ಶನಿವಾರ, ಮೇ 18, 2013

ಪರಿಸರವನ್ನು ಪ್ರೀತಿಸಿ

ಜಾಗತಿಕ ಸಾಂಸ್ಕೃತಿಕ ವೇದಿಕೆ
ಹಾಂಗ್‌ಝೌ, ಚೀನಾ
ಮೇ ೧೮, ೨೦೧೩

ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ, ಆದರೆ ಈ ಶಿಕ್ಷಣವು ಗ್ರಾಮೀಣ ಪ್ರದೇಶಗಳಿಗೆ, ಹಳ್ಳಿಯ ಜನರಿಗೆ ಮತ್ತು ನಗರಗಳಿಗೆ ಕೂಡಾ  ಹೋಗಬೇಕಾಗಿದೆ. ನಾವು ಜನರಿಗೆ ಶಿಕ್ಷಣ ನೀಡಬೇಕಾಗಿದೆ, ಅರಿವನ್ನು ತರಬೇಕಾಗಿದೆ.

ಇವತ್ತು, ಲೋಭವು ನಮ್ಮ ಸಮಾಜವನ್ನು ತಿಂದುಹಾಕುತ್ತಿದೆ. ಅದು ಪರಿಸರವನ್ನು ನಾಶಪಡಿಸುತ್ತಿದೆ, ಅದು ಕುಟುಂಬಗಳನ್ನು ನಾಶಪಡಿಸುತ್ತಿದೆ, ಅದು ನಾವೆಲ್ಲರೂ ಸಮರ್ಥಿಸುವ ಮಾನವೀಯತೆಯನ್ನು ನಾಶಪಡಿಸುತ್ತಿದೆ. ಲೋಭಕ್ಕೆ ಕಡಿವಾಣ ಹಾಕಲು, ನಾವು ಆತ್ಮೀಯತೆಯ ಒಂದು ಭಾವವನ್ನು ಸೃಷ್ಟಿಸಬೇಕಾಗಿದೆ.

ಈ ಸಮ್ಮೇಳನದಲ್ಲಿ ನಿಮ್ಮಲ್ಲಿ ಹಲವರು ಆಧ್ಯಾತ್ಮಿಕ ಮೌಲ್ಯಗಳು, ಪ್ರೇಮ, ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿರುವುದಕ್ಕೆ ನನಗೆ ಬಹಳ ಸಂತೋಷವಿದೆ. ಹತ್ತು ವರ್ಷಗಳ ಮೊದಲು, ಇಪ್ಪತ್ತು ವರ್ಷಗಳ ಮೊದಲು ಇದಕ್ಕೆ ನಿಷೇಧವಿತ್ತು. ಯಾವುದೇ ಪರಿಸರ ಅಥವಾ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರೇಮದ ಬಗ್ಗೆ ಮಾತನಾಡುವುದು ಕೂಡಾ ಸರಿಯಲ್ಲವೆಂದು ಯೋಚಿಸಲಾಗುತ್ತಿತ್ತು. ಇವತ್ತು, ಸಮಾಜವನ್ನು ನಾವು ಹೆಚ್ಚು ಸಂತೋಷಕರವಾಗಿಸಬೇಕಾಗಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಒಂದು ಹೆಚ್ಚಿನ ಜಿ.ಡಿ.ಪಿ.ಯನ್ನು ಹೊಂದಿದರೆ ಮಾತ್ರ ಸಾಲದು, ನಾವು ಒಂದು ಹೆಚ್ಚಿನ ಜಿ.ಡಿ.ಹೆಚ್. ಅಂದರೆ, ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ (ಸಮಗ್ರ ದೇಶೀಯ ಸಂತೋಷ) ಹೊಂದಿರಬೇಕು.
ಸಂತೋಷವನ್ನು ಸೃಷ್ಟಿಸಲು, ನಾವು ಆ ಜಾಗೃತಿಯನ್ನು ಸೃಷ್ಟಿಸಬೇಕಾಗಿದೆ. ಭಗವದ್ಗೀತೆ; ಭಾರತದಲ್ಲಿನ ಒಂದು ಪವಿತ್ರಗ್ರಂಥದ ಪ್ರಕಾರ, ಪ್ರಕೃತಿಯು ಎಂಟು ಅಂಶಗಳನ್ನು ಹೊಂದಿದೆ ಅಥವಾ ವಿಶ್ವವು ಈ ಎಂಟು ಪದಾರ್ಥಗಳಿಂದ; ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಪ್ರಜ್ಞೆಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ನಾವು ಭೂಮಿಯನ್ನು ಸಂರಕ್ಷಿಸಬೇಕು. ಗಣಿಗಾರಿಕೆಯ ಹೆಸರಿನಲ್ಲಿ ನಾವು ಅಷ್ಟೊಂದು ಡೈನಮೈಟುಗಳನ್ನು ಹಾಕಲು ಸಾಧ್ಯವಿಲ್ಲ.

ನಾವು ನಮ್ಮ ಲೋಭಕ್ಕೆ ಒಂದು ಕಡಿವಾಣವನ್ನು ಹಾಕಬೇಕು ಮತ್ತು ಮನುಷ್ಯತ್ವವು ಅರಳಿದಾಗ ಮಾತ್ರ ಗ್ರಾಹಕೀಕರಣವನ್ನು ತಡೆಯಲು ಸಾಧ್ಯ. ನಮ್ಮಲ್ಲಿ ಒಂದು ಆತ್ಮೀಯತೆಯ ಭಾವವಿರುವಾಗ, ಭೂಮಿಯ ಬಗೆಗಿರುವ ಕಾಳಜಿಯು ಹೆಚ್ಚು ಹೆಚ್ಚು ಮಹತ್ವಪೂರ್ಣವಾಗುತ್ತದೆ. ಭೂಮಿಯೇ ಒಂದು ಜೀವಿಯಾಗಿದೆ. ಅದು ಹಲವಾರು ಜೀವಿಗಳಿಗೆ ಆಶ್ರಯ ನೀಡುತ್ತಿದೆಯಾದ್ದರಿಂದ ಅದು ಜೀವಂತವಾಗಿದೆ. ನಾವು ಭೂಮಿಯನ್ನು ಗೌರವಿಸಬೇಕಾಗಿದೆ. ಪ್ರಪಂಚದಾದ್ಯಂತದ ಪ್ರಾಚೀನ ಜನರು ಭೂಮಿಯನ್ನು, ನದಿಗಳನ್ನು, ಬೆಟ್ಟಗಳನ್ನು ಮತ್ತು ಗಾಳಿಯನ್ನು ಗೌರವಿಸುತ್ತಿದ್ದರು. ನಾವು ಈ ಪ್ರಾಚೀನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ ಮತ್ತು ಎಲ್ಲರ ಪ್ರಗತಿ ಹಾಗೂ ಸಮೃದ್ಧಿಗಾಗಿ ಆಧುನಿಕ ದೃಷ್ಟಿಕೋನವನ್ನು ಹೊಂದಬೇಕಾಗಿದೆ.
ಒಂದು ಒತ್ತಡ-ಮುಕ್ತವಾದ ಮನಸ್ಸು ಇನ್ನೂ ಹೆಚ್ಚು ಮುಖ್ಯವಾದುದು. ಒಂದು ನಾವು ಸೃಷ್ಟಿಸುವ ಪರಿಸರ ಮಾಲಿನ್ಯ, ಇನ್ನೊಂದು ಭಾವನಾತ್ಮಕ ಮಾಲಿನ್ಯ. ಖಿನ್ನತೆಯಿರುವ ಯಾರಾದರೂ ಒಬ್ಬರಿದ್ದರೆ, ಅವರು ಸುತ್ತಲೆಲ್ಲಾ ಖಿನ್ನತೆಯ ಅಲೆಗಳನ್ನು ಹರಡುವರು. ಸಂಪೂರ್ಣ ಪ್ರಪಂಚವು ಕಂಪನಗಳಲ್ಲದೆ ಇನ್ನೇನೂ ಅಲ್ಲ, ಎಲ್ಲವೂ ತರಂಗಗಳಾಗಿವೆ.

ಜನರು ಸಂತೋಷವಾಗಿರುವುದನ್ನು ನೋಡಲು, ಪ್ರಪಂಚವನ್ನು ತರಂಗಗಳಾಗಿ ನೋಡುವ ಈ ದೃಷ್ಟಿಕೋನವನ್ನು ನಾವು ಉಪಯೋಗಿಸಬೇಕಾದುದು.

ಪ್ರಪಂಚದಲ್ಲಿ ಆತ್ಮಹತ್ಯೆಯ ವೇಗವು ಹೆಚ್ಚಾಗುತ್ತಿದೆ ಯಾಕೆಂದರೆ, ಪ್ರೇಮ, ಆತ್ಮೀಯತೆ ಮತ್ತು ಸಹಾನುಭೂತಿ ಎಂದು ಕರೆಯಲ್ಪಡುವ ಪದಗಳ ಬಗ್ಗೆ ನಾವು ಗಮನ ಹರಿಸುತ್ತಿಲ್ಲ. ಖಿನ್ನತೆಗೊಳಗಾಗಲು ಒಂದು ಸರಳವಾದ ಸೂತ್ರವಿದೆ: ಸುಮ್ಮನೆ ಕುಳಿತುಕೊಂಡು, ’ನನ್ನ ಬಗ್ಗೆಯೇನು? ನನ್ನ ಬಗ್ಗೆಯೇನು? ನನ್ನ ಬಗ್ಗೆಯೇನು?’ ಎಂದು ಹೇಳುತ್ತಾ ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸಿ. ಇದು ಖಿನ್ನತೆಗೊಳಗಾಗಲಿರುವ ಒಂದು ಖಚಿತವಾದ ಮಾರ್ಗವಾಗಿದೆ.

ನಾವು ಭೂಮಿಯ ಬಗ್ಗೆ ಕಾಳಜಿ ವಹಿಸುವಾಗ, ನಾವು ನಮ್ಮ ಸುತ್ತಲಿರುವ ಜನರ ಬಗ್ಗೆ ಕಾಳಜಿ ವಹಿಸುವಾಗ, ನಾವು ನಮ್ಮ ಕೈಗಳನ್ನು ಚಾಚಿ ಅಗತ್ಯದಲ್ಲಿರುವವರಿಗೆಲ್ಲರಿಗೂ ಲಭ್ಯವಾಗುವಾಗ, ಜೀವನದಿಂದ ಖಿನ್ನತೆಯು ಮಾಯವಾಗುತ್ತದೆ. ಅಂತಹ ಶಿಕ್ಷಣ ಅಥವಾ ಅರಿವು ಇವತ್ತು ಒಂದು ತಕ್ಷಣದ ಅವಶ್ಯಕತೆಯಾಗಿ ಕಾಣುತ್ತದೆ ಯಾಕೆಂದರೆ, ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಮುಂಬರುವ ದಶಕದಲ್ಲಿ ಖಿನ್ನತೆಯು ಅತ್ಯಂತ ದೊಡ್ಡ ಮಾರಕ ರೋಗವಾಗಲಿದೆ.

ಕ್ಯಾನ್ಸರ್ ಇನ್ನೊಂದು ಅಸ್ವಸ್ಥತೆಯಾಗಿದೆ. ನಾವು ನಮ್ಮ ಭೂಗ್ರಹದ ಬಗ್ಗೆ ಕಾಳಜಿ ವಹಿಸುವಾಗ, ನಾವು ನಮ್ಮ ಜಲದ ಬಗ್ಗೆ ಕಾಳಜಿ ವಹಿಸುವಾಗ, ಪರಿಸರದಲ್ಲಿನ, ವಾತಾವರಣದಲ್ಲಿನ ಕಂಪನಗಳ ಬಗ್ಗೆ ನಾವು ಕಾಳಜಿ ವಹಿಸುವಾಗ ಈ ಎಲ್ಲಾ ರೋಗಗಳನ್ನು ನಾವು ನಿಭಾಯಿಸಬಹುದು. ಎಲ್ಲೆಡೆಗಳಲ್ಲಿ ಅಷ್ಟೊಂದು ಗೋಪುರಗಳು ಇರುವುದರೊಂದಿಗೆ, ವಿದ್ಯುತ್ಕಾಂತೀಯ ವಿಕಿರಣಗಳು ಹಿಂದೆ ಇದ್ದುದಕ್ಕಿಂತ ಬಹಳಷ್ಟು ಹೆಚ್ಚಾಗಿವೆ ಮತ್ತು ಇದು ಹಲವಾರು ನಗರ ಪ್ರದೇಶಗಳಲ್ಲಿ ಆರೋಗ್ಯದ
ಅಪಾಯಗಳನ್ನು ಉಂಟುಮಾಡುತ್ತಿದೆ.

ಭಾರತದಲ್ಲಿ ಒಂದು ಹಳೆಯ ಮಾತಿದೆ, ’ಒಂದು ಮರವನ್ನು ಕಡಿಯುವ ಮೊದಲು, ಮರದಿಂದ ನೀವು ಅನುಮತಿಯನ್ನು ಪಡೆಯಬೇಕು.’

ಇದು ಯಾಕೆಂದರೆ, ಮರವು ಒಂದು ಜೀವಿಯಾಗಿದೆ. ನೀವು ಮರಕ್ಕೆ, ನಾನು ನಿನ್ನ ವಿಧದ ಐದು ಗಿಡಗಳನ್ನು ನೆಡುತ್ತೇನೆ ಎಂದು ಭಾಷೆ ಕೊಡುತ್ತೀರಿ. ಆದುದರಿಂದ, ಮರವನ್ನು ಕತ್ತರಿಸಲು ನನಗೆ ಅನುಮತಿಯನ್ನು ನೀಡು. ಈ ಪದ್ಧತಿಯು ಒಂದು ಬಹಳ ದೀರ್ಘ ಕಾಲದ ಹಿಂದಿನಿಂದ ಇದೆ. ಅದು ಚೈನಾದಲ್ಲೂ ಇದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ (ವೇದಾಂತದಿಂದ ಬೌದ್ಧಧರ್ಮದ ಲಾವೊ ತ್ಸು ವರೆಗೆ, ಚೀನಾ ಮತ್ತು ಭಾರತವು ಈ ಸಾಮಾನ್ಯ ಪದ್ಧತಿಯನ್ನು ಹಂಚಿಕೊಂಡಿವೆ).

ಹೀಗೆ, ಸಂಪೂರ್ಣ ವಿಶ್ವವು ಒಂದು ಪ್ರತ್ಯೇಕ ಭಾಗವಾಗಿದೆ ಹಾಗೂ ನಾವು ವಿಶ್ವದ ಅವಿಭಾಜ್ಯ ಅಂಗವಾಗಿರುವೆವು.
ಮಾನವ ಅಸ್ತಿತ್ವಕ್ಕೆ ಐದು ಕೋಶಗಳಿವೆ: ಪರಿಸರವು ನಮ್ಮ ಮೊದಲ ಶರೀರವಾಗಿದೆ, ಭೌತಿಕ ಶರೀರವು ನಮ್ಮ ಎರಡನೆಯ ಶರೀರವಾಗಿದೆ, ಪ್ರಾಣ ಅಥವಾ ಚೈತನ್ಯವು ಮೂರನೆಯ ಶರೀರವಾಗಿದೆ (ಚಿ ಎಂಬುದು ಚೈನೀಸ್ ಪರಿಭಾಷೆಯಾಗಿದೆ; ಪ್ರಾಣ ಅಥವಾ ಚೈತನ್ಯವು ಹೆಚ್ಚಾಗಿರುವಾಗ ಅಲ್ಲಿ ಉತ್ಸಾಹ, ಸೃಜನಶೀಲತೆಯಿರುತ್ತದೆ. ಚೈತನ್ಯವು ಕಡಿಮೆಯಾಗುವಾಗಲೇ ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ, ಪ್ರಕೃತಿ ಮತ್ತು ತನಗೆ ಹಾನಿ ಮಾಡಲಿರುವ ಪ್ರವೃತ್ತಿಗಳು ಏಳುವುದು).

ಆದುದರಿಂದ, ಈ ಪ್ರಾಣದ ಶರೀರವನ್ನು ಅಭಿವೃದ್ಧಿಪಡಿಸುವುದು ಆವಶ್ಯಕವಾಗಿದೆ. ನಾಲ್ಕನೆಯ ಕೋಶವು ಮನಸ್ಸು. ಅದೊಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಐದನೆಯದು ಪ್ರಜ್ಞೆ. ಪರಿಸರ ಸಂರಕ್ಷಣೆ ಮತ್ತು ಮಾನವಕುಲದ ಪೋಷಣೆ ಎರಡರಲ್ಲೂ ಅದೊಂದು ಮುಖ್ಯ ಪಾತ್ರವನ್ನು ವಹಿಸುತ್ತದೆ.

ಒಟ್ಟಿನಲ್ಲಿ, ನಾನು ಹೇಳುವುದೇನೆಂದರೆ, ಮಾಲಿನ್ಯ-ಮುಕ್ತ ಪರಿಸರ, ರೋಗ-ಮುಕ್ತ ಶರೀರ, ಗೊಂದಲ-ಮುಕ್ತ ಮನಸ್ಸು, ತಡೆ-ಮುಕ್ತ ಬುದ್ಧಿ, ಆಘಾತ-ಮುಕ್ತ ಸ್ಮೃತಿ ಮತ್ತು ದುಃಖ-ಮುಕ್ತ ಆತ್ಮ ಇವುಗಳು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕಾಗಿದೆ.