ಮಂಗಳವಾರ, ಮೇ 14, 2013

ಗೀತಾ ಜ್ಞಾನ - ೭

ಬೆಂಗಳೂರು, ಭಾರತ
೧೪ ಮೇ ೨೦೧೩
ಭಯದ ನಿವಾರಣೆ

ಮುಂದಿನ ಶ್ಲೋಕದಲ್ಲಿ ಕೃಷ್ಣ ಪರಮಾತ್ಮನು ಮತ್ತಷ್ಟು ವಿವರಿಸುತ್ತಾನೆ:

'ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ I
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ II’ (೭.೧೬)

ಹಿಂದಿನ ಶ್ಲೋಕದಲ್ಲಿ, ಕೃಷ್ಣ ಪರಮಾತ್ಮನು ದುಷ್ಕೃತ್ಯಗಳನ್ನು ಮಾಡುವ ಜನರ ಬಗ್ಗೆ ಮಾತನಾಡಿದನು. ಆದರೆ, ಯಾವಾಗಲೂ ಕೇವಲ ದುಷ್ಕೃತ್ಯಗಳನ್ನು ಮಾತ್ರ ಮಾಡುತ್ತಾ ಇರುವ ವ್ಯಕ್ತಿ ಪ್ರಪಂಚದಲ್ಲಿಲ್ಲ. ಮತ್ತೆ, ಯಾವುದೇ ಒಳ್ಳೆಯ ಗುಣ ಇರದ ಯಾವುದೇ ವ್ಯಕ್ತಿ ಪ್ರಪಂಚದಲ್ಲಿಲ್ಲ.

ಪರಮಾತ್ಮನ ಆಶ್ರಯ ಹುಡುಕುವ, ಸತ್ಕರ್ಮಗಳನ್ನು ಮಾಡುವ ನಾಲ್ಕು ರೀತಿಯ ಜನರಿದ್ದಾರೆ.

ಮೊದಲನೆಯವರು ಆರ್ತಃ , ಅಂದರೆ ಖಿನ್ನರಾಗಿರುವವರೊಬ್ಬರು.

ಒಬ್ಬ ಅಜ್ಞಾನಿ ವ್ಯಕ್ತಿಯು ದುಃಖಿತನಾದಾಗ, ಅವನ ಪರಿವರ್ತನೆಯು ಆರಂಭವಾಗಿದೆಯೆಂಬುದನ್ನು ತಿಳಿಯಿರಿ. ಅವನು ತನ್ನ ರಾಕ್ಷಸೀಯ ಗುಣಗಳಿಂದ ದೂರ ಸಾಗಲು ತೊಡಗುವನು.

ಪ್ರಕೃತಿಯು ಅದನ್ನು ಎಂತಹ ಒಂದು ರೀತಿಯಲ್ಲಿ ಮಾಡಿದೆಯೆಂದರೆ, ತಪ್ಪು ಕೆಲಸಗಳನ್ನು ಮಾಡುವ ಜನರು ತಮ್ಮ ಕೃತ್ಯದ ಫಲವಾಗಿ ದುಃಖವನ್ನು ಪಡೆಯುತ್ತಾರೆ. ಒಬ್ಬರು ಇದನ್ನು ದೇವರ ಅನುಗ್ರಹವೆಂದು ಕೂಡಾ ತಿಳಿದುಕೊಳ್ಳಬೇಕು. ಯಾಕೆ?

ಯಾಕೆಂದರೆ ಒಬ್ಬರು ದುಃಖಿತರಾದಾಗ, ಅವರು ಅಂತರ್ಮುಖವಾಗಿ ತಿರುಗುತ್ತಾರೆ ಮತ್ತು ಆತ್ಮದ ಕಡೆಗೆ ಹಿಂತಿರುಗುತ್ತಾರೆ, ಯಾಕೆಂದರೆ ದುಃಖಿತರಾಗಿರಲು ಯಾರೂ ಇಷ್ಟಪಡುವುದಿಲ್ಲ. ಬಾಧೆಯನ್ನು ಅನುಭವಿಸಲು ಯಾರೂ ಇಷ್ಟಪಡುವುದಿಲ್ಲ.

ದುಃಖಿತವಾಗಿರುವುದನ್ನು ಯಾವುದೇ ಜೀವಜಂತುವೂ ಸಹಿಸುವುದಿಲ್ಲ. ಒಬ್ಬರು ದುಃಖಿತರಾಗಿರುವುದನ್ನು ಇಷ್ಟಪಡುವುದಾದರೆ, ಆಗ ಅದೊಂದು ರೋಗ. ದುಃಖದಿಂದಲೂ ಸಹ ಅವರೊಂದು ನಿರ್ದಿಷ್ಟವಾದ ಆನಂದವನ್ನು ಅನುಭವಿಸುತ್ತಾರೆ, ಅದಕ್ಕಾಗಿಯೇ ಅವರು ದುಃಖಿತರಾಗಿರುವುದರಲ್ಲಿ ಮುಳುಗಿರುವುದು.

ಕಾಲೇಜಿಗೆ ಹೋಗುವ ಈ ಕೆಲವು ವಿದ್ಯಾರ್ಥಿಗಳಿದ್ದಾರೆ. ಅವರು, ಯಾವ ಚಲನಚಿತ್ರಗಳ ಕೊನೆಯಲ್ಲಿ; ನಾಯಕ ನಾಯಕಿಯರನ್ನೂ ಒಳಗೊಂಡಂತೆ ಎಲ್ಲರೂ ಸಾಯುವರೋ ಅಂತಹ ದುರಂತ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ (ನಗು). ಅವರದನ್ನು ಬಹಳವಾಗಿ ಇಷ್ಟಪಡುವಂತೆ ತೋರುತ್ತದೆ. ಇದು ನಿಜವಾಗಿ ದುಃಖದ ಒಂದು ವಿಕೃತಿಯಾಗಿದೆ.
ಅಮೇರಿಕಾದಲ್ಲಿ, ಪಾರ್ತಾಪತ್ರಿಕೆಗಳಲ್ಲಿ, ’ಸುಂದರವಾಗಿರುವ ಹಾಗೂ ಪ್ರತಿದಿನವೂ ಒಂದು ಚೈನಿನಿಂದ ನನಗೆ ಹೊಡೆಯುವ ಒಬ್ಬಳು ಹೆಂಡತಿಯು ನನಗೆ ಬೇಕಾಗಿದ್ದಾಳೆ’ ಎಂದು ಹೇಳುವ ಜಾಹೀರಾತುಗಳು ಇರುತ್ತವೆ.

ಇತರರಿಂದ ಹೊಡೆಸಿಕೊಳ್ಳುವುದರಲ್ಲಿ ಆನಂದವನ್ನು ಕಂಡುಹುಡುಕುವ ಜನರಿದ್ದಾರೆ. ಇದು ನಿಜ! (ನಗು) ಮೊದಲನೆಯ ಸಲ ಇದನ್ನು ಓದಿದಾಗ ನಾನು ಚಕಿತಗೊಂಡೆ. ಇದು ನನ್ನ ಗಮನಕ್ಕೆ ಬಂತು. ನಾನಲ್ಲಿದ್ದಾಗ ಯಾರೋ ಒಬ್ಬರು ಇದನ್ನು ನನಗೆ ತೋರಿಸಿದರು. ಕೆಲವು ಜಾಹೀರಾತುಗಳಿರುತ್ತವೆ, ಅವುಗಳು ಹೀಗೆಂದು ಹೇಳುತ್ತವೆ, ’ಪ್ರತಿದಿನವೂ ಒಂದು ಬೂಟಿನಿಂದ ನನಗೆ ಹೊಡೆಯುವ ಒಬ್ಬ ಸಂಗಾತಿಯು ನನಗೆ ಬೇಕಾಗಿದ್ದಾರೆ.’

ಈ ಜನರಲ್ಲಿ ಅಂತಹ ಭಾವನೆಗಳಿರುವುದು ಯಾಕೆಂದರೆ, ಮಕ್ಕಳಾಗಿದ್ದಾಗ ಅವರಿಗೆ ಬಹಳಷ್ಟು ಹೊಡೆಯಲಾಗುತ್ತಿತ್ತು, ಅದಕ್ಕಾಗಿಯೇ ಅವರು ಅದನ್ನು ಈಗಲೂ ಸಹ ಆನಂದಿಸುತ್ತಾರೆ ಎಂದು ಹೇಳಲಾಗುತ್ತದೆ. ತಮ್ಮನ್ನು ಹೊಡೆಯಲು ಅವರಿಗೆ ಯಾರಾದರೊಬ್ಬರು ಬೇಕು ಯಾಕೆಂದರೆ ಅದು ಅವರಿಗೆ ಸುಖವನ್ನು ನೀಡುತ್ತದೆ.

ಮನಃಶಾಸ್ತ್ರಜ್ಞರು ಸಹ ಈ ವರ್ತನೆಯನ್ನು ಅನುಮೋದಿಸುತ್ತಾರೆ ಮತ್ತು ಅದು ತಪ್ಪಲ್ಲವೆಂದು ಹೇಳುತ್ತಾರೆ. ಅವರು ಹೇಳುವುದೇನೆಂದರೆ, ಅಂತಹ ಜನರು ಈ ರೀತಿಯ ವರ್ತನೆಗೆ ಆದ್ಯತೆ ಕೊಡುತ್ತಾರೆ, ಅದಕ್ಕಾಗಿಯೇ ಅವರು ಅದರಿಂದ ಆನಂದವನ್ನು ಪಡೆಯುತ್ತಾರೆ.

ದುಃಖವೆಂದರೆ, ಯಾವುದು ನಮಗೆ ನೋವನ್ನು ನೀಡುವುದೋ ಅದು. ನಾವು ಯಾವುದನ್ನು ಇಷ್ಟಪಡುವುದಿಲ್ಲವೋ (ಅನುಭವಿಸಲು) ಅದು.

ದುಃಖವು ದುಷ್ಕೃತ್ಯ ಮಾಡಿದವನು ಅನುಭವಿಸಲೇ ಬೇಕಾದ ಫಲವಾಗಿದೆ ಮತ್ತು ಒಬ್ಬರು ದುಃಖವನ್ನು ಅನುಭವಿಸುವಾಗ, ಅದು, ಅವರು ಅಂತರ್ಮುಖವಾಗಿ ಹೋಗುವಂತೆಯೂ, ಅವರು ಪರಿವರ್ತಿತರಾಗುವಂತೆಯೂ ಮಾಡುತ್ತದೆ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಸತ್ಕರ್ಮಗಳನ್ನು ಮಾಡುವ ನಾಲ್ಕು ರೀತಿಯ ಜನರು ನನ್ನನ್ನು ಪೂಜಿಸುತ್ತಾರೆ ಮತ್ತು ನನ್ನನ್ನು ಜ್ಞಾಪಿಸಿಕೊಳ್ಳುತ್ತಾರೆ. ಒಂದನೆಯ ರೀತಿಯವರು, ದುಃಖಿತರಾಗಿರುವವರು. ದುಃಖವು, ಜನರು ಆಧ್ಯಾತ್ಮದತ್ತ ತಿರುಗುವಂತೆ ಮಾಡುತ್ತದೆ. ಒಬ್ಬನು ದುಃಖಿತನಾಗಿರುವಾಗ, ಅವನು ಹೆಚ್ಚಾಗಿ, ’ಓ, ನಾನು ಸುಮ್ಮನೆ ಎಲ್ಲವನ್ನೂ ಬಿಡಬೇಕು. ಎಲ್ಲವನ್ನೂ ಬಿಟ್ಟುಬಿಡುವುದು’ ಎಂದು ಯೋಚಿಸುತ್ತಾನೆ. ನನ್ನನ್ನು ಪೂಜಿಸುವ ಎರಡನೆಯ ರೀತಿಯ ಜನರೆಂದರೆ, ಯಾರು ಜೀವನದಲ್ಲಿ ಏನನ್ನಾದರೂ ಬಯಸುವರೋ ಅವರು. ತಾವೇನನ್ನು ಬಯಸುವೆವೋ ಅದನ್ನು ತಮ್ಮ ಪ್ರಯತ್ನಗಳಿಂದ ಮಾತ್ರ ಪಡೆಯಲು ಸಾಧ್ಯವಿಲ್ಲವೆಂದೂ, ಅದನ್ನು ಸಾಧಿಸಲು ದೇವರ ಅಥವಾ ಗುರುವಿನ ಅನುಗ್ರಹವು ತಮಗೆ ಬೇಕೆಂದೂ ಅವರು ತಿಳಿದಿರುತ್ತಾರೆ. ನಿರ್ದಿಷ್ಟ ಬಯಕೆಗಳಿರುವ ಅಂತಹ ಜನರು ಕೂಡಾ ನನ್ನನ್ನು ಪೂಜಿಸುತ್ತಾರೆ.’

ಇದರ ಒಂದು ಉದಾಹರಣೆಯನ್ನು ನೀವು ಪರೀಕ್ಷೆಯ ಸಮಯದಲ್ಲಿ ನೋಡುವಿರಿ. ಪರೀಕ್ಷೆಯ ಸಮಯದಲ್ಲಿ, ದೇವಸ್ಥಾನದಲ್ಲಿ ವಿದ್ಯಾರ್ಥಿಗಳ ಒಂದು ಉದ್ದನೆಯ ಸಾಲು ಇರುವುದು (ನಗು). ಆ ಸಮಯದಲ್ಲಿ ಸಿಹಿತಿಂಡಿಗಳ ಮಾರಾಟವು ಒಮ್ಮಿಂದೊಮ್ಮೆಲೇ ಹೆಚ್ಚಾಗುವುದು (ದೇವಸ್ಥಾನದಲ್ಲಿರುವ ದೇವರಿಗೆ ಅರ್ಪಿಸಲು).

ನಿರ್ದಿಷ್ಟ ಬಯಕೆಗಳಿರುವ ಜನರು, ನಿರ್ದಿಷ್ಟ ದಿನಗಳಂದು ದೇವಸ್ಥಾನಕ್ಕೆ ಹೋಗುತ್ತಾರೆ; ಮಂಗಳವಾರಗಳೇ ಇತ್ಯಾದಿ. ಅವರದನ್ನು ಮಂಗಳಕರವೆಂದು ಪರಿಗಣಿಸುತ್ತಾರೆ.

ಒಬ್ಬರಿಗೆ ಕೆಲವು ದಿನಗಳ ನಂತರ ಒಂದು ನೌಕರಿಯ ಸಂದರ್ಶನವಿದ್ದರೆ, ಅವರು ದಿನವೂ ದೇವರಿಗೆ ನಮಸ್ಕರಿಸುತ್ತಾರೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಅಲ್ಲವೇ? ಕಡಿಮೆಪಕ್ಷ ಸಂದರ್ಶನದ ದಿನವಾದರೂ, ಅವರು ಖಂಡಿತವಾಗಿಯೂ ಇದೆಲ್ಲವನ್ನೂ
ಮಾಡುತ್ತಾರೆ ಮತ್ತು ’ಜೈ ಗುರುದೇವ್’ ಎಂದು ಕೂಡಾ ಹೇಳುತ್ತಾರೆ.

ಹೀಗೆ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ನನ್ನನ್ನು ಪೂಜಿಸುವ ಮತ್ತು ಜ್ಞಾಪಿಸಿಕೊಳ್ಳುವ ಎರಡನೆಯ ರೀತಿಯ ಜನರೆಂದರೆ, ಸ್ವಂತ ಆಸೆಗಳನ್ನು ಈಡೇರಿಸಲು ಬಯಸುವವರು. ಅಂತಹ ಜನರು ಕೂಡಾ ಶ್ರೇಷ್ಠರು ಮತ್ತು ಒಳ್ಳೆಯ ಸತ್ಕರ್ಮಗಳನ್ನು ಮಾಡುತ್ತಾರೆ. ದೇವರ ಅನುಗ್ರಹವಿಲ್ಲದೆ ತಮಗೆ ಬೇಕಾದುದನ್ನು ಪಡೆಯಲು ತಮ್ಮಿಂದ ಸಾಧ್ಯವಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿರುವರು ಅವರು.’

ತಾವೇನನ್ನು ಬಯಸುವೆವೋ ಅದನ್ನು ಕೇವಲ ತಮ್ಮ ಬುದ್ಧಿ ಮತ್ತು ಪ್ರಯತ್ನಗಳಿಂದ ಮಾತ್ರ ಪಡೆಯಲು ಸಾಧ್ಯವಿಲ್ಲವೆಂಬುದು ಈ ಜನರಿಗೆ ತಿಳಿದಿರುತ್ತದೆ. ಅದೃಷ್ಟ ಅಥವಾ ವಿಧಿಯು ಕೂಡಾ ಒಂದು ಪ್ರಧಾನ ಪಾತ್ರವನ್ನು ವಹಿಸುತ್ತದೆಯೆಂದು ಅವರು ನಂಬುತ್ತಾರೆ. ತಮ್ಮ ಬಯಕೆಗಳನ್ನು ಈಡೇರಿಸಲು ಯಾರು ದೇವರ ಅನುಗ್ರಹವನ್ನು ಬೇಡುವರೋ ಅಂತಹ ಜನರು ದೇವರ ಆಶ್ರಯವನ್ನು ಕೂಡಾ ಪಡೆಯುತ್ತಾರೆ.

ಕೃಷ್ಣ ಪರಮಾತ್ಮನು, ’ಜೀವನದಿಂದ ಪ್ರಾಪಂಚಿಕ ಸುಖಗಳನ್ನು ಮತ್ತು ಸಂತೋಷವನ್ನು ಬಯಸುವವರು ಕೂಡಾ ನನ್ನ ಬಳಿಗೆ ಬರುತ್ತಾರೆ. ಇವರು ಕೂಡಾ ಒಳ್ಳೆಯ ಜನರು ಮತ್ತು ಅವರು ಸ್ವಲ್ಪ ಸತ್ಕರ್ಮಗಳನ್ನು ಮಾಡಿರುವರು’ ಎಂದು ಹೇಳುತ್ತಾನೆ.
ನಂತರ ಇರುವವರೆಂದರೆ, ಯಾರು ಜೀವನದಲ್ಲಿ ಏನನ್ನಾದರೂ ಬಯಸುವರೋ,ಆದರೂ ದೇವರಲ್ಲಿ ನಂಬಿಕೆಯನ್ನಿರಿಸುವುದಿಲ್ಲವೋ ಅವರು ಮತ್ತು ಅವರು ಚಿಂತೆಗಳಿಂದ ತುಂಬಿರುತ್ತಾರೆ. ಅಂತಹ ಜನರು ಸ್ವಲ್ಪ ಕೆಟ್ಟ ಕರ್ಮವನ್ನು ಹೊಂದಿರುತ್ತಾರೆ. ಇದು ನಾಸ್ತಿಕರ ಸಮಸ್ಯೆಯಾಗಿದೆ. ತಮ್ಮನ್ನು ನಾಸ್ತಿಕರೆಂದು ಪರಿಗಣಿಸುವ ಜನರು, ಒಳಗಡೆ ಬಹಳಷ್ಟು ಭಯವನ್ನು ಹೊಂದಿರುತ್ತಾರೆ. ಯಾವಾಗೆಲ್ಲಾ ಅವರು ಯಾವುದಾದರೂ ದೊಡ್ದ ಕೆಲಸವನ್ನು ಮುಗಿಸಬೇಕಾಗುತ್ತದೆಯೋ, ಆಗ ಅವರು ಹೊರಗಡೆಯಿಂದ ದೃಢ ವಿಶ್ವಾಸವನ್ನು ಪ್ರದರ್ಶಿಸುತ್ತಾರೆ, ಆದರೆ ಒಳಗಡೆ ಅವರು ಬಹಳ ಬಲಹೀನರಾಗಿರುತ್ತಾರೆ ಮತ್ತು ಮುಂದೇನಾಗುವುದು ಎಂಬುದರ ಬಗ್ಗೆ ಯಾವಾಗಲೂ ಸಂಶಯ ಪಡುತ್ತಿರುತ್ತಾರೆ. ಬೆಂಬಲಕ್ಕಾಗಿ ನೆಚ್ಚಿಕೊಳ್ಳಲು ಅವರಿಗೆ ಏನೂ ಇರುವುದಿಲ್ಲ ಮತ್ತು ಎಲ್ಲವನ್ನೂ ತಾವೇ ಸ್ವತಃ ಮಾಡಿಕೊಳ್ಳಬೇಕೆಂದು ಅವರಿಗೆ ಅನ್ನಿಸುತ್ತದೆ.

ಅವರಿಗೆ ಎಲ್ಲವೂ ಅನಿಶ್ಚಿತವಾಗಿ ಕಾಣಿಸುತ್ತದೆ. ಪ್ರಪಂಚವು ಒಂದು ಕತ್ತಲೆಯ ಜಾಗವಾಗಿ ತೋರುತ್ತದೆ ಹಾಗೂ ಅವರು ಒಳಗಿನಿಂದ ಬಹಳ ವಿಚಲಿತರೂ, ಅಸ್ಥಿರರೂ ಆಗುತ್ತಾರೆ. ಅಂತಹ ಒಬ್ಬ ವ್ಯಕ್ತಿಯ ಕರ್ಮವು ಒಳ್ಳೆಯದಾಗಿರುವುದೆಂದು ಪರಿಗಣಿಸಲು ನಿಮಗೆ ಹೇಗೆ ಸಾಧ್ಯ?

ಯಾರ ಕರ್ಮಗಳು ಒಳ್ಳೆಯದಾಗಿರುವುವೋ ಅವರಲ್ಲಿ ಈ ದೃಢ ನಂಬಿಕೆಯಿರುತ್ತದೆ, ’ಎಲ್ಲಾ ಸಮಯದಲ್ಲೂ ದೇವರು ನನ್ನೊಂದಿಗಿದ್ದಾರೆ. ನನ್ನ ಗುರುದೇವರು ನನ್ನೊಂದಿಗಿದ್ದಾರೆ ಮತ್ತು ನನಗೆ ಬೇಕಾಗಿರುವ ಆಂತರಿಕ ಶಕ್ತಿಯೆಲ್ಲವೂ ನನ್ನಲ್ಲಿದೆ.’

ಯಾರಿಗೆ ದೇವರಲ್ಲಿ, ಗುರುವಿನಲ್ಲಿ ಮತ್ತು ತನ್ನಲ್ಲೇ ವಿಶ್ವಾಸವಿರುವುದೋ ಅವರು ಯಾವುದರ ಬಗ್ಗೆಯೂ ಭಯ ಪಡುವುದೇ ಇಲ್ಲ. ಅವರಿಗೆ ನೆಮ್ಮದಿಯಾಗಿ ನಿದ್ರಿಸಲು ಸಾಧ್ಯವಾಗುತ್ತದೆ. ತಾವೇನು ಮಾಡುವೆವೋ ಅದರಲ್ಲಿ ಅವರು ತಮ್ಮನ್ನು ತಾವೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವರು (ಯಾವುದೇ ಸಂಶಯವಿಲ್ಲದೆ). ಇದು ಯಾಕೆಂದರೆ ಅವರಲ್ಲಿ ವಿಶ್ವಾಸವಿರುತ್ತದೆ (ತಮ್ಮ ಸಾಮರ್ಥ್ಯಗಳಲ್ಲಿ) ಮತ್ತು ತಾವು ಮಾಡುವ ಎಲ್ಲದರಲ್ಲೂ ತಮಗೆ ದೇವರ ಬೆಂಬಲವಿದೆ ಎಂಬುದು ಅವರಿಗೆ ತಿಳಿದಿರುತ್ತದೆ.

ಈ ವಿಶ್ವಾಸವಿಲ್ಲದೆ ಜೀವನವು ಪ್ರಗತಿ ಹೊಂದಲು ಸಾಧ್ಯವಿಲ್ಲ. ತನ್ನಲ್ಲೇ ವಿಶ್ವಾಸ ಹೊಂದಿರುವುದು, ಸಮಾಜದಲ್ಲಿ ವಿಶ್ವಾಸ ಹೊಂದಿರುವುದು ಮತ್ತು ಎಲ್ಲೆಡೆಯೂ ಇರುವ ಆ ಅದೃಶ್ಯ ಶಕ್ತಿಯಲ್ಲಿ ವಿಶ್ವಾಸ ಹೊಂದಿರುವುದು ಮುಖ್ಯವಾಗಿದೆ. ಈ ಎಲ್ಲಾ ಮೂರು ವಿಶ್ವಾಸಗಳು ಒಂದೇ ಆಗಿವೆ, ಅವುಗಳು ಒಂದು ಇನ್ನೊಂದರಿಂದ ಬೇರೆಯಲ್ಲ.  

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ನನ್ನಲ್ಲಿ ಆಶ್ರಯ ಬೇಡುವ ಮೂರನೆಯ ರೀತಿಯ ಜನರೆಂದರೆ, ’ನಾನು ಯಾರು? ಈ ಪ್ರಪಂಚವೆಂದರೇನು? ಜೀವನದ ಅರ್ಥವೇನು?’ ಎಂದು ತಿಳಿಯಲು ಬಯಸುವವರು. ನಿಜವಾಗಿ ಜ್ಞಾನದ ದಾಹವಿರುವವರು ಕೂಡಾ ನನ್ನ ಬಳಿಗೆ ಬರುತ್ತಾರೆ (ಜಿಜ್ಞಾಸು). ನನ್ನ ಬಳಿಗೆ ಬರುವ ನಾಲ್ಕನೆಯ ರೀತಿಯ ಜನರು ಬುದ್ಧಿವಂತರು ಮತ್ತು ಜ್ಞಾನಿಗಳು. ಅವರು ಯಾರೆಂದರೆ, ಅರಿವಿರುವವರು (ಸತ್ಯದ) ಮತ್ತು ನನ್ನಲ್ಲಿ ಶ್ರದ್ಧೆಯಿರುವವರು. ಸತ್ಯವನ್ನು ಅರಿತಿರುವ ಒಬ್ಬರು ಖಂಡಿತವಾಗಿ ನನ್ನಲ್ಲಿ ಶ್ರದ್ಧೆಯನ್ನು ಹೊಂದುವರು. ಆತ್ಮವನ್ನು ಅರಿತಿರುವ ಒಬ್ಬರಲ್ಲಿ ಶ್ರದ್ಧೆ ಇಲ್ಲದಿರಲು ಹೇಗೆ ಸಾಧ್ಯ?’

’ಹೀಗೆ ಈ ನಾಲ್ಕು ರೀತಿಯ ಜನರು ನನ್ನಲ್ಲಿ ಆಶ್ರಯವನ್ನು ಪಡೆಯುತ್ತಾರೆ; ದುಃಖಿತರಾಗಿರುವವರು; ಪ್ರಾಪಂಚಿಕ ಆಸೆಗಳುಳ್ಳವರು; ಜಿಜ್ಞಾಸುಗಳು ಮತ್ತು ಜ್ಞಾನಿಗಳು. ಮತ್ತು ಈ ಎಲ್ಲಾ ನಾಲ್ಕು ರೀತಿಯ ಜನರು ಬಹಳ ಒಳ್ಳೆಯ ಕರ್ಮವನ್ನು ಹೊಂದಿರುತ್ತಾರೆ’ ಎಂದು ಕೃಷ್ಣ ಪರಮಾತ್ಮನು ಹೇಳುತ್ತಾನೆ.

ಈಗ ನೀವು ಹಿಂದೆ ತಿರುಗಿ, ನಿಮ್ಮ ಜೀವನದಲ್ಲಿ ನೀವು ಖಿನ್ನರಾಗಿದ್ದ ಹಾಗೂ ನೀವು ದೇವರ ಕಡೆಗೆ ತಿರುಗಿದ ಆ ಸಮಯಗಳ ಬಗ್ಗೆ ಚಿಂತನೆ ಮಾಡಬೇಕು; ಕೆಲವು ಬಯಕೆಗಳು ಈಡೇರಬೇಕೆಂದು ನೀವು ಇಚ್ಛಿಸಿದ್ದ ಸಮಯಗಳು; ನಿಮ್ಮಲ್ಲಿ ಜ್ಞಾನಕ್ಕಾಗಿ ದಾಹವಿದ್ದ ಸಮಯಗಳು ಮತ್ತು ಒಬ್ಬ ಜ್ಞಾನಿ ವ್ಯಕ್ತಿಯಂತೆ ನೀವು ದೇವರ ಕಡೆಗೆ ತಿರುಗಿದ ಸಮಯಗಳು.

ಜ್ಞಾನಿಗಳೆಂದರೆ, ಯಾರು ತಮ್ಮ ಜೀವನದಲ್ಲಿ ಪರಿವರ್ತನೆಯನ್ನು ನೋಡುವರೋ ಮತ್ತು ಕೃತಜ್ಞತೆಯ ಒಂದು ಭಾವದೊಂದಿಗೆ ಎಲ್ಲವನ್ನೂ ದೇವರಿಗೆ ಸಮರ್ಪಿಸುವರೋ ಅವರು. ಅವರಿಗೆ, ’ನಾನು ದೇವರಿಂದ ಎಲ್ಲವನ್ನೂ ಯಥೇಚ್ಛವಾಗಿ ಪಡೆದಿದ್ದೇನೆ.
ನನಗೇನೂ ಬೇಕಾಗಿಲ್ಲ’ ಎಂದು ಅನ್ನಿಸುತ್ತದೆ. ತೃಪ್ತಿಯ ಒಂದು ಭಾವನೆಯೊಂದಿಗೆ ಮತ್ತು ಒಂದು ಆಳವಾದ ಕೃತಜ್ಞತಾ ಭಾವದೊಂದಿಗೆ ಯಾರು ದೇವರಿಗೆ ಶರಣಾಗುವರೋ ಅವರು ಜ್ಞಾನಿಗಳು. ಅಂತಹ ಜನರಿಗೆ ಯಾವುದರ ಅಗತ್ಯವೂ ಇರುವುದಿಲ್ಲ. ತಾವು ಕೇಳುವ ಮೊದಲೇ ತಮಗೆ ಎಲ್ಲವೂ ಸಿಕ್ಕಿತೆಂದು ಅವರಿಗೆ ಅನ್ನಿಸುತ್ತದೆ. ತಮಗೆ ದಾಹದ ಅನುಭವವಾಗುವ ಮೊದಲೇ, ನೀರನ್ನು ಕೊಡಲಾಯಿತು. ತನಗೆ ಅರ್ಹತೆಯಿರುವುದಕ್ಕಿಂತಲೂ ಎಷ್ಟೋ ಹೆಚ್ಚಿನದನ್ನು ತಾನು ಪಡೆದಿರುವೆನೆಂದು ಯಾರಿಗೆ ಅನ್ನಿಸುವುದೋ ಅವನು ಒಬ್ಬ ಜ್ಞಾನಿಯಾಗಿರುವನು. ಈ ತಿಳುವಳಿಕೆಯು ಒಬ್ಬ ವ್ಯಕ್ತಿಯಲ್ಲಿ ಉದಯಿಸುವಾಗ, ಅವನು ಪ್ರೇಮದಿಂದ, ಕೃತಜ್ಞತೆಯಿಂದ ಮತ್ತು ತೃಪ್ತಿಯಿಂದ ತುಂಬಿರುತ್ತಾನೆ ಹಾಗೂ ಒಮ್ಮಿಂದೊಮ್ಮೆಲೇ ದೇವರಲ್ಲಿ ಆಶ್ರಯವನ್ನು ಕೋರುತ್ತಾನೆ. ಜ್ಞಾನವಿಲ್ಲದೆ ಯಾವುದೇ ತೃಪ್ತಿಯಿರಲು ಸಾಧ್ಯವಿಲ್ಲ. ಜ್ಞಾನವಿಲ್ಲದೆ ಯಾವುದೇ ಕೃತಜ್ಞತೆಯಿರಲು ಸಾಧ್ಯವಿಲ್ಲ. ಯಾರು ತೃಪ್ತರಾಗಿಲ್ಲವೋ ಅವರು ಏನಾದರೂ ಒಂದಲ್ಲ ಒಂದರ ಬೇಡಿಕೆಯಿಡುತ್ತಾ ಹೋಗುತ್ತಾರೆ.

ಹೀಗೆ ನಾಲ್ಕು ಬಗೆಯ ಜನರು ದೇವರಲ್ಲಿ  ಆಶ್ರಯ ಪಡೆಯುತ್ತಾರೆ. ಈ ನಾಲ್ಕೂ ರೀತಿಗಳು ಒಬ್ಬನಲ್ಲೇ ಬರುವ ಸಾಧ್ಯತೆಗಳಿವೆ. ಮೊದಲಾಗಿ, ಒಬ್ಬನು ದುಃಖಿತನಾಗಿರಬಹುದು ಮತ್ತು ದೇವರಲ್ಲಿ ಆಶ್ರಯ ಪಡೆಯಬಹುದು. ಮತ್ತೆ ಜೀವನದಿಂದ ಏನನ್ನಾದರೂ ಪಡೆಯಲು ದೇವರತ್ತ ತಿರುಗಬಹುದು. ಮತ್ತೆ ಜ್ಞಾನದಾಹದಿಂದ, ಆ ಮೇಲೆ ಒಬ್ಬ ಜ್ಞಾನಿಯಾಗಿ. ಈ ನಾಲ್ಕೂ ಹಂತಗಳು, ಬೇರೆ ಬೇರೆ ಸಮಯದಲ್ಲಿ ಒಬ್ಬನ ಜೀವನದಲ್ಲಿ ಸಂಭವಿಸಬಹುದು.

ನೀವು ಎಂದೂ ಒಂದೇ ಹಂತದಲ್ಲಿ ಇರುತ್ತೀರೆಂದಲ್ಲ. ದೇವರತ್ತ ಹೋದಾಗಲೆಲ್ಲಾ ನೀವು ದುಃಖಿತರಾಗಿರಬೇಕೆಂದೂ ಅಲ್ಲ. ಅದು ಆವಶ್ಯಕವಲ್ಲ!