ಗುರುವಾರ, ಮೇ 16, 2013

ಗೀತಾ ಜ್ಞಾನ - ೧೦

ಇಚ್ಛೆ - ದ್ವೇಷದ ತಾಕಲಾಟದಲ್ಲಿ ಜರ್ಝರಿತವಾಗುವ ಮನಸ್ಸು

ಬೆಂಗಳೂರು, ಭಾರತ
೧೬ ಮೇ ೨೦೧೩

’ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ I
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ II’  (೭.೨೭)

ಹೀಗೆಂದು ಹೇಳುತ್ತಾ ಕೃಷ್ಣ ಪರಮಾತ್ಮನು ಮುಂದುವರಿಸುತ್ತಾನೆ,

"ಹಲವರಿಗೆ ನನ್ನನ್ನು ತಿಳಿಯಲು ಸಾಧ್ಯವಾಗದಿರುವುದು ಯಾಕೆ? ಕಾರಣವೇನೆಂದರೆ ಇಚ್ಛೆ ಮತ್ತು ದ್ವೇಷ. ಅವರು ತಮ್ಮ ಇಚ್ಛೆಗಳು ಮತ್ತು ದ್ವೇಷಗಳ ನಡುವೆ ನಿರಂತರವಾಗಿ ಸಿಕ್ಕಿಹಾಕಿಕೊಂಡಿರುತ್ತಾರೆ" ಎಂದು ಹೇಳುತ್ತಾನೆ.

ಒಬ್ಬರು ಇನ್ನೊಬ್ಬರ ಕಡೆಗೆ ರಾಗದಲ್ಲಿ ಸಿಕ್ಕಿಬಿದ್ದಿರುವಾಗ ಅಥವಾ ದ್ವೇಷಗ್ರಸ್ತರಾಗಿರುವಾಗ, ಆ ಭಾವನೆ ಅವರ ಮನಸ್ಸನ್ನು ಸಂಪೂರ್ಣವಾಗಿ ಆವರಿಸುತ್ತದೆ  ಮತ್ತು ಅವರಿಗೆ ಬೇರೇನನ್ನೂ ನೋಡಲು ಸಾಧ್ಯವಾಗುವುದಿಲ್ಲ. ಒಬ್ಬರಿಗಾಗಿ ತೀವ್ರವಾಗಿ ಹಂಬಲಿಸುವ ಅಥವಾ ಒಬ್ಬರ ಕಡೆಗೆ ಅತಿಯಾದ ದ್ವೇಷವನ್ನು ಹೊಂದಿರುವ ಒಬ್ಬ ವ್ಯಕ್ತಿಯು ಮೋಹದ ಬಲೆಗೆ ಬೀಳುತ್ತಾನೆ.

ಸಕಲ ಜೀವಿಗಳ ಮೇಲೆ ಇದರ ಪರಿಣಾಮ ಉಂಟಾಗುತ್ತದೆ, ಮತ್ತು ಈ ಕಾರಣದಿಂದಲೇ ಅವುಗಳೆಲ್ಲವೂ ಕಷ್ಟಗಳನ್ನು ಅನುಭವಿಸುತ್ತವೆ. ಕಷ್ಟ ಅನುಭವಿಸುತ್ತಿರುವ ಮತ್ತು ದುಃಖಿಸುತ್ತಿರುವ ಒಬ್ಬ ವ್ಯಕ್ತಿಗೆ ಬೇರೇನನ್ನೂ ನೋಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವನ ಸುತ್ತಲೂ ಏನಾದರೂ ಒಳ್ಳೆಯದು ನಡೆಯುತ್ತಿದ್ದರೂ ಕೂಡಾ, ಅವನಿಗದನ್ನು ನೋಡಲು ಸಾಧ್ಯವಾಗುವುದಿಲ್ಲ. ಅಂತಹ ಒಬ್ಬ ವ್ಯಕ್ತಿಯು ತನ್ನದೇ ಪ್ರಪಂಚದಲ್ಲಿ ಜೀವಿಸುತ್ತಾನೆ. ಅದು ಭ್ರಮೆ ಅಥವಾ ಭ್ರಾಂತಿ.

ಅಂತಹ ಒಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಒಂದು ಸಮಸ್ಯೆಯಿರುವಾಗ; ಅದು ಹಣದ ಬಗ್ಗೆಯಿರಲಿ ಅಥವಾ ಸಂಬಂಧಗಳು ಮೊದಲಾದುವುಗಳ ಬಗ್ಗೆಯಿರಲಿ, ಅವನಿಗೆ ನೋಡಲು ಸಾಧ್ಯವಾಗುವುದು ಬರಿಯ ಸಮಸ್ಯೆಗಳನ್ನು ಮಾತ್ರ. ಅವನ ಮನಸ್ಸು ಸಮಸ್ಯೆಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿರುತ್ತದೆ ಮತ್ತು ಬೇರೇನೂ ಅಲ್ಲ. ಅವನು ಹಗಲು ರಾತ್ರಿಗಳನ್ನು; ವರ್ಷಗಳನ್ನು ಕೂಡಾ ಅದರ ಬಗ್ಗೆ ಚಿಂತೆ ಮಾಡುವುದರಲ್ಲಿ ಕಳೆಯುತ್ತಾನೆ, ಆದರೆ ಅದರಿಂದ ಹೊರಬರಲು ಅವನಿಗೆ ಸಾಧ್ಯವಾಗುವುದಿಲ್ಲ.

ಒಬ್ಬರು ಯಾವುದಾದರೂ ರೀತಿಯ ನಷ್ಟವನ್ನು ಅನುಭವಿಸುತ್ತಿದ್ದರೆ, ಆಗ ಆ ನಷ್ಟವು ಆ ವ್ಯಕ್ತಿಯನ್ನು ಎಷ್ಟೊಂದು ಸಂಪೂರ್ಣವಾಗಿ ಹಿಡಿತದಲ್ಲಿಡುವುದೆಂದರೆ, ಅದರ ಹೊರತಾಗಿ ಏನನ್ನು ನೋಡಲೂ ಅವನಿಗೆ ಸಾಧ್ಯವಾಗುವುದಿಲ್ಲ. ಇದನ್ನೇ ಕೃಷ್ಣ ಪರಮಾತ್ಮನು ಮೋಹವೆಂದು ಕರೆಯುವುದು. ಅವನು ಹೀಗೆಂದು ಹೇಳುತ್ತಾನೆ, "ಅಂತಹ ಮೋಹಗಳಲ್ಲಿ ಸಿಲುಕಿಹಾಕಿಕೊಂಡವನಿಗೆ ನನ್ನನ್ನು, ಎಲ್ಲವನ್ನೂ ವ್ಯಾಪಿಸಿರುವ ಒಂದು ಶುದ್ಧ ಚೇತನವೆಂದು ಗುರುತಿಸಲು ಸಾಧ್ಯವಾಗುವುದಿಲ್ಲ. ನನ್ನ ಅಗಾಧ ಪ್ರಭೆಯನ್ನು ಗುರುತಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ನಾನು ಬಹಳ ವಿಶಾಲವೂ ಭವ್ಯವೂ ಆಗಿರುವೆನು, ಅದನ್ನು ನೋಡಲು ಅವನಿಗೆ ಸಾಧ್ಯವಾಗುವುದಿಲ್ಲ. ಹಾಗಾದರೆ ಹೀಗಾಗುವುದು ಯಾಕೆ ಮತ್ತು ನನ್ನನ್ನು ಗುರುತಿಸಲು ಯಾರಿಗೆ ಸಾಧ್ಯವಾಗುವುದು?"

ಇದರ ಬಗ್ಗೆ ಅವನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:

’ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ I
ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢಾವ್ರತಾಃ II’  (೭.೨೮)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಯಾರ ಪಾಪಗಳು ಕಡಿಮೆಯಾಗಿವೆಯೋ ಮತ್ತು ಯಾರು ತನ್ನ ಒಳ್ಳೆಯ ಕೆಲಸಗಳ ಪುಣ್ಯವನ್ನು ಪಡೆಯಲು ತೊಡಗಿರುವನೋ, ಅಂತಹ ಒಬ್ಬ ವ್ಯಕ್ತಿಯು ರಾಗ ಮತ್ತು ದ್ವೇಷಗಳ ಸಂಘರ್ಷಣೆಗಳಿಂದ ಮುಕ್ತನಾಗುತ್ತಾನೆ ಹಾಗೂ ನನ್ನನ್ನು ಅವಿರತನಾಗಿ ಪೂಜಿಸುತ್ತಾನೆ.  ಹಾಗೆಯೇ, ನನ್ನನ್ನು ನಂಬುವವನೊಬ್ಬನು ತನ್ನಿಂತಾನೇ ತನ್ನೆಲ್ಲಾ ಪಾಪಗಳಿಂದ ಶುದ್ಧೀಕರಿಸಲ್ಪಡುತ್ತಾನೆ. ನನ್ನಲ್ಲಿ ಆಶ್ರಯ ಪಡೆಯುವ ಮತ್ತು ನನ್ನನ್ನು ಶುದ್ಧ ಚೇತನವಾಗಿ ನೋಡುವವನೊಬ್ಬನು ತನ್ನೆಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ ಹಾಗೂ ಅವನ ಎಲ್ಲಾ ಒಳ್ಳೆಯ ಕರ್ಮಗಳು ಫಲವನ್ನು ನೀಡಲು ತೊಡಗುತ್ತವೆ."

ಮುಂದಿನ ಶ್ಲೋಕದಲ್ಲಿ ಅವನು ಹೀಗೆಂದು ಹೇಳುತ್ತಾನೆ,
’ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ I
ತೇ ಬ್ರಹ್ಮ ತದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ II’  (೭.೨೯)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಯಾರು ವೃದ್ಧಾಪ್ಯ ಮತ್ತು ಮೃತ್ಯುವಿನಿಂದ ಮುಕ್ತವಾಗಲು ಬಯಸುವರೋ; ಯಾರಿಗೆ ನಾನು ಮಾತ್ರ ಆಶ್ರಿತನೋ ಮತ್ತು ಯಾರು ಎಲ್ಲದಕ್ಕೂ ಸಂಪೂರ್ಣವಾಗಿ ನನ್ನನ್ನೇ ಅವಲಂಬಿಸಿರುವರೋ, ಅಂತಹ ಗಣ್ಯರು ಖಂಡಿತವಾಗಿಯೂ ಬ್ರಹ್ಮನನ್ನು ಹೊಂದುತ್ತಾರೆ. ನಿಜವಾಗಿಯೂ ಆಧ್ಯಾತ್ಮವೆಂದರೆ ಇದುವೇ. ಕರ್ಮಗಳ ರೀತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಕೂಡಾ ಅವರಿಗೇ."

ನಂತರ ಅವನು ಹೇಳುತ್ತಾನೆ,

’ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ I
ಪ್ರಯಾಣಕಾಲೇಪಿ ಚ ಮಾಂ ತೇ ವಿದುರ್ಯುಕ್ತ ಚೇತಸಃ II’  (೭.೩೦)

ಇಲ್ಲಿ ಕೃಷ್ಣ ಪರಮಾತ್ಮನು, "ಯಾರ ಪುಣ್ಯಗಳು ಫಲವನ್ನು ನೀಡಲು ತೊಡಗುತ್ತವೆಯೋ ಅವರು ತಮ್ಮೆಲ್ಲಾ ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ಅವರು ನನ್ನ ಕಡೆಗೆ ಸೆಳೆಯಲ್ಪಡಲು ತೊಡಗುತ್ತಾರೆ. ಯಾರ ಪಾಪಗಳು ಶುದ್ಧೀಕರಿಸಲ್ಪಟ್ಟಿಲ್ಲವೋ ಅವರು ಅಜ್ಞಾನದಲ್ಲಿ ಮತ್ತು ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ" ಎಂದು ಹೇಳುತ್ತಾನೆ.

ಇದು ಪಾಪ ಮತ್ತು ಪುಣ್ಯಗಳ ನಡುವೆಯಿರುವ ವ್ಯತ್ಯಾಸವಾಗಿದೆ. ಇದುವೇ ಇವುಗಳೆರಡರ ವ್ಯಾಖ್ಯಾನವಾಗಿದೆ. ನಿಮ್ಮನ್ನು ಆಧ್ಯಾತ್ಮ ಪಥಕ್ಕೆ ಬರಲು ಯಾವುದು ಬಿಡುವುದಿಲ್ಲವೋ ಅದು ಪಾಪವಾಗಿದೆ. ನೋಡಿ, ನೀವು ಬೆಳಕಿನ ಕಡೆಗೆ ನಡೆದರೆ, ಕತ್ತಲು ತನ್ನಿಂತಾನೇ ಮಾಯವಾಗಲು ಶುರುವಾಗುತ್ತದೆ. ಆದರೆ ಪಾಪವೆಂದರೆ, ಯಾವುದು ನಿಮ್ಮನ್ನು ಬೆಳಕಿನ ಕಡೆಗೆ ನಡೆಯಲು ಬಿಡುವುದಿಲ್ಲವೋ ಅದು. ಮತ್ತು ಇದುವೇ ದುಃಖ, ನೋವು ಮತ್ತು ಸಂಕಟಗಳನ್ನು ಉಂಟುಮಾಡುವುದು.

ಕೋರ್ಸುಗಳಲ್ಲಿ ಮತ್ತು ಕಾರ್ಯಾಗಾರಗಳಲ್ಲಿ ಇದು ಸಂಭವಿಸುವುದನ್ನು ನಾವು ಕೂಡಾ ನೋಡಿದ್ದೇವೆ. ಯಾವುದಾದರೂ ಸಂಕಟ ಮತ್ತು ದುಃಖಗಳಿಗೆ ಇನ್ನೂ ಒಳಗಾಗಬೇಕಾಗಿರುವವರಿಗೆ ಬಂದು ಕೋರ್ಸಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅವರ ಕರ್ಮವು ಹೇಗಿರುತ್ತದೆಯೆಂದರೆ, ಅವರು ಬಂದು ಕೋರ್ಸನ್ನು ಅನುಭವಿಸುವುದನ್ನು ಅದು ತಡೆಯುತ್ತದೆ.

ಅವರಿಗೆ ಸತ್ಸಂಗಕ್ಕೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಅವರು ಬಂದರೂ ಸಹ ಅವರ ಮನಸ್ಸು ಬೇರೆಲ್ಲೋ ಓಡುತ್ತಿರುತ್ತದೆ. ಇದೆಲ್ಲವೂ ಅವರ ಪ್ರತಿಕೂಲ ಕರ್ಮದಿಂದಾಗಿ (ಪಾಪ). ಯಾರು ಈ ಪಥದಲ್ಲಿ ನಡೆಯುವರೋ ಮತ್ತು ಆತ್ಮ ಜ್ಞಾನವನ್ನು ಪಡೆಯುವರೋ ಅವರು ಸಂಕಟಗಳಿಂದ ಮುಕ್ತರಾಗುತ್ತಾರೆ.

ಇದರೊಂದಿಗೆ, ಏಳನೆಯ ಅಧ್ಯಾಯವು ಮುಕ್ತಾಯವಾಗುತ್ತದೆ. ಮುಂದಿನ ಅಧ್ಯಾಯದಲ್ಲಿ ಕೃಷ್ಣ ಪರಮಾತ್ಮನು, ಆಧ್ಯಾತ್ಮವೆಂದರೆ ನಿಜವಾಗಿಯೂ ಏನೆಂಬುದನ್ನು ವಿವರಿಸುತ್ತಾನೆ. ಯಾವುದು ನಿಮಗೆ ಪುಣ್ಯವನ್ನು ತರುವುದೋ ಮತ್ತು ನಿಮ್ಮ ಜೀವನದಲ್ಲಿ ಪ್ರಕಾಶವು (ಆತ್ಮಜ್ಞಾನದ)  ಉದಯಿಸುವಂತೆ ಮಾಡುವುದೋ ಅದು ಆಧ್ಯಾತ್ಮವಾಗಿದೆ.

ಒಮ್ಮೆ ನೀವು ಈ ಪಥದಲ್ಲಿ ಬಂದ ಬಳಿಕ, ನಿಮಗೆ ವಯಸ್ಸಾಗಿದೆಯೆಂದು ನಿಮಗನ್ನಿಸುವುದಿಲ್ಲ. ಆಧ್ಯಾತ್ಮ ಪಥದಲ್ಲಿರುವ ವಯಸ್ಸಾದ ಮತ್ತು ವೃದ್ಧ ಜನರು ತಮ್ಮ ಕೊನೆಯುಸಿರಿನವರೆಗೆ ತಮ್ಮ ಉತ್ಸಾಹವನ್ನು ಇಟ್ಟುಕೊಳ್ಳುತ್ತಾರೆ. ಅವರಿಗೆಷ್ಟೇ ವಯಸ್ಸಾದರೂ, ಅವರ ಮುಖವು ಇನ್ನೂ ಪ್ರಸನ್ನತೆ ಮತ್ತು ಸಂತೋಷಗಳಿಂದ ಬೆಳಗುತ್ತಿರುತ್ತದೆ. ಅವರಲ್ಲಿ ಒಂದು ಮಗುವಿನಂತಹ ಮುಗ್ಧತೆಯಿರುತ್ತದೆ. ಯಾರಲ್ಲಿ ಅಂತಹ ಒಂದು ಮಗುವಿನಂತಹ ಮುಗ್ಧತೆಯಿರುವುದೋ ಅವರನ್ನು ನೀವು ವೃದ್ಧರು ಎಂದು ಕರೆಯಲು ಹೇಗೆ ಸಾಧ್ಯ? ಯಾರು ಮರಣಕ್ಕೆ ಹೆದರುವುದಿಲ್ಲವೋ ಮತ್ತು ನಗುನಗುತ್ತಾ ಇರುವರೋ ಅವರನ್ನು ನೀವು ವಯಸ್ಸಾದವರೆಂದು ಕರೆಯಲು ಹೇಗೆ ಸಾಧ್ಯ? ನಾನು ಶರೀರವಲ್ಲ, ನಾನು ಶುದ್ಧ ಚೇತನ ಎಂದು ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಾಗ ಅವನಲ್ಲಿ ಅಷ್ಟೊಂದು ಶಕ್ತಿಯು ಉದಯಿಸುತ್ತದೆ. ಅಂತಹ ಒಬ್ಬ ವ್ಯಕ್ತಿಯು ಮರಣದ ಭಯ ಹೊಂದಿರಲು ಹೇಗೆ ಸಾಧ್ಯ?

ಅಂತಹ ಜನರು, ವೃದ್ಧಾಪ್ಯ ಮತ್ತು ಮರಣಗಳಿಂದ ಮುಕ್ತತೆಯನ್ನು ಅನುಭವಿಸುತ್ತಾರೆ. ಅವರು ಸಂತೋಷ ಮತ್ತು ಉತ್ಸಾಹಗಳಿಂದ ತುಂಬಿರುತ್ತಾರೆ. ರಾಗ ಮತ್ತು ದ್ವೇಷಗಳ ಸಂಘರ್ಷಗಳಿಂದ ಅವರು ಮುಕ್ತರಾಗಿರುತ್ತಾರೆ.

ಇಲ್ಲವಾದರೆ, ಜೀವನದ ಕೊನೆಯ ಕ್ಷಣದವರೆಗೂ, ಹಲವು ಜನರು ತಮ್ಮ ಮಗ, ಮಗಳು ಅಥವಾ ಮೊಮ್ಮಕ್ಕಳು ಮೊದಲಾದವರ ಬಗ್ಗೆ ಚಿಂತಿಸುತ್ತಿರುವುದನ್ನು ನೀವು ನೋಡುತ್ತೀರಿ (ನನ್ನ ಮಗನಿಗೆ ಹಾಗಾಗುತ್ತಿದೆ, ನನ್ನ ಮಗಳಿಗೆ ಹೀಗಾಗುತ್ತಿದೆ). ಪ್ರತಿಯೊಬ್ಬರೂ ತಮ್ಮೊಡನೆ ಕೆಲವು ಕರ್ಮಗಳನ್ನು ಪಡೆದುಕೊಂಡು ಬಂದಿರುತ್ತಾರೆ, ಸ್ವಲ್ಪ ಪಾಪ ಹಾಗೂ ಸ್ವಲ್ಪ ಪುಣ್ಯ ಎಂದು ನೀವು ಅರಿತುಕೊಳ್ಳಬೇಕು. ಪಾಪ ಕರ್ಮಗಳ ಸಾಲವನ್ನು ತೀರಿಸಬೇಕಾಗುತ್ತದೆ ಮತ್ತು ಉತ್ತಮ ಕರ್ಮಗಳ ಪುಣ್ಯಗಳನ್ನು ಅನುಭವಿಸಬೇಕಾಗುತ್ತದೆ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, "ನನ್ನ ಮೇಲೆ ಯಾರು ಪೂರ್ಣ ನಂಬಿಕೆಯಿಟ್ಟಿರುತ್ತಾರೋ, ಅವರು ಕರ್ಮ ಮತ್ತು ಪಾಪಗಳಿಂದ ಮುಕ್ತರಾಗುತ್ತಾರೆ. ನಿಜವಾಗಿಯೂ ಅಧ್ಯಾತ್ಮಿಕತೆಯೆಂದರೆ ಇದೇ."

ಜನರು ಅಧ್ಯಾತ್ಮಿಕತೆಯೆಂದರೆ ಕೇವಲ ಕರ್ಮ ವಿಧಿಗಳನ್ನು ಜೀವನದಾದ್ಯಂತ ಪಾಲಿಸುವುದೆಂದು ಊಹಿಸುತ್ತಾರೆ. ಆದರೆ ಅದು ತಪ್ಪು. ಜೀವನ ಪರ್ಯಂತ ಕೇವಲ ಜಪಮಾಲೆಯ ಮಣಿಗಳನ್ನು ತಿರುವುತ್ತಿದ್ದರೆ, ಅದು ನಿಮಗೆ ಯಾವುದೇ ಪುಣ್ಯವನ್ನು ತರಲಾರದು. ಹೃದಯದಲ್ಲಿ ದೈವಿಕತ್ವವು ಬಲವಾಗಿ ಊರಿದರೆ, ಅಷ್ಟೇ ಸಾಕು!

ಉದಾಹರಣೆಗೆ, ನೀವೆಲ್ಲರೂ ಬೆಂಗಳೂರಿನಲ್ಲಿ ಕುಳಿತಿದ್ದೀರಿ. ನಿಮಗೆಲ್ಲರಿಗೂ ನೀವು ಬೆಂಗಳೂರಿನಲ್ಲಿರುವಿರೆಂದು ತಿಳಿದಿದೆ, ಅಲ್ವೇ? ಯಾರಾದರೂ ನಿಮಗೆ ಪುನಃಪುನಃ ಇದನ್ನು ನೆನಪಿಸಬೇಕೇ? "ನಾನು ಬೆಂಗಳೂರಿನಲ್ಲಿದ್ದೇನೆ" ಎಂದು ನೀವು ಹತ್ತು ಸಾರಿ ಜಪಿಸಿ, ನೆನಪಿಸಕೊಳ್ಳಬೇಕಾಗಿದೆಯೇ? ಯಾರು ಆ ತರ ಮಾಡುತ್ತಾರೆ? ಯಾರಿಗೆ ಸಂಶಯವಿದೆಯೋ ಅವರು. ನೀವು ದೆಹಲಿಯಲ್ಲಿದ್ದು, ನಿಮಗೆ ಬೆಂಗಳೂರಿನಲ್ಲಿದ್ದೀರೆಂದು ತಪ್ಪು ಕಲ್ಪನೆಯಿದ್ದರೆ, ನೀವು ದೆಹಲಿಯಲ್ಲಿದ್ದೀರಿ, ಬೆಂಗಳೂರಿನಲ್ಲಲ್ಲ ಎಂದು ಪುನಃಪುನಃ ನೆನಪಿಸಿಕೊಳ್ಳಬೇಕಾಗುತ್ತದೆ.

ಹಾಗೆ, ಕೃಷ್ಣ ಪರಮಾತ್ಮನು, "ಬಲವಾದ ಅರ್ಪಣೆ ಮತ್ತು ಅಚಲಿತ ಶ್ರದ್ಧೆಯಿಂದ ನನ್ನನ್ನು ನಂಬಿ" ಎನ್ನುವಾಗ, ಅವನು ಅವನ ಹೆಸರನ್ನು ಪುನಃಪುನಃ ಜಪಿಸಿ ಎನ್ನುತ್ತಿಲ್ಲ. ಅಲ್ಲ, ಅದು ಹಾಗಲ್ಲ. ಒಂದು ಸಾರಿ ಅವನ ಮೇಲೆ ನಂಬಿಕೆಯಿಟ್ಟರೆ ಅಷ್ಟೆ. ಅನಂತರ ನಿಮಗೆ ಯಾವುದೇ ಸಂಶಯವಿರಬಾರದು. ದೇವರನ್ನು ಅರಿಯುವುದೆಂದರೆ ನಿಜವಾಗಿ ಇದೇ. ಒಂದು ಸಾರಿ ಅವನನ್ನು ಅರಿತ ಮೇಲೆ ಮತ್ತು ಅವನ ಮೇಲೆ ಸಂಪೂರ್ಣ ನಂಬಿಕೆಯಿಟ್ಟರೆ, ಅದು ಎಂದೆಂದಿಗೂ ಉಳಿಯುತ್ತದೆ. ಇಂತಹ ಜ್ಞಾನವು ಎಂದಿಗೂ ಕುಂದುವುದಿಲ್ಲ. ಆದು ಎಂದೆಂದಿಗೂ ನಿಮ್ಮೊಡನಿರುವುದು.

ಭ್ರಮೆಯು ತುಂಬಾ ಸಮಯ ಉಳಿಯಲಾರದು. ಅದು ಬಂದು ಹೋಗುತ್ತಿರುತ್ತದೆ. ಅದು ಶಾಶ್ವತವಾಗಿ ಉಳಿಯುವುದಿಲ್ಲ. ಜ್ಞಾನವನ್ನು ಎಂದೂ ಅಳಿಸಲಾಗದು. ಒಬ್ಬನ ಪಾಪಕಾರ್ಯಗಳಿಂದಾಗಿ ಮಾತ್ರ, ಜ್ಞಾನವು ಅಜ್ಞಾನದಿಂದ ಮರೆಮಾಚಲ್ಪಡುವುದು. ಒಳ್ಳೆಯ ಕಾರ್ಯಗಳನ್ನು ಮಾಡಿದಾಗ, ಅಜ್ಞಾನದ ಸೆರಗು ಸರಿದು, ಜ್ಞಾನವು ಉದಯಿಸುತ್ತದೆ. ಇದೇ ಆಧ್ಯಾತ್ಮಿಕತೆ.

ಮೂರು ರೀತಿಯ ತಾಪಗಳಿವೆ. ಆದಿಭೌತಿಕ, ಆಧ್ಯಾತ್ಮಿಕ ಮತ್ತು ಆದಿದೈವಿಕ.

ಕೃಷ್ಣ ಪರಮಾತ್ಮನು, "ನಾನು ಈ ಮೂರೂ ಮತ್ತು ಅವುಗಳನ್ನು ಮೀರಿದವನೂ ಆಗಿರುವೆನು" ಎಂದು ಹೇಳುತ್ತಾನೆ ಮತ್ತು ಅವನು ಅದನ್ನು ಅಷ್ಟಕ್ಕೇ ಬಿಟ್ಟು, ಅರ್ಜುನನು ಅದರ ಬಗ್ಗೆ ಪ್ರಶ್ನಿಸುವಂತೆ ಮಾಡುತ್ತಾನೆ. ಇಲ್ಲಿ ಅವನು ಅರ್ಜುನನಿಗೆ ಪ್ರಶ್ನೆಯನ್ನು ಕೇಳಲು ಅವಕಾಶ ಮಾಡಿಕೊಡುವುದಲ್ಲದೆ, ಅವನು ಗಮನ ನೀಡುತ್ತಿರುವನೇ ಇಲ್ಲವೇ ಎಂದು ಕೂಡಾ ಪರೀಕ್ಷಿಸುತ್ತಿದ್ದಾನೆ (ನಗು). ಅರ್ಜುನನು ಅದುವರೆಗೆ ಕೊಡಲ್ಪಟ್ಟ ಎಲ್ಲಾ ಜ್ಞಾನವನ್ನು ಅರ್ಥೈಸಿರುವನೇ ಇಲ್ಲವೇ ಎಂದು ಪರೀಕ್ಷಿಸಲು ಬಯಸುತ್ತಿದ್ದಾನೆ. ಕೃಷ್ಣ ಪರಮಾತ್ಮನು ಜ್ಞಾನವನ್ನು ಕೊಟ್ಟು ಅಧ್ಯಾಯದ ಕೊನೆಗೆ ಅರ್ಜುನನಿಗೆ ಪ್ರಶ್ನಿಸಲು ಹಾಗೂ ಪ್ರತಿಕ್ರಿಯಿಸಲು ಅವಕಾಶವನ್ನು ಕೊಡುತ್ತಾನೆ.