ಗುರುವಾರ, ಮೇ 23, 2013

ಧ್ಯಾನವು ಆರೋಗ್ಯವನ್ನು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಿಸುತ್ತದೆ

ಉಲಾನ್ ಬತೋರ್, ಮಂಗೋಲಿಯಾ
೨೩ ಮೇ ೨೦೧೩

ರ್ಟ್ ಆಫ್ ಲಿವಿಂಗ್‌ನ ಕನಸೆಂದರೆ ಒಂದು ಜಾಗತಿಕ ಕುಟುಂಬವನ್ನು ಸೃಷ್ಟಿಸುವುದು. ಸಂಪೂರ್ಣ ಪ್ರಪಂಚವು, ಒಂದು ಕುಟುಂಬದ ಭಾವನೆಯಲ್ಲಿ ಒಂದುಗೂಡಬೇಕು. ಅದೀಗ ಮಂಗೋಲಿಯಾದಲ್ಲಿ ಹೆಚ್ಚು ಹೆಚ್ಚು ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ.

ಮಂಗೋಲಿಯಾದ ಆರ್ಥಿಕ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ, ಅದು ಬಹಳ ಬೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಆರ್ಥಿಕ ಅಭಿವೃದ್ಧಿಯೊಂದಿಗೆಯೇ, ನಮ್ಮ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗದಂತೆ ನಾವು ಜಾಗ್ರತೆ ವಹಿಸಬೇಕಾಗಿದೆ.

ಮಂಗೋಲಿಯಾವು ಒಂದು ದೀರ್ಘವಾದ ಆಧ್ಯಾತ್ಮಿಕ ಸಂಪ್ರದಾಯವನ್ನು ಹೊಂದಿದೆ; ದೇಶದಲ್ಲಿ ಆಧ್ಯಾತ್ಮಿಕತೆಯನ್ನು ಕಾಯ್ದುಕೊಳ್ಳುವಂತೆ ನಾವು ನೋಡಿಕೊಳ್ಳಬೇಕಾಗಿದೆ.

ಆಧುನಿಕ ದಿನಗಳ ಸವಾಲುಗಳಾದ ಒತ್ತಡ, ವ್ಯಾಕುಲತೆ ಮತ್ತು ಹಿಂಸೆಗಳನ್ನು ತೊಡೆದುಹಾಕಬೇಕು. ಪ್ರಪಂಚದ ಈ ಭಾಗದಲ್ಲಿ ಅವುಗಳು ಬೆಳೆಯಲು ನಾವು ಬಿಡಬಾರದು. ಸಮಾಜವು ಹೆಚ್ಚು ಬಲಶಾಲಿಯಾದಂತೆ ಮತ್ತು ಆರ್ಥಿಕವಾಗಿ ಸಮೃದ್ಧವಾದಂತೆ, ಸವಾಲುಗಳು ಮತ್ತು ಅಪರಾಧದ ವೇಗವು ಹೆಚ್ಚಾಗುತ್ತದೆ. ಅಮೇರಿಕಾದಲ್ಲಿ ಏನಾಗುತ್ತಿದೆಯೆಂಬುದು ನಿಮಗೆ ಕಾಣಿಸುತ್ತಿದೆಯೇ? ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ದೇಶದಲ್ಲಿ ಹಿಂಸಾಚಾರದ ಹಲವಾರು ಘಟನೆಗಳು ನಡೆಯುತ್ತಿವೆ. ಕಳೆದ ಒಂದು ವರ್ಷದಲ್ಲಿ ಅಮೇರಿಕಾದಲ್ಲಿ ಒಂದು ಕೋಟಿ ಹಿಂಸಾಚಾರದ ಘಟನೆಗಳು ದಾಖಲಾಗಿವೆ.

ಪ್ರಪಂಚದಾದ್ಯಂತ ಮತ್ತು ವಿಶೇಷವಾಗಿ ಸಂಯುಕ್ತ ಸಂಸ್ಥಾನಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಒಂದು ಅಹಿಂಸಾ ಅಭಿಯಾನವನ್ನು ಪ್ರಾರಂಭಿಸಿದೆ. ಅಹಿಂಸೆ ಮತ್ತು ಸಹಾನುಭೂತಿಗಳ ಆ ಮೌಲ್ಯಗಳನ್ನು ನಾವು ನಮ್ಮ ಸಮಾಜದಲ್ಲಿ ಮತ್ತು ಮಂಗೋಲಿಯಾದಲ್ಲಿ ಕೂಡಾ ಹೆಚ್ಚು ಹೆಚ್ಚು ತರಬೇಕಾಗಿದೆ.

ನಮಗೆ ಮಾಡಲು ಹಲವಾರು ಕೆಲಸಗಳಿರುವಾಗ, ಸ್ವಲ್ಪವೇ ಸ್ವಲ್ಪ ಸಮಯವಿರುವಾಗ ಮತ್ತು ಶಕ್ತಿಯಿಲ್ಲದಿರುವಾಗ, ಒತ್ತಡವು ಸ್ವಾಭಾವಿಕವಾಗಿದೆ.

ಇವತ್ತಿನ ಪ್ರಪಂಚದಲ್ಲಿ, ನಮಗೆ ನಮ್ಮ ಅಗತ್ಯಗಳನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ, ನಾವು ಮಾಡಬೇಕಾಗಿರುವುದು ಏನೆಂದರೆ, ನಮ್ಮ ಚೈತನ್ಯದ ಮಟ್ಟವನ್ನು ಹೆಚ್ಚಿಸುವುದು. ನಾವು ನಮ್ಮ ಅಭ್ಯಾಸಗಳನ್ನು ಬದಲಾಯಿಸಿದಾಗ; ನಾವು ಸರಿಯಾದ ಮತ್ತು ಆರೋಗ್ಯಕರವಾದ ಆಹಾರವನ್ನು ಸೇವಿಸುವಾಗ, ಒಳ್ಳೆಯ ವಿಶ್ರಾಂತಿಯನ್ನು ತೆಗೆದುಕೊಳ್ಳುವಾಗ ಮತ್ತು ಸಕಾರಾತ್ಮಕವಾಗಿ ಯೋಚಿಸುವಾಗ ಚೈತನ್ಯದ ಮಟ್ಟವು ಹೆಚ್ಚುತ್ತದೆ. ನೀವು ಕುಳಿತುಕೊಂಡು ಅರ್ಧ ಗಂಟೆ ಅಥವಾ ಹತ್ತು ನಿಮಿಷಗಳಾದರೂ ಕೇವಲ ನಕರಾತ್ಮಕವಾಗಿ ಯೋಚಿಸಿದರೆ, ದಿನಪೂರ್ತಿ ನಿಮ್ಮನ್ನು ಬಳಲಿಸಲು ಅದು ಸಾಕು.

ಆರ್ಟ್ ಆಫ್ ಲಿವಿಂಗ್ ಎಂದರೆ, ನಕಾರಾತ್ಮಕ ಯೋಚನೆಯಿಂದ ಸಕಾರಾತ್ಮಕ ಯೋಚನೆಗೆ, ಒಂದು ದೂರುವ ಮನೋಭಾವದಿಂದ ಒಂದು ಸಹಾನುಭೂತಿಯುಳ್ಳ ಮನೋಭಾವಕ್ಕೆ, ಒಂದು ಒತ್ತಡಭರಿತ ಮುಖದಿಂದ ಒಂದು ಹಸನ್ಮುಖ ಮುಖಕ್ಕೆ, ಒತ್ತಡದಿಂದ ಪ್ರಶಾಂತತೆಗೆ ಬದಲಾಗುವುದಾಗಿದೆ. ನಿಮ್ಮ ಉಸಿರಾಟದ ಕಡೆಗೆ ಗಮನ ನೀಡುವುದರಿಂದ ಮತ್ತು ಧ್ಯಾನದಿಂದ ಇದನ್ನು ಮಾಡಬಹುದಾಗಿದೆ.

ಇವತ್ತು, ಧ್ಯಾನ ಮತ್ತು ಸುದರ್ಶನ ಕ್ರಿಯೆಯು ಒಬ್ಬರ ಗ್ರಹಿಕೆಯನ್ನೂ ಮೀರಿ ಆರೋಗ್ಯವನ್ನು ಸುಧಾರಿಸಬಲ್ಲದೆಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ, ನೋರ್ವೇಯ ಓಸ್ಲೋ ವಿಶ್ವವಿದ್ಯಾಲಯದಲ್ಲಿನ ಒಬ್ಬರು ವಿಜ್ಞಾನಿಯು ಒಂದು ಸಂಶೋಧನೆಯನ್ನು ನಡೆಸಿದರು. ಯಾರಾದರೂ ಈ ತಂತ್ರಗಳನ್ನು ಎರಡು ದಿನಗಳ ಕಾಲ ಅಭ್ಯಾಸ ಮಾಡಿದರೂ ಕೂಡಾ, ಅದು ಒಬ್ಬ ವ್ಯಕ್ತಿಯ ವರ್ಣ ತಂತು(ಡಿ.ಎನ್.ಎ.), ವಂಶವಾಹಿ(ಜೀನ್‌)ಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅವರು ಕಂಡುಹಿಡಿದರು. ನಮ್ಮ ಶರೀರದಲ್ಲಿರುವ ಸುಮಾರು ೩೦೦ ಜೀನ್‌ಗಳು ಕ್ಯಾನ್ಸರ್ ಮೊದಲಾದ ರೋಗಗಳಿಗೆ ಕಾರಣವೆಂದೂ, ಒಬ್ಬರು ಧ್ಯಾನ ಮಾಡುವಾಗ ಈ ಜೀನ್‌ಗಳು ಮಟ್ಟಹಾಕಲ್ಪಡುತ್ತವೆಯೆಂದೂ ಅವರು ಹೇಳಿದರು. ಖಂಡಿತಾ, ತಾವು ಹೇಗೆ ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಲಾಭಪಡೆದಿರುವೆವು ಎಂದು ವರದಿ ಮಾಡುವ ಪ್ರಪಂಚದಾದ್ಯಂತದ ಲಕ್ಷಗಟ್ಟಲೆ ಜನರ ಪ್ರತಿದಿನದ ಅನುಭವ ಕೂಡಾ ಇದಾಗಿದೆ; ತಮ್ಮ ಆರೋಗ್ಯವು ಹೇಗೆ ಸುಧಾರಿಸಿದೆ, ಜನರೊಂದಿಗಿನ ತಮ್ಮ ಸಂಬಂಧಗಳು ಹೇಗೆ ಸುಧಾರಿಸಿವೆ ಮತ್ತು ಇನ್ನೂ ಬಹಳಷ್ಟು.

ಹಾಗಾಗಿ, ನಾವು ನಮ್ಮ ಬೇರುಗಳನ್ನು ಆಳವಾಗಿಸಬೇಕು ಮತ್ತು ನಮ್ಮ ದೃಷ್ಟಿಯನ್ನು ವಿಶಾಲಗೊಳಿಸಬೇಕು. ಈ ಭೂಮಿಯ ಮೇಲೆ ನಾವಿರುವ ಜೀವನದ ಅಲ್ಪಾವಧಿಯಲ್ಲಿ ನಾವು ಹೆಚ್ಚು ಮುಗುಳ್ನಗಬೇಕು ಮತ್ತು ಸಂತೋಷವನ್ನು ಹರಡಬೇಕು.

ಮೂರು ವರ್ಷಗಳ ಮೊದಲು ನಾನು ಇಲ್ಲಿಗೆ ಬಂದಾಗ, ಈ ದೇಶದ ಜಿ.ಡಿ.ಪಿ.ಯು (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್ - ಸಮಗ್ರ ದೇಶೀಯ ಉತ್ಪನ್ನ) ಖಂಡಿತವಾಗಿಯೂ ಮೇಲಕ್ಕೆ ಹೋಗುವುದೆಂದು ನಾನು ಹೇಳಿದ್ದೆನು. ಈಗ, ಅದು ನಿಜವಾಗಿಯೂ ಮೇಲಕ್ಕೆ ಹೋಗಿದೆಯೆಂಬುದನ್ನು ತಿಳಿಯಲು ನನಗೆ ಬಹಳ ಸಂತೋಷವಾಗುತ್ತದೆ. ಇವತ್ತು, ಸಂಯುಕ್ತ ರಾಷ್ಟ್ರದಿಂದ ಬಳಸಲಾಗುತ್ತಿರುವ ಇನ್ನೊಂದು ಪದವಿದೆ, ಜಿ.ಡಿ.ಹೆಚ್., ಅಂದರೆ, ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ (ಸಮಗ್ರ ದೇಶೀಯ
ಸಂತೋಷ); ಅದು ಕೂಡಾ ಮಂಗೋಲಿಯಾದಲ್ಲಿ ಮೇಲಕ್ಕೆ ಏರಬೇಕು.

ಈ ದೇಶದಲ್ಲಿ ವಿದ್ಯಾವಂತ ಜನರ ಸಂಖ್ಯೆಯು ಬಹಳ ಹೆಚ್ಚಾಗಿರುವುದರಿಂದ, ಜನರಿಗೆ ಆಧ್ಯಾತ್ಮಿಕ ಮೌಲ್ಯಗಳಲ್ಲಿ ಶಿಕ್ಷಣ ನೀಡಲು ಸಾಧ್ಯವಿದೆ. ಇವತ್ತು, ಭೂತಾನವು ಪ್ರಪಂಚದಲ್ಲಿ ಅತ್ಯಂತ ಸಂತೋಷವಿರುವ ದೇಶವಾಗಿದೆ. ಮಂಗೋಲಿಯಾವು ಭೂತಾನದೊಂದಿಗೆ ಸ್ಪರ್ಧಿಸಬೇಕೆಂದು ನಾನು ಆಶಿಸುತ್ತೇನೆ. ಅದು ಖಂಡಿತವಾಗಿ ಸ್ಪರ್ಧಿಸಿ, ಒಂದು ಉನ್ನತ ಮಟ್ಟದ ಜಿ.ಡಿ.ಹೆಚ್. ನ್ನು ತಲಪಲು ಸಾಧ್ಯವಿದೆ. ಇದನ್ನು ನಾವು ನಮ್ಮ ಗುರಿಯಾಗಿ ಇರಿಸೋಣ.

ಇಲ್ಲಿರುವ ನಾವೆಲ್ಲರೂ ಒಂದು ವಚನಬದ್ಧತೆಯನ್ನು ತೆಗೆದುಕೊಳ್ಳಬೇಕೆಂದು ಕೇಳಲು ನಾನು ಬಯಸುತ್ತೇನೆ. ಈ ದೇಶದಲ್ಲಿ ಸೆರೆಮನೆಗಳು ಮತ್ತು ಆಸ್ಪತ್ರೆಗಳು ಖಾಲಿಯಾಗಿರುವಂತೆ ನಾವು ನೋಡಿಕೊಳ್ಳಬೇಕು. ನಾವು ಆ ಆದರ್ಶವನ್ನು ಹೊಂದೋಣ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡೋಣ.

ಇದನ್ನು ಸಾಧಿಸಲು, ನಾವೆಲ್ಲರೂ ಸ್ವಲ್ಪ ಸಮಾಜ ಸೇವೆಯನ್ನು ಮಾಡಬೇಕು. ನೀವು ಮಹತ್ವಾಕಾಂಕ್ಷಿಗಳಾಗಿರಬೇಕು, ಆದರೆ ಲೋಭಿಗಳಾಗಿರಬಾರದೆಂದು ನಾನು ಇಚ್ಛಿಸುತ್ತೇನೆ. ಜನರು ಲೋಭಿಗಳಾಗುವಾಗ, ಭ್ರಷ್ಟಾಚಾರವು ಹೆಚ್ಚಾಗುತ್ತದೆ.

ಎಲ್ಲಿ ಆತ್ಮೀಯತೆಯು ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಪ್ರಾರಂಭವಾಗುತ್ತದೆ. ಯಾವುದೇ ಕಾನೂನಿಗೂ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ಯಾವುದು ನಿಜಕ್ಕೂ ತಡೆಯಬಲ್ಲದೆಂದರೆ, ಅದು ಆಧ್ಯಾತ್ಮವಾಗಿದೆ. ಜನರಲ್ಲಿ ಒಂದು ಆತ್ಮೀಯತೆಯ ಭಾವವಿರುವಾಗ ಭ್ರಷ್ಟಾಚಾರವು ಕೊನೆಯಾಗುವುದು. ಅಪರಾಧ ಮತ್ತು ಭ್ರಷ್ಟಾಚಾರಗಳಿಗೆ ಒಂದು ನಿಜವಾದ ಅಪರಾಧಿಯಿದೆ, ಅದು, ಮಾದಕದ್ರವ್ಯ ಮತ್ತು ಮದ್ಯಗಳ ವ್ಯಸನ. ನಮ್ಮ ಯುವಜನತೆಯು ಸಿಗರೇಟ್, ಮದ್ಯ ಅಥವಾ ಮಾದಕವಸ್ತುಗಳ ವ್ಯಸನಕ್ಕೆ ಬೀಳದಂತೆ ನಾವು ನೋಡಿಕೊಳ್ಳಬೇಕು, ಯಾಕೆಂದರೆ ಇದು ಮಾನವ ಜೀವನವನ್ನು ನಾಶಪಡಿಸುತ್ತದೆ.

ಜನರು ಮಾದಕದ್ರವ್ಯಗಳ ಪ್ರಭಾವದಡಿಯಲ್ಲಿರುವಾಗ, ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಅವರು ಅಪರಾಧಗಳನ್ನೆಸಗುವುದು. ಆದುದರಿಂದ, ತಾಯಿ ಮತ್ತು ಸಹೋದರಿಯರಾಗಿ, ಬುದ್ಧಿವಂತ ಪುರುಷರಾಗಿ, ನೀವೆಲ್ಲರೂ, ಆರೋಗ್ಯ, ಸಂಪತ್ತು ಮತ್ತು ಮನಸ್ಸುಗಳಿಗೆ ಹಾನಿಕಾರಕವಾಗಿರುವ ಈ ಮಾದಕದ್ರವ್ಯಗಳಲ್ಲಿ ಯಾವುದಕ್ಕೇ ಆದರೂ ನಮ್ಮ ಯುವಪೀಳಿಗೆಯು ವ್ಯಸನಕ್ಕೆ ಬೀಳುವುದನ್ನು ತಡೆಯಬೇಕು.

ಮಾಲಿನ್ಯವೆಂಬುದು ಗಮನದ ಆವಶ್ಯಕತೆಯಿರುವ ಇನ್ನೊಂದು ಕ್ಷೇತ್ರವಾಗಿದೆ. ಪ್ರಪಂಚದ ನಾನಾ ಭಾಗಗಳಲ್ಲಿ ಮಾಲಿನ್ಯವು ಹೆಚ್ಚಾಗುತ್ತಿದೆ. ಮಂಗೋಲಿಯಾವು ಇನ್ನೂ ಬಹಳ ಶುದ್ಧವಾಗಿದೆ; ನೆಲ, ಜಲ, ಇಲ್ಲಿರುವ ಎಲ್ಲವೂ ಶುದ್ಧವಾಗಿದೆ. ಇಲ್ಲಿನ ವಾಯು, ನೆಲ, ಜಲ ಮತ್ತು ವಾತಾವರಣದ ಶುದ್ಧತೆಯು ಕಾಪಾಡಲ್ಪಡುವಂತೆ ದಯವಿಟ್ಟು ನೋಡಿಕೊಳ್ಳಿ.

ಈ ನೆಲವನ್ನು ನಾವು ಭೂಮಿಯ ಮೇಲಿನ ಒಂದು ಪರಿಸರ ಸ್ವರ್ಗವನ್ನಾಗಿ ಇರಿಸೋಣ. ಆಹಾರವನ್ನು ಬೆಳೆಯಲು ನಾವು ಮಣ್ಣಿಗೆ ಹಾನಿಕಾರಕ ರಾಸಾಯನಿಕಗಳನ್ನು ಹಾಕದಂತೆ ಜಾಗ್ರತೆ ವಹಿಸೋಣ. ಯಾವುದೇ ಕೀಟನಾಶಕ ಔಷಧಿಗಳಿಲ್ಲದೆಯೇ, ಯಾವುದೇ ರಾಸಾಯನಿಕ ಗೊಬ್ಬರಗಳಿಲ್ಲದೆಯೇ; ಸಾವಯವ ಕೃಷಿ ಅಥವಾ ನೈಸರ್ಗಿಕ ಕೃಷಿಯ ಮೂಲಕ ನಾವು ಆಹಾರವನ್ನು ನೈಸರ್ಗಿಕವಾಗಿ ಬೆಳೆಯಬೇಕು.  

ಈ ಜ್ಞಾನವನ್ನು, ಈ ತಂತ್ರಜ್ಞಾನವನ್ನು ಮಂಗೋಲಿಯಾಕ್ಕೆ ತರಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಆರ್ಟ್ ಆಫ್ ಲಿವಿಂಗ್ ಮಾಡುವುದು. ಭಾರತ ಮತ್ತು ಪ್ರಪಂಚದ ಇತರ ಸ್ಥಳಗಳಲ್ಲಿ ನಾವು ಸಾವಯವ ಕೃಷಿ ಮಾಡುತ್ತಿದ್ದೇವೆ. ಇದರ ಮೇಲೆ ನಾವು ಬಹಳಷ್ಟು ಸಂಶೋಧನೆಗಳನ್ನು ಮಾಡಿದ್ದೇವೆ ಮತ್ತು ನಾವು ಇದನ್ನು ಮಂಗೋಲಿಯಾದ ರೈತರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.

ಆರ್ಟ್ ಆಫ್ ಲಿವಿಂಗ್ ಭಾರತದಲ್ಲಿ ೨೦೦ ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ನಾವು ಒಂದು ವಿಶ್ವವಿದ್ಯಾಲಯವನ್ನು ಮತ್ತು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಮ್.ಬಿ.ಎ.) ಕೋರ್ಸುಗಳನ್ನು ನೀಡುವ ಎರಡು ಕಾಲೇಜುಗಳನ್ನು ಹೊಂದಿದ್ದೇವೆ. ಭಾರತಕ್ಕೆ ಬಂದು ಅಧ್ಯಯನ ನಡೆಸಲು ಇಚ್ಛಿಸುವ ಮಂಗೋಲಿಯಾದ ವಿದ್ಯಾರ್ಥಿಗಳಿಗೆ ಹತ್ತು ಎಮ್.ಬಿ.ಎ. ಸ್ಥಾನಗಳನ್ನು ಕಾಯ್ದಿರಿಸುವಂತೆ ನಾನು ಭಾರತದಲ್ಲಿನ ನಮ್ಮ ಉಪಕುಲಪತಿಗಳಲ್ಲಿ ವಿನಂತಿಸುವೆನು (ನಮ್ಮಲ್ಲಿರುವುದು ಸೀಮಿತವಾದ ಸ್ಥಾನಗಳು; ಈ ಕಾಲೇಜಿನಲ್ಲಿರುವುದು ಕೇವಲ ೧೮೦ ಸ್ಥಾನಗಳು).

ನಮ್ಮ ಕಾಲೇಜಿನಲ್ಲಿ ಕಲಿಯಲು ಇಚ್ಛಿಸುವ ನಿಮ್ಮ ಸ್ನೇಹಿತರಿಗೆ ಮತ್ತು ವಿದ್ಯಾರ್ಥಿಗಳಿಗೆ ನೀವಿದನ್ನು ಹೇಳಬಹುದು; ಅರ್ಜಿ ಸಲ್ಲಿಸಲು ಅವರಿಗೆ ಸುಸ್ವಾಗತವಿದೆ.

ಇವತ್ತು ಬೆಳಗ್ಗೆ ನಾನು ಮಂಗೋಲಿಯಾದ ಮಾನ್ಯ ಪ್ರಧಾನ ಮಂತ್ರಿಯವರನ್ನು ಭೇಟಿಯಾದೆ. ನಾವಿಲ್ಲಿ ಒಂದು ಕಾಲೇಜು ಅಥವಾ ಶಾಲೆಯನ್ನು; ಯಾವುದರ ಆವಶ್ಯಕತೆಯಿದೆಯೋ ಅದನ್ನು ಶುರು ಮಾಡಲು ಇಚ್ಛಿಸುತ್ತೇವೆಂದು ನಾನು ಅವರಿಗೆ ಹೇಳಿದೆ. ಶಾಲೆಯನ್ನು ತೆರೆದು, ಮಂಗೋಲಿಯಾದ ಈ ಯೋಜನೆಯಲ್ಲಿ ಭಾಗಿಯಾಗಲು ಆಸಕ್ತಿಯಿರುವವರೆಲ್ಲವೂ ನಿಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ನೀಡಬೇಕೆಂದು ನಾನು ಆಹ್ವಾನ ನೀಡುತ್ತೇನೆ. ನಾವೊಂದು ಸಮಿತಿಯನ್ನು ರೂಪಿಸಿ, ವಿವಿಧ ಪ್ರಾಂತ್ಯಗಳಲ್ಲಿ ಒಂದೆರಡು ಶಾಲೆಗಳನ್ನು ಶುರು ಮಾಡೋಣ. ಅವುಗಳು ಪೌರಾತ್ಯ ಮತ್ತು ಪಾಶ್ಚಾತ್ಯಗಳಲ್ಲಿ ಅತ್ಯುತ್ತಮವಾದ, ಉತ್ತರ ಮತ್ತು ದಕ್ಷಿಣಗಳಲ್ಲಿ ಅತ್ಯುತ್ತಮವಾದುದನ್ನು ನೀಡುವುವು ಮತ್ತು ಒಂದು ಜಾಗತಿಕ ಶಿಕ್ಷಣ ಕೇಂದ್ರವನ್ನು ಸೃಷ್ಟಿಸುವುವು.

ಜೀವನವು ಒಂದು ವೃಕ್ಷದಂತೆ. ಹೇಗೆ ಬೇರುಗಳು ಹಳತು ಮತ್ತು ಗೆಲ್ಲುಗಳು ಹೊಸತಾಗಿರುತ್ತವೆಯೋ, ಅದೇ ರೀತಿಯಲ್ಲಿ, ಜೀವನಕ್ಕೆ ಪ್ರಾಚೀನ ಜ್ಞಾನ ಮತ್ತು ಆಧುನಿಕ ವೈಜ್ಞಾನಿಕ ಜ್ಞಾನ, ಎರಡೂ ಜೊತೆಯಲ್ಲಿ ಬೇಕಾಗಿದೆ.

ಹಾಗೆಯೇ, ಮಂಗೋಲಿಯಾದಲ್ಲಿ ತಲೆಗೆ ಮಸಾಜ್ ಮಾಡುವ ಒಂದು ವಿಶೇಷ ತಂತ್ರವಿದೆ ಎಂಬುದನ್ನು ನಾನು ತಿಳಿದುಕೊಂಡೆ.

ಇದು ಜನರಿಗೆ ಹಿತಕರವಾದ ಅನುಭವವನ್ನು ನೀಡುತ್ತದೆ. ಇದರ ಬಗ್ಗೆ ಪ್ರಪಂಚಕ್ಕೆ ಚೆನ್ನಾಗಿ ತಿಳಿದಿಲ್ಲ. ಈ ಜ್ಞಾನವನ್ನು ಹೆಚ್ಚು ಜನಪ್ರಿಯಗೊಳಿಸಲು, ನಾನು ಇದನ್ನು ಭಾರತ, ಅಮೇರಿಕಾ ಮತ್ತು ಪ್ರಪಂಚದಾದ್ಯಂತ ತೆಗೆದುಕೊಂಡುಹೋಗಲು ಬಯಸುತ್ತೇನೆ; ಆಯುರ್ವೇದ, ಆಕ್ಯುಪಂಕ್ಚರ್ ಮತ್ತು ಆಸ್ಟಿಯೋಪತಿಯೊಂದಿಗೆ ನಾವೇನು ಮಾಡಿರುವೆವೋ ಹಾಗೆಯೇ. ಇದೊಂದು ಬಹಳ ಒಳ್ಳೆಯ ಕೆಲಸವಾಗಬಹುದು.

ಮನುಕುಲಕ್ಕೆ ಲಾಭವುಂಟುಮಾಡುವ ಮಂಗೋಲಿಯಾದ ಸಾಂಪ್ರದಾಯಿಕ ಔಷಧಿ ಮತ್ತು ಔಷಧೀಯ ತಂತ್ರಗಳು ಹರಡಬೇಕು ಮತ್ತು ಎಲ್ಲೆಡೆಗೂ ಕೊಂಡೊಯ್ಯಲ್ಪಡಬೇಕು. ಹಾಗಾಗಿ, ಅಂತಹ ವೈದ್ಯರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಲು ನಾನು ಬಯಸುತ್ತೇನೆ. ಆರ್ಟ್ ಆಫ್ ಲಿವಿಂಗ್‌ನಲ್ಲಿ, ಈ ಚಿಕಿತ್ಸೆಗಳ ಸಾಂಪ್ರದಾಯಿಕ ವ್ಯವಸ್ಥೆಯ ಬಗ್ಗೆ ನಾವು ಏನನ್ನಾದರೂ ಮಾಡಲು ಬಯಸುತ್ತೇವೆ.

ಪ್ರಶ್ನೆ: ನಮ್ಮ ಆಂತರಿಕ ಪಯಣ ಮತ್ತು ಹೊರ ಜಗತ್ತಿನ ಘಟನೆಗಳನ್ನು ಸೇರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಆಂತರಿಕ ಪಯಣ ಮತ್ತು ಹೊರ ಜಗತ್ತಿನ ಘಟನೆಗಳು ಪೂರಕವಾಗಿವೆ. ನೀವು ಒಳಗಡೆ ಸಂತೋಷವಾಗಿದ್ದರೆ, ಹೊರಗಡೆ ಕ್ರಿಯಾತ್ಮಕವಾಗಿ ಕೆಲಸ ಮಾಡಲು ನಿಮಗೆ ಸಾಧ್ಯವಾಗುತ್ತದೆ. ನೀವು ಹೆಚ್ಚು ಕ್ರಿಯಾತ್ಮಕವಾದಷ್ಟೂ, ವಿಶ್ರಾಂತಿ ಹಾಗೂ ಧ್ಯಾನಗಳು ಆಳವೂ, ಉತ್ತಮವೂ ಆಗಿರುತ್ತವೆ. ನೀವು ಧ್ಯಾನ ಮಾಡುವಾಗ ಆನಂದವು ಹೆಚ್ಚಾಗುತ್ತದೆ.

ಯಾವ ಜನರು ಸೋಮಾರಿಗಳಾಗಿರುವರೋ, ಅವರು ಸಂತೋಷವಾಗಿರಲು ಸಾಧ್ಯವಿಲ್ಲ. ಯಾವ ಜನರು ಕ್ರಿಯಾತ್ಮಕವಾಗಿರುವರೋ, ಅವರು ಕೂಡಾ ಸಂತೋಷವಾಗಿರಬೇಕೆಂದೇನೂ ಇಲ್ಲ. ಕ್ರಿಯಾಶೀಲತೆಯು ಆಂತರಿಕ ಮೌನದೊಂದಿಗೆ ಸೇರಿರಬೇಕು. ಆದುದರಿಂದ, ಸಮಯದಿಂದ ಸಮಯಕ್ಕೆ, ಒಬ್ಬರು ಕೆಲವು ದಿನಗಳ ಬಿಡುವನ್ನು ತೆಗೆದುಕೊಂಡು, ಒಳಕ್ಕೆ ಆಳವಾಗಿ ಹೋಗಿ ಧ್ಯಾನ ಮಾಡುವುದು ಹೇಗೆ ಎಂಬುದನ್ನು ಕಲಿಯಬೇಕು.

ಪ್ರಶ್ನೆ: ನಾವು ಬಟ್ಟೆ ತುಂಬಿ ಮಾಡಿದ ಗೊಂಬೆಗಳೆಂದು ತೋರುತ್ತದೆ. ಇದರ ಮೇಲೆ ನೀವು ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಹೌದು, ಇದೊಂದು ಬಹಳ ದೊಡ್ಡ ತತ್ವಶಾಸ್ತ್ರ ಸಂಬಂಧಿತ ಪ್ರಶ್ನೆಯಾಗಿದೆ. ಯಾರು ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದಾರೋ ಅಥವಾ ಯಾರು ಅತ್ಯಂತ ಕೆಟ್ಟ ಅಪರಾಧವನ್ನು ಮಾಡಿರುವರೋ ಅವರನ್ನು ನೀವು ಕೇಳಿದರೆ, ಹೇಗೋ ತಾವದನ್ನು ಮಾಡಿಲ್ಲವೆಂದೂ, ಅದು ಕೇವಲ ತಮ್ಮ ಮೂಲಕ ಆಗಿಹೋಯಿತೆಂದೂ ಅವರು ಹೇಳುತ್ತಾರೆ. ಇದು ಹಲವು ಜನರ ಅನುಭವವಾಗಿದೆ.

ನಿಮ್ಮೊಳಗೆ ಏನೋ ಇದೆ. ಅದು, ನಿಮ್ಮ ಸುತ್ತಲೂ ಆಗುತ್ತಿರುವ ಎಲ್ಲಾ ಸಂಗತಿಗಳ ಕೇವಲ ಒಂದು ಸಾಕ್ಷಿಯಾಗಿದೆ. ಈ ವಿಷಯದ ಬಗ್ಗೆ ನೀವು ಹೆಚ್ಚಿನದನ್ನು ಓದಲು ಬಯಸುವುದಾದರೆ, ಅಷ್ಟಾವಕ್ರ ಗೀತೆ ಅಥವಾ ಯೋಗ ವಾಸಿಷ್ಠ ಪುಸ್ತಕವನ್ನು ಓದಿ. ಈ ಪುಸ್ತಕಗಳು ನಿಮಗೆ ಇನ್ನೂ ಹೆಚ್ಚು ಆಳವಾದ ತಿಳುವಳಿಕೆಯನ್ನು ನೀಡುವುವು