ಶನಿವಾರ, ಮೇ 25, 2013

ನೀವು ಬಯಸಬೇಕಾದ್ದು ಏನನ್ನು?

ಬೆಂಗಳೂರು, ಭಾರತ
೨೫ ಮೇ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಆಸೆಗಳನ್ನು ಬಿಟ್ಟುಬಿಡಬೇಕೆಂದು ನಮ್ಮಲ್ಲಿ ಹೇಳಲಾಗಿದೆ, ಆದರೆ ಇನ್ನೊಂದು ಕಡೆಯಲ್ಲಿ, ಮೋಕ್ಷಕ್ಕಾಗಿ (ಜನನ ಮರಣಗಳ ಚಕ್ರದಿಂದ ಮುಕ್ತಿ) ಶ್ರಮಿಸಬೇಕೆಂದು ನಮಗೆ ಸಲಹೆ ನೀಡಲಾಗಿತ್ತು. ಇದು ಕೂಡಾ ನಮ್ಮ ಆಸೆಗಳನ್ನು ಹೆಚ್ಚಿಸುವುದಲ್ಲವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಜೀವನದಲ್ಲಿನ ದೊಡ್ಡ ವಿಷಯಗಳಿಗಾಗಿ ನಿಮ್ಮ ಬಯಕೆಗಳನ್ನು ಹೆಚ್ಚಿಸಿಕೊಳ್ಳಿ, ಚಿಕ್ಕ ವಿಷಯಗಳಿಗಾಗಿಯಲ್ಲ. ಚಿಕ್ಕ ವಿಷಯಗಳಿಗಾಗಿ ಇರುವ ಬಯಕೆಯೇ ಸಮಸ್ಯೆಗಳನ್ನುಂಟುಮಾಡುವುದು. ನಿಮ್ಮಲ್ಲಿ ಬಯಕೆಗಳು ಇರಲೇಬೇಕು ಎಂದಾದಲ್ಲಿ, ಅತ್ಯುನ್ನತವಾದುದನ್ನು ಕೇಳಿಕೊಳ್ಳಿ, ಅಂದರೆ, ಪರಮಾತ್ಮ. ಸಂಪೂರ್ಣ ವಿಶ್ವವನ್ನು ನಿಮ್ಮ ಸ್ವಂತದ್ದಾಗಿ ಮಾಡುವಂತೆ ಬೇಡಿಕೊಳ್ಳಿ, ಈ ವಿಶ್ವದಲ್ಲಿನ ಎಲ್ಲರ ಸಂತೋಷವನ್ನು ಬಯಸಿ.

ಬಯಕೆಗಳು ದೊಡ್ಡದಾಗಿರುವಾಗ ಅವುಗಳು ಹಾನಿಕಾರಕವಾಗಿ ಉಳಿಯುವುದಿಲ್ಲ. ನೀವು ಸತ್ಯವನ್ನು ಬಯಸುವಾಗ, ನೀವು ಸತ್ಯಕ್ಕೆ ಬದ್ಧರಾಗಿರುವಾಗ, ಮನಸ್ಸು ಶಾಂತವೂ ಸ್ಪಷ್ಟವೂ ಆಗುತ್ತದೆ. ಚಿಕ್ಕ ಬಯಕೆಗಳು ಚಡಪಡಿಕೆಗೆ ಕಾರಣವಾಗುತ್ತವೆ, ಆದರೆ ಅತ್ಯುನ್ನತವಾದ ಸತ್ಯಕ್ಕಾಗಿ ಇರುವ ಬಯಕೆಯು ಮನಸ್ಸನ್ನು ಸ್ಥಿರವಾಗಿಸುತ್ತದೆ. ಚಡಪಡಿಕೆಯು ನೋವನ್ನು ತರುವ ಒಂದು ವಿಷಯವಾಗಿದೆ.

ಪ್ರಶ್ನೆ: ಗುರುದೇವ, ಓಂ ಎಂದರೇನು? ಓಂನ್ನು ಯಾರು ಪ್ರಾರಂಭಿಸಿದರು?

ಶ್ರೀ ಶ್ರೀ ರವಿ ಶಂಕರ್: ಓಂ ಎಂಬುದು ಸೃಷ್ಟಿಯ ಸಾರವಾಗಿದೆ, ಒಂದು ಮರದ ಬೀಜದಂತೆ. ಬೀಜದಲ್ಲಿ, ಸಂಪೂರ್ಣ ಮರವಿದೆ, ಸರಿಯಾ? ನೀವೊಂದು ಮಾವಿನ ಬೀಜವನ್ನು ಬಿತ್ತುವಿರಿ ಮತ್ತು ಇಡೀ ಮಾವಿನ ಮರ ಬರುತ್ತದೆ. ಮಂತ್ರಗಳು ಯಾಕೆ ಬೀಜಮಂತ್ರಗಳೆಂದು ಕರೆಯಲ್ಪಡುತ್ತವೆಯೆಂದರೆ, ಇದೇ ಕಾರಣಕ್ಕಾಗಿ.

ಓಂ ಎಂಬುದು ಪರಮ ಬೀಜಮಂತ್ರವಾಗಿದೆ. ಅಂದರೆ, ಎಲ್ಲಾ ಬೀಜಮಂತ್ರಗಳ ಬೀಜಮಂತ್ರ. ಓಂ ಎಂಬುದು ಸೃಷ್ಟಿಯೊಂದಿಗೆ ಬಹಳ ಆರಂಭದಿಂದಲೂ  ಅಥವಾ ಅನಾದಿಕಾಲದಿಂದಲೂ ಇದ್ದ ಶಬ್ದವಾಗಿದೆ.

ಪ್ರಶ್ನೆ: ಗುರುದೇವ, ಈ ಯುಗದಲ್ಲಿ ಇಂತಹ ಒಬ್ಬರು ಮಹಾನ್ ಗುರುವನ್ನು ಹೊಂದಿರಲು ನಾವು ಬಹಳ ಅದೃಷ್ಟವಂತರು, ಆದರೆ ನಾವು ಹಲವಾರು ತಪ್ಪು ಕೆಲಸಗಳನ್ನು ಮಾಡಿದರೂ ನೀವು ನಮ್ಮನ್ನು ಆಯ್ಕೆ ಮಾಡಿರಲು ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ನೋಡಿ, ನೀವು ರೋಗಿಷ್ಠರಾಗಿರುವಾಗ; ಆಗಲಾದರೂ ನೀವು ಆಸ್ಪತ್ರೆಗೆ ಹೋಗುತ್ತೀರಲ್ಲವೇ? ಜನರು ರೋಗಿಷ್ಠರಾಗಿದ್ದು, ಆಗಲೂ ಅವರು ಆಸ್ಪತ್ರೆಗೆ ಹೋಗಲು ಬಯಸದಿದ್ದರೆ, ನೀವು ಅವರಿಗೆ ಏನನ್ನು ಹೇಳುವಿರಿ?
ಆದುದರಿಂದ ನೀವು ತಪ್ಪು ಕೆಲಸಗಳನ್ನು ಮಾಡಿದರೆ ಪರವಾಗಿಲ್ಲ, ಕಡಿಮೆಪಕ್ಷ ಬಂದು ಸತ್ಸಂಗದಲ್ಲಿ ಕುಳಿತುಕೊಳ್ಳಿ. ತಪ್ಪು  ಕೆಲಸಗಳನ್ನು ಮಾಡಲಿರುವ ನಿಮ್ಮ ಪ್ರವೃತ್ತಿಯು ಕಡಿಮೆಯಾಗುತ್ತಾ ಹೋಗುವುದು ಮತ್ತು ಸುಮ್ಮನೇ ಮಾಯವಾಗುವುದು.
ಅದು ಈಗಾಗಲೇ ಆಗುತ್ತಿಲ್ಲವೇ?

ಪ್ರಶ್ನೆ: ನಾವು ಸುದರ್ಶನ ಕ್ರಿಯೆಯನ್ನು ನಿಯಮಿತವಾಗಿ ಮಾಡಿದರೆ, ನಾವು ಪರಿಪೂರ್ಣರಾಗುವೆವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತಾ. ಕೇವಲ ಕ್ರಿಯೆಯನ್ನು ಮಾಡುವುದು ಸಾಕಾಗುವುದಿಲ್ಲ. ನೀನು ನಿನಗೆ ನೀಡಲಾಗುತ್ತಿರುವ ಎಲ್ಲಾ ಜ್ಞಾನವನ್ನು, ಎಲ್ಲಾ ಒಳ್ಳೆಯ ಸಲಹೆಗಳನ್ನು ಕೇಳಿಸಿಕೊಳ್ಳಬೇಕು. ಎರಡೂ, ಅಭ್ಯಾಸ ಮತ್ತು ಸೂತ್ರಗಳು ಜೀವನದಲ್ಲಿ ಆವಶ್ಯಕವಾಗಿವೆ.

ಪ್ರಶ್ನೆ: ಸಾವಿನ ನಂತರ ನನ್ನಲ್ಲಿ ಏನು ಉಳಿಯುತ್ತದೆ? ಅದು ಕೇವಲ ಆತ್ಮವೇ ಅಥವಾ ಮನಸ್ಸು ಕೂಡಾ ಉಳಿಯುವುದೇ?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಮನದಲ್ಲಿರುವ ಭಯದ, ಕಡುಬಯಕೆಗಳ ಮತ್ತು ತಿರಸ್ಕಾರಗಳ ಛಾಪುಗಳು ಯಾವತ್ತೂ ನಿಮ್ಮೊಂದಿಗೆ ಹೋಗುವುವು. ಅದಕ್ಕಾಗಿಯೇ ನಾವು ಧ್ಯಾನ ಮಾಡಬೇಕಾದುದು. ಧ್ಯಾನವು, ಈ ಎಲ್ಲಾ ಬೇಡದಿರುವ ಛಾಪುಗಳನ್ನು ಅಳಿಸಿಹಾಕುತ್ತದೆ.

ಪ್ರಶ್ನೆ: ಎಲ್ಲರೂ ಯಾಕೆ ವಿಭಿನ್ನರಾಗಿರುವರು ಮತ್ತು ಒಂದೇ ರೀತಿಯಾಗಿಲ್ಲ?

ಶ್ರೀ ಶ್ರೀ ರವಿ ಶಂಕರ್: ಎಲ್ಲರೂ ಯಾಕೆ ಒಂದೇ ರೀತಿಯಾಗಿರಬೇಕು?

ನಾವು ನಿನಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ಕೇವಲ ಆಲೂಗಡ್ಡೆಯನ್ನು ತಿನ್ನಿಸಿದರೆ, ಅದೂ ಕೂಡಾ ಅಲೂಗಡ್ಡೆಯ ಒಂದೇ ವ್ಯಂಜನವಾಗಿದ್ದರೆ, ನೀನದನ್ನು ಇಷ್ಟಪಡುವಿಯೇ?

ನೀನು ಬೇರೆ ಬೇರೆ ಬಣ್ಣಗಳ ಬಟ್ಟೆಯನ್ನು ಯಾಕೆ ಧರಿಸುವೆ? ನೀನು ಪ್ರತಿದಿನವೂ ಒಂದೇ ಬಟ್ಟೆಯನ್ನು ಧರಿಸಬೇಕು, ಸೈನಿಕರಂತೆ. ನೀನದನ್ನು ಇಷ್ಟಪಡುವಿಯೇ? ಇಲ್ಲ, ಅಲ್ಲವೇ? ಅದಕ್ಕಾಗಿಯೇ ಭೂಮಿಯ ಮೇಲೆ ಹಲವಾರು ವಿವಿಧ ರೀತಿಯ ಜನರಿರುವುದು, ಯಾಕೆಂದರೆ ಪ್ರಕೃತಿಯು ವೈವಿಧ್ಯತೆಯನ್ನು ಇಷ್ಟಪಡುತ್ತದೆ.

ಪ್ರಶ್ನೆ: ಗುರುದೇವ, ನಿಮ್ಮ ಚೈನಾ ಮತ್ತು ಮಂಗೋಲಿಯಾ ಪ್ರವಾಸದ ಬಗ್ಗೆ ನಮಗೆ ಹೇಳಿ.

ಶ್ರೀ ಶ್ರೀ ರವಿ ಶಂಕರ್: ಹೌದು, ಮಂಗೋಲಿಯಾವು ಬಹಳ ಚೆನ್ನಾಗಿತ್ತು. ಸುಮಾರು ಹತ್ತು ಸಾವಿರ ಜನರು ಸತ್ಸಂಗಗಳಿಗೆ ಬಂದಿದ್ದರು. ಜನರು ಬಹಳ ಸಂತೋಷವಾಗಿದ್ದಾರೆ. ನಾನು ಅಲ್ಲಿಂದ ಹೊರಟಾಗ, ವಿಮಾನ ನಿಲ್ದಾಣದಲ್ಲಿದ್ದ ಎಲ್ಲರೂ; ಭದ್ರತೆಯವರು, ಕ್ಷಕಿರಣ ಯಂತ್ರವನ್ನು ಚಲಾಯಿಸುತ್ತಿದ್ದ ಜನರು, ಅವರೆಲ್ಲರೂ ಆಶೀರ್ವಾದವನ್ನು ಪಡೆಯಲು ಒಬ್ಬರಾದ ಮೇಲೆ ಒಬ್ಬರಂತೆ ಬಂದರು. ಅದು ಮಂಗೋಲಿಯಾದಲ್ಲಿನ ಜನರ ಹೃದಯವನ್ನು ಬಹಳ ಸ್ಪರ್ಶಿಸಿದೆ.

ಚೈನಾದಲ್ಲಿ, ಜನಸಂದಣಿ ಮತ್ತು ನಮ್ಮ ಜನರ ಉತ್ಸಾಹದಿಂದ ಅವರು ಬಹಳ ಭಯಗೊಂಡರು. ಅಲ್ಲಿ ಸತ್ಸಂಗಕ್ಕೆ ಬರಲು ಬಯಸುತ್ತಿದ್ದ ಹಲವಾರು ಜನರಿದ್ದರು. ಚೈನಾದಲ್ಲಿ, ದೊಡ್ಡ ಕೋರ್ಸುಗಳಿಗೆ ನಿಮಗೆ ವಿಶೇಷ ಅನುಮತಿ ಬೇಕಾಗುತ್ತದೆ. ಒಂದು ಕೋರ್ಸಿಗೆ ಕೇವಲ ೫೦ ಜನರಿಗೆ ಮಾತ್ರ ಅನುಮತಿ ಸಿಗುತ್ತದೆ ಮತ್ತು ಒಂದು ದೊಡ್ಡ ಸಭೆಗೆ ೫೦೦ ಜನರಿಗೆ. (ನಮ್ಮ ಸಭೆಯು ಮಿತಿ ಮೀರಿ ಹೋಗುತ್ತದೆ, ಸಹಸ್ರ ಸಂಖ್ಯೆಗಳಲ್ಲಿ. ಆದುದರಿಂದ ಅವರು, ಇಲ್ಲ, ತಾವದನ್ನು ನಿರ್ವಹಿಸಲಾರೆವು ಎಂದು ಹೇಳಿದರು ಮತ್ತು ದೊಡ್ಡ ಸಂಖ್ಯೆಗಳಿಗಿರುವ ಮನವಿಯನ್ನು ತಳ್ಳಿಹಾಕಿದರು.)

ಚೈನಾದಲ್ಲಿ, ಅವರು ಬಹಳ ಶಿಸ್ತುಬದ್ಧರಾಗಿದ್ದಾರೆ. ನಾವು ಅವರಿಂದ ಕಲಿಯಬೇಕು. ತಮ್ಮ ದೇಶಕ್ಕಾಗಿ ಜನರಲ್ಲಿ ಬಹಳಷ್ಟು ಬದ್ಧತೆಯಿದೆ; ಸಂಪೂರ್ಣ ಬದ್ಧತೆ. ಅವರ ಗುಪ್ತ ದಳಗಳು ಬಹಳ ಶಕ್ತಿಶಾಲಿಯಾಗಿವೆ ಮತ್ತು ಬಹಳ ಸಮರ್ಥವಾಗಿವೆ. ನಿರ್ದಿಷ್ಟವಾದ ಕೆಲವು ಹೋಟೇಲುಗಳಲ್ಲಿ ಮಾತ್ರ ವಿದೇಶೀಯರು ತಂಗಬಹುದಾಗಿದೆ ಮತ್ತು ಈ ಹೋಟೇಲುಗಳಲ್ಲಿನ ಪರಿಚಾರಕ, ಪರಿಚಾರಕಿಯರಲ್ಲಿ ಹಲವರು ರಹಸ್ಯ ತನಿಖಾ ದಳದವರಾಗಿದ್ದಾರೆ.

ಅವರ ಮೇಲ್ವಿಚಾರಣೆಯು ಎಷ್ಟು ಚೆನ್ನಾಗಿದೆಯೆಂದರೆ, ಅವರಿಗೆ ಎಲ್ಲರ ಬಗ್ಗೆಯೂ ಎಲ್ಲವನ್ನೂ ತಿಳಿಯಲು ಸಾಧ್ಯವಿದೆ. ಅವರ ರಹಸ್ಯ ಸೇವಾ ದಳಗಳ ಬಗ್ಗೆ ಅವರಿಂದ ನಮ್ಮ ದೇಶವು ಕಲಿಯಬೇಕು, ಆಗ ಈ ದೇಶದಲ್ಲಿ ಯಾವುದೇ ಭಯೋತ್ಪಾದನೆ ಇರದು.

ಜನರನ್ನು ಹೇಗೆ ಮೇಲ್ವಿಚಾರಣೆ ಮಾಡಬೇಕು, ಯಾರನ್ನು ಭೇಟಿಯಾಗಲು ಯಾರು ಬರುತ್ತಿದ್ದಾರೆ ಮತ್ತು ಏನಾಗುತ್ತಿದೆಯೆಂಬುದನ್ನು ಅವರು ಚೆನ್ನಾಗಿ ತಿಳಿದಿರುವರು. ಖಂಡಿತಾ, ಕೆಲವೊಮ್ಮೆ ಜನರಿಗೆ ಅದು ಉಸಿರುಗಟ್ಟಿಸಿದಂತೆ ಆಗುತ್ತದೆ ಯಾಕೆಂದರೆ, ಅತಿಯಾದ ಕಾಠಿಣ್ಯವಿದೆ ಮತ್ತು ಕಾರ್ಯಕ್ರಮಗಳನ್ನು ಮಾಡಲು ಯಾವುದೇ ಸ್ವಾತಂತ್ರ್ಯವಿಲ್ಲ, ಆದರೆ ಅವರಲ್ಲಿ ಒಳ್ಳೆಯ ಬದ್ಧತೆಯಿದೆ.