ ಎಲ್ಲಾ ನಾಲ್ಕು ವಿಧದ ಜನರು ಶ್ರೇಷ್ಠರು. ಆದುದರಿಂದ ಅವರಲ್ಲಿ ಯಾರನ್ನೂ ಟೀಕಿಸಬೇಡ. ಅವರಲ್ಲಿ ಯಾರನ್ನೂ ಇನ್ನೊಬ್ಬರಿಗಿಂತ ಕಡಿಮೆಯೆಂದು ಯೋಚಿಸಬೇಡ. ಒಬ್ಬ ಭಕ್ತನು ಹೇಗೆಯೇ ಇರಲಿ ಪರವಾಗಿಲ್ಲ, ಅವನು ದುಃಖದಿಂದಾಗಿ ಭಕ್ತನಾಗಿರಲಿ ಅಥವಾ ಅವನ ಪ್ರಾಪಂಚಿಕ ಸುಖಗಳ ಪೂರೈಸುವಿಕೆಗಾಗಿರಲಿ ಅಥವಾ ಜ್ಞಾನದ ಅನ್ವೇಷಣೆಗಾಗಿರಲಿ, ಎಲ್ಲರೂ ಶ್ರೇಷ್ಠರು. ಆದರೆ ನನ್ನ ಮತ್ತು ಜ್ಞಾನಿಯ ನಡುವೆ ಯಾವುದೇ ಭೇದವಿಲ್ಲ. ಅವನು ಮತ್ತು ನಾನು ಒಂದೇ ಆಗಿರುವೆವು. ಅಂತಹ ಒಬ್ಬ ಜ್ಞಾನಿಯು, ನನ್ನೊಂದಿಗೆ ಐಕ್ಯವಾಗುವ ಸದ್ಗತಿಯನ್ನು ಪಡೆಯುತ್ತಾನೆ.’

ದೇವರು, ಗುರು ಮತ್ತು ಆತ್ಮನ ನಡುವೆ ಯಾವುದೇ ಭೇದವಿಲ್ಲ. ಆದುದರಿಂದ ವಾಸುದೇವ (ಕೃಷ್ಣ ಪರಮಾತ್ಮನಿಗಿರುವ ಇನ್ನೊಂದು ಹೆಸರು) ಮತ್ತು ಒಬ್ಬ ಜ್ಞಾನಿಯ ನಡುವೆ ಯಾವುದೇ ಭೇದವಿಲ್ಲ.

ಪರಮಾತ್ಮ ಕೃಷ್ಣನು, ’ಒಬ್ಬ ಜ್ಞಾನಿಯು ಒಂದು ಕನ್ನಡಿಯಂತೆ. ಒಬ್ಬ ಜ್ಞಾನಿಯಲ್ಲಿ ನೀವು ನಿಮ್ಮದೇ ಮನಸ್ಸಿನ ಪ್ರತಿಬಿಂಬವನ್ನು ಸ್ಪಷ್ಟವಾಗಿ ನೋಡಬಹುದು. ಒಬ್ಬ ಜ್ಞಾನಿಯಲ್ಲಿ ನಿಮ್ಮ ನಿಜವಾದ ಆತ್ಮವು ಪ್ರತಿಬಿಂಬಿಸುವುದನ್ನು ನೀವು ಕಾಣಬಹುದು. ಆದುದರಿಂದ ಒಬ್ಬ ಜ್ಞಾನಿಯಲ್ಲಿ ನನ್ನನ್ನು ನೋಡಲು ಜ್ಞಾಪಿಸಿಕೋ ಮತ್ತು ಅವನು ನಾನೇ ಆಗಿರುವೆನು ಎಂಬುದನ್ನು ತಿಳಿ.’

’ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ I
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ II’  (೭.೧೯)

ಹಲವು ಜನ್ಮಗಳ ಮೂಲಕ ಹಾದುಹೋದ ನಂತರ, ಒಬ್ಬನು ಜ್ಞಾನಿಯಾಗುವನು. ನನ್ನನ್ನು ನಂಬುವ ಅಂತಹ ಜ್ಞಾನಿ ಆತ್ಮಗಳು ಹಲವಾರು ಜನ್ಮಗಳ ಬಳಿಕ ನನ್ನ ಬಳಿಗೆ ಬರುತ್ತವೆ (ಅಂದರೆ ಹುಟ್ಟು ಸಾವಿನ ಚಕ್ರದ ಮೂಲಕ ಹಲವಾರು ಸಲ ಹಾದುಹೋದ ಬಳಿಕ). ಎಲ್ಲವೂ ನನ್ನದೇ ಆವಿರ್ಭಾವ ಮಾತ್ರ, ಬೇರೇನೂ ಅಲ್ಲ ಎಂಬುದನು ತಿಳಿದಿರುವ ಹಾಗೂ ಅದನ್ನು ನಂಬುವ ಅಂತಹ ಮಹಾತ್ಮರು ನಿಜಕ್ಕೂ ಬಹಳ ಅಪರೂಪ.’

ನಿಮ್ಮಲ್ಲಿ ಹಲವರು ಯೋಚಿಸುತ್ತಿರಬೇಕು, ’ಇದನ್ನು (ಸತ್ಯವನ್ನು) ಅರ್ಥಮಾಡಿಕೊಳ್ಳಲು ನಾನು ಇನ್ನೂ ಎಷ್ಟು ಸಲ ಜನ್ಮ ತಾಳಬೇಕೇನೋ’ ಎಂದು. ನಾನು ನಿಮಗೆ ಹೇಳುತ್ತೇನೆ ಕೇಳಿ, ಈ ಜ್ಞಾನವನ್ನು ಕೇಳಿಸಿಕೊಳ್ಳಲು ಇಲ್ಲಿಗೆ ಬಂದಿರುವುದಕ್ಕೆ ಕೂಡಾ ನೀವು ಈಗಾಗಲೇ ಹಲವಾರು ಜನ್ಮಗಳ ಮೂಲಕ ಹಾದುಹೋಗಿರುವಿರಿ. ನೀವು ಈಗಾಗಲೇ ಹಲವಾರು ಜನ್ಮಗಳ ಮೂಲಕ ಹಾದುಹೋಗಿರುವಿರಿ ಮತ್ತು ನೀವು ಸರಿಯಾದ ಸಮಯದಲ್ಲಿ ಇಲ್ಲಿರುವಿರಿ ಎಂಬುದನ್ನು ಮಾತ್ರ ತಿಳಿದುಕೊಳ್ಳಿ. ಅದರ ವಿರುದ್ಧವಾಗಿ ಯೋಚಿಸಬೇಡಿ, ’ಈ ಜ್ಞಾನವನ್ನು ಪಡೆದುಕೊಳ್ಳಲು ನಾನು ಇನ್ನೂ ಎಷ್ಟು ಜನ್ಮಗಳನ್ನು ತಾಳಬೇಕಾಗಬಹುದೆಂಬುದು ಯಾರಿಗೆ ಗೊತ್ತು?’

ಇದರ ಬಗ್ಗೆಯಿರುವ ನಿಮ್ಮ ಗ್ರಹಿಕೆಯನ್ನು ಈ ಕೂಡಲೇ ಬದಲಾಯಿಸಿಕೊಳ್ಳಿ.

ಯಾವುದರ ಬಗ್ಗೆಯಾದರೂ ನಮಗಿರುವ ಗ್ರಹಿಕೆಯನ್ನು ನಾವು ಯಾವ ಸಮಯದಲ್ಲಿ ಬೇಕಾದರೂ ಬದಲಾಯಿಸಬಹುದು. ದೇವರನ್ನು ಅರಿಯಲು ಕೂಡಾ ಇಷ್ಟನ್ನೇ ನಾವು ಮಾಡಬೇಕಾಗಿರುವುದು; ನಾವು ವಿಷಯಗಳನ್ನು ನೋಡುವ ರೀತಿಯನ್ನು ಬದಲಾಯಿಸಬೇಕು, ಅಷ್ಟೇ. ನೀವು ಬೇರೇನನ್ನೂ ಮಾಡಬೇಕಾಗಿಲ್ಲ.

ನಿಮಗೆ ದೇವರನ್ನು ಪ್ರಯತ್ನದ ಮೂಲಕ ಅರಿಯಲು ಸಾಧ್ಯವಿಲ್ಲ. ಪ್ರಯತ್ನಗಳ ಮೂಲಕ ಆತ್ಮ ತತ್ವವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ, ನೀವು ಸುಮ್ಮನೆ ವಿಶ್ರಾಮ ಮಾಡಬೇಕು ಮತ್ತು ಬಿಟ್ಟುಬಿಡುವುದು ಹೇಗೆಂಬುದನ್ನು ತಿಳಿಯಬೇಕು.
ಈಗ, ನಿಮ್ಮ ಮನಸ್ಸು ಅಷ್ಟೊಂದು ಸುಂದರವಾದ ವಸ್ತುಗಳಿಗೆ ಆಕರ್ಷಿತವಾಗಿರುವಾಗ, ನೀವು ಬಿಟ್ಟುಬಿಡುವುದು ಹೇಗೆ?

ಹಲವು ಸಲ, ನೀವು ನಿಮ್ಮ ದುರಭ್ಯಾಸಗಳನ್ನು ಬಿಟ್ಟುಬಿಡಲು ಬಯಸುತ್ತೀರಿ, ಆದರೆ ನಿಮಗೆ ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ನಿಮಗೆ ನೋವು ಮತ್ತು ದುಃಖವನ್ನು ತರುವ ಕೆಟ್ಟ ವಿಷಯಗಳನ್ನು ಬಿಟ್ಟುಬಿಡಲು ನಿಮಗೆ ಸಾಧ್ಯವಾಗದೇ ಇರುವಾಗ, ನಿಮ್ಮನ್ನು ಆಕರ್ಷಿಸುವ ಒಳ್ಳೆಯ ವಿಷಯಗಳನ್ನು ನೀವು ಹೇಗೆ ಬಿಟ್ಟುಬಿಡುವಿರಿ? ದುಃಖವನ್ನು ತರುವ ವಿಷಯಗಳನ್ನು, ಹಾಗೆಯೇ ಸುಖ ನೀಡುವ ವಿಷಯಗಳನ್ನು ಬಿಟ್ಟುಬಿಡಲು ನಿಮಗೆ ಅಸಾಧ್ಯವಾದಾಗ, ನಿಮ್ಮ ಮನಸ್ಸು ಅಸ್ಥಿರವಾಗಿರುತ್ತದೆ. ಅದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೇಳುವುದು,

’ಬಲಂ ಬಲವತಾಂ ಚಾಹಂ ಕಾಮ ರಾಗ ವಿವರ್ಜಿತಂ.’  (೭.೧೧)

ಎಲ್ಲಿಯೇ ನೀನು ಬಲವನ್ನು ನೋಡಿದರೂ, ಅದು ನಾನೆಂಬುದನ್ನು ತಿಳಿ. ಬಲಶಾಲಿಗಳಲ್ಲಿರುವ ಬಲವು ನಾನಾಗಿರುವೆನು. ಎಲ್ಲೆಲ್ಲಾ ನೀನು ತೇಜಸ್ಸನ್ನು ನೋಡುವೆಯೋ, ಆ ತೇಜಸ್ಸು ನಾನಾಗಿರುವೆನು ಎಂಬುದನ್ನು ತಿಳಿ. ಒಬ್ಬರು ಸುಂದರವಾಗಿರುವವರು ನಿನಗೆ ಕಾಣಿಸಿದರೆ, ಆ ಸೌಂದರ್ಯ ಕೂಡಾ ನಾನು ಎಂಬುದನ್ನು ತಿಳಿ. ನೀನೊಬ್ಬ ಬುದ್ಧಿವಂತ ವ್ಯಕ್ತಿಯನ್ನು ನೋಡಿದರೆ, ಆ ಬುದ್ಧಿಶಕ್ತಿಯು ನಾನಾಗಿರುವೆನು ಎಂಬುದನ್ನು ತಿಳಿ.’

ಸೌಂದರ್ಯವೆಂದರೆ, ಯಾವುದನ್ನು ನಿಮಗೆ ತ್ಯಜಿಸಲೂ ಆಗದೋ ಮತ್ತು ಯಾವುದನ್ನು ನಿಮಗೆ ನಿಮ್ಮದಾಗಿಸಿಕೊಳ್ಳಲೂ ಆಗದೋ ಅದು. ನೀವದನ್ನು ಸ್ವಂತದ್ದಾಗಿಸಲು ಪ್ರಯತ್ನಿಸಿದರೆ, ನಿಮಗದು ಸಾಧ್ಯವಾಗದು. ಅದು ಅಸಾಧ್ಯ. ನಿಜವಾಗಿ, ನಾವು ಸೌಂದರ್ಯವನ್ನು ಸ್ವಂತದ್ದಾಗಿಸಲು ಪ್ರಯತ್ನಿಸಿದಾಗ, ಅದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಹಾಗಾಗಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಹಲವು ಜನ್ಮಗಳ ಬಳಿಕ, ಜ್ಞಾನಿಗಳು ನನ್ನ ಬಳಿಗೆ ಬರುತ್ತಾರೆ ಮತ್ತು ನನ್ನ ಆಶ್ರಯವನ್ನು ಹುಡುಕುತ್ತಾರೆ.’

ಜ್ಞಾನಿಗಳಲ್ಲಿ ಹಲವಾರು ಹಂತಗಳಿವೆ. ಹಲವು ಸಾರಿ, ಕೆಲವು ಜ್ಞಾನಿಗಳು ಅಹಂಕಾರವನ್ನು ಬೆಳೆಸಿಕೊಳ್ಳುತ್ತಾರೆ, ಅದು ಅವರ ಅವನತಿಗೆ ಕಾರಣವಾಗುತ್ತದೆ. ಅವರು ಯೋಚಿಸುತ್ತಾರೆ, ’ನಾನು ಅತ್ಯಂತ ಹೆಚ್ಚು ತಿಳುವಳಿಕೆಯುಳ್ಳವನು. ನನಗೆ ಬೇರೆ ಯಾರಿಗಿಂತಲೂ ಹೆಚ್ಚು ತಿಳಿದಿದೆ’ ಎಂದು. ಅಂತಹ ಜನರು ಒಂದು ಅಲ್ಪಾವಧಿಯವರೆಗೆ ಮಾತ್ರ ಜ್ಞಾನಿಗಳಾಗಿ ತೋರುತ್ತಾರೆ, ಆದರೆ ಬಹಳ ಬೇಗನೇ ಅವರು ಅಜ್ಞಾನದಲ್ಲಿ ಮುಳುಗುತ್ತಾರೆ.  

’ನಾನು ಬಹಳ ಜ್ಞಾನಿ’ ಎಂಬ ಈ ಯೋಚನೆಯೇ ಅಹಂಕಾರವನ್ನು ಹುಟ್ಟಿಸುತ್ತದೆ. ಇದು ದುರಹಂಕಾರವೆಂದು ಕರೆಯಲ್ಪಡುತ್ತದೆ ಮತ್ತು ಒಬ್ಬನು ಬಹಳ ಜ್ಞಾನಿಯಾಗಿರುವುದರ ಬಗ್ಗೆ ದುರಹಂಕಾರಿಯಾದಾಗ, ನಂತರ ಅದರಿಂದ ಹೊರಬರಲು ಬಹಳ ಕಷ್ಟವಾಗುತ್ತದೆ. ಅಂತಹ ಒಂದು ಮನೋಭಾವವು ಸಾಮಾನ್ಯವಾಗಿ ವಿಜ್ಞಾನಿಗಳು ಮತ್ತು ಪ್ರಾಜ್ಞ ತಜ್ಞರಲ್ಲಿ ಕಂಡುಬರುತ್ತದೆ. ಅಂತಹ ಜನರು ಜ್ಞಾನದ ಒಂದು ನಿರ್ದಿಷ್ಟ ಹಂತವನ್ನು ತಲಪುವಾಗ, ತಮಗೆಲ್ಲವೂ ತಿಳಿದಿದೆಯೆಂದು ಅವರು ಅಂದುಕೊಳ್ಳುತ್ತಾರೆ ಮತ್ತು ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಭಕ್ತನೂ ಅಗಿರುವ ಒಬ್ಬ ಜ್ಞಾನಿಯು; ಯಾರು ನನ್ನನ್ನು ಸಂಪೂರ್ಣವಾಗಿ ನಂಬುವನೋ ಮತ್ತು ಈ ಸೃಷ್ಟಿಯಲ್ಲಿ ಎಲ್ಲದರಲ್ಲೂ ನನ್ನನ್ನು ನೋಡುವನೋ ಅವನು ಒಬ್ಬ ಮಹಾತ್ಮನಾಗಿರುವನು.’

ಒಬ್ಬ ಜ್ಞಾನಿ ಮತ್ತು ಒಬ್ಬ ಮಹಾತ್ಮನ ನಡುವೆ ಇರುವ ವ್ಯತ್ಯಾಸ ಇದಾಗಿದೆ.

ಮಹತ್ ತತ್ವವನ್ನು (ಅಹಂಗಿಂತಲೂ ಸೂಕ್ಷ್ಮವೆಂದು ಹೇಳಲ್ಪಡುವ ಒಂದು ತತ್ವ) ಮೀರಿರುವನೊಬ್ಬನು ಮಹಾತ್ಮನಾಗಿರುವನು. ಎಂಟು ರೀತಿಯ ಪ್ರಕೃತಿಗಳಂತೆಯೇ; ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂ; ಮಹತ್ ತತ್ವವು ಅಹಂಗಿಂತಲೂ ಆಚಿನದಾಗಿದೆ ಮತ್ತು ಅದು ಬಹಳ ಸೂಕ್ಷ್ಮವಾಗಿದೆ.

ಅಹಂನ್ನು ದಾಟಿ ಮಹತ್ ತತ್ವವನ್ನು ಅನುಭವಿಸಿರುವ ಒಬ್ಬನು ಮಾಹಾತ್ಮನೆಂದು ಕರೆಯಲ್ಪಡುತ್ತಾನೆ. ಬುದ್ಧಿ ಮತ್ತು ಜ್ಞಾನದ ನಡುವೆ ಇರುವ ವ್ಯತ್ಯಾಸವೆಂದರೆ ಇದು. ಜ್ಞಾನವು ಬುದ್ಧಿಯಿಂದ ಹುಟ್ಟುತ್ತದೆ, ಆದರೆ ಅದು ಅಹಂನೊಂದಿಗೆ ಮಿಶ್ರವಾಗುವಾಗ ಅದು ಅಜ್ಞಾನವಾಗಿ ಮಾರ್ಪಡುತ್ತದೆ. ಅಂತಹ ಒಬ್ಬ ವ್ಯಕ್ತಿಯು ಬೀಳಲು ತೊಡಗುತ್ತಾನೆ. ಅತ್ಯಂತ ಹೆಚ್ಚಿನ ನಾಶವನ್ನುಂಟುಮಾಡುವುದು ಮತ್ತು ಒಬ್ಬ ಜ್ಞಾನಿಯನ್ನು ಕೆಳಕ್ಕೆ ತರುವುದು (ಅಜ್ಞಾನಕ್ಕೆ) ಯಾವುದೆಂದರೆ, ಅದು ಜ್ಞಾನದ ಬಗೆಗಿನ ಅಹಂಕಾರ.

ಈಗ, ಅಂತಹ ಒಂದು ಅಹಂಕಾರವನ್ನು ಮೀರಿ ಯಾರು ಹೋಗಬಲ್ಲರು? ಕೇವಲ ಒಬ್ಬ ಭಕ್ತ ಮಾತ್ರ ಅದನ್ನು ಮೀರಿ ಹೋಗಬಲ್ಲನು. ಒಬ್ಬ ಭಕ್ತನಾಗಿರುವುದೆಂದರೆ, ವಿನಮ್ರನಾಗಿ, ಸರಳವಾಗಿ ಮತ್ತು ಸಹಜವಾಗಿರುವುದು. ಒಬ್ಬ ಮೂರ್ಖನಿಂದ ಕೂಡಾ ಕಲಿಯಲು ಸಿದ್ಧನಿರುವ, ಒಂದು ಮಗುವಿನಿಂದ ಅಥವಾ ಸ್ತ್ರೀಯಿಂದ ಅಥವಾ ಒಬ್ಬ ಪುರುಷನಿಂದ ಕಲಿಯಲು ಸಿದ್ಧನಿರುವ; ಅವನು ಎಲ್ಲದರಲ್ಲೂ ದೇವರನ್ನು ಕಾಣುವುದರಿಂದ ಯಾವುದೇ ಮೂಲದಿಂದಲಾದರೂ ಜ್ಞಾನವನ್ನು ಪಡೆಯಲು ಸಿದ್ಧನಿರುವ ಒಬ್ಬ ಭಕ್ತನು ಸಿಗುವುದು ಬಹಳ ಅಪರೂಪ.  ಎಲ್ಲದರಲ್ಲೂ ದೇವರನ್ನು ಕಾಣುವ ಒಬ್ಬ ಮಹಾತ್ಮ ಸಿಗುವುದು ಕಷ್ಟ.
ಶಪಿಸುವ ಒಬ್ಬನಲ್ಲಿ ಮತ್ತು ಹಾಗೆಯೇ ಹೊಗಳುವ ಒಬ್ಬನಲ್ಲಿ ಕೂಡಾ ವಾಸುದೇವನನ್ನು ನೋಡುವವನು; ಅಂತರಾತ್ಮವನ್ನು ಗುರುತಿಸುವ ಸಾಮರ್ಥ್ಯವುಳ್ಳ (ಬಾಹ್ಯ ರೂಪ ಮತ್ತು ಹಾವಭಾವಗಳಿಂದ ತಪ್ಪು ಅಭಿಪ್ರಾಯ ಹೊಂದುವ ಬದಲು) ಅಂತಹ ಒಬ್ಬ ಜ್ಞಾನಿಯು ಸಿಗುವುದು ಬಹಳ ವಿರಳ.

ಇದರರ್ಥ ನೀವು ಮಕ್ಕಳ ಕಾಲಿಗೆ ಬಿದ್ದು ಅವರನ್ನು, ’ವಾಸುದೇವ! ವಾಸುದೇವ!’ ಎಂದು ಕರೆಯಬೇಕೆಂದಲ್ಲ. ನೀವು ಅವರನ್ನು ಹೆದರಿಸಿ ದೂರ ಓಡಿಸುವಿರಿ. ನೀವು ಬಹಳ ಸಾಮಾನ್ಯವಾಗಿ ವರ್ತಿಸಬೇಕು, ಆದರೆ ಒಳಗಡೆಯಿಂದ, ಎಲ್ಲವೂ ಒಂದು ದೈವಿಕತೆಯಿಂದ ಬಂದಿದೆಯೆಂಬ ಈ ಆಳವಾದ ಅರಿವು ನಿಮ್ಮಲ್ಲಿರಬೇಕು.

ಒಂದು ಚಲನಚಿತ್ರದಲ್ಲಿರುವ ನಾಯಕ ಮತ್ತು ಖಳನಾಯಕ ಇಬ್ಬರೂ ಒಂದೇ (ಅಂದರೆ ಅವರು ಒಂದು ಚೇತನದಿಂದ ಬಂದಿರುವರು). ನೀವು ಪರದೆಯ ಮೇಲೆ ನೋಡುವ ಪೂರ್ತಿ ಚಲನಚಿತ್ರದುದ್ದಕ್ಕೂ ಎಲ್ಲವನ್ನೂ ಪ್ರದರ್ಶಿಸುವುದು ಕೇವಲ ಒಂದೇ ಬೆಳಕು. ಆದುದರಿಂದ ನಿಮ್ಮ ಗಮನವು, ಚಲನಚಿತ್ರದ ಈ ಎಲ್ಲಾ ಪಾತ್ರಗಳನ್ನು ಬಿಂಬಿಸುವ ಬೆಳಕಿನ ಮೇಲಿರಬೇಕು ಮತ್ತು ಚಲನಚಿತ್ರ ಹಾಗೂ ಅದರ ಪಾತ್ರಗಳಲ್ಲಿ ಕಳೆದುಹೋಗಬಾರದು.

ಆ ಬೆಳಕೇ ವಾಸುದೇವ; ಎಲ್ಲವೂ ಯಾವುದರಿಂದ ಬಂದಿರುವುದೋ ಮತ್ತು ಯಾವುದರ ಮೂಲಕ ಎಲ್ಲವೂ ಕೆಲಸ ಮಾಡುವುದೋ ಆ ಒಂದು ಶುದ್ಧ ಚೇತನ. ಎಲ್ಲವೂ ಈ ಒಂದು ಚೇತನದ ಒಂದು ಆಟ ಮಾತ್ರವಾಗಿದೆ ಮತ್ತು ನೀವು ಅದೇ ಆಗಿರುವಿರಿ.

ಹೀಗಾಗಿ, ನೀವು ಒಂದು ನಾಟಕದಲ್ಲಿ ಹೇಗೆ ಭಾಗವಹಿಸುವಿರೋ; ಎಲ್ಲಿ ಪ್ರತಿಯೊಬ್ಬರಿಗೂ ನಿರ್ವಹಿಸಲು ತಮ್ಮ ಪಾತ್ರವಿರುವುದೋ; ಹಾಗೆಯೇ ನೀವು ಕೂಡಾ ನಿಮಗೆ ನೀಡಲಾಗಿರುವ ಪಾತ್ರವನ್ನು ನಿರ್ವಹಿಸಿ.