ಮಂಗಳವಾರ, ಮೇ 28, 2013

ವಿಶಾಲ ಸೂರ್ಯನನ್ನು ಕನ್ನಡಿಯಲ್ಲಿ ಸೆರೆ ಹಿಡಿಯಿರಿ

ಬೆಂಗಳೂರು, ಭಾರತ
೨೮ ಮೇ ೨೦೧೩

’ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ I
ಹತ್ವಾಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇ II’  (೧೮.೧೭)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಯಾರ ಬುದ್ಧಿಯು ಮಾಯೆಯ ಪ್ರಭಾವದಿಂದ ಮುಕ್ತವಾಗಿರುವುದೋ (ಅಲಿಪ್ತ ಬುದ್ಧಿ), ಅಂತಹ ಒಬ್ಬ ವ್ಯಕ್ತಿಯು ಸಂಪೂರ್ಣ ಪ್ರಪಂಚವನ್ನು ನಾಶಪಡಿಸಿದರೂ ಸಹ, ಆಗಲೂ ಅವನು ಯಾವುದೇ ಪಾಪದಿಂದ ಮುಕ್ತನಾಗಿಯೂ ಪ್ರಭಾವಿತನಾಗದೆಯೂ ಆಗಿಯೂ ಉಳಿಯುತ್ತಾನೆ. ಅಂತಹ ಒಬ್ಬ ವ್ಯಕ್ತಿಯು ತನ್ನ ಕರ್ಮಗಳಿಂದ ಬಂಧಿತನಾಗನು."

ಹೇಗಿದ್ದರೂ, ಅಂತಹ ಮಾಯೆಯೊಂದಿಗೆ ಸಂಬಂಧವಿರದ ಜಾಗೃತ ಬುದ್ಧಿಯಿರುವ ಒಬ್ಬ ವ್ಯಕ್ತಿಯು, ಜನರನ್ನು ಕೊಲ್ಲುವಂತಹ ಹಿಂಸಾತ್ಮಕ ಕಾರ್ಯಗಳಲ್ಲಿ ಮೊದಲೇ ತೊಡಗಲಾರನು. ಮತ್ತು ಅವನು ಹಾಗೆ ಮಾಡಿದರೂ ಕೂಡಾ ಅವನದನ್ನು, ರಾಗ-ದ್ವೇಷಗಳಿಂದ ಪ್ರೇರಿತನಾಗಿ ಮಾಡುವ ಹೊರತಾಗಿ ಒಬ್ಬ ಯೋಧನಾಗಿರುವ ತನ್ನ ಕರ್ತವ್ಯದ ಒಂದು ಭಾಗವಾಗಿ ಮಾಡುವನು.

ಹೀಗೆ ಇದು ಮೂರನೆಯ ಹಂತವಾಗಿದೆ. ಇದರಲ್ಲಿ ಅಲಿಪ್ತ-ಬುದ್ಧಿಯಿರುವ ಒಬ್ಬನಿಗೆ ಮಾಯೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಂತಹ ಒಬ್ಬ ವ್ಯಕ್ತಿಯು ಮಾಯೆಯ ರೀತಿಗಳನ್ನು ವಿರೋಧಿಸಲು ಪ್ರಯತ್ನಿಸುವುದೂ ಇಲ್ಲ, ಅದರಿಂದ ತೊಂದರೆಗೊಳಗಾಗುವುದೂ ಇಲ್ಲ. ಅಂತಹ ಒಂದು ಸ್ಥಿತಿಯಲ್ಲಿ, ಅವನು ಮಾಯೆಯಿಂದ ಪ್ರಭಾವಿತನಾಗದೇ ಉಳಿಯುತ್ತಾನೆ ಮತ್ತು ಅದರಿಂದ ಮುಕ್ತನಾಗಿರುತ್ತಾನೆ.

ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ವಾಸ್ತವವಾಗಿ, ಈ ಹಂತದಲ್ಲಿ ಒಬ್ಬನು ಮಾಯೆಯ ರೀತಿಗಳಿಗೆ ಸಾಕ್ಷಿಯಾಗುವುದನ್ನು ಆನಂದಿಸುತ್ತಾನೆ ಮತ್ತು ಅದರಿಂದ ಮನರಂಜನೆಯನ್ನು ಪಡೆಯುತ್ತಾನೆ. ಅದು ಮನರಂಜನೆಯ ಒಂದು ಮೂಲವಾಗುತ್ತದೆ.

ಯಾವುದರಿಂದಾಗಿ ನಾವು ಮೋಹಗಳಲ್ಲಿ ಮತ್ತು ಭ್ರಮೆಯಲ್ಲಿ ಸಿಕ್ಕಿಹಾಕಿಕೊಳ್ಳುವೆವೋ, ಅದೇ ಮಾಯೆಯು, ನಾವು ವಿಕಾಸದ ಮೂರನೆಯ ಹಂತದಲ್ಲಿ ಅರಳುವಾಗ ಮನರಂಜನೆಯ ಒಂದು ಮೂಲವಾಗುತ್ತದೆ. ಆಗ ಮಾಯೆಯು ನಮಗೆ ಮೋಜು ಮತ್ತು ವಿನೋದದ ಒಂದು ಮೂಲವಾಗುತ್ತದೆ.

ಹೀಗೆ, ಮಾಯೆಯು ಬಂಧನ ಮತ್ತು ಭ್ರಮೆಗಳನ್ನು ಸೃಷ್ಟಿಸುತ್ತದೆ ಮತ್ತು ಅದೇ ಸಮಯದಲ್ಲಿ ಮಾಯೆಯು ನಮಗೆ ಆನಂದವನ್ನು ಹಾಗೂ ಸಂತೋಷವನ್ನು ಕೂಡಾ ಕೊಡುತ್ತದೆ!

ಇದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೀಗೆಂದು ಹೇಳಿರುವುದು:

"ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ I
ಮಾಮೇವ ಯೆ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ II"  (೭.೧೪)

ಅವನು ಹೀಗೆಂದು ಹೇಳುತ್ತಾನೆ,"ಓ ಅರ್ಜುನ!ಯೋಗ ಮಾಯೆಯು ದೈವೀ ಗುಣಗಳಿಂದ ತುಂಬಿದೆ ಮತ್ತು ಒಬ್ಬನಿಗೆ ಅದನ್ನು ಅಷ್ಟೊಂದು ಸುಲಭವಾಗಿ ಜಯಿಸಲು ಸಾಧ್ಯವಿಲ್ಲ. ಅದನ್ನು ಜಯಿಸುವುದು ಬಹಳ ಕಷ್ಟವಾಗಿದೆ. ನನ್ನಲ್ಲಿ ಆಶ್ರಯವನ್ನು ಪಡೆಯುವುದರಿಂದ ಮತ್ತು ನನಗೆ ಸಂಪೂರ್ಣವಾಗಿ ಶರಣಾಗತನಾಗುವುದರಿಂದ ಮಾತ್ರ ನಿನಗದನ್ನು ಜಯಿಸಲು ಸಾಧ್ಯ."

ಈ ಸಂಪೂರ್ಣ ಸೃಷ್ಟಿಯು ಮಾಯೆಯಿಂದ ಮರೆಯಾಗಿದೆ. ಎಲ್ಲೆಡೆಯೂ ವಾಯುವಿರುವಂತೆಯೇ, ಸಂಪೂರ್ಣ ಪ್ರಪಂಚವು ಮಾಯೆಯಿಂದ ಆವೃತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಮಾಯೆಯಿಂದ ಆವರಿಸಲ್ಪಟ್ಟಿದೆ. ಪ್ರತಿಯೊಬ್ಬರೂ ಮಾಯೆಯಲ್ಲಿ ಆಳವಾಗಿ ಸಿಕ್ಕಿಹಾಕಿಕೊಂಡಿರುವರು. ಪ್ರತಿಯೊಬ್ಬರ ಮನಸ್ಸೂ ಮಾಯೆಯ ಒಂದಲ್ಲ ಒಂದು ಪ್ರಭಾವದಡಿಯಲ್ಲಿದೆ.

ಇಲ್ಲಿ ಕುಳಿತಿರುವ ನಿಮ್ಮೆಲ್ಲರ ಮನಸ್ಸಿನಲ್ಲೂ ಹಲವಾರು ವಿವಿಧ ಯೋಚನೆಗಳಿವೆ. ನಿಮ್ಮಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಏನೆಲ್ಲಾ ನಡೆಯುತ್ತಿದೆಯೆಂಬುದನ್ನು ಸುಮ್ಮನೆ ಗಮನಿಸಿ! ಓ ದೇವರೇ! (ನಗು) ಮಾಯೆಯೆಂದರೆ ಇದುವೇ.

ಹೀಗೆ ಈ ಸಂಪೂರ್ಣ ಸೃಷ್ಟಿಯು ಮಾಯೆಯಿಂದ ಆವರಿಸಲ್ಪಟ್ಟಿದೆ.

ಆದರೆ ಒಬ್ಬ ಪ್ರಾಮಾಣಿಕ ಭಕ್ತನಿಗೆ ಯಾವತ್ತೂ, "ಓ ಶಿವ ಪರಮಾತ್ಮನೇ, ನನ್ನ ಮನಸ್ಸು ನಿರಂತರವಾಗಿ ನಿನ್ನ ಭಕ್ತಿಯಲ್ಲಿ ನಿರತವಾಗಿದೆ ಮತ್ತು ಯಾವಾಗಲೂ ನಿನ್ನ ಯೋಚನೆಗಳಲ್ಲಿ ಮುಳುಗಿದೆ. ನನ್ನ ಮನಸ್ಸು ನಿನ್ನನ್ನು ಅಷ್ಟೊಂದು ಪೂರ್ತಿಯಾಗಿ ಆವರಿಸಿದೆ. ಹಗಲೂ ಇರುಳೂ ನನಗೆ ನೆನಪಿರುವುದೆಲ್ಲಾ ನೀನು ಮತ್ತು ನೀನು ಮಾತ್ರ" ಎಂದು ಅನ್ನಿಸುತ್ತದೆ.

ಈಗ ಹೀಗಾಗಲು ಹೇಗೆ ಸಾಧ್ಯ? ನಮ್ಮ ಸೀಮಿತ ಮನಸ್ಸು, ಅಗಾಧವಾದ ಹಾಗೂ ಸರ್ವವ್ಯಾಪಿಯಾದ ದೈವತ್ವವನ್ನು ಅವರಿಸಲು ಮತ್ತು ಹಿಡಿದಿಟ್ಟುಕೊಳ್ಳಲು ಹೇಗೆ ಸಾಧ್ಯ?

ನಮ್ಮ ಸೀಮಿತ ಮನಸ್ಸಿನೊಳಗೆ ದೇವರನ್ನು ಹಿಡಿದಿಡಲು ಹೇಗೆ ಸಾಧ್ಯ? ಇದು ಸಾಧ್ಯವೇ? ಹೌದು, ಒಂದು ದೊಡ್ಡ ಆನೆಯನ್ನು ಒಂದು ಚಿಕ್ಕ ಕನ್ನಡಿಯಲ್ಲಿ ಸೆರೆಹಿಡಿಯಲು ಸಾಧ್ಯವಿರುವ ರೀತಿಯಲ್ಲೇ ಇದೂ ಸಾಧ್ಯವಿದೆ.

ಇಡೀ ಸೂರ್ಯನನ್ನು ಒಂದು ಕನ್ನಡಿಯಲ್ಲಿ ಸೆರೆಹಿಡಿಯಲು ನಿಮಗೆ ಸಾಧ್ಯವಿಲ್ಲವೇ? ಸೂರ್ಯ ಬಹಳ ಬೃಹತ್ತಾದುದು, ಆದರೂ ನಿಮಗದನ್ನು ಒಂದು ಚಿಕ್ಕ ಕನ್ನಡಿಯಲ್ಲಿ ಅಷ್ಟೊಂದು ಸಮರ್ಪಕವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತದೆ, ಅಲ್ಲವೇ? ಅದೇ ರೀತಿಯಲ್ಲಿ, ದೈವತ್ವವನ್ನು ಸಂಪೂರ್ಣವಾಗಿ ಸೆರೆಹಿಡಿಯಲು ನಮ್ಮ ಮನಸ್ಸು ಸಮರ್ಥವಾಗಿದೆ. ನಿಮ್ಮಲ್ಲೊಂದು ಶುದ್ಧವಾದ ಹೃದಯವಿದ್ದರೆ, ಆಗ ನೀವೇ ದೇವರು ಎಂದು ಹೇಳಲಾಗಿರುವುದು ಇದಕ್ಕಾಗಿಯೇ! ನೀವೇ ಬ್ರಹ್ಮ. ಆದರೆ ಅದು ಸಾಧ್ಯವಾಗುವುದು ಯಾವಾಗ? ನಿಮ್ಮ ಹೃದಯದ ಕನ್ನಡಿಯು ಸ್ವಚ್ಛವಾಗಿಯೂ ಶುದ್ಧವಾಗಿಯೂ ಇರುವಾಗ, ನೀವು ನಿಮ್ಮಲ್ಲಿಯೇ ದೈವಿಕತೆಯನ್ನು ಗಮನಿಸಬಹುದು. ಕನ್ನಡಿಯು ಮಾಯೆಯಿಂದ ಆವೃತವಾಗಿದ್ದರೆ ಅಥವಾ ಕೊಳೆಯಾಗಿದ್ದರೆ, ಆಗ ಅದು ಕೆಲಸ ಮಾಡದು.

ಒಬ್ಬ ಸಂತನೆಂದರೆ, ಯಾರ ಮನಸ್ಸು ಮತ್ತು ಹೃದಯಗಳು ಒಂದು ಕನ್ನಡಿಯಂತೆ ಶುದ್ಧವಾಗಿರುವುದೋ (ಎಲ್ಲಾ ನಕಾರಾತ್ಮಕತೆಗಳಿಂದ ಮುಕ್ತವಾಗಿ), ಅವನು. ಒಬ್ಬರು ಗುರುವೆಂದರೆ, ಯಾರು ಒಂದು ಸ್ಪಷ್ಟ ಕನ್ನಡಿಯಂತೆ ಶುದ್ಧವೂ ಪಾರದರ್ಶಕವೂ ಆಗಿರುವರೋ ಅವರು.

ಹೀಗೆ ನಿಮ್ಮ ಮನಸ್ಸು ಸ್ವಚ್ಛವೂ ಶುದ್ಧವೂ ಆಗಿರಬೇಕು, ಆಗ ನಿಮ್ಮಲ್ಲಿ ಪೂರ್ಣತೆಯು (ಪ್ರಜ್ಞೆಯ) ಅರಳುತ್ತದೆ. ನಂತರ ನೀವು ಸೂರ್ಯ ಮತ್ತು ಚಂದ್ರರನ್ನು ಕನ್ನಡಿಯಲ್ಲಿ ಸೆರೆಹಿಡಿಯಬಹುದು.

ಆದುದರಿಂದ, ಒಂದು ಕನ್ನಡಿಯು ಹೇಗೆ ಒಂದು ದೊಡ್ಡ ಆನೆಯನ್ನು ಸಂಪೂರ್ಣವಾಗಿ ಸೆರೆಹಿಡಿಯಬಲ್ಲದೋ, ಹಾಗೆಯೇ ನಿಮ್ಮ ಮನಸ್ಸು ಕೂಡಾ ದೈವಿಕತೆಯನ್ನು ಹಿಡಿಯಬಲ್ಲದು. ಆದರೆ ಮನಸ್ಸು ಮಾಯೆಯ ಮನೆಯಾಗಬಾರದು; ಬದಲಾಗಿ ಅದು ದೇವರ ನಿವಾಸ-ಸ್ಥಾನವಾಗಿರಬೇಕು. ಮಾಯೆಯಲ್ಲಿ ಮುಳುಗಿಹೋಗಬಲ್ಲ ಅದೇ ಮನಸ್ಸು ದೇವರಿಗೆ ಸಂಪೂರ್ಣವಾಗಿ ಶರಣಾಗತವಾಗಲೂಬಲ್ಲದು.

ಇಂತಹ ಸುಂದರವಾದ ಜ್ಞಾನವನ್ನು ಕೇಳಿಸಿಕೊಳ್ಳುವ ಮಾತ್ರದಿಂದಲೇ ಮನಸ್ಸು ಬಹಳ ಮೇಲೆತ್ತಲ್ಪಡುತ್ತದೆ ಮತ್ತು ಶುದ್ಧವಾಗುತ್ತದೆ, ಅಲ್ಲವೇ? ಮನಸ್ಸು ತಕ್ಷಣವೇ ಎಲ್ಲಾ ರಾಗ-ದ್ವೇಷಗಳನ್ನು ಕಳೆದು ಸ್ವಚ್ಛವಾಗುತ್ತದೆ.

ನಾವು ನಮ್ಮ ಮುಖದಿಂದ ನಗೆಯನ್ನು ಯಾಕೆ ಕಳೆದುಕೊಳ್ಳುತ್ತೇವೆ? ಕಾರಣವೆಂದರೆ, ರಾಗ-ದ್ವೇಷಗಳು ಮತ್ತು ಮಾಯೆಯಲ್ಲಿ ಸಿಕ್ಕಿಹಾಕಿಕೊಳ್ಳುವಿಕೆ. ನಮ್ಮ ಮನಸ್ಸಿನಲ್ಲಿನ ಜಾಗವು ರಾಗ-ದ್ವೇಷಗಳಿಂದ ತುಂಬಿದಾಗ, ಸಂತೋಷವು ಸಂಪೂರ್ಣವಾಗಿ ಕಳೆದುಹೋಗುತ್ತದೆ. ನಾವು, "ಓ, ಇದು ಸರಿಯಲ್ಲ, ಅದು ಸರಿಯಲ್ಲ! ಈ ವ್ಯಕ್ತಿ ಒಳ್ಳೆಯವನಲ್ಲ! ಆ ವ್ಯಕ್ತಿ ಸರಿಯಿಲ್ಲ!" ಎಂಬಂತಹ ಯೋಚನೆಗಳಲ್ಲಿ ಬಹಳವಾಗಿ ಸಿಕ್ಕಿಬೀಳುತ್ತೇವೆ. ನಾನು ಹೇಳುತ್ತೇನೆ ಕೇಳಿ, ನೀವು ಕೂಡಾ ಹಾಗಿದ್ದರೆ ಮುಂದೆಂದೂ ಸರಿಯಾಗಿರುವುದಿಲ್ಲ! ನಿಮ್ಮೆಲ್ಲಾ ಶಕ್ತಿಯೂ ಅಂತಹ ಯೋಚನೆಗಳಲ್ಲಿ ಸುಮ್ಮನೆ ಕಳೆದುಹೋಗಿಬಿಡುತ್ತದೆ.
ಇಂತಹ ಯೋಚನೆಗಳಲ್ಲಿ ನೀವು ನಿಮ್ಮೆಲ್ಲಾ ಸಕಾರಾತ್ಮಕ ಶಕ್ತಿಯನ್ನು ವ್ಯಯಿಸಿರುವಾಗ, ನೀವು ನಿಷ್ಪ್ರಯೋಜಕರಾಗುವಿರಿ; ಏನನ್ನೂ ಮಾಡಲು ಅಸಮರ್ಥರಾಗುವಿರಿ. ನೀವು ಜೀವನದಲ್ಲಿ ನಿಮ್ಮ ಉತ್ಸಾಹವನ್ನು ಕಳೆದುಕೊಂಡಿರುವಾಗ, ಮತ್ತೆ ಬೇರೇನು ಉಳಿಯುತ್ತದೆ?

ಅಷ್ಟೊಂದು ಸಿಕ್ಕಿಹಾಕಿಕೊಂಡಿರುವುದರಿಂದ, ನೀವು ನಿಮ್ಮೆಲ್ಲಾ ಪ್ರೇಮ, ನಗು ಮತ್ತು ಉತ್ಸಾಹಗಳನ್ನು ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ಉತ್ಸಾಹವನ್ನು ಕಳೆದುಕೊಂಡಾಗ, ನೀವು ಬೇರೆಲ್ಲವನ್ನೂ ಕಳೆದುಕೊಳ್ಳುತ್ತೀರಿ. ನಂತರ ನೀವು ಒಂದು ಜಾಗದಲ್ಲಿ ಸುಮ್ಮನೆ ಕೂರುವಿರಿ ಮತ್ತು ಏನನ್ನೂ ಮಾಡಲಾರಿರಿ. ಇದೆಲ್ಲವೂ ಆಗುವುದು ಯಾಕೆ? ಅದು ಮಾಯೆಯಿಂದಾಗಿ. ಈ ಮಾಯೆಯು ನಿಶ್ಚಿತವಾಗಿಯೂ ಬಹಳ ಆಸಕ್ತಿದಾಯಕವಾದುದು . ಅದು ಯಾರನ್ನು ಬೇಕಾದರೂ ವಶಪಡಿಸಿಕೊಳ್ಳಬಲ್ಲದು ಮತ್ತು ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಲ್ಲದು! ಮತ್ತು ಸಿಕ್ಕಿಬಿದ್ದವರು ಪಾಪ ಕುಣಿಯುತ್ತಾ ಇರುತ್ತಾರೆ.

ಸಂಪೂರ್ಣ ಜಗತ್ತು ಮಾಯೆಯಿಂದಾಗಿ ತೊಂದರೆಗೀಡಾಗಿದೆ. ಇದರಿಂದಾಗಿ, ಹಲವಾರು ಜನರು ಮಾಯೆಯ ಆಟವನ್ನು ಟೀಕಿಸುತ್ತಾರೆ ಮತ್ತು ಅದರಿಂದ ವಿಮುಖರಾಗುತ್ತಾರೆ. ಆದರೆ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಈ ಮಾಯೆಯು ದೈವಿಕ ಗುಣಗಳಿಂದ ತುಂಬಿದೆ ಮತ್ತು ನನ್ನಿಂದ ಜನ್ಮ ತಾಳಿದೆ. ಆದುದರಿಂದ ನೀನದನ್ನು ಗೌರವಿಸಬೇಕು ಮತ್ತು ಆದರಿಸಬೇಕು."

ಕೇವಲ ಕೃಷ್ಣ ಪರಮಾತ್ಮ ಮಾತ್ರ ಅಂತಹ ಒಂದು ವಿಷಯವನ್ನು ಹೇಳಬಲ್ಲನು, ಬೇರೆ ಯಾರೂ ಅಲ್ಲ. ಅದು ಹೇಗೆಂದರೆ, ಒಂದು ಸಿನೆಮಾದ ನಿರ್ದೇಶಕನು ಮಾತ್ರ, "ಎಲ್ಲವೂ ನನಗೆ ಸೇರಿದುದು. ನಾಯಕ ಮತ್ತು ಖಳನಾಯಕ ಇಬ್ಬರೂ ನನಗೆ ಸೇರಿದವರು" ಎಂದು ಹೇಗೆ ಹೇಳಲು ಸಾಧ್ಯವೋ ಹಾಗೆ.

ಖಳನಾಯಕನು ತನಗೆ ಸೇರಿದವನೆಂದು ನಾಯಕನಿಗೆ ಹೇಳಲು ಸಾಧ್ಯವೇ? ಇಲ್ಲ, ಅದು ಆ ರೀತಿಯಾಗಲು ಸಾಧ್ಯವಿಲ್ಲ. ಸಿನೆಮಾದ ನಾಯಕನು ಖಳನಾಯಕನನ್ನು ಖಳನಾಯಕನೆಂದೇ ಪರಿಗಣಿಸಬೇಕು. ಆದರೆ ಸಿನೆಮಾದ ನಿರ್ದೇಶಕನಿಗೆ, "ನಾಯಕ ಮತ್ತು ಖಳನಾಯಕರಿಬ್ಬರೂ ನನಗೆ ಸೇರಿದವರು. ಈ ಸಿನೆಮಾದಲ್ಲಿ ಕೆಲಸ ಮಾಡಲು ನಾನು ಅವರಿಗೆ ಹಣ ನೀಡಿದ್ದೇನೆ. ಅವರಿಬ್ಬರ ನಡುವಿನ ಸಂಘರ್ಷವನ್ನು ಬರೆದಿರುವವನು ನಾನು ಮತ್ತು ಅದರ ಅಂತ್ಯವನ್ನು ಬರೆದಿರುವವನು ಕೂಡಾ ನಾನೇ" ಎಂದು ಹೇಳುವ ಅಧಿಕಾರವಿದೆ.

ಇದಕ್ಕಾಗಿಯೇ ಕೃಷ್ಣ ಪರಮಾತ್ಮನು, "ಈ ಮಾಯೆಯು ನನ್ನಿಂದ ಹುಟ್ಟಿದೆ. ಅದನ್ನು ಪ್ರಚಾರಪಡಿಸುವವನು ನಾನು ಮತ್ತು ನನ್ನ ದೈವಿಕ ಕೃಪೆಯಿಂದ ಮಾತ್ರ ನಿನಗೆ ಅದನ್ನು ಜಯಿಸಲು ಸಾಧ್ಯ. ನೀನು ಎಷ್ಟೇ ಪ್ರಯತ್ನಪಟ್ಟರೂ, ನಿನ್ನ ಪ್ರಯತ್ನಗಳಿಂದಾಗಿ ಮಾತ್ರ ನೀನು ಅದರಿಂದ ಮುಕ್ತನಾಗಲು ಸಾಧ್ಯವಿಲ್ಲ. ನನ್ನ ಆಶ್ರಯ ತೆಗೆದುಕೊಳ್ಳುವುದರಿಂದ ಮಾತ್ರ ನಿನಗೆ ಮಾಯೆಯ ಸಾಗರವನ್ನು ದಾಟಲು ಸಾಧ್ಯ" ಎಂದು ಹೇಳುತ್ತಾನೆ.

ಆದುದರಿಂದ, ನಿಮ್ಮೊಳಗೆ ಆಳವಾಗಿ ಹೋಗುವುದರಿಂದ ಮಾತ್ರ ನಿಮಗೆ ಈ ಮಾಯೆಯನ್ನು ಜಯಿಸಲು ಸಾಧ್ಯ.