ಮಂಗಳವಾರ, ಮೇ 14, 2013

ಗೀತಾ ಜ್ಞಾನ - ೬

ಬೆಂಗಳೂರು, ಭಾರತ
೧೪ ಮೇ ೨೦೧೩
ವಾಸ್ತವಿಕ ಸರಳ ಸಂಗತಿ

ಮುಂದಿನ ಶ್ಲೋಕವು ಇಂತಿದೆ:

’ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ I
ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ II’  (೭.೧೫)

ಇಲ್ಲಿ ಕೃಷ್ಣ ಪರಮಾತ್ಮನು, ದುಷ್ಟ ಮತ್ತು ತಪ್ಪು ಕೆಲಸಗಳನ್ನು ಮಾಡುವವರ ಬಗ್ಗೆ ಮಾತನಾಡುತ್ತಾನೆ.

ಒಬ್ಬ ದುಷ್ಟ ವ್ಯಕ್ತಿ ಯಾರು?  ತನ್ನನ್ನು ಯಾವ ರೀತಿ ಯಾರೂ ನಡೆಸಿಕೊಳ್ಳಬಾರದೆಂದು ಇಚ್ಛಿಸುತ್ತಾನೋ, ಆದರೆ ಅದೇ ರೀತಿಯಾಗಿ ಇತರರನ್ನು ಯಾರು ನಡೆಸಿಕೊಳ್ಳುತ್ತನೋ, ಅವನು.

ಇತರರು ನಿಮ್ಮೊಂದಿಗೆ ಯಾವ ರೀತಿಯಲ್ಲಿ ವರ್ತಿಸುವುದನ್ನು ನೀವು ಇಷ್ಟಪಡುವುದಿಲ್ಲವೋ, ಆ ಒಂದು ರೀತಿಯಲ್ಲಿ ನೀವು ಇತರರೊಂದಿಗೆ ವರ್ತಿಸುವಾಗ, ನೀವೊಬ್ಬ ದುಷ್ಟ ವ್ಯಕ್ತಿಯೆಂದು ಕರೆಯಿಸಿಕೊಳ್ಳುವಿರಿ. ಮನಸ್ಸಿನಲ್ಲಿರುವ ತಿರಸ್ಕಾರದ ಭಾವನೆಗಳು ದುಷ್ಟತನದ ಭಾವನೆಗೆ ಎಡೆ ಮಾಡುತ್ತವೆ. ದುಷ್ಟತನವು ಒಬ್ಬ ವ್ಯಕ್ತಿಯ ವರ್ತನೆಯ ಭಾಗವಾಗಲು ಅವುಗಳು ಕಾರಣವಾಗುತ್ತವೆ ಮತ್ತು ಇದು ತಪ್ಪು ಕೆಲಸಗಳಿಗೆ ದಾರಿ ಮಾಡುತ್ತದೆ.

ಕೃಷ್ಣ ಪರಮಾತ್ಮನು,’ಮೂರ್ಖರೂ, ಅಜ್ಞಾನಿಗಳೂ ಆಗಿರುವವರು ಹಾಗೂ ತಪ್ಪಾದ, ದುಷ್ಟ ಕೆಲಸಗಳನ್ನು ಮಾಡುವವರು ಯಾವತ್ತೂ ನನಗೆ ಶರಣಾಗತರಾಗುವುದಿಲ್ಲ. ಅಂತಹ ಒಬ್ಬ ವ್ಯಕ್ತಿಯ ಕರ್ಮಗಳು ಮನುಷ್ಯರಲ್ಲಿ ಅತ್ಯಂತ ಕೆಳಮಟ್ಟದ್ದು ಹಾಗೂ ಅಂತಹ ಒಬ್ಬ ವ್ಯಕ್ತಿಗೆ ನನ್ನನ್ನೂ ನನ್ನ ನಿಜವಾದ ಸ್ವಭಾವವನ್ನೂ ಯಾವತ್ತೂ ತಿಳಿಯಲು ಸಾಧ್ಯವಿಲ್ಲ. ನನ್ನಲ್ಲಿ ಆಶ್ರಯ ಪಡೆಯಲೂ ಸಾಧ್ಯವಿಲ್ಲ. ಅಂತಹ ಒಬ್ಬ ವ್ಯಕ್ತಿಯು ಯಾವತ್ತೂ ನನ್ನ ಬಗ್ಗೆ ಯೋಚಿಸನು ಮತ್ತು ಅವನು ನನ್ನನ್ನು ಯಾವತ್ತಿಗೂ ನಂಬಲಾರನು. ಯಾರು ರಾಕ್ಷಸೀಯ ಗುಣಗಳಿಗೆ ಕಟ್ಟುಬಿದ್ದಿರುತ್ತಾರೋ; ಯಾರು ನನ್ನ ಮಾಯೆಯಿಂದ ಭ್ರಾಂತರಾಗಿ ತಮ್ಮ ಬುದ್ಧಿಯನ್ನೂ,ತಮ್ಮ ಇಂದ್ರಿಯಗಳ ಮೇಲಣ ನಿಯಂತ್ರಣವನ್ನೂ ಕಳೆದುಕೊಂಡಿರುವರೋ ಅವರು ಯಾವತ್ತೂ ನನ್ನ ಮೇಲೆ ಕೇಂದ್ರೀಕೃತರಾಗರು' ಎಂದು ಹೇಳುತ್ತಾನೆ.

ಕೆಟ್ಟ ಕೆಲಸಗಳಲ್ಲಿ ತೊಡಗುವ ಒಬ್ಬ ವ್ಯಕ್ತಿಗೆ ಯಾವತ್ತೂ ತನ್ನ ಅಂತರಾತ್ಮವನ್ನು ತಲುಪಲು ಸಾಧ್ಯವಾಗುವುದಿಲ್ಲ. ಅವನು ಹೊರಜಗತ್ತಿನಲ್ಲಿ ನಿರಂತರವಾಗಿ ಗಮನ ಹರಿಸುವನು. ಇದು ಯಾಕೆ ಹಾಗೆ? ಅದು ಯಾಕೆಂದರೆ, ಒಮ್ಮೆ ಒಬ್ಬ ವ್ಯಕ್ತಿಯು ಅಂತರ್ಮುಖವಾಗಿ ತಿರುಗಿದರೆ; ಆತ್ಮದ ಕಡೆಗೆ, ಅವನಿಗೆ ಒಳಗಿನಿಂದ ಬಹಳಷ್ಟು ಶಾಂತಿ ಮತ್ತು ಸಂತೋಷಗಳು ಸಿಗುತ್ತವೆ. ಒಬ್ಬ ಸಂತೋಷವಾಗಿರುವ ವ್ಯಕ್ತಿಯು ಯಾವತ್ತಿಗೂ ಏನಾದರೂ ತಪ್ಪನ್ನು ಮಾಡಲು ಸಾಧ್ಯವಿಲ್ಲ. ಇದೊಂದು ನಿಜವಾದ ಮತ್ತು ಸರಳವಾದ ವಾಸ್ತವವಾಗಿದೆ.

ಎಲ್ಲರಲ್ಲೂ ಅತ್ಯಂತ ದುಷ್ಟ ವ್ಯಕ್ತಿ ಕೂಡಾ, ಒಮ್ಮೆ ತಾನು ಸಂತೋಷವಾಗಿ ಮತ್ತು ಶಾಂತಿಪೂರ್ಣವಾದ ಮೇಲೆ ಯಾವುದೇ ಕೆಟ್ಟ ಕೆಲಸವನ್ನು ಮಾಡನು. ಯಾವುದೇ ದುಷ್ಟ ಜನರಿಲ್ಲ, ಕೆಟ್ಟ ಕೆಲಸಗಳಲ್ಲಿ ತೊಡಗುವವರು ಮಾತ್ರವಿರುವುದು. ಅಂತಹ ಜನರು ಕೆಟ್ಟ ಕೆಲಸಗಳನ್ನು ಮಾಡುವುದು ಯಾಕೆಂದರೆ, ಅವರು ತಮ್ಮೊಂದಿಗೆ ಸಂಪರ್ಕವನ್ನು ಹೊಂದಿಲ್ಲ (ಅವರು ಕೇಂದ್ರಿತರಾಗಿಲ್ಲ). ಅವರು ತಮ್ಮದೇ ಆತ್ಮದೊಂದಿಗೆಯಾಗಲೀ, ಯಾವುದೇ ಗುರುವಿನೊಂದಿಗೆಯಾಗಲೀ ಜೋಡಿರುವುದಿಲ್ಲ, ಅವರಿಗೆ ದೇವರಲ್ಲಿ ಯಾವುದೇ ಶ್ರದ್ಧೆಯೂ ಇಲ್ಲ. ಕೆಟ್ಟ ಕೆಲಸಗಳನ್ನು ಮಾಡುವುದು ಅಂತಹ ಜನರು.

ಕಳೆದ ೧೦-೧೫ ವರ್ಷಗಳಲ್ಲಿ ಭಾರತದಲ್ಲಿ ಮಾಡಲಾದ ಚಲನಚಿತ್ರಗಳು ಒಬ್ಬ ಭಕ್ತನನ್ನು ತಪ್ಪು ಮಾಡುವವನನ್ನಾಗಿ ಅಥವಾ ಒಬ್ಬ ಅಪರಾಧಿಯನ್ನಾಗಿ ಚಿತ್ರಿಸಲಾಗಿದೆ, ಅದೇ ವೇಳೆ ಖಳನಾಯಕನು, ತಿಲಕದೊಂದಿಗೆ ಒಬ್ಬ ಪವಿತ್ರ ವ್ಯಕ್ತಿಯಂತೆ ಬಟ್ಟೆ ಧರಿಸಿರುವುದಾಗಿ ತೋರಿಸಲಾಗಿದೆ ಎಂಬುದನ್ನು ನಾನು ಕೇಳಿದ್ದೇನೆ.

ಒಬ್ಬರ ಮುಖದಲ್ಲಿ ಒಂದು ತಿಲಕವಿದ್ದರೆ ಸಾಧಾರಣವಾಗಿ ಅದರರ್ಥ ಅವನೊಬ್ಬ ಭಕ್ತನೆಂದು, ಆದರೆ ಇಲ್ಲಿ ಚಲನಚಿತ್ರಗಳಲ್ಲಿ ಅವನನ್ನು, ದುಷ್ಟ ಕೆಲಸಗಳನ್ನು ಮಾಡುವ ಒಬ್ಬ ಖಳನಾಯಕನನ್ನಾಗಿ ತೋರಿಸಲಾಗುತ್ತದೆ. ಹಾಗಾಗಿ, ಒಬ್ಬ ಖಳನಾಯಕನನ್ನು ದೇವರ ಒಬ್ಬ ಭಕ್ತನನ್ನಾಗಿ ತಪ್ಪಾಗಿ ಚಿತ್ರಣ ಮಾಡುವವರು ಇನ್ನೂ ದೊಡ್ಡ ಖಳನಾಯಕರು!

ಖಳನಾಯಕನನ್ನು ದೇವರ ಒಬ್ಬ ಮಹಾನ್ ಭಕ್ತನನ್ನಾಗಿ ತೋರಿಸಲು ಅವರು ಪ್ರಯತ್ನಿಸುತ್ತಾರೆ, ಅದರೆ ಅವನು ಎಲ್ಲಾ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ.

ದೇವರ ಭಕ್ತನಾದವನು, ಖಂಡಿತವಾಗಿಯೂ ತನ್ನೊಳಗೆ ಸಂತೋಷವನ್ನು ಕಂಡುಕೊಳ್ಳುವನು ಮತ್ತು ಅಂತಹ ಒಬ್ಬ ಸಂತೋಷವಾಗಿರುವ ವ್ಯಕ್ತಿಯು ಯಾವತ್ತೂ ಯಾವುದೇ ಕೆಟ್ಟ ಕೆಲಸವನ್ನು ಮಾಡಲಾರನು. ಅಂತಹ ಒಬ್ಬ ವ್ಯಕ್ತಿಯು ಅಜ್ಞಾನಿಯಾಗಿಯೂ ಉಳಿಯುವುದಿಲ್ಲ, ಅವನು ದುಷ್ಟ ಕೆಲಸಗಳನ್ನು ಮಾಡುವುದೂ ಇಲ್ಲ. ಯಾರು ನಿಜವಾಗಿ ದುಷ್ಟ ಕೆಲಸಗಳನ್ನು ಮಾಡುವರೋ ಅವರು ಬುದ್ಧಿವಂತರೇ ಅಲ್ಲ. ಅವರು ಬುದ್ಧಿವಂತರೆಂದು ಕರೆಯಲ್ಪಡಲು ಸಾಧ್ಯವೇ?

ಕೃಷ್ಣ ಪರಮಾತ್ಮನು, "ಅದು ಅಸಾಧ್ಯ. ಅವನು ಬುದ್ಧಿವಂತನಾಗಿರಲು ಸಾಧ್ಯವಿಲ್ಲ, ಅವನು ಅಜ್ಞಾನಿ" ಎಂದು ಹೇಳುತ್ತಾನೆ.

ತನ್ನ ದುಷ್ಕೃತ್ಯಗಳಿಂದ, ಇತರರಿಗಾಗುವ ತೊಂದರೆಗಳಿಗಿಂತ ಹೆಚ್ಚು, ತನ್ನ ಮೇಲಾಗುವ ಪರಿಣಾಮಗಳನ್ನು ತಾನು ಅನುಭವಿಸುವೆನೆಂಬುದನ್ನು ತಿಳಿಯಲು ಅವನು ಅಸಮರ್ಥನು. ಅವನಿಗೆ ಈ ಸತ್ಯದ ಬಗ್ಗೆ ಅರಿವಿರುವುದಿಲ್ಲ ಅಷ್ಟೇ. ಅದಕ್ಕಾಗಿಯೇ ಅವನು ಅಂತಹ ದುಷ್ಕೃತ್ಯಗಳನ್ನು ಮಾಡುತ್ತಾನೆ.

ಸಾಧಾರಣವಾಗಿ ಒಬ್ಬ ವ್ಯಕ್ತಿಯು ಏನದರೂ ತಪ್ಪು ಮಾಡುವಾಗ, ಏನೋ ಒಂದು ಅವನನ್ನು ಒಳಗಡೆಯಿಂದ ಚುಚ್ಚುವುದು. ಆದರೆ ಅಂತಹ ಒಬ್ಬ ವ್ಯಕ್ತಿಗೆ, ತನ್ನ ದುಷ್ಕೃತ್ಯಕ್ಕಾಗುವ ಒಳಗಿನ ಚುಚ್ಚುವಿಕೆಯೂ ಸಹ ಅನುಭವಕ್ಕೆ ಬರುವುದಿಲ್ಲ ಯಾಕೆಂದರೆ ಅವನು ಅಷ್ಟೊಂದು ಅಜ್ಞಾನಿ ಹಾಗೂ ಮೂರ್ಖನು. ಅದೊಂದು ಚೂಪಾದ ಮುಳ್ಳು ಅವನ ಬಾಯಿಯಲ್ಲಿ ಸಿಕ್ಕಿಹಾಕಿಕೊಂಡಂತೆ, ಆದರೂ ಅವನು ಮುಳ್ಳನ್ನು ಜಗಿಯುವುದನ್ನು ಮುಂದುವರಿಸುತ್ತಾನೆ. ಮುಳ್ಳನ್ನು ಹೊರಕ್ಕೆ ಉಗಿಯುವುದರ ಬದಲು, ಅವನು ಅದನ್ನು ಜಗಿಯುತ್ತಾ ಇರುತ್ತಾನೆ (ಆ ಮೂಲಕ ತನಗೆ ತಾನೇ ಹೆಚ್ಚು ಹೆಚ್ಚು ನೋವುಂಟು ಮಾಡುತ್ತಾನೆ). ಇದು ಅಜ್ಞಾನ.

ಆದುದರಿಂದ ಕೃಷ್ಣ ಪರಮಾತ್ಮ ಹೇಳುತ್ತಾನೆ, ’ಮನುಷ್ಯರಲ್ಲಿ ಅತಿ ನೀಚರೆಂದರೆ, ಯಾರು ಅಜ್ಞಾನಿಗಳಾಗಿರುವರೋ ಅವರು; ಯಾರ ಮನಸ್ಸುಗಳು ಮಾಯೆಯಿಂದ ಭ್ರಾಂತಿಗೊಳಗಾಗಿ, ಅರಿವನ್ನು ಕಳೆದುಕೊಂಡವರು ಹಾಗೂ ಋಣಾತ್ಮಕ ಭಾವನೆಗಳಿಂದ ಮತ್ತು ಗುಣಗಳಿಂದ ನಡೆಸಲ್ಪಡುವವರು. ಅಂಥ ಜನರೆಂದೂ ನನ್ನನ್ನು ತಲುಪರಾರರು’.

ಹಾಗೆ ಇಲ್ಲಿ, ಕೃಷ್ಣ ಪರಮಾತ್ಮ ಎರಡು ಅಂಶಗಳನ್ನು ಹೇಳಿದ್ದಾನೆ, ಒಂದನೆಯದು - ಅವನ ಅನುಗ್ರಹದಿಂದ ಮಾತ್ರ ನೀವು ಮಾಯೆಯಿಂದ ಹೊರಬರಬಹುದು. ಎರಡನೆಯದು - ಅವನಿಗೆ ಶರಣಾಗಿ ಆಶ್ರಯ ಪಡೆಯದವರ ಬಗ್ಗೆ ಈ ರೀತಿ ಹೇಳುತ್ತಾನೆ, ’ನಾನು ಎಲ್ಲರ ಮೇಲೂ ಅನುಗ್ರಹದ ಮಳೆಸುರಿಸುತ್ತೇನೆ, ಆದರೂ ಕೆಲವರು ನನ್ನ ಆಶ್ರಯಕ್ಕೆ ಬರುವುದಿಲ್ಲ. ಯಾಕೆಂದರೆ ಅವರು ಅಜ್ಞಾನಿಗಳು ಮತ್ತು ಮೂರ್ಖರು. ಇನ್ಯಾತಕ್ಕಾಗಿ ನನ್ನ ಬಳಿಗೆ ಬರಲು ಅವರು ನಿರಾಕರಿಸುತ್ತಾರೆ?’

ಒಬ್ಬ ಬುದ್ಧಿವಂತ ವ್ಯಕ್ತಿಯು ಮಾತ್ರ ಆಧ್ಯಾತ್ಮದ ಹಾದಿಯಲ್ಲಿ ನಡೆಯಲು ಶಕ್ತನೆಂದು ನಾನು ಆವಾಗಾವಾಗ ಹೇಳುವುದು ಇದಕ್ಕೇ. ಅಜ್ಞಾನಿಯೊಬ್ಬನು ತನ್ನನ್ನು ರಾಜನೆಂದು ಬಗೆಯುತ್ತಾನೆ ಮತ್ತು ಇದೆಲ್ಲದರಿಂದ ದೂರವುಳಿಯುತ್ತಾನೆ, ಆದರೆ ವಾಸ್ತವದಲ್ಲಿ ಅವನೊಬ್ಬ ಭಿಕ್ಷುಕ. ಅವನೇನೇ ಮಾಡಲಿ, ಅವನು ಭಿಕ್ಷುಕನಾಗಿಯೇ ಉಳಿಯುತ್ತಾನೆ, ಆದರೆ ತಾನು ರಾಜನೆಂದು ಯೋಚಿಸುತ್ತಾನೆ.

ಕೆಲವು ಶಬ್ದಗಳನ್ನೂ ಅರ್ಥಮಾಡಿಕೊಳ್ಳಲಾರದ ಒಬ್ಬ ವ್ಯಕ್ತಿಯು ತನ್ನನ್ನು ಪ್ರಾಧ್ಯಾಪಕನೆಂದು ಹೇಳಿಕೊಂಡರೆ ನೀವೇನನ್ನುತ್ತೀರಿ? ಅವನನ್ನು ನೀವು ಅಜ್ಞಾನಿಯೆಂದು ಕರೆಯುವಿರಿ.