ಗುರುವಾರ, ಮೇ 16, 2013

ಬಾಳೆಹಣ್ಣಿನಿಂದ ಪರಮಾನಂದದವರೆಗೆ

ಬೆಂಗಳೂರು, ಭಾರತ
೧೬ ಮೇ ೨೦೧೩

ಪ್ರಶ್ನೆ: ಗುರುದೇವ, ನಾವು ನಮ್ಮೊಂದಿಗೆ ಮನೆಗೆ ಕೊಂಡೊಯ್ಯಬೇಕಾದ ನಿಮ್ಮ ಸಂದೇಶವೇನು?

ಶ್ರೀ ಶ್ರೀ ರವಿ ಶಂಕರ್: ಕೇಳು, ಒಂದು ಸೂಪರ್ ಮಾರ್ಕೆಟಿಗೆ ಬಂದು, ’ನಾನು ಮನೆಗೆ ಕೊಂಡೊಯ್ಯಬೇಕಾದುದೇನು?’ ಎಂದು ಕೇಳುವಂತೆ ಇದು. (ನಗು) ನೌಕರರು ಏನು ಹೇಳುವರೆಂದು ನಿಮಗನಿಸುತ್ತದೆ? ಅವರು ನಿಮಗೆ, ’ನಿಮಗೇನು ಸಾಧ್ಯವೋ ಅದನ್ನು ತೆಗೆದುಕೊಂಡು ಹೋಗಿ’ ಎಂದು ಹೇಳುವರು. ಇಲ್ಲಿ (ಆಶ್ರಮದಲ್ಲಿ) ಎಲ್ಲವೂ ಲಭ್ಯವಿದೆ; ಪರಮಾನಂದದಿಂದ ಬಾಳೆಹಣ್ಣುಗಳವರೆಗೆ (ನಗು). ಕೆಲವರು ಇಲ್ಲಿಗೆ ಸ್ವಲ್ಪ ಶ್ರದ್ಧೆಯೊಂದಿಗೆ ಬರುತ್ತಾರೆ ಮತ್ತು ಕೇವಲ ಒಂದು ಬಾಳೆಹಣ್ಣಿನ ತುಂಡನ್ನು ಒಯ್ಯುತ್ತಾರೆ; ಅದು ಅವರಿಗೆ ಸಿಹಿಯೆನಿಸುತ್ತದೆ. ಕೆಲವರು ಇಲ್ಲಿಗೆ ಸಂಪೂರ್ಣ ಭಕ್ತಿಯೊಂದಿಗೆ ಬರುತ್ತಾರೆ ಮತ್ತು ಪರಮಾನಂದವನ್ನು ಹಿಂದಕ್ಕೆ ಒಯ್ಯುತ್ತಾರೆ. ಹಾಗಾಗಿ ನಿನಗೇನು ಬೇಕೋ ಅದನ್ನು ನೀನು ಕೇಳಬಹುದು ಮತ್ತು ನಿನಗೇನು ಬೇಕೋ ಅದನ್ನು ನೀನು ಮನೆಗೆ ಕೊಂಡೊಯ್ಯಬಹುದು! ಅದನ್ನು ನೀಡಲಾಗುವುದು. ನಿನ್ನೆಲ್ಲಾ ಸಮಸ್ಯೆಗಳು ಮತ್ತು ಚಿಂತೆಗಳನ್ನು ಇಲ್ಲಿ ಬಿಡು.

ಪ್ರಶ್ನೆ: ಗುರುದೇವ, ಅಷ್ಟಾವಕ್ರ ಗೀತೆಯಲ್ಲಿ, ’ನೀನು ಕರ್ತೃವಲ್ಲವಾದ್ದರಿಂದ ಕರ್ತೃತ್ವದಲ್ಲಿ ತೊಡಗಬೇಡ’ ಎಂದು ಹೇಳಲಾಗಿದೆ ಮತ್ತು ಗೀತೆಯು, ’ನೀನು ನಿನ್ನ ಆತ್ಮನಲ್ಲಿ ಸ್ಥಾಪಿತನಾದಾಗ ನಿನಗೊಂದು ಆಯ್ಕೆಯಿದೆ’ ಎಂದು ಹೇಳುತ್ತದೆ. ನಾವು ಕರ್ತೃಗಳಲ್ಲದಿರುವಾಗ ನಮಗೊಂದು ಆಯ್ಕೆಯಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಜ್ಞಾನದಲ್ಲಿ ಹಲವಾರು ಹಂತಗಳಿವೆ. ನೀನು ಕರ್ತೃವಲ್ಲದಿರುವಾಗ, ನೀನು ಕರ್ಮದ ಫಲಗಳನ್ನು ಅನುಭವಿಸುವವನು ಕೂಡಾ ಆಗಿರುವುದಿಲ್ಲ ಮತ್ತು ನೀನು ಕರ್ಮದ ಫಲಗಳನ್ನು ಅನುಭವಿಸುವವನು ಆಗಿಲ್ಲದಿರುವಾಗ, ಯಾವುದೇ ಆಯ್ಕೆಯ ಪ್ರಶ್ನೆಯಾದರೂ ಎಲ್ಲಿರುವುದು? ನಿನಗೆ ಅರ್ಥವಾಯಿತೇ?

ಕ್ವಾಂಟಮ್ ಫಿಸಿಕ್ಸ್‌ನಲ್ಲಿ, ಎಲ್ಲವೂ ಪರಮಾಣುಗಳು ಮತ್ತು ಅಣುಗಳಿಂದ ಮಾಡಲ್ಪಟ್ಟಿದೆಯೆಂದು ಹೇಳುವಂತೆ ಇದು. ಇದ್ದಿಲಿನ ಒಂದು ತುಂಡು ಮತ್ತು ವಜ್ರದ ಒಂದು ತುಂಡು ಎರಡೂ ಪರಮಾಣುಗಳಿಂದ ಮಾಡಲ್ಪಟ್ಟಿವೆ.

ನೀವು ಇದರ ಕಡೆಗೆ ಈ ರೀತಿಯಲ್ಲಿ ನೋಡಿದರೆ, ಕಲ್ಲಿದ್ದಲಿನ ಒಂದು ತುಂಡು ಮತ್ತು ಒಂದು ವಜ್ರದ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಯಾಕೆಂದರೆ ಅವುಗಳೆರಡೂ ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿವೆ. ಆದರೆ ಪ್ರಾಯೋಗಿಕವಾಗಿ, ಕಲ್ಲಿದ್ದಲಿನ ಬದಲು ನೀವು ವಜ್ರದ ಒಂದು ತುಂಡನ್ನು ಬಳಸಲು ಸಾಧ್ಯವಿಲ್ಲ ಮತ್ತು ನೀವು ಕಲ್ಲಿದ್ದಲಿನ ಕಿವಿಯೋಲೆಗಳನ್ನು ಧರಿಸಲೂ ಸಾಧ್ಯವಿಲ್ಲ.

ಹೀಗೆ, ಪ್ರಾಯೋಗಿಕ ಸತ್ಯ ಮತ್ತು ಆಧ್ಯಾತ್ಮಿಕ ಸತ್ಯಗಳ ನಡುವೆ ಒಂದು ವ್ಯತ್ಯಾಸವಿದೆ. ಇವೆರಡನ್ನೂ ನೀವು ಜೀವನದಲ್ಲಿ ಒಟ್ಟಿಗೆ ತೆಗೆದುಕೊಳ್ಳುವಾಗಲೇ ನಿಮ್ಮ ಅನುಭವವು ಪೂರ್ಣಗೊಳ್ಳುವುದು.

’ನಾನು ಕರ್ತೃವಲ್ಲ, ಆದರೆ ನಾನು ನನ್ನ ಕರ್ಮದ ಫಲಗಳನ್ನು ಅನುಭವಿಸುತ್ತಿರುವೆನು’ ಎಂದು ನಿಮಗೆ ನೀವೇ ಪುನರಾವರ್ತಿಸುತ್ತಿದ್ದರೆ, ಆಗ ಅದು ತಪ್ಪು. ಯಾವಾಗೆಲ್ಲಾ ನೀವು ಯಾವುದಾದರೂ ಕರ್ಮದ ಫಲಗಳನ್ನು ಅನುಭವಿಸುತ್ತೀರೋ, ಆಗ ನೀವು ತನ್ನಿಂತಾನೇ ಕರ್ತೃವಾಗುವಿರಿ.

ಅದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಕಿಂ ಕರ್ಮ ಕಿಮಕರ್ಮೇತಿ ಕವಯೋಪ್ಯತ್ರ ಮೋಹಿತಾಃ I
ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞತ್ವಾ ಮೋಕ್ಷ್ಯಸೇಶುಭಾತ್ II’  (೪.೧೬)

’ಮಹಾನ್ ಸಂತರು ಮತ್ತು ಅತ್ಯಂತ ಬುದ್ಧಿವಂತರು ಕೂಡಾ, ಯಾವ ಕರ್ಮವನ್ನು ಮಾಡುವುದು ಮತ್ತು ಯಾವುದನ್ನು ಮಾಡದಿರುವುದು ಎಂಬುದನ್ನು ನಿರ್ಧರಿಸುವಾಗ ಗೊಂದಲಕ್ಕೊಳಗಾಗುತ್ತಾರೆ. ಕರ್ಮವೆಂದರೇನು ಎಂಬುದನ್ನು ನಾನು ನಿನಗೆ ವಿವರಿಸುವೆನು, ಆದರೆ ಮೊದಲು ನೀನು ಒಬ್ಬ ಯೋಗಿಯಾಗಬೇಕು.’

ನೀನೊಬ್ಬ ಯೋಗಿಯಾಗುವಾಗ, ನೀನೇನೇ ಕರ್ಮ ಮಾಡಿದರೂ, ಅದು ಸ್ವಾಭಾವಿಕವಾಗಿ ಮತ್ತು ಅಪ್ರಯತ್ನಕವಾಗಿ, ಎಲ್ಲಾ ರೀತಿಯಿಂದಲೂ ಸರಿಯೇ ಆಗುವುದು.

ಪ್ರಶ್ನೆ: ಗುರುದೇವ, ಪ್ರೀತಿಯೆಂದರೆ ಆನಂದ ಮತ್ತು ಸಂತೋಷವನ್ನು ಹರಡುವುದು ಎಂದಾಗಿದ್ದರೆ, ಮತ್ತೆ ಯಾಕೆ ಅದು ಅಷ್ಟೊಂದು ನೋವನ್ನುಂಟುಮಾಡುತ್ತದೆ?

ಶ್ರೀ ಶ್ರೀ ರವಿಶಂಕರ್: ನಿಮಗೆ ಗೊತ್ತಾ, ನಾವು ಈ ಭೂಮಿಗೆ ಬರುವಾಗ ನಮಗುಂಟಾಗುವ ಮೊದಲನೆಯ ಅನುಭವವೆಂದರೆ ಅದು ನೋವು. ನಾವು ತಾಯಿಯ ಗರ್ಭದಿಂದ ಹೊರ ಬಂದಾಗ ಅದು ಯಾತನಾಮಯವಾಗಿತ್ತು. ಅದು ತಾಯಿ ಮತ್ತು ಮಗು ಇಬ್ಬರಿಗೂ ಯಾತನಾಮಯವಾಗಿತ್ತು.

ಒಂಭತ್ತು ತಿಂಗಳುಗಳವರೆಗೆ ಮಗುವು ತಾಯಿಯ ಗರ್ಭದೊಳಗೆ ಸಂತೋಷವಾಗಿ ತೇಲುತ್ತದೆ ಮತ್ತು ಅದು ಏನೂ ಮಾಡಬೇಕಾಗಿರುವುದಿಲ್ಲ. ಅದರ ಆಹಾರವು ನೇರವಾಗಿ ಹೊಟ್ಟೆಗೆ ಪೂರೈಕೆಯಾಗುತ್ತದೆ ಮತ್ತು ಅದು ಏನನ್ನೂ ಜಗಿಯಬೇಕಾಗಿಯೂ ಇಲ್ಲ.

ಒಂದು ಮಗುವಾಗಿ ನೀವು ಒಂಭತ್ತು ತಿಂಗಳವರೆಗೆ ಎಷ್ಟೊಂದು ಅತ್ಯಾನಂದದ ಸ್ಥಿತಿಯಲ್ಲಿದ್ದಿರಿ ಮತ್ತು ಅಚಾನಕ್ಕಾಗಿ ನೀರು ಮಾಯವಾಯಿತು ಹಾಗೂ ಆ ಅನುಕೂಲ ವಲಯದಿಂದ ಹೊರಬರಲು ನಿಮ್ಮನ್ನು ಬಲವಂತಪಡಿಸಲಾಯಿತು. ಅದು ನಿಮಗೆ ಯಾತನಾಮಯವಾಗಿತ್ತು. ಹೀಗೆ, ಅದು ಭೂಮಿಗೆ ಬರುವ ನಿಮ್ಮ ಮೊತ್ತಮೊದಲನೆಯ ಅನುಭವವಾಗಿತ್ತು.

ನೀವು ಮೊದಲು ಬಂದಾಗ, ಅದು ಎಷ್ಟೊಂದು ಯಾತನಾಮಯವಾಗಿತ್ತೆಂದರೆ ನೀವು ಅಳಲು ಶುರುಮಾಡಿದಿರಿ. ನೀವು ಅಳದೇ ಇರುತ್ತಿದ್ದರೆ, ಆಗ ನಿಮ್ಮ ಹೆತ್ತವರು ಅಳುತ್ತಿದ್ದರು! ಹೀಗೆ ನೀವು ಅತ್ತಿರಿ ಮತ್ತು ನಿಮ್ಮ ಸುತ್ತಲಿದ್ದ ಜನರು ನಕ್ಕರು. ಅದು ಹೇಗಿದ್ದಿರಬಹುದೆಂದು ಸುಮ್ಮನೆ ಊಹಿಸಿ, ಹುಟ್ಟಿರುವುದಕ್ಕೆ ನೀವು ಅತ್ತಿರಿ ಮತ್ತು ಇತರರೆಲ್ಲರೂ ಸಂತೋಷಗೊಂಡರು.

ನಿಮ್ಮ ಎರಡನೆಯ ಅನುಭವವು ಪ್ರೀತಿಯಾಗಿತ್ತು. ಹುಟ್ಟಿದ ಬಳಿಕ ನಿಮ್ಮ ತಾಯಿಯು ನಿಮ್ಮನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಾಗ, ನಿಮಗೆ ಬಹಳಷ್ಟು ಪ್ರೀತಿ ಮತ್ತು ಅಕ್ಕರೆಯ ಅನುಭವವಾಯಿತು. ಕುಟುಂಬದಲ್ಲಿ ಎಲ್ಲರೂ ನಿಮ್ಮನ್ನು ಪ್ರೀತಿಸಿದರು. ನಿಮ್ಮ ಅಜ್ಜಿ, ತಾತ, ಮಾವಂದಿರು, ಅತ್ತೆಯಂದಿರು, ಚಿಕ್ಕಪ್ಪ, ಚಿಕ್ಕಮ್ಮ, ಎಲ್ಲರೂ. ಎಲ್ಲರೂ ನಿಮ್ಮನ್ನು ಪ್ರೀತಿಸಿದರು ಮತ್ತು ನಿಮಗೆ ಬಹಳಷ್ಟು ಗಮನವನ್ನು ನೀಡಿದರು. ಆದರೆ ಇದೆಲ್ಲವೂ ಬಂದುದು, ಸ್ವಲ್ಪ ನೋವನ್ನು ಅನುಭವಿಸಿದ ಮೇಲೆ, ಅಲ್ಲವೇ? ಹೀಗೆ, ನೋವೆಂಬುದು ಪ್ರೀತಿಯ ಒಂದು ಭಾಗವಾಗಿದೆ ಮತ್ತು ನೀವು ಕಹಿಮಾತ್ರೆಯನ್ನು ಸುಮ್ಮನೇ ನುಂಗಬೇಕು. ಅದು ನಿಮಗೆ ಒಳ್ಳೆಯದು. ನೋವಿನಿಂದ ದೂರ ಓಡಿಹೋಗಲು ಪ್ರಯತ್ನಿಸಬೇಡಿ. ನೀವು ನೋವಿನಿಂದ ದೂರ ಓಡಿಹೋದರೆ, ನೀವು ಪ್ರೀತಿಯಿಂದ ಕೂಡಾ ದೂರ ಓಡಿಹೋಗುತ್ತೀರಿ.  

ಪ್ರಶ್ನೆ: ಗುರುದೇವ, ಬಹು ಪ್ರತಿಭಾವಂತನಾಗಲು, ನಾವು ನಮ್ಮ ಶಕ್ತಿಯನ್ನು ಬೇರೆ ಬೇರೆ ಕ್ಷೇತ್ರಗಳ ಕಡೆಗೆ ಹರಿಸುತ್ತೇವೆ ಮತ್ತು ಕೊನೆಗೆ ಸೋತುಹೋಗುತ್ತೇವೆ. ನಾವೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನಿಮಗೆ ಗೊತ್ತಾ, ಯುವ ಹುಡುಗರು ಮತ್ತು ಹುಡುಗಿಯರಾಗಿ, ನೀವು ಇದರ ಬಗ್ಗೆ ಈಗ ಯೋಚಿಸಬಾರದು. ಇದು ಹಲವಾರು ಪ್ರತಿಭೆಗಳನ್ನು ಬೆಳೆಸಿಕೊಳ್ಳಲಿರುವ ಸಮಯವಾಗಿದೆ. ನೀವು ನಿಮ್ಮ ಹದಿಹರೆಯವನ್ನು ದಾಟುವಾಗ ಒಂದು ವಿಷಯವು ನಿಮ್ಮೊಂದಿಗೆ ಉಳಿಯುವುದು. ಆದರೆ ಆ ಸಮಯದ ಮೊದಲು, ನೀವು ಮಾಡಬೇಕಾಗಿರುವ ಒಂದು ವಿಷಯ ಏನೆಂಬುದರ ಬಗ್ಗೆ ಚಿಂತಿಸಬೇಡಿ. ಇಲ್ಲ, ನಾನಿದನ್ನು ಒಪ್ಪುವುದಿಲ್ಲ. ಈ ಕ್ಷಣದಲ್ಲಿ, ನೀವು ಎಲ್ಲಾ ವಹಿವಾಟುಗಳ ಸರದಾರರಾಗಿರಬೇಕು.

ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರತಿಭೆಗಳನ್ನು ಬೆಳೆಯಿಸಿಕೊಳ್ಳುವುದರತ್ತ ಕೆಲಸ ಮಾಡಿ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಿರಿ. ಇದು ಕಲಿಯಲಿರುವ ಸಮಯವಾಗಿದೆ. ನೀವು ಸಂಗೀತ, ಅಡುಗೆ, ಆಟಗಳು, ಚಿತ್ರಕಲೆ, ಮೊದಲಾದವುಗಳಲ್ಲಿ ಮುಂದಿರಬೇಕು. ಮತ್ತೆ, ಆ ನಂತರ ನಿಮ್ಮೊಂದಿಗೆ ಯಾವುದು ಉಳಿಯುವುದು ಎಂಬುದನ್ನು ನೀವು ನೋಡಬೇಕು.

ಪ್ರಶ್ನೆ: ಪಾಪಪ್ರಜ್ಞೆಯನ್ನು ಒಬ್ಬರು ಹೇಗೆ ತೊಡೆದುಹಾಕಬಹುದು?

ಶ್ರೀ ಶ್ರೀ ರವಿ ಶಂಕರ್: ಪಾಪಪ್ರಜ್ಞೆಯನ್ನು ನೀನು ಕೂಡಲೇ ತೊಡೆದುಹಾಕಲು ಯಾಕೆ ಬಯಸುವೆ? ಒಂದು ಸ್ವಲ್ಪ ಪಾಪಪ್ರಜ್ಞೆಯಿದ್ದರೆ ಅದು ನಿಜವಾಗಿ ನಿನಗೆ ಒಳ್ಳೆಯದು. ಆ ಪಾಪಪ್ರಜ್ಞೆಯ ಸ್ವಲ್ಪ ಚುಚ್ಚುವಿಕೆಯು, ಅದೇ ತಪ್ಪನ್ನು ನೀನು ಮತ್ತೆ ಮತ್ತೆ ಮಾಡುವುದರಿಂದ ನಿನ್ನನ್ನು ರಕ್ಷಿಸುವುದು. ಹಾಗಾಗಿ ಸ್ವಲ್ಪ ಪಾಪಪ್ರಜ್ಞೆಯನ್ನು ಇಟ್ಟುಕೊಂಡರೆ ಪರವಾಗಿಲ್ಲ. ಆದರೆ ಅದು ಅತಿಯಾದರೆ, ಆಗ ನಾವು ನೋಡೋಣ.

ಪ್ರಶ್ನೆ: ಗುರುದೇವ, ನೀವು ಬಂಜಾರ ನದಿಗೆ ಕುಂಭಮೇಳಕ್ಕೆ ಬಂದಿದ್ದಾಗ, ಅಲ್ಲಿ ಕೆಲವು ನಾಗ ಸ್ವಾಮಿಗಳಿದ್ದರು, ಅವರು ಬಹಳ ಭಯಾನಕವಾಗಿದ್ದರು. ಅವರು ಯಾಕೆ ಹಾಗಿರುವರು?

ಶ್ರೀ ಶ್ರೀ ರವಿ ಶಂಕರ್: ಅವರು ಯಾಕೆ ಹಾಗಿರುವರೆಂದು ನನಗೆ ಕೂಡಾ ಅಚ್ಚರಿಯಾಗುತ್ತದೆ! (ನಗು) ಬಹುಶಃ ಅವರು ಯಾವತ್ತೂ ಭಗವದ್ಗೀತೆಯನ್ನು ಓದಲಿಲ್ಲ. ಕೃಷ್ಣ ಪರಮಾತ್ಮನು ಅವರನ್ನು ಅನುಮೋದಿಸನು.

ಇದಕ್ಕಾಗಿಯೇ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೇಳಿರುವುದು:

’ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ I
ಮೂಢೋಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ II’  (೭.೨೫)

ಅವನನ್ನುತ್ತಾನೆ, ’ಈ ಜನರು, ಅವರು ನನ್ನನ್ನು ತಿಳಿಯರು.’

ಅಂತಹ ಜನರು ತಮ್ಮದೇ ಪ್ರಪಂಚದಲ್ಲಿ ಕಳೆದುಹೋಗಿರುತ್ತಾರೆ ಮತ್ತು ಅವರು ತಮಗೆ ತಾವೇ ಹಿಂಸೆ ನೀಡುತ್ತಿರುತ್ತಾರೆ. ಆದರೆ ಅವರಲ್ಲಿ ನಿನಗೆ ಕೆಲವು ನಿಜವಾಗಿ ಮಹಾನ್ ಜನರು ಕೂಡಾ ಕಾಣಸಿಗುತ್ತಾರೆ. ಆದುದರಿಂದ, ಕೇವಲ ಬಾಹ್ಯ ರೂಪಕ್ಕನುಸಾರವಾಗಿ ನೀನು ಒಬ್ಬರನ್ನು ’ಒಳ್ಳೆಯವರು’ ಅಥವಾ ’ಕೆಟ್ಟವರು’ ಎಂದು ಹಣೆಪಟ್ಟಿ ಹಚ್ಚಬಾರದು.
ಈ ದೇಶದಲ್ಲಿ ವಿವಿಧ ಸಂಪ್ರದಾಯಗಳು ಮತ್ತು ಯೋಚಿಸುವ ವಿವಿಧ ರೀತಿಗಳು ಇವೆಯೆಂಬುದನ್ನು ನಾವು ಸ್ವೀಕರಿಸಿಕೊಳ್ಳಬೇಕು.

ಪ್ರಶ್ನೆ: ಗುರುದೇವ, ಒಬ್ಬನು ಪಾಪವನ್ನು ಶೇಖರಿಸಿದಾಗ ಅವನಿಗೆ ಸಾಧನೆಯನ್ನು ಮಾಡಬೇಕೆಂದಾಗಲೀ ಅಥವಾ ಸತ್ಸಂಗಕ್ಕೆ ಹೋಗಬೇಕೆಂದಾಗಲೀ ಅನಿಸುವುದಿಲ್ಲವೆಂದು ಹೇಳಲಾಗುತ್ತದೆ. ಆದರೆ ಯಾವುದಾದರೂ ಸಂದರ್ಭದಲ್ಲಿ, ಇದೊಂದು ನಿರ್ದಿಷ್ಟ ಕರ್ಮದಿಂದಾಗಿ ಆಗುತ್ತಿರುವುದೆಂಬುದನ್ನು ನಾವು ಅರಿತುಕೊಂಡರೆ, ಆಗ ನಾವು ಅದನ್ನು ಪುರುಷಾರ್ಥದ (ಪ್ರಯತ್ನಗಳನ್ನು ಮಾಡುವುದು) ಮೂಲಕ ನಿವಾರಿಸಬಹುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿ. ಮಾಡಬಹುದಾದ ಬುದ್ಧಿವಂತಿಕೆಯ ಕೆಲಸ ಕೂಡಾ ಅದೇ ಆಗಿದೆ. ಅಂತಹ ಜನರು ಬುದ್ಧಿವಂತರು. ಅವರನ್ನು ನೀವು ಮೂರ್ಖರು ಅಥವಾ ಅಜ್ಞಾನಿಗಳೆಂದು ಕರೆಯಲು ಸಾಧ್ಯವಿಲ್ಲ. ನೀವು ಮಾಡಿರುವ ಒಂದು ತಪ್ಪು ಕೆಲಸದ ಬಗ್ಗೆ ನಿಮಗೆ ಅರಿವಾದಾಗ, ಈ ಎಲ್ಲಾ ನಕಾರಾತ್ಮಕ ಕರ್ಮಗಳನ್ನು ತುಂಡರಿಸಿ ಹಾಕುವಲ್ಲಿ ಸಾಧನೆ ಮತ್ತು ಸತ್ಸಂಗಗಳು ನಿಮಗೆ ನೆರವಾಗಬಲ್ಲವು.