ಶನಿವಾರ, ಮೇ 11, 2013

ಗೀತಾ ಜ್ಞಾನ - ೨

೧೧ ಮೇ ೨೦೧೩
ಬೆಂಗಳೂರು, ಭಾರತ

ನಿಮ್ಮ ನಿಜ ಸ್ವಭಾವ

ಸಂಪೂರ್ಣ ಸೃಷ್ಟಿಯು ಎರಡು ರೀತಿಯ ಪ್ರಕೃತಿಗಳಿಂದ ಮಾಡಲ್ಪಟ್ಟಿದೆ: ಪರ-ಪ್ರಕೃತಿ ಮತ್ತು ಅಪರ-ಪ್ರಕೃತಿ. ಅಪರ-ಪ್ರಕೃತಿಯಲ್ಲಿ ಎಂಟು ವಿಧಗಳಿವೆ, ಆದರೆ ಒಂದೇ ಒಂದು ಪರ-ಪ್ರಕೃತಿಯಿರುವುದು, ಅದು ಈ ಸೃಷ್ಟಿಯಲ್ಲಿ ಎಲ್ಲವನ್ನೂ ಸಂಭಾಳಿಸುತ್ತದೆ.

ಆರನೆಯ ಶ್ಲೋಕದಲ್ಲಿ ಕೃಷ್ಣ ಪರಮಾತ್ಮನು ಹೇಳುತ್ತಾನೆ,

’ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ I
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ II’ (೭.೬)

ಹೀಗೆ, ಕೃಷ್ಣ ಪರಮಾತ್ಮನು, ’ಈ ಸಂಪೂರ್ಣ ಸೃಷ್ಟಿಯು ಎರಡರಿಂದಲೂ ಮಾಡಲ್ಪಟ್ಟಿದೆ; ಅಪರ-ಪ್ರಕೃತಿ ಮತ್ತು ಪರ-ಪ್ರಕೃತಿ, ಹಾಗೂ ಇವುಗಳೆರಡೂ ನನ್ನಿಂದ ಹುಟ್ಟಿದವು. ಅವುಗಳ ಸೃಷ್ಟಿಗೆ ಕಾರಣ ನಾನು ಮತ್ತು ಅವುಗಳ ವಿಸರ್ಜನೆಗೆ ಕಾರಣ ನಾನು ಹಾಗೂ ಅದೆಲ್ಲವೂ ನನ್ನಲ್ಲಿ ವಾಸಿಸುತ್ತದೆ. ಇದನ್ನೇ ನೀನು ತಿಳಿಯಬೇಕಾದುದು’ ಎಂದು ಹೇಳುತ್ತಾನೆ.

ಯಾವುದರಿಂದ ಎಲ್ಲವೂ ಸೃಷ್ಟಿಸಲ್ಪಟ್ಟಿದೆಯೋ ಅದು ದೇವರಾಗಿದೆ.

ಈಗ ನೀವು ಕೇಳಬಹುದು, ’ಹಾಗಾದರೆ ದೇವರು ಎಲ್ಲಿಂದ ಬಂದರು?’

ಅವನು ಯಾವುದಾದರೂ ಮೂಲದಿಂದ ಬಂದಿರುವುದಾದರೆ, ಆಗ ಅವನು ದೇವರಲ್ಲ. ಆಗ, ಅವನು ಯಾವ ಮೂಲದಿಂದ ಬಂದನೋ ಅದು ದೇವರಾಗುವುದು.

ಹೆಚ್ಚಾಗಿ ಜನರು ಕೇಳುತ್ತಾರೆ, ’ದೇವರಿಗೆ ಯಾರು ಜನ್ಮ ನೀಡಿದರು?’

ಜನ್ಮ ತಾಳುವವನೊಬ್ಬನು ದೇವರಾಗಿರಲು ಹೇಗೆ ಸಾಧ್ಯ? ಯಾವುದರಿಂದ ಸೃಷ್ಟಿಯಲ್ಲಿರುವ ಎಲ್ಲವೂ ಜನ್ಮ ತಾಳುವುದೋ ಮತ್ತು ಯಾವುದರೊಳಕ್ಕೆ ಎಲ್ಲವೂ ಅಂತಿಮವಾಗಿ ವಿಲೀನಗೊಳ್ಳುವುದೋ, ಅದು ದೇವರು.

ಇದನ್ನು ಕೇಳಿ ನೀವು ಯೋಚಿಸಬಹುದು,ದೇವರೆಂದರೆ ನಿಮ್ಮಿಂದ ಬಹಳ ದೂರದಲ್ಲಿರುವ ಏನೋ ಒಂದು ಅಥವಾ ಯಾರೋ ಒಬ್ಬರು ಎಂದು; ಯಾರಿಂದ ಈ ಸಂಪೂರ್ಣ ಸೃಷ್ಟಿ ಹೊರಬಂದಿದೆಯೋ ಅವರು ಎಂದು. ಇಲ್ಲ, ಅವನು ದೂರದಲ್ಲಿಲ್ಲ. ಅದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ನನ್ನನ್ನು ತಿಳಿ ಮತ್ತು ನನ್ನನ್ನು ಮಾತ್ರ (ಯಾವ ಒಂದು ಮೂಲದಿಂದ ಎಲ್ಲರೂ ಹುಟ್ಟಿರುವರೋ ಮತ್ತು ಯಾವುದರೊಳಕ್ಕೆ ಎಲ್ಲವೂ ವಿಲೀನವಾಗುವುದೋ ಆ ಒಂದು ಮೂಲವಾಗಿ).’

ಪ್ರತಿಯೊಬ್ಬ ವ್ಯಕ್ತಿಯೊಳಗೆ ಇರುವ ಈ ’ನಾನು’ ಅಥವಾ ’ನನ್ನ’ ಎಂಬುದು ಚೈತನ್ಯವಾಗಿದೆ (ಆತ್ಮ ಅಥವಾ ಪ್ರಜ್ಞೆ), ಮತ್ತು ಈ ಪ್ರಜ್ಞೆಯಿಂದಲೇ ಎಲ್ಲವೂ ಹುಟ್ಟಿರುವುದು ಮತ್ತು ಇದರೊಳಗೆಯೇ ಎಲ್ಲವೂ ಕೊನೆಯದಾಗಿ ವಿಲೀನಗೊಳ್ಳುವುದು. ಪ್ರಜ್ಞೆಯು ಜೀವನದ ಆಧಾರವಾಗಿದೆ.

ಶರೀರವು ಜೀವಂತವಾಗಿರುವುದು ಪ್ರಜ್ಞೆಯಿರುವ ಕಾರಣದಿಂದ. ಪ್ರಜ್ಞೆಯು ಶರೀರವನ್ನು ಬಿಟ್ಟುಹೋಗುವಾಗ, ಜೀವನವು ಅಂತ್ಯವಾಗುತ್ತದೆ. ಆದುದರಿಂದ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಪ್ರತಿಯೊಂದು ಜೀವದಲ್ಲಿರುವ ಚೇತನವು ನಾನೆಂದು ತಿಳಿ, ಅದು ಎಲ್ಲದರ ಆಧಾರವಾಗಿದೆ ಮತ್ತು ಅದು ಸೃಷ್ಟಿಯಲ್ಲಿರುವ ಎಲ್ಲವನ್ನೂ ಸಂರಕ್ಷಿಸುತ್ತದೆ. ನಾನು ಎಲ್ಲದರ ಪ್ರಧಾನ ಕಾರಣವಾಗಿರುವೆನು’.

ಆದುದರಿಂದ, ಪ್ರಜ್ಞೆಯು ಎಲ್ಲದರ ಆಧಾರವಾಗಿದೆ. ತಾಯಿಯ ಗರ್ಭದಲ್ಲಿರುವ ಒಂದು ಮಗುವಿನಲ್ಲೂ ಪ್ರಜ್ಞೆಯಿರುತ್ತದೆ. ಅದರಿಂದಾಗಿ ಅದು ಬೆಳೆಯುತ್ತದೆ. ಅದು ಅಲ್ಲಿರದಿದ್ದರೆ, ಮಗುವು ಹುಟ್ಟುವಾಗಲೇ ತೀರಿಕೊಂಡಿತೆಂದು ಅಥವಾ ಮೃತಜಾತವೆಂದು ಹೇಳಲಾಗುತ್ತದೆ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಸೃಷ್ಟಿಯಲ್ಲಿ ಯಾವುದಾದರೂ ಜೀವಂತವಾಗಿ ಮತ್ತು ಬೆಳೆಯುತ್ತಾ ಇರುವುದಾದರೆ ಅದು, ನಾನು ಚೈತನ್ಯ ಶಕ್ತಿಯಾಗಿ (ಪ್ರಜ್ಞೆ) ಎಲ್ಲೆಡೆಯಲ್ಲೂ ಪ್ರಕಟವಾಗುವುದರಿಂದ’.

ಈ ಪ್ರಜ್ಞೆಯ ಇರುವಿಕೆಯ ಕಾರಣದಿಂದಲೇ ಮರಗಳು ಹೊಸ ಎಲೆಗಳನ್ನು ಬೆಳೆಯುವುದು ಮತ್ತು ಹಣ್ಣುಗಳನ್ನು ಬಿಡುವುದು. ಗಿಡಗಳು ಮತ್ತು ಮರಗಳು ಜೀವಂತವಾಗಿವೆ ಯಾಕೆಂದರೆ ಅವುಗಳೊಳಗೆ ಪ್ರಜ್ಞೆಯಿದೆ, ಇಲ್ಲದಿದ್ದರೆ ಅವುಗಳು ಬೆಳೆಯುವುದಿಲ್ಲ.
ಈಗ ನಾವು ಯೋಚಿಸಬಹುದು, ಒಂದು ಕಲ್ಲಿನಲ್ಲಿ ಜೀವವಿಲ್ಲವೆಂದು. ಆದರೆ ಅದು ಹಾಗಲ್ಲ. ಒಂದು ಕಲ್ಲಿನೊಳಗೆ ಕೂಡಾ ಪ್ರಜ್ಞೆಯಿದೆ. ಈ ಸಂಪೂರ್ಣ ಸೃಷ್ಟಿಯು ’ಜೈವಿಕ’ವೆಂದು ಹೇಳಲಾಗುತ್ತದೆ (ಅಂದರೆ ಅದು ಜೀವಂತವಾಗಿದೆ ಮತ್ತು ಬೆಳೆಯುತ್ತಿದೆ). ಸಂಪೂರ್ಣ ಸೃಷ್ಟಿಯಲ್ಲಿ ಜೀವರಹಿತವಾದುದು ಯಾವುದೂ ಇಲ್ಲ. ಎಲ್ಲವೂ ಜೀವಂತವಾಗಿದೆ.

ಪ್ರಕೃತಿ ಅಥವಾ ಭೂಮಿಯು ಯುಗಗಳಿಂದಲೂ ಬಿಲಿಯಗಟ್ಟಲೆ ಜೀವಿಗಳಿಗೆ ಜನ್ಮ ನೀಡಿರುವಾಗ ಮತ್ತು ಅವುಗಳನ್ನು ಸಂರಕ್ಷಿಸಿರುವಾಗ, ಅದು ಸತ್ತಿರುವುದೆಂದು ನೀವು ಯೋಚಿಸುತ್ತೀರೇ? ಇಲ್ಲವೇ ಇಲ್ಲ! ಈ ಭೂಮಿಯು ಬಹಳ ಜೀವಂತವಾಗಿದೆ, ಅದಕ್ಕಾಗಿಯೇ ನಾವು ಅವಳನ್ನು ನಮ್ಮ ತಾಯಿಯೆಂದು ಅಥವಾ ಭೂದೇವಿಯೆಂದು ಕರೆಯುವುದು. ಅವಳಿಗೆ ಈ ಬಿರುದನ್ನು ನೀಡಲಾಗಿರುವುದು ಯಾಕೆಂದರೆ ಅವಳಲ್ಲಿ ಜೀವವಿದೆ. ಪ್ರಕೃತಿ ಮಾತೆಯೂ ಕೂಡಾ ಜೀವಂತವಾಗಿದ್ದಾಳೆ. ಆದುದರಿಂದ ಈ ಭೂಮಿಯೇ ಒಂದು ಜೀವಿಯಾಗಿದೆ. ಬಿಲಿಯಗಟ್ಟಲೆ ಜೀವಜಂತುಗಳು ಮತ್ತು ಸೂಕ್ಷ್ಮಜೀವಿಗಳು ಅವಳೊಳಗೆ ಇವೆ. ಸೃಷ್ಟಿಯ ಪ್ರತಿಯೊಂದು ಅಣುವಿನಲ್ಲಿ ಮತ್ತು ಪ್ರತಿಯೊಂದು ಕೋಶದಲ್ಲಿ ಜೀವವಿದೆ.

ನೀವು ಸೃಷ್ಟಿಯನ್ನು ಈ ದೃಷ್ಟಿಕೋನದಿಂದ ನೋಡುವಾಗ, ಇಲ್ಲಿರುವ ಯಾವುದೂ ಸತ್ತಿಲ್ಲ, ಎಲ್ಲವೂ ಜೀವಂತವಾಗಿದೆಯೆಂಬುದನ್ನು ನೀವು ತಿಳಿಯುವಿರಿ.

ನೀವು ನೋಡಿದರೆ, ಸೃಷ್ಟಿಯಲ್ಲಿರುವ ಕೆಲವು ವಸ್ತುಗಳು ಸ್ಥಿರವಾಗಿವೆ ಆದರೆ, ಕೆಲವು ಚಲಿಸುವಂತೆ ತೋರುತ್ತವೆ. ಆದರೆ ವಾಸ್ತವವಾಗಿ, ಎಲ್ಲವೂ ಚಲನೆಯಲ್ಲಿವೆ. ಸೂರ್ಯ ಕೂಡಾ ಚಲಿಸುತ್ತಿದೆ. ಆದುದರಿಂದ ಕೃಷ್ಣ ಪರಮಾತ್ಮನು, ’ಈ ಸಂಪೂರ್ಣ ಸೃಷ್ಟಿಯಲ್ಲಿ ಜೀವಂತವಾಗಿರುವುದೆಲ್ಲವೂ ನಾನಾಗಿರುವೆನು. ಅದು ಅಸ್ತಿತ್ವದಲ್ಲಿರುವುದು ನನ್ನಿಂದಾಗಿ’ ಎಂದು ಹೇಳುತ್ತಾನೆ.

ನಂತರ ಅವನು ಮುಂದಿನ ಶ್ಲೋಕದಲ್ಲಿ ಮತ್ತಷ್ಟು ವಿವರಿಸುತ್ತಾನೆ,

’ಮತ್ತಃ ಪರತರಂ ನಾನ್ಯತ್  ಕಿಂಚಿದಸ್ತಿ ಧನಂಜಯ I
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ II' (೭.೭)

ಅವನು ಹೇಳುತ್ತಾನೆ, ’ಓ ಅರ್ಜುನ! ಈ ಸೃಷ್ಟಿಯಲ್ಲಿ ನನ್ನಿಂದ ಹೊರತಾದುದು ಯಾವುದೂ ಇಲ್ಲವೆಂಬುದನ್ನು ತಿಳಿ. ಎಲ್ಲದರಲ್ಲೂ ಇರುವುದು ನಾನೇ. ಈ ಸೃಷ್ಟಿಯಲ್ಲಿ ನನ್ನನ್ನು ಮೀರಿದುದು ಯಾವುದೂ ಇಲ್ಲ. ಸಂಪೂರ್ಣ ಸೃಷ್ಟಿಯು ನನ್ನೊಳಗೆ ಹೆಣೆಯಲ್ಪಟ್ಟಿದೆ, ಒಂದು ದಾರದಲ್ಲಿ ಮುತ್ತುಗಳನ್ನು ಪೋಣಿಸಿರುವಂತೆಯೇ’.

ಈ ಸಂಪೂರ್ಣ ಸೃಷ್ಟಿಯು, ಗಾಢ ವಸ್ತು ಅಥವಾ ಗಾಢ ಚೈತನ್ಯವೆಂದು ಕರೆಯಲ್ಪಡುವ ಶಕ್ತಿಯಿಂದ ತುಂಬಿದೆಯೆಂದು ನಿನ್ನೆ ನಾನು ಹೇಳಿದೆ. ಇದಕ್ಕಿರುವ ಒಂದು ಸರಳವಾದ ಉದಾಹರಣೆಯೆಂದರೆ ಗಾಳಿ. ನೋಡಿ, ನೀವು ಗಾಳಿಯಿಂದ ಸುತ್ತುವರಿಯಲ್ಪಟ್ಟಿರುವಿರಿ ಮತ್ತು ಅದು ನಿಮ್ಮ ಒಳಗೆ ಕೂಡಾ ಇದೆ. ನಿಮ್ಮ ಶರೀರದಿಂದ ಎಲ್ಲಾ ಗಾಳಿಯನ್ನು ತೆಗೆದರೆ, ಅದು ಹಾಗೆಯೇ ಕುಗ್ಗುವುದು. ಒಂದು ಟೈರಿನಂತೆಯೇ ಶರೀರವು ಗಾಳಿಯಿಂದ ತುಂಬಿದೆ. ಗಾಳಿಯನ್ನು ತೆಗೆದರೆ, ಒಂದು ರಬ್ಬರ್ ಟೈರಿನಂತೆಯೇ ಶರೀರವನ್ನು ಒತ್ತಿ ಚಿಕ್ಕದಾಗಿಸಬಹುದು ಮತ್ತು ಒಂದು ಚೀಲದೊಳಗೆ ತುಂಬಬಹುದು. ಅದು ಅಷ್ಟೊಂದು ಚಿಕ್ಕ ಗಾತ್ರವಾಗಿ ಕುಗ್ಗುವುದು. ಎಲ್ಲಾ ಗಾಳಿಯನ್ನು ಹೊರಕ್ಕೆ ತೆಗೆದಾಗ ಒಂದು ಬಲೂನು ಕುಗ್ಗಿ ಬಹಳ ಚಿಕ್ಕದಾಗುವಂತೆಯೇ. ಅದೇ ರೀತಿಯಲ್ಲಿ, ನಮ್ಮ ಶರೀರದೊಳಗೆ ಮತ್ತು ಅದರ ಸುತ್ತಲೆಲ್ಲಾ ವಾಯುವಿನ ಅಂಶವಿದೆ. ವಾಯುವಿನ ಅಂಶವಿಲ್ಲದೆ ನಮ್ಮ ಶರೀರ ಉಳಿಯಲು ಸಾಧ್ಯವಿಲ್ಲ. ಹಾಗೆಯೇ, ಪ್ರಜ್ಞಾ ಶಕ್ತಿಯಿಲ್ಲದೆ, ಯಾವುದಕ್ಕೂ ಈ ಪ್ರಪಂಚದಲ್ಲಿ ಬದುಕುಳಿಯಲು ಸಾಧ್ಯವಿಲ್ಲ. ಆದುದರಿಂದ ಅವನು ಹೇಳುತ್ತಾನೆ, ’ಒಂದು ದಾರದಿಂದ ಹಲವಾರು ಮುತ್ತುಗಳನ್ನು ಪೋಣಿಸಿ ಜೊತೆಯಲ್ಲಿ ಹಿಡಿದಿಟ್ಟಿರುವಂತೆಯೇ, ಈ ಸೃಷ್ಟಿಯಲ್ಲಿನ ಹಲವು ಪ್ರಪಂಚಗಳೆಲ್ಲಾ ನನ್ನಲ್ಲಿವೆ. ಎಲ್ಲದರ ಕೇಂದ್ರವು ನಾನಾಗಿರುವೆನು.’
ಮುಂದಿನ ಶ್ಲೋಕ,

’ರಸೋಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ I
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು II' (೭.೮)

ಈಗ ಬರುವುದು ಆಸಕ್ತಿಕರವಾದ ಭಾಗ. ಕೃಷ್ಣ ಪರಮಾತ್ಮ ಹೇಳುತ್ತಾನೆ, ’ನೀರಿನಲ್ಲಿನ ತೇವವು, ಎಲ್ಲಾ ದ್ರವ ಪದಾರ್ಥಗಳ ರುಚಿಯು ನಾನಾಗಿರುವೆನು; ಸೂರ್ಯ ಚಂದ್ರರಿಂದ ಹೊರಹೊಮ್ಮುವ ಬೆಳಕಿನ ಕಿರಣಗಳು ನಾನಾಗಿರುವೆನು. ಎಲ್ಲಾ ವೇದಗಳಲ್ಲಿ ಪ್ರಣವವು (ಓಂ, ಸೃಷ್ಟಿಯ ಆದಿಸ್ವರೂಪದ ಧ್ವನಿ) ನಾನಾಗಿರುವೆನು.

ಓಂ ಎಂಬುದು ನಮ್ಮ ನಿಜವಾದ ಹೆಸರಾಗಿದೆ. ನಾವು ಹೊತ್ತಿರುವ ಹೆಸರು, ನಮಗೆ ನಮ್ಮ ಹೆತ್ತವರಿಂದ ನೀಡಲಾಗಿರುವುದಾಗಿದೆ ಮತ್ತು ಅದು ಈ ಜೀವಮಾನದಲ್ಲಿನ ನಮ್ಮ ಅಸ್ತಿತ್ವಕ್ಕೆ ಮಾತ್ರ ಸೀಮಿತವಾಗಿದೆ.

ಒಬ್ಬರಿಗೆ ಒಂದು ಒಳ್ಳೆಯ ಹೆಸರನ್ನು ನೀಡಲಾಗಿದ್ದರೂ ಕೂಡಾ, ಜನರು ಮಿಂಟು, ಪಿಂಟು ಅಥವಾ ಜಿಮ್ಮಿ ಮೊದಲಾದ ಮುದ್ದಿನ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಒಬ್ಬಳು ಹುಡುಗಿಯ ಹೆಸರು ಪದ್ಮ ಎಂದಾಗಿರಬಹುದು. ಅದೊಂದು ಬಹಳ ಒಳ್ಳೆಯ ಹೆಸರು, ಆದರೂ ಜನರು ಒಂದು ಮುದ್ದಿನ ಹೆಸರಾಗಿ ಪಮ್ಮಿ ಎಂದು ಹೇಳುವರು (ನಗು).

ಹೀಗೆ ಜನರು ಇವತ್ತು ಪರಸ್ಪರರನ್ನು ಯಾವುದೇ ರೀತಿಯ ಹೆಸರಿನಿಂದಲಾದರೂ ಕರೆಯುತ್ತಾರೆ. ಈ ಹೆಸರು ನಮ್ಮ ನಿಜವಾದ ಹೆಸರಲ್ಲ. ನಮ್ಮ ನಿಜವಾದ ಹೆಸರು ಓಂ. ನಮ್ಮ ಜನ್ಮಕ್ಕಿಂತಲೂ ಮೊದಲು ಅದು ನಮ್ಮ ಹೆಸರಾಗಿತ್ತು ಮತ್ತು ನಮ್ಮ ಮರಣದ ನಂತರ ಅದು ನಮ್ಮ ಹೆಸರಾಗಿರುವುದು. ಒಂದು ದಿನ ನಾವೆಲ್ಲರೂ ಓಂನೊಳಕ್ಕೆ ವಿಲೀನವಾಗುವೆವು.

ಸಿಖ್ ಧರ್ಮದಲ್ಲಿ, ಗುರು ನಾನಕದೇವರಿಂದ ಒಂದು ಪ್ರಾರ್ಥನೆಯಿದೆ, ’ಎಕ್ ಓಂಕಾರ್ ಸತ್ ನಾಮ್, ಕರ್ತಾ-ಪೂರಖ್’.
ಅಂದರೆ, ಓಂ ಎಂಬುದು ಇರುವ ಒಂದೇ ಒಂದು ನಿಜವಾದ ಹೆಸರಾಗಿದೆ ಮತ್ತು ಎಲ್ಲಾ ಅಸ್ತಿತ್ವದ ಕಾರಣವಾಗಿದೆ. ಆದರೆ ಕೆಲವು ಅಜ್ಞಾನಿಗಳಿದ್ದಾರೆ, ಅವರು ಹೇಳುತ್ತಾರೆ, ’ನಾವು ಓಂನಲ್ಲಿ ನಂಬಿಕೆಯಿರಿಸುವುದಿಲ್ಲ, ನಾವು ಓಂಕಾರದಲ್ಲಿ ನಂಬಿಕೆಯಿರಿಸುತ್ತೇವೆ.’ ಎರಡರ ನಡುವೆ ಇರುವ ವ್ಯತ್ಯಾಸವೇನು? ಯಾವುದೇ ವ್ಯತ್ಯಾಸವಿಲ್ಲ.

’ಓಂ ಎಂಬುದು ಎಲ್ಲಾ ವೇದಗಳ ಸಾರವಾಗಿದೆ ಮತ್ತು ನಾನು ಅದುವೇ ಆಗಿರುವೆನು’, ಇದನ್ನೇ ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುವುದು.

ಓಂ ಇಲ್ಲದೆ ಜ್ಞಾನದ ಪ್ರಗತಿಯಿರಲು ಸಾಧ್ಯವಿಲ್ಲ. ವೇದಗಳ ಮಂತ್ರೋಚ್ಛಾರಣೆಯು ಓಂನಿಂದ ಪ್ರಾರಂಭವಾಗುತ್ತದೆ ಮತ್ತು ಓಂನಿಂದ ಮುಕ್ತಾಯವಾಗುತ್ತದೆ ಕೂಡಾ. ವೇದಗಳು ಓಂನದ್ದೇ ವಿಸ್ತರಣೆಯಾಗಿದೆ. ಓಂ ಎಂಬುದು ಸಂಪೂರ್ಣ ಸೃಷ್ಟಿಯ ಸಾರವಾಗಿದೆ.

ಶಬ್ದವೆಂಬುದು ಆಕಾಶ ತತ್ವದೊಂದಿಗೆ ಸಂಬಂಧಿಸಿದ ಒಂದು ಗುಣವಾಗಿದೆ. ಆದುದರಿಂದ ಈ ಶ್ಲೋಕದಲ್ಲಿ ಕೃಷ್ಣ ಪರಮಾತ್ಮನು, ’ಮಾತನಾಡಲ್ಪಡುವ ಮತ್ತು ತಿಳಿಯಪಡಿಸಲಾಗುವ ಎಲ್ಲದರ ಆಕಾಶದಲ್ಲಿನ ಶಬ್ದವು ನಾನಾಗಿರುವೆನು. ಒಬ್ಬ ಪುರುಷನಿಗೆ ನೀಡಲಾಗಿರುವ ಸಾಮರ್ಥ್ಯವೂ ಕೂಡಾ ನಾನಾಗಿರುವೆನು. ಒಬ್ಬಳು ಸ್ತ್ರೀಯು ತನ್ನ ಮೃದುತ್ವ ಮತ್ತು ಒಂದು ಮಾತೃ ಸ್ವಭಾವವನ್ನು ಹೊಂದಿರುವಂತೆಯೇ, ನನ್ನನ್ನು ಒಬ್ಬ ಗಂಡಸಿನಲ್ಲಿನ ಪೌರುಷವೆಂದು ತಿಳಿ’ ಎಂದು ಹೇಳುತ್ತಾನೆ.
ಮುಂದಿನ ಶ್ಲೋಕದಲ್ಲಿ ಅವನು ಹೇಳುತ್ತಾನೆ:

’ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ I
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು II'  (೭.೯)

ಗಂಧವೆಂಬುದು ಪೃಥ್ವಿ ತತ್ವಕ್ಕೆ ಸಂಬಂಧಿಸಿರುವ ಗುಣವಾಗಿದೆ. ವಾಯು ತತ್ವದಿಂದಾಗಿ ನಮಗೆ ವಾಸನೆಗಳನ್ನು ಅನುಭವಿಸಲು ಸಾಧ್ಯವಾಗುವುದೆಂದು ನಾವು ಯೋಚಿಸುತ್ತೇವೆ. ಆದರೆ ಅದು ಹಾಗಲ್ಲ. ಸಿಹಿಯೆಂಬುದು ಸಕ್ಕರೆಯ ಗುಣವಾಗಿರುವಂತೆಯೇ, ತೇವವೆಂಬುದು ನೀರಿನ ಗುಣವಾಗಿರುವಂತೆಯೇ, ಉಷ್ಣವು ಬೆಂಕಿಯ ಗುಣವಾಗಿರುವಂತೆಯೇ, ಗಂಧವೆಂಬುದು ಪೃಥ್ವಿ ತತ್ವದ ಗುಣವಾಗಿದೆ.

ಆದುದರಿಂದ ಕೃಷ್ಣ ಪರಮಾತ್ಮನು, ’ಪೃಥ್ವಿ ತತ್ವದ ಗಂಧವು ನಾನಾಗಿರುವೆನು; ಅಗ್ನಿ ತತ್ವದ ಉಷ್ಣವು ನಾನಾಗಿರುವೆನು ಮತ್ತು ಎಲ್ಲಾ ಜೀವಿಗಳಲ್ಲಿರುವ ಪ್ರಾಣ ಶಕ್ತಿಯು ನಾನಾಗಿರುವೆನು. ಒಬ್ಬ ಒಳ್ಳೆಯ ವ್ಯಕ್ತಿಯಿರಲಿ ಅಥವಾ ಕೆಟ್ಟ ವ್ಯಕ್ತಿಯಿರಲಿ, ಒಂದು ಸಿಂಹವಿರಲಿ, ಒಂದು ಬೆಕ್ಕಿರಲಿ, ಒಂದು ಇಲಿಯಿರಲಿ ಅಥವಾ ಒಂದು ಕತ್ತೆಯಿರಲಿ, ಎಲ್ಲೆಲ್ಲಾ ನಿನಗೆ ಜೀವವು ಕಾಣಸಿಗುವುದೋ, ಆ ಜೀವದ ಮೂಲ ಕಾರಣವು ನಾನಾಗಿರುವೆನು. ಅದೆಲ್ಲವೂ ನಾನು. ಜ್ಞಾನಿ ಋಷಿಗಳ ತಪವು ನಾನಾಗಿರುವೆನು. ಎಲ್ಲಾ ಸನ್ಯಾಸಿಗಳು ಮತ್ತು ಋಷಿಗಳಲ್ಲಿನ ಸಹಾನುಭೂತಿ ಮತ್ತು ಇಚ್ಛಾಶಕ್ತಿಯು ನಾನಾಗಿರುವೆನು’ ಎಂದು ಹೇಳುತ್ತಾನೆ.