ಶುಕ್ರವಾರ, ಮೇ 24, 2013

ಪ್ರಾಚೀನ ಶಿಕ್ಷಣಗಳ ಸಾರ

ಹಾಂಗ್‌ಕಾಂಗ್, ಚೈನಾ
ಮೇ ೨೪, ೨೦೧೩

ವತ್ತು ಹುಣ್ಣಿಮೆಯಾಗಿದೆ, ಬುದ್ಧ ಪೌರ್ಣಿಮೆ. ಬುದ್ಧನು ಜನಿಸಿದುದು ಇವತ್ತಿನ ದಿನ ಮತ್ತು ಅವನು ಅದೇ ದಿನದಂದೇ ಜ್ಞಾನೋದಯವನ್ನು ಹೊಂದಿದನು.

ನೀವೆಲ್ಲರೂ ಹಾಯಾಗಿರುವಿರೇ? ಔಪಚಾರಿಕತೆಗಳು ನಮ್ಮನ್ನು ಒಂದು ದೂರದ ಮಟ್ಟದಲ್ಲಿ ಇರಿಸುತ್ತವೆ ಮತ್ತು ಸತ್ಸಂಗವೆಂದರೆ ಒಟ್ಟಾಗಿ ನಿಕಟವಾಗಿ ಕುಳಿತುಕೊಳ್ಳುವುದು. ಮುಕ್ತವಾಗಿರಿ, ಹಾಯಾಗಿರಿ; ಸಂಪೂರ್ಣವಾಗಿ ವಿಶ್ರಾಮದಿಂದ, ಯಾವುದೇ ಔಪಚಾರಿಕತೆಯಿಲ್ಲದೆ.

ನಾವು ಯಾವುದನ್ನು ಜೀವನವೆಂದು ಅಂದುಕೊಂಡಿರುವೆವೋ ಅದು ನಿಜವಾದ ವಾಸ್ತವಿಕತೆಯ ಒಂದು ಚಿಕ್ಕ ಅಂಶವಾಗಿದೆ. ಇಲ್ಲಿನ ಪ್ರತಿಯೊಂದು ಆಗುವಿಕೆಯನ್ನೂ, ಸ್ಥೂಲಕ್ಕಿಂತ ಹೆಚ್ಚು ಶಕ್ತಿಯನ್ನು ಹೊಂದಿದ ಒಂದು ಸೂಕ್ಷ್ಮ ಪ್ರಪಂಚದಲ್ಲಿ, ಒಂದು ಸೂಕ್ಷ್ಮ ವಲಯದಲ್ಲಿ ಮಾಡಲಾಗಿದೆ.

ಇವತ್ತು, ವಿಜ್ಞಾನಿಗಳು ಕೂಡಾ ಇದನ್ನು ಸಾಬೀತುಪಡಿಸಿದ್ದಾರೆ ಮತ್ತು ಅವರು ಅದೇ ತೀರ್ಮಾನಕ್ಕೆ ಬಂದಿದ್ದಾರೆ. ಪ್ರಪಂಚದಲ್ಲಿನ ಆಗುವಿಕೆ; ಯಾವುದನ್ನು ನಾವು ನೋಡುವೆವೋ ಅದು ಒಂದು ಪೂರ್ವ-ಮುದ್ರಿತ ಸಿ.ಡಿ.ಯಂತೆ. ಸೂಕ್ಷ್ಮ ಜಗತ್ತಿನಲ್ಲಿ ಎಲ್ಲವೂ, ಒಂದು ಇನ್ನೂ ಆಳವಾದ ಮಹತ್ವವನ್ನು ಹೊಂದಿದೆ ಮತ್ತು ನಾವೆಲ್ಲರೂ ಸೂಕ್ಷ್ಮ ಶರೀರಗಳನ್ನು ಹೊಂದಿದ್ದೇವೆ.

ಒಂದು ಸ್ಥೂಲ ಶರೀರವಿದೆ, ಮತ್ತೆ ಒಂದು ಸೂಕ್ಷ್ಮ ಶರೀರವಿದೆ. ಸೂಕ್ಷ್ಮದ ಆಚೆಗೆ ಕಾರಣ ಶರೀರವಿದೆ ಹಾಗೂ ನಂತರ, ನಾವು ವಾಸ್ತವವೆಂದು ಯೋಚಿಸುವ ಪ್ರಪಂಚದ ಸಂಭವಗಳಿವೆ.

ಭೌತಶಾಸ್ತ್ರದ ಮಹಾನ್ ಪ್ರಾಚಾರ್ಯರಲ್ಲಿ ಒಬ್ಬರಾದ, ಜರ್ಮನಿಯ ಪ್ರೊಫೆಸರ್ ಡಿ ಹೂರೆ ಅವರು ಬೆಂಗಳೂರು ಆಶ್ರಮಕ್ಕೆ ಬಂದರು ಮತ್ತು ಒಂದು ಬಹಳ ಆಸಕ್ತಿಕರವಾದ ವಿಷಯವನ್ನು ಹೇಳಿದರು. ಅವರಂದರು, "ಗುರುದೇವ, ನಾನು ವಸ್ತುಗಳ ಬಗ್ಗೆ ೪೫ ವರ್ಷಗಳ ಕಾಲ ಅಧ್ಯಯನ ಮಾಡಿದೆ, ತಿಳಿದು ಬಂದುದೇನೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು! ಆದುದರಿಂದ ಇವತ್ತು, ನಾನೊಂದು ಭಾಷಣವನ್ನು ಮಾಡುವಾಗ, ನಾನು ಬೌದ್ಧ ಸಿದ್ಧಾಂತ ಅಥವಾ ಯಾವುದೋ ಪೌರಾತ್ಯ ತತ್ವಜ್ಞಾನದ ಬಗ್ಗೆ ಮಾತನಾಡುತ್ತಿರುವೆನೆಂದು ಜನರು ಯೋಚಿಸುತ್ತಾರೆ ಯಾಕೆಂದರೆ, ವಸ್ತುವು ಅಸ್ತಿತ್ವದಲ್ಲಿಲ್ಲವೆಂದೂ, ಇರುವುದು ಕೇವಲ ತರಂಗಗಳೆಂದೂ ನಾನು ಹೇಳುತ್ತೇನೆ."

ಯಾವುದನ್ನು ನಾವು ವಸ್ತುವೆಂದು ಅಂದುಕೊಳ್ಳುವೆವೋ, ನಿಜವಾಗಿ ಅದು ವಸ್ತುವಲ್ಲ. ವಸ್ತುವೆಂದರೆ ತರಂಗಗಳು, ಚೈತನ್ಯವಲ್ಲದೆ ಬೇರೇನೂ ಅಲ್ಲ. ಈ ಸಂಪೂರ್ಣ ವಿಶ್ವವು ಒಂದು ತರಂಗ ಪ್ರಕ್ರಿಯೆಯಲ್ಲದೆ ಬೇರೇನೂ ಅಲ್ಲವೆಂದು ಕ್ವಾಂಟಮ್ ಭೌತಶಾಸ್ತ್ರ ಹೇಳುತ್ತದೆ.

ಹೀಗೆ, ವಸ್ತುವು ಅಸ್ತಿತ್ವದಲ್ಲಿಲ್ಲ, ನಾವು ಯಾವುದನ್ನು ನೋಡುವೆವೋ ಅದು ನಿಜವಾಗಿ ಅಸ್ತಿತ್ವದಲ್ಲಿಲ್ಲವೆಂದು ಪ್ರೊಫೆಸರ್ ಡಿ ಹೂರೆಯವರು ಹೇಳಿದರು!

ನೀವು ನಿಮ್ಮದೇ ಶರೀರವನ್ನು ನೋಡಿದರೆ, ಸಂಪೂರ್ಣ ಶರೀರವನ್ನು ಒಂದು ಚಿಕ್ಕ ಪೆಟ್ಟಿಗೆಯಾಗಿ ಕಟ್ಟಿಬಿಡಬಹುದು. ನಿಮ್ಮ ಶರೀರದಲ್ಲಿರುವ ಎಲ್ಲವನ್ನೂ ಕುಗ್ಗಿಸಬಹುದು. ಈ ಶರೀರದಲ್ಲಿರುವ ಘನಪದಾರ್ಥ ಕೇವಲ ಅಷ್ಟು ಮಾತ್ರ, ಉಳಿದುದೆಲ್ಲವೂ ಟೊಳ್ಳು ಮತ್ತು ಖಾಲಿ ಜಾಗ.

ಚರ್ಮದ ಒಂದು ತುಂಡನ್ನು ನೀವು ಸೂಕ್ಷ್ಮದರ್ಶಕದ ಅಡಿಯಲ್ಲಿ ಇಟ್ಟು ನೋಡಿದರೆ, ಅದೊಂದು ಸೊಳ್ಳೆ ಪರದೆಯಂತೆ ಕಾಣಿಸುವುದು. ಅಲ್ಲಿ ಬಹಳಷ್ಟು ಖಾಲಿ ಜಾಗವಿದೆ. ನಮ್ಮ ಶರೀರದ ಸುಮಾರು ೬೦ ಶೇಕಡಾವು ನೀರಿನ ಅಂಶದಿಂದ ಮಾಡಲ್ಪಟ್ಟಿದೆ, ೧೫ ಶೇಕಡಾ ವಾಯು ಅಂಶವಾಗಿದೆ ಮತ್ತು ಉಳಿದುದರಲ್ಲಿ ೯೦ ಶೇಕಡಾವು ಆಕಾಶ ಅಂಶವಾಗಿದೆ.

ಆದುದರಿಂದ, ನಮ್ಮ ಶರೀರವು ಬೇರೆ ಎಲ್ಲದಕ್ಕಿಂತಲೂ ಹೆಚ್ಚು ಆಕಾಶವನ್ನು ಹೊಂದಿದೆ. ನಿಮ್ಮ ಮನಸ್ಸೆಲ್ಲವೂ ಆಕಾಶವಾಗಿದೆ.
ಪರಮಾತ್ಮ ಬುದ್ಧನು ಇದನ್ನೇ ಹೇಳಿದನು, "ಎಲ್ಲವೂ ಏನೂ ಅಲ್ಲ!"

ನಿಮ್ಮ ಶರೀರವು ಏನೂ ಅಲ್ಲ, ನಿಮ್ಮ ಮನಸ್ಸು ಏನೂ ಅಲ್ಲ, ನೀವು ಏನನ್ನು ನೋಡುವಿರೋ ಅದು ಏನೂ ಅಲ್ಲ, ನಾನು ಏನೂ ಅಲ್ಲ, ನೀವು ಏನೂ ಅಲ್ಲ! ನಿಜವಾದುದು ಏನೆಂದರೆ, ಎಲ್ಲವೂ ಕೇವಲ ಕಂಪನಗಳು, ಕೇವಲ ತರಂಗಗಳು. ಸಂಪೂರ್ಣ ವಿಶ್ವವು ಕೇವಲ ತರಂಗಗಳಾಗಿವೆ.

ಪ್ರಾಚೀನ ಗ್ರಂಥವಾದ ಅಷ್ಟಾವಕ್ರ ಗೀತೆಯಲ್ಲಿ, ’ತರಂಗಾಃ ಫೇನಬುದ್‌ಬುದಾಃ’ ಎಂದು ಹೇಳಲಾಗಿದೆ. ಸಂಪೂರ್ಣ ವಿಶ್ವವು ಒಂದು ಸಾಗರದಂತೆ ಮತ್ತು ಪ್ರತಿಯೊಂದು ಜೀವಿಯೂ ಸಾಗರದಲ್ಲಿನ ಒಂದು ಅಲೆಯಂತೆ; ಅಲೆಗಳು ಏಳುತ್ತವೆ ಮತ್ತು ಇಳಿಯುತ್ತವೆ. ಅದೇ ರೀತಿಯಲ್ಲಿ, ಈ ಎಲ್ಲಾ ವರ್ಷಗಳಲ್ಲಿ; ೮೦ ವರ್ಷಗಳು ಅಥವಾ ೯೦ ವರ್ಷಗಳು, ಈ ಎಲ್ಲಾ ಶರೀರಗಳು ಎದ್ದಿವೆ ಮತ್ತು ನಂತರ ಅವುಗಳು ಸಾಗರಕ್ಕೆ ಮರಳಿ ಹೋಗುತ್ತವೆ. ಮತ್ತೆ ಅವುಗಳು ಏಳುತ್ತವೆ ಮತ್ತು ಅವುಗಳು ಮರಳಿ ಹೋಗುತ್ತವೆ.

ವಿಶ್ವವು ಬಿಲಿಯಗಟ್ಟಲೆ ವರ್ಷಗಳಿಂದ ಮುಂದುವರಿಯುತ್ತಿದೆ ಮತ್ತು ೬೦ ವರ್ಷಗಳ, ೮೦ ವರ್ಷಗಳ ಅಥವಾ ೧೦೦ ವರ್ಷಗಳ ಈ ಜೀವನವು ಏನೂ ಅಲ್ಲ. ಅದು ಸಾಗರದಲ್ಲಿನ ಒಂದು ಅಲೆಯಂತೆ.

ಹಲವಾರು ವರ್ಷಗಳಿಂದ ಈ ಅಲೆಗಳು ಏಳುತ್ತಿವೆ ಮತ್ತು ಅದೇ ನೀರಿಗೆ ಮರಳಿ ಹೋಗುತ್ತಿವೆ.

ನೀವು ಎಚ್ಚೆತ್ತುಕೊಂಡು, ಇದೆಲ್ಲವೂ ಏನೂ ಅಲ್ಲ, ಎಲ್ಲವೂ ಏನೂ ಅಲ್ಲವೆಂಬುದನ್ನು ಅರ್ಥ ಮಾಡಿಕೊಂಡಾಗ ನೀವು ಮುಗುಳ್ನಗುವಿರಿ ಮತ್ತು ಅದುವೇ ನಿರ್ವಾಣವೆಂದು ಕರೆಯಲ್ಪಡುವುದು!

ನಿರ್ವಾಣವೆಂದರೇನು? ನಿರ್ವಾಣವೆಂದರೆ, ಎಲ್ಲವೂ ಏನೂ ಅಲ್ಲ! ಎಂದು. ಇದನ್ನು ನೀವು ತಿಳಿದುಕೊಂಡಾಗ, ಅಂತಹ ಮುಕ್ತಿಯು ಬರುತ್ತದೆ. ಇದು ಪ್ರಾಚೀನ ಶಿಕ್ಷಣಗಳ ಸಾರವಾಗಿದೆ. ಟಾವೋ ಎಂದರೆ ಇದುವೇ, ವೇದಾಂತವೆಂದರೆ ಇದುವೇ ಮತ್ತು ಭಗವಾನ್ ಬುದ್ಧನ ಬೋಧನೆಗಳು ಇದುವೇ ಆಗಿದೆ.

ಇವತ್ತು ಬುದ್ಧ ಪೌರ್ಣಿಮೆಯಾಗಿರುವುದರಿಂದ, ನಾನು ನಿಮಗೆ ಭಗವಾನ್ ಬುದ್ಧನ ಜೀವನದ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ.

ಭಗವಾನ್ ಬುದ್ಧನು ಪ್ರಪಂಚದಲ್ಲಿನ ದುಃಖವನ್ನು ನೋಡಿದಾಗ, ಅವನಂದನು, "ಜೀವನಕ್ಕೆ ಯಾವುದೇ ಅರ್ಥವಿಲ್ಲ. ನಿಮಗೆ ವಯಸ್ಸಾಗಬೇಕಿದ್ದರೆ ಮತ್ತು ನೀವು ಸಾಯಬೇಕಿದ್ದರೆ, ಆಗ ಜೀವಿಸುವುದರಲ್ಲಿ ಅರ್ಥವೇನಿದೆ!"

ಅವನಿಗೆ ಒಬ್ಬ ರೋಗಿಷ್ಠ ವ್ಯಕ್ತಿ, ಒಬ್ಬ ಮೃತ ವ್ಯಕ್ತಿ ಮತ್ತು ಒಬ್ಬ ಸನ್ಯಾಸಿ ಎದುರಾದಾಗ, ಅವನು ತನ್ನ ಅರಮನೆಯನ್ನು ಬಿಟ್ಟು ಹಲವಾರು ವರ್ಷಗಳವರೆಗೆ ಧ್ಯಾನದಲ್ಲಿ ಕುಳಿತನು. ಅವನು ಜ್ಞಾನೋದಯವನ್ನು ಹೊಂದಿದ ಬಳಿಕ, ಏಳು ದಿನಗಳವರೆಗೆ ಅವನು ಒಂದು ಶಬ್ದವನ್ನೂ ಮಾತನಾಡಲಿಲ್ಲ. ಸೂಕ್ಷ್ಮ ಪ್ರಪಂಚದ ದೇವದೂತರು ಮತ್ತು ದೇವತೆಗಳು ಚಿಂತಿತರಾದರು. ಬಹಳ ದೀರ್ಘ ಕಾಲದ ನಂತರ ಬುದ್ಧನು ಭೂಮಿಯ ಮೇಲೆ ಬಂದಿರುವನು, ಅವನು ಯಾಕೆ ಏನನ್ನೂ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.

ಬುದ್ಧನು ಹೇಳಿದನು, "ಹೇಗಿದ್ದರೂ, ಯಾವ ಜನರಿಗೆ ತಿಳಿದಿರುವುದೋ ಅವರಿಗೆ ತಿಳಿದಿದೆ ಮತ್ತು ಯಾರಿಗೆ ತಿಳಿದಿಲ್ಲವೋ ಅವರಿಗೆ, ನಾನು ಮಾತನಾಡುವುದರಿಂದಲೂ ತಿಳಿಯದು. ಹಣ ಮಾಡುವುದರಲ್ಲಿ, ಸಂಬಂಧಗಳನ್ನು ಸರಿಪಡಿಸುವುದರಲ್ಲಿ, ಜಗಳವಾಡುವುದರಲ್ಲಿ, ತಿನ್ನುವುದರಲ್ಲಿ ಮತ್ತು ನಿದ್ರಿಸುವುದರಲ್ಲಿ ಅವರು ಎಷ್ಟೊಂದು ವ್ಯಸ್ತರಾಗಿರುವರೆಂದರೆ, ನಾನು ಹೇಳುವುದರಿಂದ ಯಾವುದೂ ಅವರ ಮನಸ್ಸುಗಳೊಳಕ್ಕೆ ಹೋಗಲಾರದು."

ಹೀಗೆ ಅವನು ಏಳು ದಿನಗಳವರೆಗೆ ಮೌನವನ್ನು ಪಾಲಿಸಿದನು. ಆಗ ಎಲ್ಲಾ ದೇವತೆಗಳು ಮತ್ತು ದೇವದೂತರು, ಗಡಿರೇಖೆಯಲ್ಲಿರುವ ಕೆಲವು ಜನರಿರುವರು ಎಂದು ಹೇಳುವುದರೊಂದಿಗೆ ಬುದ್ಧನೊಂದಿಗೆ ವಾದ ಮಾಡಿದರು. ’ನೀವು ಅವರಿಗೆ ಕೇವಲ ಹೇಳಿದರೆ ಸಾಕು, ಅವರಿಗೆ ಅದು ತಿಳಿಯುತ್ತದೆ! ಸ್ವಲ್ಪ ಕಲ್ಪನೆಯಿರುವ ಮತ್ತು ನಿಜವಾಗಿ ತಿಳಿಯಲು ಬಯಸುವ ಜನರಿದ್ದಾರೆ, ಅವರಿಗಾಗಿ ನೀವು ಮಾತನಾಡಲೇಬೇಕು.’

ನಂತರ ಭಗವಾನ್ ಬುದ್ಧನು ಆ ದಿನದಿಂದ; ಏಳನೆಯ ದಿನದಿಂದ ಮಾತನಾಡಲು ಪ್ರಾರಂಭಿಸಿದನು.

ಏಳನೆಯ ದಿನದಂದು, ಹುಣ್ಣಿಮೆಯ ಬಳಿಕ ಭಗವಾನ್ ಬುದ್ಧನು ಮಾತನಾಡಲು ತೊಡಗಿದನು ಮತ್ತು ಅವನು ಹೇಳಿದುದೇನೆಂದರೆ, ’ಇದೆಲ್ಲವೂ ಏನೂ ಅಲ್ಲ’ ಎಂದು!

ಆದಿಶಂಕರರೂ ಅದನ್ನೇ ಹೇಳಿದರು, ’ನೀವೇನು ನೋಡುತ್ತಿರುವಿರೋ ಅದೆಲ್ಲವೂ ಮಾಯೆ, ಇದು ಮಾಯೆ.’
ಮಾಯೆಯೆಂದರೆ, ಯಾವುದನ್ನು ಅಳತೆ ಮಾಡಲು ಸಾಧ್ಯವಿದೆಯೋ ಮತ್ತು ಯಾವುದನ್ನು ಬದಲಾಯಿಸಲು ಸಾಧ್ಯವಿದೆಯೋ ಅದು. ಯಾವುದೆಲ್ಲಾ ಬದಲಾಗುವುದೋ ಅದು ಮಾಯೆಯಾಗಿದೆ. ನಿಮ್ಮ ಸುತ್ತಲೂ ಎಲ್ಲವೂ ಬದಲಾಗುವುದಿಲ್ಲವೇ?

ಭಗವಾನ್ ಬುದ್ಧನು ಹೇಳಿದನು, ’ಎಲ್ಲವೂ ಶೂನ್ಯ (ಏನೂ ಅಲ್ಲ).’

ಆದಿಶಂಕರರು ಏನನ್ನು ಹೇಳಿದರೋ ಅದು ಸ್ವಲ್ಪ ವ್ಯತ್ಯಸ್ತವಾಗಿದೆ. ಅವರಂದರು, "ಇದೆಲ್ಲವೂ ಸಂಪೂರ್ಣ ಬ್ರಹ್ಮವಾಗಿದೆ, ಇದೆಲ್ಲವೂ ಒಂದು."

ಎಲ್ಲವೂ ಶಕ್ತಿಯ ಮೇಲೆ, ಒಂದು ದೈವತ್ವದ ಮೇಲೆ ಆಧರಿತವಾಗಿದೆ. ನಾವೇನನ್ನು ನೋಡುವೆವೋ ಅದೆಲ್ಲವೂ ಒಂದು ಕನಸಿನಂತೆ.

ನೀವು ಈ ಕೂಡಲೇ ಒಂದು ವಿಷಯವನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ. ಎಚ್ಚೆತ್ತುಕೊಂಡು ನೋಡಿ, ಈ ಕ್ಷಣದವರೆಗೆ, ನೀವು ಇಲ್ಲಿಗೆ ಬರುವಲ್ಲಿವರೆಗೆ, ಕಳೆದ ೩೦ ವರ್ಷಗಳು, ೫೦ ವರ್ಷಗಳವರೆಗೆ ನಿಮ್ಮ ಜೀವನದಲ್ಲಿ ಏನೇನೆಲ್ಲಾ ಆಗಿದೆಯೋ, ಅದು ಒಂದು ಕನಸಿನಂತೆ ಅಲ್ಲವೇ?

ನಿಮ್ಮ ಮನಸ್ಸನ್ನು ಮುಂದಕ್ಕೆ ಮತ್ತು ಹಿಂದಕ್ಕೆ ತೆಗೆದುಕೊಂಡು ಹೋಗಿ, ಇದು ಮನಸ್ಸಿನ ಫಾಸ್ಟ್‌ಫೋರ್‌ವರ್ಡ್ ಮತ್ತು ರಿವೈಂಡ್ ಮಾಡುವಿಕೆಯಾಗಿದೆ. ನಿಮ್ಮದೇ ಸ್ವಂತ ಯಂತ್ರವನ್ನು ಚಾಲನೆ ಮಾಡಲು ಕಲಿಯಿರಿ.

ಈಗ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ.  ನೀವಿಲ್ಲಿ ಕುಳಿತಿರುವಿರಿ, ನೀವು ಮನೆಗೆ ಮರಳಿ ಹೋಗುವಿರಿ, ಊಟ ಮಾಡುವಿರಿ ಮತ್ತು ನಿದ್ರಿಸುವಿರಿ. ನಾಳೆ ನೀವು ಏಳುವಿರಿ, ನಿಮ್ಮ ಹಲ್ಲುಗಳನ್ನುಜ್ಜುವಿರಿ ಮತ್ತು ನಿಮ್ಮ ದೈನಂದಿನ ಕೆಲಸಗಳನ್ನು ಮಾಡುವಿರಿ. ಮರುದಿನ ಕಳೆಯುವುದು, ಮೂರನೆಯ ದಿನ ಕಳೆಯುವುದು ಮತ್ತು ಜೂನ್ ಬರುವುದು. ನಂತರ ಜುಲೈ, ಅಗಸ್ಟ್, ಸೆಪ್ಟೆಂಬರ್ ಮತ್ತು ಹೊಸ ವರ್ಷದ ಕೂಟ ನಡೆಯುವುದು. ಅದೆಲ್ಲವೂ ಹೋಗುತ್ತದೆ! ಎಲ್ಲಾ ದಿನಗಳು ಹೋಗುತ್ತವೆ. ಅದೊಂದು ಕನಸಿನಂತೆ ಅಲ್ಲವೇ? ನಾನು ನಿಂತುಕೊಂಡು ನಿಮ್ಮೊಂದಿಗೆ ಮಾತನಾಡುತ್ತಿರುವುದು ಒಂದು ಕನಸಾಗಿರುವ ಸಾಧ್ಯತೆಯಿದೆಯೇ? ಇದೊಂದು ವಾಸ್ತವವೆಂಬುದು ನಿಮಗೆ ಹೇಗೆ ಗೊತ್ತು? ಇದೊಂದು ಕನಸಾಗಿರಲೂಬಹುದು.

ವರ್ತಮಾನವು ಒಂದು ಕನಸಾಗಿರಬಹುದು, ವರ್ತಮಾನವನ್ನು ಪ್ರಶ್ನಿಸಿ. ಭವಿಷ್ಯವು ಒಂದು ಕನಸಿನಂತೆ.
ನಿಮ್ಮ ಗಮನವನ್ನು ಪಲ್ಲಟಿಸಿ ಈ ವಾಸ್ತವವನ್ನು ನೋಡಲು ನೀವು ಸಫಲರಾದರೆ, ಇದರ ಮೇಲಿನದನ್ನು ನೀವು ನೋಡುವಿರಿ.

ಇದರ ಮೇಲೆ ಮತ್ತು ಇದನ್ನು ಮೀರಿದುದು ಏನೋ ಇದೆ, ಅದು ಉಳಿಯುತ್ತದೆ, ಅದು ಬಹಳ ಸುಂದರವಾಗಿದೆ, ಅದುವೇ ಆತ್ಮ, ಅದುವೇ ಸತ್ಯ. ಮತ್ತೆ ಅದರಿಂದ ನಿಮಗೆ ನಿಮ್ಮ ಜೀವನದಲ್ಲಿ ಎಂತಹ ಅಸಾಧಾರಣ ಶಕ್ತಿ, ಅಸಾಧಾರಣ ಚೈತನ್ಯ, ಅಸಾಧಾರಣ ಪ್ರೀತಿ ಮತ್ತು ಸೌಂದರ್ಯವನ್ನು ಗಳಿಸಲು ಸಾಧ್ಯವಾಗುವುದೆಂದರೆ, ಯಾವುದಕ್ಕೂ ಅದನ್ನು ಅಲ್ಲಾಡಿಸಲು ಸಾಧ್ಯವಿಲ್ಲ.

ನೀವೇನು ಮಾಡಬೇಕಾಗಿದೆ? ನೀವು ಕೇವಲ ಎಚ್ಚೆತ್ತುಕೊಂಡು ಸ್ವಿಚ್ಚನ್ನು ಆನ್ ಮಾಡಬೇಕಾಗಿದೆ. ಈ ಗುಂಡಿಯನ್ನು ಆರಿಸಿ ಮತ್ತು ಇನ್ನೊಂದನ್ನು ಆನ್ ಮಾಡಿ.

ಪ್ರತಿಯೊಂದು ಕೋನದಲ್ಲಿ ಬೇರೇನೋ ಕಾಣಿಸುವ ಈ ತ್ರೀ ಡಿ ಹಾಲೋಗ್ರಾಂ ಚಿತ್ರಗಳು ನಿಮಗೆ ತಿಳಿದಿವೆಯೇ? ಅಂತಹ ಚಿತ್ರಗಳನ್ನು ನೀವು ನೋಡಿರುವಿರೇ? ಇದನ್ನೇ ನೀವು ಮಾಡಬೇಕಾಗಿರುವುದು. ಒಂದು ಕೋನದಿಂದ ನೀವು ವೈವಿಧ್ಯಮಯ ಪ್ರಪಂಚವನ್ನು ಮತ್ತು ಅದರ ತೊಡಕುಗಳನ್ನು ನೋಡುವಿರಿ. ಇನ್ನೊಂದು ಕೋನದಿಂದ ನೀವೊಂದು ವಿಭಿನ್ನ ಪ್ರಪಂಚವನ್ನು; ನೀವಿಲ್ಲಿ ಏನನ್ನು ನೋಡುವಿರೋ ಅದಕ್ಕಿಂತ ಬಹಳಷ್ಟು ವ್ಯತ್ಯಸ್ತವಾದ ಪ್ರಪಂಚವನ್ನು ನೋಡುವಿರಿ. ಸ್ವಿಚ್ ಆನ್ ಮತ್ತು ಆಫ್ ಮಾಡುವ ಸಾಮರ್ಥ್ಯವನ್ನು; ಎರಡನ್ನೂ ನಾವು ಹೊಂದಿರಬೇಕು. ಅದುವೇ ಆಧ್ಯಾತ್ಮಿಕತೆಯಾಗಿದೆ, ಅದುವೇ ಶಾಂತಿಯಾಗಿದೆ.

ಒಂದು ಕ್ಷಣ ಎಚ್ಚೆತ್ತುಕೊಂಡು ನೋಡಿ, ಇದೆಲ್ಲವೂ ಒಂದು ಕನಸು ಮತ್ತು ಎಲ್ಲವನ್ನೂ ಎಸೆದುಬಿಡಿ. ಕೂಡಲೇ ನೀವು ಸಾರ್ವತ್ರಿಕ ಶಕ್ತಿ; ಬ್ರಹ್ಮ; ಓಂ; ನೀವು ಮಾಡಲ್ಪಟ್ಟಿರುವ ಸತ್ಯದೊಂದಿಗೆ ಜೋಡುತ್ತೀರಿ!

ಹೀಗೆ, ಇವುಗಳು ನಾವು ಜೀವಿಸುವ ಜೀವನದಲ್ಲಿನ ವಿಭಿನ್ನ ಆಯಾಮಗಳಾಗಿವೆ. ನೀವು ಜನರೊಂದಿಗೆ ಕೆಲಸ ಮಾಡಬೇಕಾದಾಗ, ಈ ತತ್ವಜ್ಞಾನವನ್ನು ಉಪಯೋಗಿಸಬೇಡಿ; ಅಂದರೆ ಎಲ್ಲವೂ ಏನೂ ಅಲ್ಲ ಎಂಬುದನ್ನು. ನಿಮಗೆ ನಿಮ್ಮ ವ್ಯವಹಾರವನ್ನು ಮಾಡಲು ಸಾಧ್ಯವಾಗದು! ಹೀಗಿದ್ದರೂ, ಇದನ್ನು ನಿಮ್ಮ ಮನಸ್ಸಿನಲ್ಲಿಡಿ, ಎಲ್ಲವೂ ಏನೂ ಅಲ್ಲ. ಇದು ನಿಮಗೆ ಆಂತರಿಕ ಶಕ್ತಿ, ಅಂತಃಸ್ಫುರಣಾ ಸಾಮರ್ಥ್ಯ, ಸಂತೋಷ, ತೃಪ್ತಿ, ಪ್ರೀತಿ ಮತ್ತು ಸಹಾನುಭೂತಿಗಳನ್ನು ನೀಡುತ್ತದೆ. ಇದು ಮತ್ತೊಂದು ಮಗ್ಗುಲಾಗಿದೆ. ಹಾಗೆ ಮಗ್ಗುಲುಗಳನ್ನು ಬದಲಾಯಿಸಿ ಮತ್ತು ನೀವು ನಿಮ್ಮ ದೈನಂದಿನ ಜೀವನದಿಂದ ಮರಳಿ ಬರುವಾಗ, ಅದರ ಮೇಲೆ ಕೆಲಸ ಮಾಡಿ!

ಪ್ರಶ್ನೆ: ನಾನು ನಿಮಗಾಗಿ ಏನು ಮಾಡಬಹುದು, ಸುಮ್ಮನೆ ನನಗೆ ತಿಳಿಸಿ ಮತ್ತು ನಾನು ಅದನ್ನು ಮಾಡುವೆನು!

ಶ್ರೀ ಶ್ರೀ ರವಿ ಶಂಕರ್: ಸಂತೋಷವಾಗಿರು ಮತ್ತು ಸಂತೋಷವನ್ನು ಹರಡು. ನೀನು ಜ್ಞಾನದಲ್ಲಿ ಆಳವಾಗಿ ಹೋಗಿ, ಪ್ರಪಂಚಕ್ಕೆ ಕೊಡುಗೆಯನ್ನು ನೀಡುವ;  ಸಂತೋಷವನ್ನು, ಜ್ಞಾನವನ್ನು, ವಿವೇಕವನ್ನು ಹೊಮ್ಮುವವರಲ್ಲಿ ಒಬ್ಬನಾಗಬೇಕೆಂದು ನಾನು ಬಯಸುತ್ತೇನೆ. ನಾನು ಬಯಸುವುದು ನೀನು ಇದನ್ನು ಮಾಡಬೇಕೆಂದು.

ಭೂಮಿಯಲ್ಲಿರುವ ಬಿಲಿಯಗಟ್ಟಲೆ ಜನರಲ್ಲಿ, ಕೆಲವರಾದರೂ ಜ್ಞಾನ, ಪ್ರೀತಿ ಮತ್ತು ಸಂತೋಷವನ್ನು ಹೊರಹೊಮ್ಮಿದರೆ, ನಿಮಗೆ ಈ ಭೂಮಿಯನ್ನು ಗುಣಪಡಿಸಲು ಸಾಧ್ಯವಿದೆ. ಇದೊಂದು ಬಹಳವಾಗಿ ಅಗತ್ಯವಿರುವ ಶಮನವಾಗಿದೆ. ಈ ಸಮಯದಲ್ಲಿ, ಈ ಭೂಮಿಗೆ ನೀನು ಬಹಳ ಅಮೂಲ್ಯವಾಗಿರುವೆ. ಸೇವಾ ತಂಡವನ್ನು ಸೇರು ಮತ್ತು ಸ್ವಲ್ಪ ಸೇವೆಯನ್ನು ಮಾಡು.

ಪ್ರಶ್ನೆ: ಒಬ್ಬರು ಮನಸ್ಸನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಮನಸ್ಸನ್ನು ನಿಯಂತ್ರಿಸಲು ಯಾಕೆ ಬಯಸುವೆ? ಮನಸ್ಸು ಯಾವತ್ತೂ, ತನಗೆ ಎಲ್ಲಿ ಹೆಚ್ಚು ಸಂತೋಷ ಮತ್ತು ಹೆಚ್ಚು ಆನಂದ ಸಿಗುವುದೋ ಅಲ್ಲಿಗೆ ಹೋಗುತ್ತದೆ. ಅದು ಹೋಗಲಿ ಬಿಡು!

ನಿಜವಾದ ಆನಂದವು ಹೊರಗಡೆಯಿಲ್ಲ, ಅದು ಒಳಗಡೆಯಿದೆ ಎಂಬುದು ನಿನಗೆ ಕಂಡುಬರುತ್ತದೆ. ಮನಸ್ಸು ಹೊರಗಡೆ ಎಲ್ಲೆಡೆಯೂ ಹೋಗುವುದು ಮತ್ತು ಅದಕ್ಕೆ ಆನಂದವು ಸಿಗದಿದ್ದಾಗ, ಅದು ಕೊನೆಯದಾಗಿ ಒಳಗೆ ಹೋಗುವುದು, ತನ್ನಿಂತಾನೇ.
ಎಲ್ಲಿ ಪ್ರೇಮವಿರುವುದೋ ಅಲ್ಲಿ ನೀವು ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಬೇಕಾದ ಅಗತ್ಯವಿಲ್ಲ. ಎಲ್ಲಿ ಆಸಕ್ತಿಯಿರುವುದೋ, ನೀವು ಮನಸ್ಸನ್ನು ನಿಯಂತ್ರಿಸಬೇಕಾಗಿಲ್ಲ. ನಿಮ್ಮ ಮಗುವನ್ನು ಪ್ರೀತಿಸಲು ನೀವೊಂದು ಪ್ರಯತ್ನ ಮಾಡಬೇಕಾಗುತ್ತದೆಯೇ? ಇಲ್ಲ! ಮಕ್ಕಳಿಗಾಗಿ ಇರುವ ಪ್ರೀತಿಯು ತನ್ನಿಂತಾನೇ ಬರುವಂತಹುದು, ಬಹಳ ಸ್ವಾಭಾವಿಕವಾದುದು.

ಅದೇ ರೀತಿಯಲ್ಲಿ, ಎಲ್ಲವೂ ಖಾಲಿಯಾಗಿ ತೋರುವಾಗ, ಮನಸ್ಸು ಆ ಉನ್ನತ ಜ್ಞಾನ, ವಿವೇಕ ಮತ್ತು ಶಕ್ತಿಯ ಕಡೆಗೆ ಹೋಗುವುದು. ಅದು ಬಹಳ ಸ್ವಾಭಾವಿಕವಾದುದು.

ಪ್ರಶ್ನೆ: ಮನಸ್ಸು ಮತ್ತು ಹೃದಯಗಳು ಒಂದೇ ರೀತಿಯಲ್ಲಿ ಹೇಗೆ ಯೋಚಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಹೃದಯವು ಯೋಚಿಸುವುದಿಲ್ಲ ಮೈ ಡಿಯರ್, ಅದು ಕೇವಲ ಅನುಭವಿಸುವುದು ಮಾತ್ರ! ಮನಸ್ಸು ಕೇವಲ ಯೋಚಿಸುತ್ತದೆ, ಅದು ಅನುಭವಿಸುವುದಿಲ್ಲ. ಎರಡೂ ಆವಶ್ಯಕ. ಅವುಗಳನ್ನು ಅವುಗಳ ಸ್ಥಾನಗಳಲ್ಲಿ ಇರಿಸು. ನಿನ್ನ ವ್ಯವಹಾರವನ್ನು ನಿನ್ನ ಮನಸ್ಸಿನಿಂದ ಮಾಡು ಮತ್ತು ನಿನ್ನ ಜೀವನವನ್ನು ನಿನ್ನ ಹೃದಯದಿಂದ ಜೀವಿಸು.

ಪ್ರಶ್ನೆ: ಒಬ್ಬ ವ್ಯಕ್ತಿ ಅಥವಾ ಒಬ್ಬ ಸಂಗಾತಿಯನ್ನು ಅವರಿರುವಂತೆಯೇ ಸ್ವೀಕರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದರಲ್ಲಿ ನನಗೆ ಯಾವುದೇ ಅನುಭವವಿಲ್ಲ! ನೀನು ಸುತ್ತ ತಿರುಗಿ, ಬಹಳಷ್ಟು ಸಲಹೆಗಳನ್ನು ನೀಡಬಲ್ಲ ಹಲವರನ್ನು ಕಾಣಬಹುದು ಎಂದು ನನಗನ್ನಿಸುತ್ತದೆ. ಅವರಲ್ಲಿ ಕೇಳು ಮತ್ತು ನಿನಗೆ ಯಾವುದು ಸರಿಹೋಗುವುದೆಂದು ನೋಡು!

ಇಲ್ಲಿಯೇ ವೇದಾಂತವು ಜೀವನಕ್ಕೆ ಪ್ರಾಯೋಗಿಕವಾಗಿ ಬರುವುದು. ಸಂಪೂರ್ಣ ಗತಕಾಲವು ಹೋಗಿಯಾಗಿದೆ, ಅದೊಂದು ಕನಸಿನಂತೆ, ಮುಗಿಯಿತು ಎಂಬುದನ್ನು ನೀನು ನೋಡುವೆ. ಕನಿಷ್ಠಪಕ್ಷ ಈಗಲಾದರೂ ಉತ್ಸಾಹದಿಂದಿರು! ಈ ಕ್ಷಣ!

ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ಉತ್ಸಾಹವನ್ನು ಸೃಷ್ಟಿಸುವುದು ನಿಮಗೆ ಬಿಟ್ಟಿದ್ದು. ನೀವು ಅದನ್ನು ಹೇಗೆ ಮಾಡಬಹುದು? ನೀವು ಭೂತಕಾಲಕ್ಕೆ ಜೋತುಬಿದ್ದಿರುವುದಾದರೆ ನಿಮಗೆ ಅದನ್ನು ಮಾಡಲು ಸಾಧ್ಯವಿಲ್ಲ. ನೀವು ಸುಮ್ಮನೇ ಭೂತಕಾಲವನ್ನು ಒದ್ದೋಡಿಸಬೇಕು. ಅದನ್ನು ಹೋಗಲು ಬಿಡಿ.

ಸರಿ, ನಿನ್ನೆ ಅವರೊಂದು ತಪ್ಪು ಮಾಡಿದರು, ಪರವಾಗಿಲ್ಲ. ಕೆಲವು ಹಿತಕರ ಸಂಗತಿಗಳು ಆಗುತ್ತವೆ, ಕೆಲವು ಅಹಿತಕರ ಸಂಗತಿಗಳು ಆಗುತ್ತವೆ, ಕೆಲವು ಒಳ್ಳೆಯ ಸಂಗತಿಗಳು ಆಗುತ್ತವೆ, ಕೆಲವು ಕೆಟ್ಟ ಸಂಗತಿಗಳು ಆಗುತ್ತವೆ. ಅವುಗಳನ್ನೆಲ್ಲಾ ಎಸೆದುಬಿಡಿ!

ಈ ಕ್ಷಣದಲ್ಲಿ, ನಿನ್ನ ಕೆಲಸವೆಂದರೆ ವಾತಾವರಣದಲ್ಲಿ ಧನಾತ್ಮಕ ಚೈತನ್ಯವನ್ನು ಮತ್ತು ಉತ್ಸಾಹವನ್ನು ಸೃಷ್ಟಿಸುವುದು ಹಾಗೂ ಕುಟುಂಬದಲ್ಲಿ ಹೆಚ್ಚಿನ ಪ್ರೀತಿಯಿರುವಂತೆ ನೋಡಿಕೊಳ್ಳುವುದು. ನಾವೆಲ್ಲರೂ ಇದನ್ನು ಮಾಡಬಲ್ಲೆವೇ? ಇದು ಜ್ಞಾನದಲ್ಲಿ ಜೀವಿಸುವಿಕೆ!

ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ, ನೀವು ದೂರಲು ಬಯಸಿದರೆ, ಒಂದು ಗಂಟೆ ಕಾಲ ಕುಳಿತುಕೊಂಡು ದೂರಿ ಮತ್ತು ನಂತರ ಅದರ ಬಗ್ಗೆ ಮರೆತುಬಿಡಿ. ಆದರೆ ಅದನ್ನು ಪ್ರತಿದಿನವೂ ಮಾಡಬೇಡಿ.

ನೀವು ಎಲ್ಲಾ ಸಮಯದಲ್ಲೂ ಸವಿ ಸವಿಯಾಗಿ ನಡೆದುಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಜೀವನವು ಎಲ್ಲದರ ಒಂದು ಸಮ್ಮಿಶ್ರಣವಾಗಿದೆ, ಕೆಲವೊಮ್ಮೆ ಜಗಳಗಳು, ಕೋಪ ಮತ್ತು ಆನಂದ. ಜೀವನವು ವರ್ಣರಂಜಿತವಾಗಿರಬೇಕು; ನೀವು ಜೀವನದಲ್ಲಿ ಎಲ್ಲಾ ಬಣ್ಣಗಳನ್ನು ಹೊಂದಿರಬೇಕು, ಒಂದೇ ಸಮವಸ್ತ್ರವನ್ನು ಹೊಂದಿರಬೇಕಾದ ಅಗತ್ಯವಿಲ್ಲ.

ಹೀಗಿದ್ದರೂ, ಮನಸ್ಸಿನ ಈ ಎಲ್ಲಾ ಚಿಕ್ಕ ಚಂಚಲತೆಗಳಿಂದ ಕ್ಷಿಪ್ರವಾಗಿ ಹೊರಗಿ ಬರಲು ನಿಮಗೆ ಸಾಧ್ಯವಾಗಬೇಕು ಮತ್ತು ಈ ಜ್ಞಾನವು ನಿಮಗೆ ಸಹಾಯ ಮಾಡುವುದು. ಪ್ರತಿದಿನವೂ ಎಚ್ಚೆತ್ತು ಹೇಳಿ, ’ಶಿವೋಹಂ, ನಾನು ಶುದ್ಧವಾದ ಹಾಗೂ ಸುಂದರವಾದ ಪ್ರಜ್ಞೆಯಾಗಿರುವೆನು.’

ಆದುದರಿಂದ ಇವತ್ತು ಬುದ್ಧ ಪೌರ್ಣಿಮೆಗಾಗಿ, ಈ ಸುಂದರವಾದ ಸಂದೇಶವನ್ನು ನಿಮ್ಮೊಂದಿಗೆ ಒಯ್ಯಿರಿ, ’ಎಲ್ಲವೂ ಏನೂ ಅಲ್ಲ.’
’ಅಪ್ಪೊ ದೀಪೋ ಭವ’ , ಅಂದರೆ ನಿಮಗೆ ನೀವೇ ಬೆಳಕಾಗಿರಿ. ನೀವೇ ಪ್ರಕಾಶವಾಗಿರುವಿರಿ. ಆದುದರಿಂದ ಸಂತೋಷವಾಗಿ ಮನೆಗೆ ಮರಳಿ ಹೋಗಿ ಮತ್ತು ಮಲಗುವ ಮುನ್ನ, ಈ ಎಲ್ಲಾ ಜ್ಞಾನದ ಅಂಶಗಳನ್ನು ನೆನಪಿಸಿಕೊಳ್ಳಿ. ಅದನ್ನು ನಿಮ್ಮ ಜಾಗೃತ ಸ್ಮರಣೆಗೆ ಕೆಲವು ಸಾರಿ ತಂದುಕೊಳ್ಳುವುದು ಒಳ್ಳೆಯದು.

ಮುಂದಿನ ಎರಡು ದಿನಗಳು ಕೂಡಾ, ನೀವು ಈ ಜ್ಞಾನವನ್ನು ನೆನಪಿಗೆ ತಂದುಕೊಂಡರೆ, ಅದು ದೀರ್ಘಕಾಲದವರೆಗೆ ನಿಮ್ಮೊಂದಿಗೆ ಉಳಿಯುವುದು.

ಎರಡು ಸಂಗತಿಗಳಿವೆ. ಒಂದನೆಯದು ಶ್ರವಣ, ಅಂದರೆ ಕೇಳಿಸಿಕೊಳ್ಳುವುದು. ಇನ್ನೊಂದು ಮನನ, ಅಂದರೆ ಜ್ಞಾನವನ್ನು ಕೆಲವು ಸಲ ನಿಮ್ಮ ಮನಸ್ಸಿಗೆ, ನಿಮ್ಮ ಜಾಗೃತ ಗಮನಕ್ಕೆ ತರುವುದು. ಎರಡೂ ಮುಖ್ಯ ಮತ್ತು ಬಹಳಷ್ಟು ಸಹಾಯ ಮಾಡುವುವು.

ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಏನೆಂದರೆ, ಎಲ್ಲವೂ ಏನೂ ಅಲ್ಲ, ಇದೆಲ್ಲವೂ ಒಂದು ಕನಸು. ಆಗಿಹೋದುದು ಒಂದು ಕನಸು, ಭವಿಷ್ಯವು ಒಂದು ಕನಸು, ಈಗ, ವರ್ತಮಾನವು ಒಂದು ಕನಸು; ಪ್ರಪಂಚವು ಕನಸಿನ ಸ್ವಭಾವವುಳ್ಳದ್ದಾಗಿದೆ, ಮತ್ತು ನಿಮಗೆ ನೀವೇ ಬೆಳಕಾಗಿರುವಿರಿ.