ಭಾನುವಾರ, ಮೇ 12, 2013

ಸುಜ್ಞಾನದ ವರ್ತನೆಯೇ ಪ್ರಾರ್ಥನೆ

ಬೆಂಗಳೂರು, ಭಾರತ
೧೨ ಮೇ ೨೦೧೩

ಮೇ 12ರಂದು ಕರ್ನಾಟಕದಾದ್ಯಂತದಿಂದ ಸಾವಿರಕ್ಕೂ ಹೆಚ್ಚಿನ ಸ೦ಖ್ಯೆಯ ಗ್ರಾಮ ದೇವತೆಗಳು ಬೆಂಗಳೂರಿನ ಜೀವನ ಕಲೆ ಅಂತರ್ರಾಷ್ಟ್ರೀಯ ಕೇಂದ್ರದಲ್ಲಿ ಹೊಸತಾಗಿ ನಿರ್ಮಿಸಿದ ಗುರು ಪಾದುಕಾ ವನದಲ್ಲಿ ಸೇರಿದ್ದರು. ಲಂಬ ವೃತ್ತಾಕಾರದ ಆ ತೆರೆದ ಸಭಾಂಗಣವು (ಅಂಫಿಥಿಯೇಟರ್) ನಡುವಿನಲ್ಲಿ ಸರೋವರವೊಂದನ್ನು ಹೊಂದಿ ಸುತ್ತಲೂ ಅಲಂಕೃತ ದೇವತೆಗಳಿಂದ ತುಂಬಿದ್ದು, ವಿಶೇಷವಾಗಿ ಆ ಎಲ್ಲಾ ದೇವತೆಗಳಿಗೂ ಒಂದೇ ಸಮಯದಲ್ಲಿ ಆರತಿ ಬೆಳಗುವುದನ್ನು ನೋಡಲು ಅದೊಂದು ಪಾರಲೌಕಿಕ ನೋಟವಾಗಿತ್ತು. ಆ ಸಂಪೂರ್ಣ ಪರಿಸರವು ಹಬ್ಬದ ಹುರುಪು ಮತ್ತು ಡೋಲು, ತಾಳ, ಶಂಖ ಮತ್ತು ಘಂಟಾ ನಾದಗಳಿಂದ ಮೊಳಗಿ ಉತ್ಸವಾಚರಣೆಯಿಂದ ತುಂಬಿತ್ತು. ಆ ಸಂದರ್ಭದ ವೈಶಿಷ್ಟ್ಯವನ್ನು ವಿವರಿಸುತ್ತಾ, ಶ್ರೀ ಶ್ರೀ ಅವರ ವಾಣಿಯ ಲಿಪ್ಯಂತರವನ್ನು ಇಲ್ಲಿ ನೀಡಲಾಗಿದೆ.


ರಡು ಬಗೆಯ ಶಕ್ತಿಗಳು ಈ ಲೋಕವನ್ನು ಕಾಪಾಡುತ್ತಿವೆ. ಒಂದು ದೈವೀ ಶಕ್ತಿ (ದೇವತೆಗಳ ಶಕ್ತಿ) ಮತ್ತೊಂದು ಆಸುರೀ ಶಕ್ತಿ (ಅಸುರರ ಶಕ್ತಿ).


ಸಕಾರಾತ್ಮಕ ಶಕ್ತಿ ಮತ್ತು ನಕಾರಾತ್ಮಕ ಶಕ್ತಿಗಳ ನಡುವಿನ ಘರ್ಷಣೆ ಯಾವಾಗಲೂ ನಡೆಯುತ್ತದೆ. ಸಕಾರಾಟ್ಮಕ ಶಕ್ತಿಗಳು ಗೆದ್ದಾಗ, ಅಂಥ ಸಮಯದಲ್ಲಿ ಈ ಲೋಕದಲ್ಲಿ ತೃಪ್ತಿ, ಸಮಾಧಾನ ಮತ್ತು ಆನಂದ ಇರುತ್ತದೆ. ನಕಾರಾತ್ಮಕ ಶಕ್ತಿಗಳು ಗೆದ್ದಾಗ ತೊಂದರೆಗಳು ಮತ್ತು ಹಿಂಸೆ ಇರುತ್ತದೆ.

ಕೊನೆಯಲ್ಲಿ, ಯಾವತ್ತೂ ಗೆಲ್ಲುವಂಥದ್ದು ಸಕಾರಾತ್ಮಕ ಶಕ್ತಿಯೇ, ಆದರೆ ನಕಾರಾತ್ಮಕ ಶಕ್ತಿಗಳು ಸಮಯಾಂತರದಲ್ಲಿ ತಲೆಯೆತ್ತುತ್ತಾ ಇರುತ್ತವೆ.

ಇಂದು 1008 ಹಳ್ಳಿಗಳಿಂದ ವಿವಿಧ ಗ್ರಾಮ ದೇವತೆಗಳು ಇಲ್ಲಿ ನೆರೆದಿದ್ದಾರೆ. ಕೆಲವು ಹಳ್ಳಿಯ ಮುಖಂಡರು ಹೇಳುತ್ತಿದ್ದರು, ಅವರ ಗ್ರಾಮ ದೇವತೆಗಳು ಸುಮಾರು 60ರಿಂದ 65 ವರ್ಷಗಳ ತನಕ ಆ ಗ್ರಾಮದಿಂದ ಹೊರಗೆ ಬಂದಿರಲಿಲ್ಲ. ಇದೇ ಮೊದಲನೆಯ ಬಾರಿ ಅವರು ತಮ್ಮ ಹಳ್ಳಿಯಿಂದ ಹೊರಗೆ, ಇಲ್ಲಿಗೆ ಬಂದಿರುವುದು.

ಹಾಗೆ ವಿವಿಧ ಹಳ್ಳಿಗಳಿಂದ ಜನರು ತಮ್ಮ ಪೂಜ್ಯ ಗ್ರಾಮ ದೇವತೆಯನ್ನು ಇಲ್ಲಿಗೆ ಕರೆತಂದಿದ್ದಾರೆ.

ನಮ್ಮ ಪೂರ್ವಜರು ಪ್ರತಿ ಗ್ರಾಮದಲ್ಲೊಬ್ಬ ಗ್ರಾಮ ದೇವತೆಯನ್ನು ಆವಾಹಿಸಿದ್ದರು.

ಒಂದು ವಿಗ್ರಹವನ್ನು ನೀವು ದೇವತೆಯೆಂದು ಯಾವಾಗ ಕರೆಯುತ್ತೀರಿ? ಒಬ್ಬ ಸಿದ್ಧನು(ಆಧ್ಯಾತ್ಮಿಕ ಜಾಗೃತಿಯುಳ್ಳ ವ್ಯಕ್ತಿ) ಮಂತ್ರ ಪಠಣದಿಂದ ವಿಗ್ರಹದೊಳಗೆ ದೈವೀ ಪ್ರಾಣವನ್ನು ಆವಾಹಿಸಿದಾಗ ಆ ವಿಗ್ರಹವು ದೇವತೆಯಾಗುವುದು.

ಪ್ರತಿ ಸ್ಥಳ ಅಥವಾ ಕ್ಷೇತ್ರವನ್ನು ರಕ್ಷಿಸುವ ದೇವತೆಗಳಿವೆ, ಆದ್ದರಿಂದ ಅವರನ್ನು ಕ್ಷೇತ್ರಪಾಲರೆಂದು ಕರೆಯುತ್ತಾರೆ. ಎಲ್ಲಾ ಜನರಿಗೂ ದೇವತೆಯ ಬಗ್ಗೆ ಗಾಢ ನಂಬಿಕೆ ಮತ್ತು ಗೌರವವಿದೆ, ಅವರು ತಮ್ಮ ಯೋಗಕ್ಷೇಮಕ್ಕಾಗಿ ದೇವತೆಯನ್ನು ಆರಾಧಿಸುತ್ತಾರೆ.

ಸಂಸ್ಕೃತದಲ್ಲಿ ಒಂದು ಪದವಿದೆ, ’ನಿಲಿಂಪ-ಪರಿಷತ್’ (ಅಂದರೆ ದೇವತೆಗಳ ಮಂಡಳಿ). ನಮ್ಮಲ್ಲಿ ಸಂಸತ್ತು ಮತ್ತು ವಿಧಾನಸಭೆ ಹೇಗಿವೆಯೋ, ಅದೇ ರೀತಿ ಆ ದೇವತೆಗಳಿಗೂ ತಮ್ಮ ಸ್ವಂತ ಪರಿಷತ್ತಿದೆ.

ಹಾಗೆ ಈ ದೇವತೆಗಳ ಸಭೆಯು ಇಂದು ಉತ್ಸವಾಚರಣೆಯಲ್ಲಿ ಪಾಲ್ಗೊಳ್ಳಲು ಇಲ್ಲಿ  ನೆರೆದಿದೆ. ನಾವು ಎಲ್ಲಾ ಸ್ಥಳಗಳಿಂದ ದೇವತೆಗಳನ್ನು ಕರೆತೆಂದಿದ್ದೇವೆ.

ಹಿರಿಯರು ಹೇಳಿದ್ದಾರೆ, ’ಸ್ಥಾನ ಪ್ರಧಾನಂ ನ ತು ಬಲ ಪ್ರಧಾನಂ’ ಎಂದು.

ದೇವರು ದೇವಸ್ಥಾನದ ಕಂಬಗಳಲ್ಲೂ ಇದ್ದಾನೆ, ಆದರೆ ನಾವು ಗರ್ಭಗುಡಿಯೊಳಗಿನ ದೇವತೆಯನ್ನಷ್ಟೇ ಆರಾಧಿಸುತ್ತೇವೆ. ಶಕ್ತಿಯೊಂದಿದ್ದರೆ ಸಾಲದು, ಒಂದು ಸ್ಥಾನವೂ ಅಗತ್ಯವಾಗಿದೆ. ನಾವು ದೇವತೆಗಳಿಗೆ ಒಂದು ಸ್ಥಾನವನ್ನು ನೀಡುವೆವು. ಗ್ರಾಮ ದೇವತೆಗಳು ತೃಪ್ತರಾದರೆ ಮಾತ್ರ ಪ್ರಗತಿ ಸಾಧ್ಯ. ಗ್ರಾಮ ದೇವತೆಗಳು ತೃಪ್ತರಾಗಬೇಕಾದರೆ, ಜನರಲ್ಲಿ ಒಗ್ಗಟ್ಟಿರಬೇಕು.

ಎಲ್ಲರೂ ಚೆನ್ನಾಗಿರಬೇಕು ಮತ್ತು ಸಮೃದ್ಧಿಯಿರಬೇಕು. ಜನರ ಮನದಲ್ಲಿ ದುಃಖ ಮತ್ತು ದ್ವೇಷವಿದ್ದರೆ, ಆಗ ಗ್ರಾಮ ದೇವತೆಗಳು ಬಹಳ ನೋವನುಭವಿಸುತ್ತಾರೆ.

ಗ್ರಾಮ ದೇವತೆಗಳನ್ನು ಸಂತುಷ್ಟಗೊಳಿಸಲು ಒಂದು ಉತ್ಸವವನ್ನು ನೆರವೇರಿಸಬೇಕು. ಹಳ್ಳಿಯಲ್ಲಿ ಎಲ್ಲರೂ ಒಟ್ಟಾಗಬೇಕು, ಹಿಂದಿನದನ್ನು ಮರೆತು ದೇವರು ತಮಗೆ ನೀಡಿರುವ ಎಲ್ಲದಕ್ಕಾಗಿ ಧನ್ಯತೆ ಸಲ್ಲಿಸಬೇಕು.

ನಾವು ಈ ದಿನವನ್ನು ಜಾತಿ, ಮತ ಮತ್ತು ಧರ್ಮಗಳ ಎಲ್ಲಾ ಭೇದಗಳನ್ನು ಬದಿಗೆ ತಳ್ಳಿ ನಾವೆಲ್ಲರೂ ಒಂದು ದೈವಿಕತೆಯಿಂದ ಆಳಲ್ಪಡುತ್ತಿದ್ದೇವೆ ಮತ್ತು ನೋಡಿಕೊಳ್ಳಲ್ಪಡುತ್ತಿದ್ದೇವೆ ಎಂದು ನೆನಪಿಸಿಕೊಂಡು ಆಚರಿಸುತ್ತೇವೆ. ಇದು ಪ್ರತಿ ಹಳ್ಳಿಯ ಗ್ರಾಮ ದೇವತೆಯ ಸಂಕೇತ.

ಒಬ್ಬ ವ್ಯಕ್ತಿ ತಾನು ದೈವಿಕತೆಗೆ ಶರಣಾಗಿದ್ದೇನೆ ಎಂದು ನಂಬಿಕೊಂಡಾಗ, ಅವನು ತನ್ನ ಎಲ್ಲಾ ಕರ್ತವ್ಯಗಳನ್ನು ಒಬ್ಬ ದಾಸನ ಸ್ವಾಮಿನಿಷ್ಠೆ ಮತ್ತು ಕೃತಜ್ಞತೆಗಳಿಂದ ಕೆಲಸ ಮಾಡುತ್ತಾನೆ, ಒಬ್ಬ ಅಧಿಕಾರಿಯಾಗಿ ಅಲ್ಲ (ಅಂದರೆ ಅಹಂಕಾರ ಅಥವಾ ಕರ್ತೃತ್ವ ಭಾವವಿಲ್ಲದೆ).

ಸಮಾಜದಲ್ಲಿ ಎರಡು ಬಗೆಯ ಜನರಿದ್ದಾರೆ: ಒಂದು ಬಗೆಯವರು ಯೋಚಿಸುತ್ತಾರೆ, ’ ನಾನು ಭಗವಂತನ ದಾಸನಲ್ಲದೇ ಬೇರೇನೂ ಅಲ್ಲ’ ಎಂದು. ಇನ್ನೊಂದು ಬಗೆಯವರು, ’ನಾನೇ ಎಲ್ಲ’ ಎಂದು ಯೋಚಿಸುವವರು.

ಒಂದು ಹಳ್ಳಿಯಲ್ಲಿ ಅಥವಾ ನಗರದಲ್ಲಿ ಯಾವುದೇ ತೊಂದರೆಯಿದ್ದರೆ, ಅದು ಕೇವಲ ಅಹಂಕಾರದಿಂದಾಗಿ. ಅಹಂಕಾರವು ಯಾವುದೇ ಒಳ್ಳೆಯ ಕೆಲಸವನ್ನು ವಿನಾಶ ಮಾಡುತ್ತದೆ. ಹಾಗಾಗಿ, ಅಹಂಕಾರವನ್ನು ಮೃದುವಾಗಿಸಲು, ಎಲ್ಲಾ ವಿಶ್ವಾಸವನ್ನು ದೇವರ ಮೇಲಿಡುವುದು ಅಗತ್ಯವಾಗುತ್ತದೆ.

ಇಲ್ಲಿ, ಅಹಂಕಾರವೆಂದರೆ ನಾನು ದುರಹಂಕಾರವನ್ನು ಸಂಬೋಧಿಸುತ್ತಿರುವುದು. ಜನರೊಳಗೆ ದುರಹಂಕಾರ ಮತ್ತು ಆಸುರೀ ಪ್ರವೃತ್ತಿಗಳುಇಲ್ಲದಿರಲಿ ಎಂದು ಗ್ರಾಮ ದೇವತೆಗಳನ್ನು ಸ್ಥಾಪಿಸಲಾಗುತ್ತಿತು. ಜನರು ಆ ದೇವತೆಯನ್ನು ಗೌರವಿಸಿ ಸಂಪೂರ್ಣ ಶ್ರದ್ಧೆಯಿಂದ ಆರಾಧಿಸಿದಾಗ, ಅವರು ಸತ್ಯವನ್ನು ಹೇಳುತ್ತಾರೆ ಮತ್ತು ನೀತಿಬದ್ಧವಾದ ಮಾರ್ಗವನ್ನೂ ಅನುಸರಿಸುತ್ತಾರೆ.

ನಿಮಗೆ ಗೊತ್ತೇ, ಹಿಂದೆ ನ್ಯಾಯಾಲಯಗಳಿಲ್ಲದಿದ್ದಾಗ ಜನರು ತಮ್ಮನ್ನು ಗ್ರಾಮ ದೇವತೆಗಳ ಸಮಕ್ಷ ಮಂಡಿಸುತ್ತಿದ್ದರು? ಜನರು ತಮ್ಮೊಳಗೆ ಏನೇ ವಿವಾದಗಳಿದ್ದರೂ, ಅದನ್ನು ದೇವತೆಗಳ ಉಪಸ್ಥಿತಿಯಲ್ಲಿ ಬಗೆಹರಿಸುತ್ತಿದ್ದರು.  ಹಾಗೆ ಗ್ರಾಮದೇವತೆಗಳು ಒಬ್ಬ ನ್ಯಾಯಾಧೀಶನಂತೆ ವಿವಾದಗಳನ್ನು ಬಗೆಹರಿಸಿ, ಅಪರಾಧಗಳನ್ನು ಕ್ಷಮಿಸಿ ಆ ಸ್ಥಳದಲ್ಲಿ ಎಲ್ಲರೂ ನ್ಯಾಯದಿಂದ ಬದ್ಧರಾಗಿರುವಂತೆ ನೋಡಿಕೊಳ್ಳುವವರಾಗಿದ್ದರು.

ಆ ಕ್ಷೇತ್ರದ ವ್ಯವಹಾರಗಳನ್ನು ಆ ದೇವತೆಯ ಮೂಲಕ ನಡೆಸಲಾಗುತ್ತಿತ್ತು.

ಇಂದೂ ಅಷ್ಟೇ, ಯಾರೇ ಆದರು ಒಂದು ಕಛೇರಿಯ ಅಧಿಕಾರವಹಿಸುವ ಮೊದಲು ಪ್ರಮಾಣ ಮಾಡುವಾಗ, ಅವರು ಅದನ್ನು ದೇವರ ಹೆಸರಿನಲ್ಲೇ ಮಾಡುವುದು.  ಒಬ್ಬ ವ್ಯಕ್ತಿ ಒಂದು ಮಂತ್ರಿಯಾದಾಗ, ಅಧಿಕಾರಕ್ಕೆ ಬದ್ಧನಾಗುವ ಮೊದಲು ಅವನು ದೇವರ ಹೆಸರಿನಲ್ಲಿ ಒಂದು ಪ್ರಮಾಣ ತೆಗೆದುಕೊಳ್ಳುತ್ತಾನೆ. ಇದನ್ನು ಎಲ್ಲದರಲ್ಲೂ ಭಗವಂತನ ಅಸ್ತಿತ್ವವನ್ನು ನೆನಪಿಸಿಕೊಳ್ಳಲು ಮತ್ತು ಸ್ವೀಕರಿಸಲಿಕ್ಕಾಗಿ ಮಾಡಲಾಗುತ್ತದೆ. ಹಾಗೆ ಗ್ರಾಮ ದೇವತೆಗಳನ್ನು ಜನರಿಗೆ ದೈವತ್ವದ ಅಸ್ತಿತ್ವದ ನೆನಪು ಮತ್ತು ಅನುಭವವನ್ನುಂಟು ಮಾಡುವುದಕ್ಕಾಗಿ ಸ್ಥಾಪಿಸಲಾಗಿತ್ತು.

ಇದರ ಅರ್ಥ ದೇವರನ್ನು ಒಂದು ವಿಗ್ರಹಕ್ಕೆ ಸೀಮಿತವಾಗಿಸಲಾಗಿತ್ತು ಎಂದಲ್ಲ. ಅದು ಜನರು ತಾವು ಮಾಡಿದ ಮತ್ತು ಸಾಧಿಸಬೇಕು ಎಂದುಕೊಂಡಿರುವ ಎಲ್ಲದರಲ್ಲೂ ದೈವತ್ವದ ಅಸ್ತಿತ್ವವನ್ನು ಅವರಿಗೆ ನೆನಪಿಸುವುದಕ್ಕಾಗಿ ಮಾತ್ರ.

ಹಾಗಾಗಿ ಇಂದು, ಹಲವಾರು ಗ್ರಾಮಗಳಿಂದ ದೇವತೆಗಳು ಇಲ್ಲಿ ಉತ್ಸವಾಚರಣೆಗಾಗಿ ನೆರೆದಿರುವಾಗ, ನಮಗೀ ಒಳ್ಳೆಯ ಅವಕಾಶವಿದೆ.

ಎಲ್ಲಾ ದೇವತೆಗಳು ಸೇರಿಕೊಂಡಾಗ, ಅದೊಂದು ಯಜ್ಞ. ಇಂದು ಇಲ್ಲೊಂದು ದೊಡ್ಡ ಯಜ್ಞ ನೆರವೇರಿದೆ. ಎಲ್ಲಾ ದೇವತೆಗಳು ಇಲ್ಲಿಗೆ ಬಂದು ನಿಮ್ಮನ್ನು ಆಶೀವದಿಸಿದ್ದಾರೆ. ದೈವೀ ಶಕ್ತಿಗಳು(ಸಕಾರಾತ್ಮಕ ಶಕ್ತಿ) ಪ್ರತಿ ಅಣುವಿನಲ್ಲಿ ಇವೆ. ಅಂಥ ಶಕ್ತಿಗಳನ್ನು ಧ್ಯಾನ, ಸತ್ಸಂಗ ಮತ್ತು ಪೂಜೆಯ ಮೂಲಕ ಜಾಗೃತಗೊಳಿಸುವುದು ಯಜ್ಞವಾಗಿದೆ.

ಹೀಗೆ, ನಾವು ಜ್ಞಾನ ಯಜ್ಞ, ಧ್ಯಾನ ಯಜ್ಞ, ಜಪ (ದೇವರ ನಾಮಸ್ಮರಣೆ) ಯಜ್ಞ ಮತ್ತು ಕೀರ್ತನ (ದೇವರ ಮಹಿಮೆಯನ್ನು ಹಾಡುವುದು) ಯಜ್ಞವನ್ನು ಮಾಡುತ್ತಿದ್ದೇವೆ.

ಈ ಸಂಸ್ಕೃತಿ ಭಾರತದಲ್ಲಿ ಮಾತ್ರ ಇರುವುದುದ್, ಇದನ್ನು ಉಳಿಸಿಸ್ ಬೆಳೆಸಬೇಕಾಗಿದೆ. ಇದನ್ನು ಬಾಡಿಹೋಗಲು ಬಿಡಬೇಡಿ. ಈ ಗ್ರಾಮ ದೇವತಾ ಉತ್ಸವಾಚರಣೆ ಪ್ರತಿ ಗ್ರಾಮದಲ್ಲಿ ನಡೆಯುವಂತೆ ನಾವು ನೋಡಿಕೊಳ್ಳಬೇಕು.

ಯಾವತ್ತು ದೇವರನ್ನು ಸ್ಮರಿಸಿ, ಇತರರಿಗೆ ಸಹಾಯವಾಗಿ ಮತ್ತು ಸಂತುಷ್ಟರಾಗಿರಿ.

’ದೈವಾಧೀನಂ ಜಗತ್ಸರ್ವಂ’, ಈ ಜಗತ್ತು ದೇವರ ಅಧೀನದಲ್ಲಿದೆ.

’ಮಂತ್ರಾಧೀನಂ ತು ದೈವತಂ’, ದೇವತೆಗಳು ಮಂತ್ರಗಳ ಅಧೀನದಲ್ಲಿದ್ದಾರೆ. ಯಾರು ಮಂತ್ರಗಳನ್ನು ಸಿದ್ಧಿಸಿದ್ದಾರೋ ಅವರು ದೇವತೆಗಳಿಗೆ ಸಮಾನರಾಗುತ್ತಾರೆ. ಅದಕ್ಕಾಗಿಯೇ ಮಂತ್ರ ಪಠಣ ಮತ್ತು ಧ್ಯಾನಕ್ಕೆ ಬಹಳ ಆದ್ಯತೆ ನೀಡಲಾಗಿದೆ.

ಮಂತ್ರಗಳನ್ನು ಅಭ್ಯಾಸ ಮಾಡುತ್ತಾ ಮತ್ತು ದೇವತೆಗಳಿಗೆ ಪ್ರಾರ್ಥನೆ ಅರ್ಪಿಸುತ್ತಾ ಬಂದಂತೆ ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಸಂಪತ್ತು ಉಂಟಾಗುತ್ತದೆ. ನಾವೇನೇ ಪಡೆದಿದ್ದರೂ, ಅದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಇದು ಧರ್ಮದ ಸಾರ, ಅರ್ಥಾತ್ ದೈವೀ ಶಕ್ತಿಯನ್ನು ಆರಾಧಿಸಿ ಮತ್ತು ಈ ಸಮಾಜವು ಆಸುರೀ ಶಕ್ತಿಯಿಂದ ಮುಕ್ತವಾಗಲಿ ಎಂದು ಪ್ರಾರ್ಥಿಸಿ.

ಉಳಿದ ದೇಶಗಳಲ್ಲಿ ಅವರು ಹೇಳುತ್ತಾರೆ, ’ನಾವು ಹೋಗಿ ನಕಾರಾತ್ಮಕ ಶಕ್ತಿಗಳೊಂದಿಗೆ ಹೋರಾಡುತ್ತೇವೆ’. ಭಾರತದಲ್ಲಿ ನಾವು ಹೇಳುವುದು, ’ನಾವು ಆಸುರೀ ಶಕ್ತಿ(ನಕಾರಾತ್ಮಕ ಶಕ್ತಿ) ಯನ್ನು ದೈವೀ ಶಕ್ತಿ(ಸಕಾರಾತ್ಮಕ ಶಕ್ತಿ)ಯ ಮೂಲಕ ತೆಗೆದುಹಾಕುತ್ತೇವೆ’. ಸಕಾರಾತ್ಮಕ ಶಕ್ತಿಗಳು ಬಲವುಳ್ಳದ್ದಾಗಿರುವಂತೆ ನಾವು ನೋಡಿಕೊಳ್ಳಬೇಕು. ಅದು ಹೇಗೆ? ಆರಾಧನೆ, ಆಚರಣೆ ಮತ್ತು ಯಜ್ಞದಿಂದ.

ಇಂದಿನ ಆಚರಣೆಗಳನ್ನು ಆನಂದಿಸುವುದು ಒಂದು ವಿಷಯ. ಆದರೆ ಎಲ್ಲಾ ದೇವತೆಗಳು(ಸುತ್ತಲೂ ವಿವಿಧ ರೂಪದ ದೇವತೆಗಳನ್ನು ತೋರಿಸುತ್ತಾ) ನಿಮ್ಮೊಳಗೇ ವಾಸವಾಗಿದ್ದಾರೆ ಎಂದೂ ನೀವು ಅರಿತುಕೊಳ್ಳಬೇಕು. 33ಕೋಟಿ ದೇವತೆಗಳು

ನಮ್ಮ ಶರೀರದ ಪ್ರತಿ ಅಣುವಿನಲ್ಲೂ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ನಾವು ನಮ್ಮೊಂದಿಗೇ ಶಾಂತವಾಗಿ ಮತ್ತು ತೃಪ್ತಿಯಿಂದಿರುವಾಗ, ಮನಸ್ಸು ಉಲ್ಲಾಸದಿಂದಿರುವಾಗ, ಅದು ನೈವೇದ್ಯ (ದೇವರಿಗೆ ಅರ್ಪಿಸುವ ಆಹಾರ).

ಮನಸ್ಸು ಜ್ಞಾನಜ್ಯೋತಿಯಿಂದ ಬೆಳಗಿದಾಗ, ಅದು ಭಗವಂತನ ಆರಾಧನೆ.

ನೀವು ಎಲ್ಲರೊಂದಿಗೂ ಪ್ರೀತಿಯಿಂದಿದ್ದಾಗ, ಅದು ದೇವರಿಗೆ ಪುಷ್ಪಾಂಜಲಿ (ಹೂಗಳ ಅರ್ಪಣೆ).

ಹಾಗಾದರೆ ದೇವತೆಗಳಿಗೆ ಎನೂ ಪುಷ್ಪಾಂಜಲಿ? ಅದು ಎಲ್ಲರ ಮೇಲೂ ಪ್ರೀತಿಯ ಅರಳುವಿಕೆ. ಆರತಿ ಎಂದರೇನು? ಅದು ಜ್ಞಾನದ ಪ್ರಕಾಶ ನಿಮ್ಮ ಹೃದಯವನ್ನು ಬೆಳಗಿದಾಗ; ’ನಾನು ಈ ಶರೀರವಲ್ಲ, ನಾನು ಶುದ್ಧ ಚೈತನ್ಯ. ನನಗೆ ಹುಟ್ಟೂ ಇಲ್ಲ ಸಾವೂ ಇಲ್ಲ. ನಾನು ಶಾಶ್ವತ. ನಾನು ಸನಾತನ(ನಿತ್ಯ ಮತ್ತು ಬದಲಾವಣೆಯಿಲ್ಲದ)’ ಎಂಬ ಅರಿವು ನಿಮ್ಮಲ್ಲಿ ಮೂಡಿದಾಗ. ಈ ಜ್ಞಾನದಲ್ಲಿರುವುದು ದೈವತ್ವದ ನಿಜವಾದ ಆರತಿ.

ಹಾಗಾಗಿ, ಈ ರೀತಿಯಲ್ಲಿ, ನೀವು ನಿಮ್ಮೊಳಗೇ ಈ ರೀತಿಯ ಪೂಜೆಯನ್ನು ಮಾಡುವುದರ ಮೂಲಕ ನಿಮ್ಮೊಳಗೇ ಇರುವ ಈ ಎಲ್ಲಾ 33 ಕೋಟಿ ದೇವತೆಗಳನ್ನು ಆರಾಧಿಸಬೇಕು. ಇದು ನಾವು ತಿಳಿದಿರಬೇಕಾದ ಉನ್ನತ ಜ್ಞಾನ.