ಬುಧವಾರ, ಮೇ 15, 2013

ಪ್ರಸನ್ನ ಚಿತ್ತದಿಂದ ಪ್ರತಿಭಟಿಸಿ

ಬೆಂಗಳೂರು, ಭಾರತ
೧೫ ಮೇ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಯಾರಾದರೂ ನನ್ನನ್ನು ಅವಮಾನ ಮಾಡಿದಾಗ ನಾನದನ್ನು ಸುಮ್ಮನೆ ಪ್ರೀತಿಯ ಒಂದು ಭಾವನೆಯೊಂದಿಗೆ ಸ್ವೀಕರಿಸುತ್ತೇನೆ ಮತ್ತು ನಾನು ಪ್ರತೀಕಾರ ತೆಗೆದುಕೊಳ್ಳುವುದಿಲ್ಲ. ಹೀಗೆ ಮಾಡುವುದರಿಂದ ನಾನು ಯಾವುದಾದರೂ ರೀತಿಯಲ್ಲಿ ಅನ್ಯಾಯವನ್ನು ಪ್ರೋತ್ಸಾಹಿಸುತ್ತಿರುವೆನೇ?

ಶ್ರೀ ಶ್ರೀ ರವಿ ಶಂಕರ್: ಹೌದು, ನಾವು ಅನ್ಯಾಯವನ್ನು ಯಾವತ್ತೂ ಬೆಂಬಲಿಸಬಾರದು. ನೀನವರನ್ನು ಒಮ್ಮೆ ಅಥವಾ ಎರಡು ಸಾರಿ ಕ್ಷಮಿಸಬಹುದು. ಆದರೆ ಅವರು ಇದನ್ನು ಪುನರಾವರ್ತಿಸಿದರೆ, ಆಗ ನೀನು ಅವರ ವಿರುದ್ಧ ಎದ್ದುನಿಲ್ಲಬೇಕು ಮತ್ತು ಅವರು ಮಾಡುತ್ತಿರುವುದು ತಪ್ಪೆಂಬುದನ್ನು ಅವರಿಗೆ ತೋರಿಸಬೇಕು ಹಾಗೂ ಅವರನ್ನು ಸರಿಯಾದ ದಾರಿಗೆ ತರಬೇಕು.

ಆದರೆ ನೀನಿದನ್ನು ಪ್ರಸನ್ನತೆಯೊಂದಿಗೆ ಮಾಡಬೇಕು ಮತ್ತು ಅದು ನಿನಗೆ ತೊಂದರೆಯನ್ನುಂಟುಮಾಡುತ್ತಿದೆಯೆಂಬ ಕಾರಣದಿಂದಲ್ಲ. ಏನಾದರೂ ತಪ್ಪನ್ನು ಮಾಡುತ್ತಿರುವವನೊಬ್ಬನು ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಿರುತ್ತಾನೆ ಮತ್ತು ಬೇರೆ ಯಾರಿಗೂ ಅಲ್ಲ. ಆದುದರಿಂದ, ಅವರು ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯ ಮಾಡಲು ನೀನು ಪ್ರಯತ್ನಿಸಬೇಕು.

ಮಕ್ಕಳು ಏನಾದರೂ ತುಂಟತನ ಮಾಡುವಾಗ, ಒಬ್ಬಳು ತಾಯಿಯು ಅವರಿಗೆ ಒಂದು ಅಥವಾ ಎರಡು ಸಲ ಹೊಡೆಯುತ್ತಾಳೆ. ಯಾಕೆ? ಮಗುವು ಅವಳಿಗೆ ಹೊಡೆಯಿತು ಅಥವಾ ಯಾವುದಾದರೂ ವಿಧದಲ್ಲಿ ಅವಮಾನ ಮಾಡಿತು ಎಂಬ ಕಾರಣಕ್ಕಾಗಿಯೇ? ಅಲ್ಲ. ಅದು ಯಾಕೆಂದರೆ, ಮಗುವಿನ ಕೆಟ್ಟ ವರ್ತನೆಯು ಅವನಿಗೆ ಹಾನಿ ಮಾಡಲಿದೆ, ಅದಕ್ಕಾಗಿಯೇ ತಾಯಿಯು ಅವನನ್ನು ಬೈಯುತ್ತಾಳೆ.

ಉದಾಹರಣೆಗೆ, ಒಂದು ಮಗುವು ಒಬ್ಬಳು ತಾಯಿಯ ಮಡಿಲಿನಲ್ಲಿ ಕುಳಿತುಕೊಳ್ಳುತ್ತದೆ, ಆದರೆ ಅದೇ ಸಮಯದಲ್ಲಿ ಅವಳನ್ನು ಒದೆಯುತ್ತದೆ ಕೂಡಾ. ಇದರಿಂದಾಗಿ ತಾಯಿಯು ಯಾವತ್ತಾದರೂ ಕೋಪಗೊಳ್ಳುತ್ತಾಳೆಯೇ? ಇಲ್ಲ. ಬದಲಿಗೆ, ತಾಯಿಗೆ ಸಂತೋಷವಾಗುತ್ತದೆ. ಆದರೆ ಮಗುವು ಏನಾದರೂ ತಪ್ಪು ಮಾಡಿದರೆ ಅಥವಾ ಏನಾದರೂ ತಪ್ಪು ಮಾಡಲು; ಒಂದು ಚಾಕುವಿನೊಂದಿಗೆ ಆಟ ಆಡುವಂತೆ ಹಠಹಿಡಿದರೆ; ಆಗ ತಾಯಿಯು, ಮಗುವು ತನಗೆ ತಾನೇ ಹಾನಿ ಮಾಡದಿರಲೆಂದು ಮಗುವಿಗೆ ಹೊಡೆಯುತ್ತಾಳೆ.

ಹೀಗೆ ನೀವು ಅರ್ಥಮಾಡಿಕೊಳ್ಳಬೇಕಾದುದು.

ಪ್ರಶ್ನೆ: ಗುರುದೇವ, ದೇವರಿಗೆ ಶರಣಾಗತನಾದ ಯಾರೇ ಆದರೂ ಯಾವುದೇ ತಪ್ಪನ್ನು ಮಾಡಲು ಸಾಧ್ಯವಿಲ್ಲವೆಂದು ನಿನ್ನೆ ನೀವು ಹೇಳಿದಿರಿ. ರಾವಣನು ಕೂಡಾ ಭಗವಾನ್ ಶಿವನ ಮಹಾನ್ ಭಕ್ತನಾಗಿದ್ದನು. ಹಾಗಾದರೆ ಅವನು ಹೇಗೆ ಅಂತಹ ಒಂದು ದುಷ್ಕರ್ಮವನ್ನು ಮಾಡಿದನು?

ಶ್ರೀ ಶ್ರೀ ರವಿ ಶಂಕರ್: ಶ್ರೀಲಂಕಾದಲ್ಲಿ ಒಂದು ಭಿನ್ನವಾದ ರಾಮಾಯಣವನ್ನು ಅನುಸರಿಸಲಾಗುತ್ತದೆಯೆಂದು ತೋರುತ್ತದೆ. ಅದರ ಪ್ರಕಾರ, ಒಂದು ದೊಡ್ಡ ತಪ್ಪನ್ನು ಮಾಡಿದುದು ರಾಮ (ಅವರ ವನವಾಸದ ಸಂದರ್ಭದಲ್ಲಿ ತನ್ನ ಪತ್ನಿಯನ್ನು ಕಾಡಿನಲ್ಲಿ ಒಬ್ಬಂಟಿಯಾಗಿ ಬಿಟ್ಟುಹೋದುದು).

ನೋಡು, ಇದು, ನಾವದನ್ನು ಹೇಗೆ ಗ್ರಹಿಕೆ ಮಾಡಿಕೊಳ್ಳುವೆವು ಎಂಬುದರಲ್ಲಿದೆ. ರಾವಣನು ಒಬ್ಬ ಚಕ್ರವರ್ತಿಯಾಗಿದ್ದರೂ ಸೀತೆಯನ್ನು ಯಾಕೆ ಅಪಹರಿಸಿದನು ಎಂಬುದಕ್ಕೆ ಶ್ರೀಲಂಕಾದಲ್ಲಿ ಅವರು ಒಂದು ಸಂಪೂರ್ಣವಾಗಿ ವಿಭಿನ್ನವಾದ ಕಥೆಯನ್ನು ಹೇಳುತ್ತಾರೆ. ರಾವಣನ ಸಹೋದರಿಯು (ಶೂರ್ಪನಖಿ) ಭಗವಾನ್ ರಾಮನ ಕಡೆಗೆ ಆಕರ್ಷಿತಳಾದಳು ಮತ್ತು ಅವನನ್ನು ಪ್ರೇಮಿಸಲು ತೊಡಗಿದಳು. ಅವಳು ಅವನನ್ನು ಸಮೀಪಿಸಿದಾಗ, ಅವಳ ಪ್ರಸ್ತಾಪವನ್ನು ತಿರಸ್ಕರಿಸುವುದರೊಂದಿಗೆ ಅವನು ಅವಳನ್ನು ಅವಮಾನಗೊಳಿಸಿದನು. ಅಷ್ಟೇ ಅಲ್ಲ, ಮತ್ತಷ್ಟು ಮುಂದುವರಿಯುವುದರಿಂದ ಅವಳನ್ನು ನಿರುತ್ಸಾಹಗೊಳಿಸಲು ಲಕ್ಷ್ಮಣನು ಕೂಡಾ ಅವಳ ಮೂಗನ್ನು ಕತ್ತರಿಸಿದನು. ಈಗ, ತನ್ನ ಸಹೋದರಿಯ ಮೂಗನ್ನು ಕತ್ತರಿಸಿದ ಒಬ್ಬನನ್ನು ಒಬ್ಬ ಚಕ್ರವರ್ತಿಯು ಕ್ಷಮಿಸುವನೇ? ಯಾವುದೇ ಚಕ್ರವರ್ತಿಯಾಗಲೀ ಅಥವಾ ಹಾಗೆ ಹೇಳುವುದಾದರೆ ಯಾವುದೇ ಮನುಷ್ಯನಾಗಲೀ, ತನ್ನ ಸ್ವಂತ ಸಹೋದರಿಯನ್ನು ಪೀಡಿಸುವ ಮತ್ತು ಹಾನಿಯನ್ನುಂಟುಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಕ್ಷಮಿಸಲಾರನು. ಯಾವುದೇ ವ್ಯಕ್ತಿಯಾದರೂ ಇದನ್ನು ಸಹಿಸುವನೇ? ಇಲ್ಲ, ಯಾಕೆಂದರೆ ಅಂತಹ ಒಂದು ಸಂಗತಿಯನ್ನು ಸಹಿಸುವುದೇ ಒಂದು ಅಪರಾಧವಾಗುವುದು. ಆದುದರಿಂದ, ತನ್ನ ಸಹೋದರಿಯ ಮೇಲಾದ ಅಗೌರವಕ್ಕೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ರಾವಣನು ಸೀತೆಯನ್ನು ಅಪಹರಿಸಿದನು. ಆದರೆ, ರಾವಣನು ಸೀತೆಯನ್ನು ಬಹಳ ಗೌರವಪೂರ್ವಕವಾಗಿ ಇರಿಸಿದನು ಎಂದು ಕೂಡಾ ಹೇಳಲಾಗಿದೆ.

ಹಾಗೆಯೇ, ರಾವಣನು ಅಷ್ಟೊಂದು ಕೆಟ್ಟ ವ್ಯಕ್ತಿಯಾಗಿದ್ದರೆ, ಭಗವಾನ್ ರಾಮನು ರಾಮೇಶ್ವರಂನಲ್ಲಿ ಮಾಡಿದ ಪೂಜೆಗೆ ಅರ್ಚಕನಾಗಲು ಅವನು ಸಮ್ಮತಿಸುತ್ತಿರಲಿಲ್ಲ. ನಿಮಗೆಲ್ಲರಿಗೂ ಈ ಕಥೆ ಗೊತ್ತಿದೆಯಾ?

ರಾವಣನ ವಿರುದ್ಧದ ಯುದ್ಧದಲ್ಲಿ ವಿಜಯಶಾಲಿಯಾಗಲು ಭಗವಾನ್ ರಾಮನು ಬಯಸಿದ್ದನು ಮತ್ತು ಅದಕ್ಕಾಗಿ ಅವನು ಶಿವಲಿಂಗವನ್ನು ಸ್ಥಾಪಿಸಿ ಅದನ್ನು ಪೂಜಿಸಲು ಬಯಸಿದನು. ಈಗ ಇದನ್ನು ಮಾಡಲು ಒಬ್ಬನು ಅರ್ಚಕ ಬೇಕಾಗಿದ್ದನು. ಆದರೆ ಆ ದಿನಗಳಲ್ಲಿ ರಾಮೇಶ್ವರಂನಲ್ಲಿ ಯಾವುದೇ ಅರ್ಚಕರು ಸಿಗುತ್ತಿರಲಿಲ್ಲ. ಆದುದರಿಂದ ಶಾಸ್ತ್ರಗಳನ್ನು ನೆರವೇರಿಸಲು ಭಗವಾನ್ ರಾಮನಿಗೆ ಒಬ್ಬ ಒಳ್ಳೆಯ ಅರ್ಚಕನ ಅತ್ಯಾವಶ್ಯಕತೆಯಿತ್ತು.

ರಾವಣನು ಭಗವಾನ್ ಶಿವನ ಒಬ್ಬ ಪರಮ ಭಕ್ತನಾಗಿದ್ದನು ಮತ್ತು ಜನ್ಮದಿಂದ ಒಬ್ಬ ಬ್ರಾಹ್ಮಣನೂ ಆಗಿದ್ದನು. ರಾವಣನ ಸಹೋದರ ವಿಭೀಷಣನು (ಅವನು ಭಗವಾನ್ ರಾಮನ ಪಕ್ಷದಲ್ಲಿದ್ದನು), ರಾವಣನು ಶಾಸ್ತ್ರಗಳಲ್ಲಿ ಬಹಳ ಪಾರಂಗತನೆಂದು ಭಗವಾನ್ ರಾಮನಲ್ಲಿ ಹೇಳಿದನು. ಆದುದರಿಂದ, ರಾಮೇಶ್ವರಂನಲ್ಲಿನ ಪೂಜೆಗೆ ಅರ್ಚಕನಾಗಿ ಬಂದು ಕುಳಿತುಕೊಳ್ಳಲು ಭಗವಾನ್ ರಾಮನು ರಾವಣನಿಗೆ ಒಂದು ಆಮಂತ್ರಣವನ್ನು ಕಳಿಸಿದನು.

ರಾವಣನು ಆಮಂತ್ರಣವನ್ನು ಸ್ವೀಕರಿಸಿದನು ಮತ್ತು ಬಂದನು. ಆದರೆ ನಂತರ ಅವನು ಭಗವಾನ್ ರಾಮನಲ್ಲಿ, ಅವನ ಪತ್ನಿಯ ಉಪಸ್ಥಿತಿಯಿಲ್ಲದೆ ಪೂಜೆಯು ಅಸಂಪೂರ್ಣವಾಗುವುದು ಎಂದು ಹೇಳಿದನು. ಪತ್ನಿಯ ಉಪಸ್ಥಿತಿಯಿಲ್ಲದೆ ಯಾವುದೇ ಪೂಜೆ ಅಥವಾ ಯಜ್ಞವನ್ನು ನೆರವೇರಿಸಲು ಸಾಧ್ಯವಿಲ್ಲ. ಹೀಗಾಗಿ ಅವನು ಭಗವಾನ್ ರಾಮನಿಗೆ ಹೇಳಿದನು, ’ನೀವೊಬ್ಬ ವಿವಾಹಿತ ಪುರುಷನಾಗಿರುವುದರಿಂದ, ನೀವು ಮತ್ತು ನಿಮ್ಮ ಪತ್ನಿ ಇಬ್ಬರೂ ಜೊತೆಯಲ್ಲಿ ಪೂಜೆಗೆ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ನಿಮಗೆ ಪೂಜೆಯನ್ನು ನೆರವೇರಿಸಲು ಸಾಧ್ಯವಿಲ್ಲ.’

ಆಗ ಭಗವಾನ್ ರಾಮನು ಅವನಿಗಂದನು, ’ಇಲ್ಲದಿರುವ ಯಾವುದಕ್ಕಾದರೂ ಒಂದು ಪರ್ಯಾಯವನ್ನು ಒದಗಿಸುವುದು ಅರ್ಚಕನ ಕರ್ತವ್ಯವಾಗಿದೆ. ನನ್ನ ಪತ್ನಿಯು ನನ್ನೊಂದಿಗೆ ಇಲ್ಲದಿರುವುದರಿಂದ (ಆ ಸಮಯದಲ್ಲಿ ರಾವಣನಿಂದ ಬಂಧಿಯಾಗಿ ಇರಿಸಲ್ಪಟ್ಟ ಕಾರಣ), ಈ ಸಮಸ್ಯೆಗೆ ಪರ್ಯಾಯವೇನೆಂದು ದಯವಿಟ್ಟು ನನಗೆ ಹೇಳು. ಬದಲಿಯಾಗಿ ಅವಳ ಸ್ಥಾನದಲ್ಲಿ ನಾವೊಂದು ಬೊಂಬೆಯನ್ನು ಇರಿಸಬಹುದೇ?’

ಆಗ ರಾವಣನಂದನು, ’ನನಗೆ ಪರ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಭಗವಾನ್ ಶಿವನ ಪೂಜೆಗೆ ಎಲ್ಲವೂ ಇರಬೇಕೆಂದು ನಾನು ಬಯಸುತ್ತೇನೆ. ಆದುದರಿಂದ ನಾನು ನಿಮ್ಮ ಪತ್ನಿಯನ್ನು ಪೂಜೆಗಾಗಿ ಇಲ್ಲಿಗೆ ಕರೆಯುವೆನು. ಪೂಜೆಯ ಬಳಿಕ, ದಯವಿಟ್ಟು ಅವರನ್ನು ಲಂಕೆಗೆ ತಿರುಗಿ ಕಳುಹಿಸಿ.’

ಹೀಗೆ ರಾವಣನು ಸೀತೆಯನ್ನು ಪೂಜೆಗಾಗಿ ಕರೆತರುತ್ತಾನೆ. ಪೂಜೆಯ ಬಳಿಕ, ಭಗವಾನ್ ರಾಮ ಮತ್ತು ಸೀತೆಯು ಅಶೀರ್ವಾದ ಪಡೆಯಲು ಅರ್ಚಕರ; ಅಂದರೆ ರಾವಣನ ಪಾದಗಳಿಗೆ ನಮಸ್ಕರಿಸಲು ತಲೆಬಾಗಿದಾಗ ರಾವಣನು ’ವಿಜಯೀ ಭವಃ’ ಎಂದು ಹೇಳುತ್ತಾ ಭಗವಾನ್ ರಾಮನಿಗೆ ಆಶೀರ್ವದಿಸುತ್ತಾನೆ. ಹಾಗೆ ಮಾಡದೆ ಅವನಿಗೆ ಯಾವುದೇ ದಾರಿಯಿರಲಿಲ್ಲ.

ಯಾರಾದರೂ ಒಬ್ಬರು ಅರ್ಚಕರ ಪಾದಗಳನ್ನು ಮುಟ್ಟುವಾಗ, ಆ ವ್ಯಕ್ತಿಗೆ ಆಶೀರ್ವದಿಸದೆ ಅವರಿಗೆ ಬೇರೆ ಆಯ್ಕೆಯಿರುವುದಿಲ್ಲ. ಆದುದರಿಂದ, ಯಾವುದಕ್ಕಾಗಿ ಅವನು ಪೂಜೆಯನ್ನು ಆಯೋಜಿಸಿದ್ದನೋ, ಅದಕ್ಕಾಗಿ ರಾವಣನು ಆ ಅಶೀರ್ವಾದವನ್ನು ಭಗವಾನ್ ರಾಮನಿಗೆ ಕೊಡಲೇಬೇಕಾಗಿತ್ತು. ಅವನು, ’ಸುಮಂಗಲೀಭವಃ’ ಎಂದು ಹೇಳುವುದರೊಂದಿಗೆ ಸೀತೆಯನ್ನು ಕೂಡಾ ಆಶೀರ್ವದಿಸಿದನು. ಅಂತಹದಾಗಿತ್ತು ರಾವಣನ ಉದಾರತೆ. ಅವರಿಬ್ಬರಿಗೂ ಆಶೀರ್ವದಿಸಿದ ಬಳಿಕ, ರಾವಣನು ಸೀತೆಯನ್ನು ತನ್ನೊಂದಿಗೆ ಲಂಕೆಗೆ ಮರಳಿ ಕರೆದೊಯ್ದನು.

ಇದೊಂದು ಬಹಳ ರೋಮಾಂಚಕಾರಿ ಕಥೆ. ನಾವು ಯಾವತ್ತೂ ರಾವಣನನ್ನು ಒಬ್ಬ ಖಳನಾಯಕನನ್ನಾಗಿ ಗ್ರಹಿಸುತ್ತೇವೆ, ಆದರೆ ರಾವಣನಲ್ಲಿ ಕೂಡಾ ಹಲವು ಒಳ್ಳೆಯ ಗುಣಗಳಿದ್ದವು. ಅದಕ್ಕಾಗಿಯೇ ರಾವಣನು ಕೊನೆಯುಸಿರೆಳೆಯುತ್ತಿದ್ದಾಗ ಮತ್ತು ರಣರಂಗದಲ್ಲಿ ಮರಣ ಶಯ್ಯೆಯಲ್ಲಿದ್ದಾಗ, ಭಗವಾನ್ ರಾಮನು ಲಕ್ಷ್ಮಣನೊಂದಿಗೆ, ರಣರಂಗದಲ್ಲಿ ಸಾಯುತ್ತಾ ಮಲಗಿರುವುದರಿಂದ, ಹೋಗಿ ರಾವಣನ ಪಾದಗಳನ್ನು ಮುಟ್ಟಿ ಅವನಿಂದ ಜ್ಞಾನವನ್ನು ಪಡೆಯುವಂತೆ ಹೇಳಿದನು.

ಭಗವಾನ್ ರಾಮನು ಹೇಳಿದನು, ’ನಾನು ಅವನ (ರಾವಣ) ಬಳಿಗೆ ಹೋದರೆ ಆಗ ಅವನು ತನ್ನ ಶರೀರವನ್ನು ತೊರೆಯುವನು ಮತ್ತು ಅವನ ಆತ್ಮವು ನನ್ನಲ್ಲಿ ವಿಲೀನವಾಗುವುದು. ಆದುದರಿಂದ ಹಾಗಾಗುವ ಮೊದಲು, ಹೋಗಿ ನಿನ್ನಿಂದ ಸಾಧ್ಯವಾಗುವುದನ್ನೆಲ್ಲಾ ಅವನಿಂದ ಕಲಿ.’

ನಿಮಗೆ ಗೊತ್ತಿದೆಯಾ, ರಾವಣನ ಹೆಸರಿನಿಂದ ಒಂದು ಗೀತೆಯಿದೆಯೆಂಬುದು? ಅದು ರಾವಣ ಗೀತೆ ಎಂದು ಕರೆಯಲ್ಪಡುತ್ತದೆ. ಇರುವ ಐದು ಗೀತೆಗಳಲ್ಲಿ ಇದು ಒಂದಾಗಿದೆ. ನಿಮ್ಮಲ್ಲಿ ಶ್ರೀಮದ್ ಭಗವದ್ಗೀತೆ, ಅಷ್ಟಾವಕ್ರ ಗೀತೆ, ಉದ್ಧವ ಗೀತೆ ಮತ್ತು ಗುರು ಗೀತೆಗಳಿರುವಂತೆಯೇ, ರಾವಣ ಗೀತೆ  ಎಂದು ಕರೆಯಲ್ಪಡುವ ಇನ್ನೊಂದು ಗೀತೆಯಿದೆ. ಅದರಲ್ಲಿ, ರಾವಣನು ಲಕ್ಷ್ಮಣನಿಗೆ ಹಲವಾರು ಧರ್ಮೋಪದೇಶಗಳನ್ನು ಕಲಿಸುತ್ತಾನೆ.

ರಾವಣನು ತನ್ನ ಬೋಧನೆಯನ್ನು ಪೂರ್ತಿಗೊಳಿಸಿದ ಬಳಿಕ, ರಾವಣನ ಬಳಿಗೆ ಬರುವಂತೆ ಲಕ್ಷ್ಮಣನು ಭಗವಾನ್ ರಾಮನಿಗೆ ಒಂದು ಸಂಜ್ಞೆಯನ್ನು ಮಾಡುತ್ತಾನೆ. ಭಗವಾನ್ ರಾಮನು ರಾವಣನ ಬಳಿಗೆ ಬಂದಾಗ, ಅವನ ಆತ್ಮವು ಒಂದು ಪ್ರಕಾಶಮಾನವಾದ ಬೆಳಕಾಗಿ ಅವನ ಶರೀರವನ್ನು ತೊರೆಯುತ್ತದೆ ಮತ್ತು ಭಗವಾನ್ ರಾಮನೊಂದಿಗೆ ಒಂದಾಗುತ್ತದೆ. ಇದು ಆಧ್ಯಾತ್ಮ ರಾಮಾಯಣದಲ್ಲಿರುವ ಒಂದು ಕಥೆಯಾಗಿದೆ. ನಾನದನ್ನು ಸಂಪೂರ್ಣವಾಗಿ ಓದಿಲ್ಲ, ನಾನು ಈ ಕಥೆಯನ್ನು ಕೇಳಿರುವುದು ಮಾತ್ರ. ಆದರೆ ನೀವೆಲ್ಲರೂ ಅದನ್ನು ಓದಬೇಕು.

ನೀವದನ್ನು ಓದುವಾಗ, ಕೈಕೇಯಿಯು ನಿಜವಾಗಿ ಒಬ್ಬಳು ಉದಾತ್ತ ಮಹಿಳೆಯಾಗಿದ್ದಳು ಎಂಬುದು ನಿಮಗೆ ಕಂಡುಬರುತ್ತದೆ. ಸಾಧಾರಣವಾಗಿ ನಾವು ಅವಳನ್ನು, ಮೋಸಗಾತಿ ಮತ್ತು ದುಷ್ಟ ಹೆಂಗಸೆಂದು ಯೋಚಿಸುತ್ತೇವೆ. ಆದರೆ ಅದು ಹಾಗಲ್ಲವೇ ಅಲ್ಲ. ಅವಳೊಬ್ಬಳು ಕೆಟ್ಟ ಹೆಂಗಸಾಗಿರಲಿಲ್ಲ. ವನವಾಸಕ್ಕೆ ಹೋಗುವಂತೆ ಅವಳು ರಾಮನಿಗೆ ನಿರ್ದೇಶಿಸಿದಳು, ಯಾಕೆಂದರೆ ಅವನು ಹೋಗಲು ಬಯಸಿದ್ದನು.

ಅದಕ್ಕಾಗಿಯೇ, ’ಸರ್ವಂ ವಸುದೇವಮಿತಿ’ (ಎಲ್ಲವೂ ವಾಸುದೇವ) ಎಂದು ಹೇಳಲಾಗಿರುವುದು. ರಾವಣ ಮತ್ತು ಭಗವಾನ್ ರಾಮ ಇಬ್ಬರೂ ವಾಸುದೇವನೇ. (ಅಂದರೆ, ಇಬ್ಬರೂ ಒಂದು ದೈವತ್ವದ ಆವಿರ್ಭಾವಗಳು).

ಪ್ರಶ್ನೆ: ಗುರುದೇವ, ಕೃಷ್ಣ ಪರಮಾತ್ಮನು ಗೀತೆಯಲ್ಲಿ, ’ನಾನು ಮೂರು ಗುಣಗಳಿಂದ ಆಳಲ್ಪಟ್ಟಿಲ್ಲ ಮತ್ತು ಮೂರು ಗುಣಗಳು ನನ್ನಲ್ಲಿ ವಾಸಿಸುವುದೂ ಇಲ್ಲ’ ಎಂದು ಹೇಳುತ್ತಾನೆಂದು ನೀವು ಹೇಳಿದಿರಿ. ಇದನ್ನು ಅರ್ಥ ಮಾಡಿಕೊಳ್ಳಲು ನೀವು, ಒಬ್ಬ ವ್ಯಕ್ತಿಯು ಧರಿಸುವ ಬಟ್ಟೆಗಳ ಉದಾಹರಣೆಯನ್ನು ನೀಡಿದಿರಿ. ಆದರೆ ನಂತರ ನಾನು ಧರಿಸಿರುವ ಬಟ್ಟೆಗಳನ್ನು ನೋಡಿದರೆ, ಈ ಬಟ್ಟೆಗಳು ಕೂಡಾ ನಾನೇ ಎಂದು ತೋರುವುದಿಲ್ಲವೇ?

ಶ್ರೀ ಶ್ರೀ ರವಿ ಶಂಕರ್: ನೀನು ಧರಿಸುವ ಬಟ್ಟೆಗಳಲ್ಲಿ ನೀನಿರುವುದಾದರೆ, ಆಗ ನೀನು ಕಪಾಟಿನಲ್ಲಿ ಕೂಡಾ ಇರುವೆ ಮತ್ತು ವಾಷಿಂಗ್ ಮೆಶೀನ್‌ನಲ್ಲಿ ಕೂಡಾ ಇರುವೆ! (ನಗು)

ಬಟ್ಟೆಗಳು ತೊಳೆಯಲ್ಪಡುತ್ತವೆ ಆದರೆ ನೀನಲ್ಲ. ಹಾಗಾದರೆ ನೀನು ಬಟ್ಟೆಗಳ ಒಳಗೆ ಇರುವೆ ಎಂದು ನೀನು ಹೇಗೆ ಹೇಳಲು ಸಾಧ್ಯ?

ಸುಮ್ಮನೆ ಇದರ ಬಗ್ಗೆ ಯೋಚಿಸು ಮತ್ತು ಚಿಂತನೆ ಮಾಡು.

ನೀನು ನಿನ್ನ ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಬದಿಯಲ್ಲಿರಿಸುವಾಗ, ಇನ್ನೂ ನೀನು ಅದರಲ್ಲಿರುತ್ತೀಯಾ? ಬಟ್ಟೆಗಳೊಂದಿಗೆ ವಾಷಿಂಗ್ ಮೆಶೀನಿನ ಒಳಕ್ಕೆ ಹೋಗುವುದು ನೀನೇನಾ? ಇದನ್ನು ತರ್ಕದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು, ಅನುಭವಿಸಬೇಕಾದ ಒಂದು ಬಹಳ ಸೂಕ್ಷ್ಮ ಸಂಗತಿಯಾಗಿದೆ.

ನೀನು ಬಟ್ಟೆಗಳನ್ನು ಧರಿಸಿರುವೆ ಮತ್ತು ಬಟ್ಟೆಗಳು ನಿನಗೆ ಸೇರಿವೆ. ಆದರೂ ನೀನು ಬಟ್ಟೆಗಳ ಒಳಗಡೆಯಿಲ್ಲ (ನೀನು ಅವುಗಳಿಂದ ನಿರ್ಬಂಧಗೊಳಿಸಲ್ಪಟ್ಟಿಲ್ಲ ಅಥವಾ ಆಳಲ್ಪಟ್ಟಿಲ್ಲ). ಇದು ಬಹಳ ಸ್ಪಷ್ಟವಾಗಿದೆ.
ಆದುದರಿಂದ ಕೃಷ್ಣ ಪರಮಾತ್ಮನು ಹೇಳಿರುವನು, ’ನಾನು ಎಲ್ಲಾ ಗುಣಗಳಲ್ಲೂ ಇರುವೆನು ಮತ್ತು ಅವುಗಳು ನನಗೆ ಸೇರಿವೆ, ಆದರೂ ಅವುಗಳು ನನ್ನಲ್ಲಿ ವಾಸಿಸುವುದಿಲ್ಲ.’

ಇದನ್ನು ಬುದ್ಧಿಯ ಮೂಲಕ ಅರಿತುಕೊಳ್ಳುವುದು ಸರಿಸುಮಾರು ಅಸಾಧ್ಯವೆಂದು ಹೇಳಬಹುದು, ಆದರೆ ನೀವಿದನ್ನು ಅನುಭವದ ಮೂಲಕ ಅರಿತುಕೊಳ್ಳಬಹುದು.

ನೋಡಿ, ಪ್ರತಿಯೊಂದು ಉದಾಹರಣೆಗೂ ಒಂದು ನಿರ್ದಿಷ್ಟವಾದ ಮಿತಿಯಿದೆ. ನೀವು ಉದಾಹರಣೆಯನ್ನು ಎಳೆದು, ಅದನ್ನು ಅದರ ಮಿತಿಮೀರಿ ಅರ್ಥೈಸಿಕೊಳ್ಳಬಾರದು. ಆಗ ಅದು ಅದರ ಮಹತ್ವವನ್ನು ಕಳೆದುಕೊಳ್ಳುತ್ತದೆ ಮತ್ತು ಬುದ್ಧಿಗೆ ಕೂಡಾ ಮಂಕು ಕವಿಯುತ್ತದೆ.

ಪ್ರತಿಯೊಂದು ಉದಾಹರಣೆಗೂ, ಯಾವುದನ್ನು ತಿಳಿಯಪಡಿಸಬೇಕೋ ಅದನ್ನು ವ್ಯಕ್ತಪಡಿಸುವ ಒಂದು ಸೀಮಿತ ಶಕ್ತಿಯಿರುತ್ತದೆ. ನಾವದನ್ನು ಆ ಸೀಮೆಗಳೊಳಗೆ ಮಾತ್ರ ಅರ್ಥಮಾಡಿಕೊಳ್ಳಬೇಕು.

ಒಂದು ಉದಾಹರಣೆಯು, ಯಾವುದು ಪ್ರಕಟವಾಗಿಲ್ಲವೋ, ತಿಳಿದಿಲ್ಲವೋ ಮತ್ತು ಅಭಿವ್ಯಕ್ತಿಯನ್ನು ಮೀರಿದುದೋ, ಅದರ ಕಡೆಗಿರುವ ಒಂದು ಸೂಚಿ ಮಾತ್ರವಾಗಿದೆ. ಅದು ನಿಮ್ಮ ಬುದ್ಧಿಗೆ, ಅರ್ಥ ಮಾಡಿಕೊಳ್ಳಲು ಒಂದು ದಿಶೆಯನ್ನು ನೀಡುತ್ತದೆ. ಹಾಗಾಗಿ ನೀವು ನಿಮ್ಮ ಅರ್ಥಮಾಡಿಕೊಳ್ಳುವಿಕೆಯನ್ನು ಅದಕ್ಕೆ ಸೀಮಿತಗೊಳಿಸಬೇಕು. ಏನನ್ನು ಹೇಳಲಾಗಿದೆಯೆಂಬುದನ್ನು ಒಮ್ಮೆ ನೀವು ಅರಿತುಕೊಂಡ ಮೇಲೆ, ಸುಮ್ಮನೆ ವಿಶ್ರಾಂತಿ ಮಾಡಿ.

ಆಳವಾದ ವಿಶ್ರಾಂತಿಯಲ್ಲಿ ಮಾತ್ರ ನಿಮ್ಮೊಳಗೆ ಜ್ಞಾನವು ಉದಯಿಸುವುದು. ಪ್ರಯತ್ನಗಳನ್ನು ಮಾಡುವುದರಿಂದ ನಿಮಗೆ ಸೂಕ್ಷ್ಮವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.

ಪ್ರಶ್ನೆ: ಗುರುದೇವ, ನಾನು ಅಜ್ಞಾನದಿಂದ ಹೇಗೆ ಮುಕ್ತನಾಗಬಹುದು?

ಶ್ರೀ ಶ್ರೀ ರವಿ ಶಂಕರ್: ನೀನು ಅಜ್ಞಾನಿಯಾಗಿದ್ದೆ ಎಂಬುದು ನಿನಗೆ ಅರಿವಾದಾಗ, ನಿನ್ನ ಅಜ್ಞಾನವು ಹೋಗಿದೆಯೆಂದೇ ಅದರ ಅರ್ಥ. ಒಬ್ಬ ಅಜ್ಞಾನಿ ವ್ಯಕ್ತಿಯು ತಾನು ಅಜ್ಞಾನಿಯೆಂಬುದಾಗಿ ಯೋಚಿಸುವುದೇ ಇಲ್ಲ. ನೀವು ಎಚ್ಚೆತ್ತ ಬಳಿಕ, ನೀವು ನಿದ್ರಿಸಿದ್ದಿರಿ ಎಂಬುದು ನಿಮಗೆ ಹೇಗೆ ತಿಳಿಯುವುದೋ, ಅದೇ ರೀತಿಯಲ್ಲಿ, ಒಬ್ಬ ಅಜ್ಞಾನಿ ವ್ಯಕ್ತಿಯು, ತಾನು ಅದರಿಂದ ಹೊರಬಂದಮೇಲೆ ಮಾತ್ರ ತನ್ನ ಅಜ್ಞಾನದ ಬಗ್ಗೆ ಅರಿತುಕೊಳ್ಳುತ್ತಾನೆ.

ಈ ಜ್ಞಾನದಲ್ಲಿ ಬಹಳಷ್ಟು ಅಮೃತವಿದೆ. ನಾವಿದನ್ನು ಗಂಟೆಗಟ್ಟಲೆ ಚರ್ಚಿಸುತ್ತಾ ಹೋಗಬಹುದು. ಇವತ್ತು ರಾತ್ರಿ, ನಾನು ನಿಮಗೆಲ್ಲರಿಗೂ ಮಾಡಲು ಒಂದು ಅಭ್ಯಾಸವನ್ನು ಕೊಡುತ್ತಿದ್ದೇನೆ. ’ಸರ್ವಂವಸುದೇವಮಿತಿ’, ನಿಮ್ಮ ಸುತ್ತಲಿರುವ ಎಲ್ಲವೂ ವಾಸುದೇವ ಎಂಬುದನ್ನು ನೆನಪಿಡಿ. ಒಬ್ಬನಲ್ಲಿ ಯಾವುದೇ ರೀತಿಯ ಭಕ್ತಿಯಿರಲಿ, ಅದು ನಿಮಗೆ ಬಂದಿರುವುದು ವಾಸುದೇವನ ಕೃಪೆಯಿಂದ ಮಾತ್ರ.

ಪ್ರಶ್ನೆ: ಗುರುದೇವ, ಅಷ್ಟದ ಪ್ರಕೃತಿಯಲ್ಲಿ (ದೇವರ ದೈವಿಕ ಶಕ್ತಿಗಳ ಎಂಟು ಭೌತಿಕ ಸ್ವರೂಪಗಳು - ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂ ಇವುಗಳನ್ನುದ್ದೇಶಿಸಿ), ಅಹಂನ್ನು ಅವುಗಳಲ್ಲೊಂದಾಗಿ ಎಣಿಸಲಾಗಿದೆ, ಆದರೆ ಚಿತ್ತವನ್ನಲ್ಲ. ಇದು ಯಾಕೆ ಹಾಗೆ?

ಶ್ರೀ ಶ್ರೀ ರವಿ ಶಂಕರ್:   ಹಾಗಾದರೆ ನೀನು ಅದನ್ನು ಅವುಗಳೊಂದಿಗೆ ಲೆಕ್ಕ ಹಾಕಬಹುದು!
ಅಸ್ತಿತ್ವದ ವಿವಿಧ ಮಟ್ಟಗಳನ್ನು ಅರ್ಥ ಮಾಡಿಕೊಳ್ಳಲು ಬೇರೆ ಬೇರೆ ಋಷಿಗಳು ಬೇರೆ ಬೇರೆ ತತ್ವಗಳನ್ನು ಮತ್ತು ಮಾರ್ಗಗಳನ್ನು ವಿವರಿಸಿದ್ದಾರೆ. ಮನಸ್ಸು, ಬುದ್ಧಿ ಮತ್ತು ಅಹಂಗಳನ್ನು ಚಿತ್ತದ ಮೂರು ವಿಸ್ತರಣೆಗಳಾಗಿ ಕಾಣಬಹುದು. ಇವುಗಳು, ಒಂದು ಪ್ರಜ್ಞೆಯ ನಾಲ್ಕು ವಿವಿಧ ಅಭಿವ್ಯಕ್ತಿಗಳಾಗಿವೆ.

ಕೆಲವು ಜ್ಞಾನ ಪಂಥಗಳು ಇವುಗಳಲ್ಲಿ ಮೂರನ್ನು ಮಾತ್ರ ಲೆಕ್ಕ ಹಾಕುತ್ತವೆ, ಎಲ್ಲಾ ನಾಲ್ಕನ್ನಲ್ಲ. ಅವರು ಚಿತ್ತವನ್ನು, ಮನಸ್ಸು ಅಥವಾ ಬುದ್ಧಿಯ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ ಮತ್ತು ಹೀಗಾಗಿ ಅದನ್ನು ಬೇರೆಯಾಗಿ ಲೆಕ್ಕ ಹಾಕುವುದಿಲ್ಲ.

ಪ್ರಶ್ನೆ: ಗುರುದೇವ, ಜೀವನದಲ್ಲಿ ನಮಗೆ ಯಾವುದೇ ಪಾತ್ರವನ್ನು ನೀಡಲಾದರೂ ನಾವು ಆ ಪಾತ್ರವನ್ನು, ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನೂರಕ್ಕೆ ನೂರರಷ್ಟು ನಿಭಾಯಿಸಬೇಕು ಎಂದು ನೀವು ಹೇಳಿದ್ದಿರಿ. ಆದರೆ ನಿಜವಾಗಿ ನಮ್ಮ ಪಾತ್ರವೇನೆಂಬುದನ್ನು ನಾವು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀವು ಈಗ ಯಾವ ಪಾತ್ರದಲ್ಲಿರುವಿರೋ ಅದೇ ಸರಿಯಾದುದು! (ನಗು).
ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಹಲವಾರು ಪಾತ್ರಗಳನ್ನು ವಹಿಸುತ್ತಾನೆ. ಜೀವನದಲ್ಲಿ ನಿಮಗೆ ಯಾವುದೇ ಪಾತ್ರವನ್ನು ನೀಡಲಾಗಿರಲಿ, ಕೇವಲ ಆ ಪಾತ್ರವನ್ನು ಚೆನ್ನಾಗಿ ವಹಿಸಿ. ಒಬ್ಬರು ಒಬ್ಬ ತಾಯಿ ಅಥವಾ ಒಬ್ಬ ತಂದೆ ಅಥವಾ ಒಬ್ಬ ಪತಿ ಅಥವಾ ಒಬ್ಬ ಪತ್ನಿ, ಮೊದಲಾದವರಾಗಿರುತ್ತಾರೆ.

ನಿಮ್ಮ ಸಮಾಜದ ಒಬ್ಬ ಒಳ್ಳೆಯ ನಾಗರಿಕನಾಗು ಮತ್ತು ಆ ಪಾತ್ರವನ್ನು ಚೆನ್ನಾಗಿ ವಹಿಸು. ನೀನೊಬ್ಬ ಬುದ್ಧಿವಂತ ವ್ಯಕ್ತಿಯಾಗಿರಲಿ ಅಥವಾ ಒಬ್ಬ ಶಿಷ್ಯನಾಗಿರಲಿ ಅಥವಾ ಒಬ್ಬ ಗುರುವಾಗಿರಲಿ; ನಿನಗೆ ಯಾವುದೇ ಪಾತ್ರವನ್ನು ನೀಡಲಾಗಿರಲಿ, ಅದನ್ನು ಚೆನ್ನಾಗಿಯೂ ಧೈರ್ಯವಾಗಿಯೂ ನಿಭಾಯಿಸು. ಏನು ಬೇಕೋ ಅದನ್ನು ಮಾಡಲು ಭಯಪಡಬೇಡ.