ಗುರುವಾರ, ಮೇ 16, 2013

ಪ್ರಕೃತಿಯ ನಿಯಮ

ಬೆಂಗಳೂರು, ಭಾರತ
೧೬ ಮೇ ೨೦೧೩
ಮೇಲುನೋಟಕ್ಕೆ ಮೀರಿದ್ದನ್ನು ಕಾಣಲು ಕಲಿಯಿರಿ

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಸ ತಯಾ ಶ್ರದ್ಧಯಾ
ಯುಕ್ತಸ್ತಸ್ಯಾರಾಧನ
ಮೀಹತೇ I
ಲಭತೇ ಚ ತತಃ
ಕಾಮಾನ್ಮಯೈವ
ವಿಹಿತಾನ್ ಹಿ ತಾನ್ II’  (೭.೨೨)

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಒಬ್ಬ ವ್ಯಕ್ತಿಯು ಯಾವುದೇ ದೇವತೆಯನ್ನು ಆರಾಧಿಸುವಾಗಲಾದರೂ, ನನ್ನಿಂದ ಏರ್ಪಡಿಸಲ್ಪಟ್ಟಿರುವಂತೆ, ಅವನು ಖಂಡಿತವಾಗಿಯೂ ತನ್ನ ಆರಾಧನೆಯ ಪುಣ್ಯವನ್ನು ಪಡೆಯುತ್ತಾನೆ. ಭಕ್ತಿಯ ಫಲವನ್ನು ಕರುಣಿಸುವ, ನನ್ನಿಂದ ಹೊರತಾದ ಬೇರೆ ಯಾವುದೋ ವ್ಯಕ್ತಿಯಿರುವನೆಂದು ಯೋಚಿಸಬೇಡ. ಭಕ್ತಿಯ ಎಲ್ಲಾ ಫಲಗಳು ನನ್ನ ಮೂಲಕ ಬರುತ್ತವೆ. ಇದು ಪ್ರಕೃತಿಯ ನಿಯಮ.’

ಪ್ರಕೃತಿಯ ಒಂದು ನಿಯಮವಿದೆ. ನೀವು ನಿಮ್ಮ ಕೈಯನ್ನು ಬೆಂಕಿಯಲ್ಲಿಟ್ಟರೆ ಸ್ವಾಭಾವಿಕವಾಗಿ ಸುಡುವುದು ಮತ್ತು ನೀವು ನಿಮ್ಮ ಕೈಯನ್ನು ನೀರಿನಲ್ಲಿ ಅದ್ದಿದರೆ ನಿಮಗೆ ಅದರ ತಂಪು ಅನುಭವಕ್ಕೆ ಬರುವುದು. ಹಾಗಾಗಿ ಕೃಷ್ಣ ಪರಮಾತ್ಮನು, ’ಎಲ್ಲವೂ ಪ್ರಕೃತಿಯ ನಿಯಮಕ್ಕನುಸಾರವಾಗಿ ನಡೆಯುತ್ತದೆ ಮತ್ತು ಪ್ರಕೃತಿಯ ಈ ನಿಯಮಗಳನ್ನು ಸೃಷ್ಟಿಸಿರುವುದು ನಾನೇ. ಅದಕ್ಕಾಗಿಯೇ, ಎಲ್ಲರಿಗೂ ಅವರ ಭಕ್ತಿಯ ಫಲಗಳನ್ನು ಕರುಣಿಸುವವನು ನಾನು. ಒಬ್ಬರ ಕರ್ಮಗಳನ್ನಾಧರಿಸಿ ಅವರಿಗೆ ಸಿಗಬೇಕಾದ ಪುಣ್ಯಗಳನ್ನು ನಿರ್ಧರಿಸುವುದು ನಾನೇ, ಬೇರೆ ಯಾರೂ ಅಲ್ಲ. ನಾನು ಒಂದು ಆಗಿರುವೆನು (ಶುದ್ಧ ಚೇತನ),
ಆದರೂ ನಾನು ವಿವಿಧ ರೂಪಗಳ ಮೂಲಕ ಪ್ರಕಟಗೊಂಡಿರುವೆನು’ ಎಂದು ಹೇಳುತ್ತಾನೆ.

ಅವನನ್ನುತ್ತಾನೆ,

’ಅಂತವಂತು ಫಲಂ ತೇಷಾಂ ತದ್ ಭವತ್ಯಲ್ಪಮೇಧಸಾಮ್ I
ದೇವಾನ್ ದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ II’  (೭.೨೩)

ಜನರು ಚಿಕ್ಕ ವಸ್ತುಗಳನ್ನು ಬಯಸುವಾಗ, ಅವರ ಬುದ್ಧಿಯು ಬಹಳ ಸೀಮಿತವಾದುದು ಎಂಬುದನ್ನು ಅದು ತೋರಿಸುತ್ತದೆ.
ಅದು ಯಾಕೆಂದರೆ, ಒಮ್ಮೆ ಅವರು ತಾವು ಬಯಸುವ ಈ ಚಿಕ್ಕ ವಸ್ತುಗಳನ್ನು ಪಡೆದಾಗ, ಬಹಳ ಅಲ್ಪಾವಧಿಯಲ್ಲಿ ಅದೆಲ್ಲವೂ ಕೊನೆಯಾಗುತ್ತದೆ.

ತಮ್ಮ ಜೀವಮಾನವಿಡೀ ಜನರು ಒಂದು ಬಡ್ತಿ, ಅಥವಾ ಹೆಚ್ಚು ಹಣ ಅಥವಾ ಒಂದು ಹೆಚ್ಚು ತೃಪ್ತಿದಾಯಕ ಸಂಬಂಧದಂತಹ ಚಿಕ್ಕ ವಿಷಯಗಳನ್ನು ಬಯಸುತ್ತಿರುತ್ತಾರೆ. ಆದರೆ ಇವುಗಳೆಲ್ಲವೂ ಬಹಳ ಸೀಮಿತವಾದವು (ಅಂದರೆ: ಇವೆಲ್ಲವೂ ಚಿರ ಸಂತಸ ಅಥವಾ ತೃಪ್ತಿಯನ್ನು ಕೊಡಲಾರವು). ಆದುದರಿಂದ, ಅಂತಹ ಬಯಕೆಗಳನ್ನು ಪೂರೈಸಲು ಪ್ರಯತ್ನ ಪಡುತ್ತಿರುವ ಮತ್ತು ಈ ಬಯಕೆಗಳನ್ನು ನೆರವೇರಿಸಲು ತಮ್ಮ ಸಂಪೂರ್ಣ ಜೀವನವನ್ನು ವ್ಯಯಿಸುವ ಜನರು ಬುದ್ಧಿವಂತರಲ್ಲ. ಇದೊಂದು ಸೀಮಿತ ಬುದ್ಧಿಶಕ್ತಿಯ ಸಂಕೇತವಾಗಿದೆ. ಹಾಗೆ ಮಾಡುವುದಕ್ಕಾಗಿ ಅವರು ಮೂರ್ಖರೆಂದು ನಾವು ಹೇಳಲು ಸಾಧ್ಯವಿಲ್ಲ, ಆದರೆ ಇದು ಖಂಡಿತವಾಗಿಯೂ ಕಡಿಮೆ ಬುದ್ಧಿಶಕ್ತಿಯ ಒಂದು ಸಂಕೇತವಾಗಿದೆ. ಜೀವನದಲ್ಲಿ ಬಹಳ ಚಿಕ್ಕ ಲಾಭಕ್ಕಾಗಿ ಅವರು ಬಹಳಷ್ಟು ಪ್ರಯತ್ನ ಪಡುತ್ತಾರೆ.

ದೃಶ್ಯಕ್ಕೆ ಸಮರ್ಪಣೆ ಆಗಿರುವುದರಿಂದ (ಅಂದರೆ, ಸಂಕುಚಿತವಾದ ಗುರಿಗಳನ್ನು ಅಥವಾ ಚಿಕ್ಕ ಇಂದ್ರಿಯ ಸುಖಗಳ ಬಯಕೆಯನ್ನು ಹೊಂದಿರುವುದು) ಒಬ್ಬರು ಕೇವಲ ಅಲ್ಪಾಯುಷ್ಯದ ಫಲಗಳನ್ನು ಪಡೆಯುತ್ತಾರೆ. ಆದರೆ ತನ್ನೊಳಗಿರುವ ದೃಷ್ಟನಿಗೆ ಸಮರ್ಪಿತನಾದವನೊಬ್ಬನು (ಅಂದರೆ ಆತ್ಮವು ಒಂದು ಸಾಕ್ಷಿಯಂತೆ) ಶಾಶ್ವತ ಲಾಭಗಳನ್ನು ಪಡೆಯುತ್ತಾನೆ. ಅಂತಹ ಸಮರ್ಪಣೆಯ ಫಲಗಳು ಯಾವತ್ತೂ ಕ್ಷಯಿಸುವುದಿಲ್ಲ.

ಹಾಗಾಗಿ ಸೃಷ್ಟಿ(ಅಥವಾ ಜೀವನ)ಯೆಂಬುದು, ನಿಮ್ಮ ಗಮನವನ್ನು ದೃಶ್ಯದಿಂದ ತಿರುಗಿ ದೃಷ್ಟನ (ನೋಡುವವನ) ಕಡೆಗೆ ಸ್ಥಳಾಂತರಿಸಲಿರುವ ಒಂದು ಪ್ರಕ್ರಿಯೆಯಾಗಿದೆ.

ನೀವು ನಿಮ್ಮ ಶ್ರದ್ಧೆಯನ್ನು ದೃಶ್ಯದ ಮೇಲಿಡುತ್ತೀರಿ (ಇಲ್ಲಿ, ಒಬ್ಬರು ಪ್ರಾರ್ಥಿಸುವ ದೇವರ ಸ್ವರೂಪವನ್ನು ಉಲ್ಲೇಖಿಸುತ್ತಾ) ಯಾಕೆಂದರೆ ನಿಮಗೆ ಅದರಿಂದ ಏನೋ ಸಿಗುತ್ತದೆ. ಆದರೆ ನೀವು ಏನನ್ನೆಲ್ಲಾ ಗಳಿಸುವಿರೋ, ಅದು ನಿಮ್ಮೊಳಗಿರುವ ಭಕ್ತಿಯಿಂದಾಗಿ, ಅದು ನೋಡುಗನ ಭಕ್ತಿಯಾಗಿದೆ. ಒಬ್ಬರು ಜೀವನದಲ್ಲಿ ಏನೆಲ್ಲಾ ಪಡೆಯುವರೋ ಅದು ಅವರ ಶ್ರದ್ಧೆಯಿಂದಾಗಿ. ಶ್ರದ್ಧೆಯು ಯಾವತ್ತೂ ಒಳಗಿನಿಂದ (ನೋಡುಗನಿಂದ) ಬರುತ್ತದೆ.

ಜೀವನದಲ್ಲಿ ನಾವು ಏನೆಲ್ಲಾ ಪಡೆಯುತ್ತೇವೋ ಅದು ನಮ್ಮ ಶ್ರದ್ಧೆಯ ಕಾರಣದಿಂದ, ಮತ್ತು ನಾವು ಏನನ್ನು ಪಡೆಯುತ್ತೇವೆ ಎಂಬುದು, ಯಾವುದಾದರೂ ದೇವಮಾನವ ಅಥವಾ ದೇವತೆ ಅಥವಾ ಒಬ್ಬರು ಗುರು ಅಥವಾ ದೇವರ ಕಡೆಗೆ ನಮ್ಮಲ್ಲಿರುವ ಶ್ರದ್ಧೆಯ ರೀತಿಯನ್ನು ಅವಲಂಬಿಸಿದೆ. ಹಾಗಾಗಿ, ಯಾವುದು ಹೆಚ್ಚು ಮುಖ್ಯವಾದುದು: ದೃಶ್ಯವೇ ಅಥವಾ ಶ್ರದ್ಧೆಯೇ? ಶ್ರದ್ಧೆಯು ಮಾತ್ರ ಮುಖ್ಯವಾದುದು ಎಂದು ಹೇಳಲಾಗಿದೆ. ಮತ್ತು ಈ ಶ್ರದ್ಧೆಯು ಎಲ್ಲಿಂದ ಬರುತ್ತದೆ? ಇಲ್ಲಿಯೇ ಕೃಷ್ಣ ಪರಮಾತ್ಮನು ಹೀಗೆಂದು ಹೇಳುವುದು,

’ಒಬ್ಬರಲ್ಲಿರುವ ಯಾವುದೇ ಶ್ರದ್ಧೆಯು ನನ್ನಿಂದ ಮತ್ತು ನನ್ನಿಂದ ಮಾತ್ರ ಬರುತ್ತದೆ, ಯಾಕೆಂದರೆ ನಾನು ಆ ಶುದ್ಧ ಚೇತನನಾಗಿರುವೆನು. ವಿವಿಧ  ದೇವಮಾನವ ಮತ್ತು ದೇವತೆಯರನ್ನು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವವರು ಅವರೊಂದಿಗೆ ಒಂದಾಗುತ್ತಾರೆ, ಆದರೆ ನನ್ನ ಭಕ್ತರು ನನ್ನನ್ನು ಹೊಂದುತ್ತಾರೆ.’

ಯಾರು ಆತ್ಮನನ್ನು ನಂಬುವರೋ ಅವರು ಆತ್ಮ-ಜ್ಞಾನವನ್ನು ಪಡೆಯುತ್ತಾರೆ. ದೇವಮಾನವರನ್ನು ದೇವರಿಂದ ಬೇರೆ ಎಂದು ನಂಬಿ, ಅವರನ್ನು ಮಾತ್ರ ಪೂಜಿಸುವವರು ಆ ದೇವಮಾನವರನ್ನು ಹೊಂದುತ್ತಾರೆ ಮತ್ತು ಅವರೊಂದಿಗೆ ವಿಲೀನವಾಗುತ್ತಾರೆ. ಹಾಗಾಗಿ ಕೃಷ್ಣ ಪರಮಾತ್ಮನು, ’ಸಂಪೂರ್ಣವಾಗಿ ನನ್ನ ಭಕ್ತನಾದವನೊಬ್ಬನು ಮಾತ್ರ ನನ್ನನ್ನು ಹೊಂದುತ್ತಾನೆ ಮತ್ತು ನನ್ನೊಳಗೆ ವಿಲೀನವಾಗುತ್ತಾನೆ’ ಎಂದು ಹೇಳುತ್ತಾನೆ.

ಹಾಗಾದರೆ ಈ ನಾನು ಯಾರು? - ಇದನ್ನೇ ಕೃಷ್ಣ ಪರಮಾತ್ಮನು ಮುಂದಿನ ಶ್ಲೋಕದಲ್ಲಿ ವಿವರಿಸುವುದು:

’ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ I
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ II’  (೭.೨೪)

’ಶಾಶ್ವತವಾದ, ಸಾಟಿಯಿಲ್ಲದ ಮತ್ತು ಪ್ರಾಪಂಚಿಕ ಲೋಕವನ್ನು ಮೀರಿರುವ ನನ್ನ ದೈವಿಕ ಸ್ವರೂಪವು ನನ್ನ ಪರ-ರೂಪವಾಗಿದೆ, ಅದು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಇದರ ಬಗ್ಗೆ ಅರಿವಿಲ್ಲದವರು ಮತ್ತು ನಾನು ನನ್ನ ಭೌತಿಕ ಶರೀರಕ್ಕೆ ಅಥವಾ ಒಂದು ವ್ಯಕ್ತಿತ್ವಕ್ಕೆ ಸೀಮಿತನು ಎಂದು ಯೋಚಿಸುವವರು ಮೂರ್ಖರು. ನಾನು ದೈವಿಕ ಶಕ್ತಿಯಾಗಿರುವೆನು ಮತ್ತು ಒಬ್ಬ ವ್ಯಕ್ತಿಯಲ್ಲ. ನಾನು ಎಲ್ಲೆಡೆಯೂ ಇರುವ ಶುದ್ಧ ಚೇತನವಾಗಿರುವೆನು. ಅವರಿಗೆ ನನ್ನ ಈ ದೈವಿಕ ರೂಪವು ತಿಳಿಯದು ಮತ್ತು ನನ್ನ ಕಡೆಗೆ ಒಂದು ಸೀಮಿತ ದೃಷ್ಟಿಕೋನದಿಂದ ನೋಡುವರು’ ಎಂದು ಅವನು ಹೇಳುತ್ತಾನೆ.

ಒಂದು ಸೀಮಿತ ದೃಷ್ಟಿಯಿಂದ ನೋಡುವುದು ಎಂದರೆ ಏನರ್ಥ? ಅದರರ್ಥ, ’ಓ, ಅವರು ಆ ವ್ಯಕ್ತಿಯತ್ತ ನೋಡಿದರು ಮತ್ತು ಅವರು ನನ್ನತ್ತ ನೋಡಲಿಲ್ಲ. ಅವರು ಆ ವ್ಯಕ್ತಿಯೊಂದಿಗೆ ಮಾತನಾಡಿದರು ಮತ್ತು ಅವರು ನನ್ನೊಂದಿಗೆ ಮಾತನಾಡಲಿಲ್ಲ’ ಎಂಬಂತಹ ಚಿಕ್ಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು. ಇದೆಲ್ಲವೂ ಬಹಳ ಸಣ್ಣ ನಡವಳಿಕೆಯಾಗಿದೆ.

ನಿಮ್ಮ ಮಾನವ ಬುದ್ಧಿಯೊಂದಿಗೆ ನೀವು ನಿಮ್ಮ ಗುರುವನ್ನು ನೋಡಬಾರದೆಂದು ಭಾರತೀಯ ಸಂಪ್ರದಾಯದಲ್ಲಿ ಯಾವತ್ತೂ ಹೇಳಲಾಗಿದೆ. ಇದು ಯಾಕೆಂದರೆ, ಹಾಗೆ ಮಾಡಿದರೆ, ಆಗ ನೀವು, ’ಗುರುದೇವರು ಅವನನ್ನು ನೋಡಿದರು, ಆದರೆ ನನ್ನ ಕಡೆಗೆ ನೋಡಲಿಲ್ಲ. ಗುರುದೇವರು ಬೇರೆ ಯಾರೊಂದಿಗೋ ಮಾತನಾಡಿದರು, ಆದರೆ ನನ್ನೊಂದಿಗಲ್ಲ. ಅವರು ಈ ವ್ಯಕ್ತಿಯೊಂದಿಗೆ ಹೆಚ್ಚು ಮಾತನಾಡುತ್ತಾರೆ, ಆದರೆ ನನ್ನೊಂದಿಗೆ ಕಡಿಮೆ. ಅವರು ಇತರರನ್ನು ನನಗಿಂತ ಹೆಚ್ಚು ಪ್ರೀತಿಸುತ್ತಾರೆ’ ಎಂಬಂತಹ ಸಣ್ಣ ಯೋಚನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ಅಂತಹ ಯೋಚನೆಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಇವುಗಳೆಲ್ಲಾ ಬರುವುದು ಸೀಮಿತವಾದ ಮಾನವ ಬುದ್ಧಿಯ ಕಾರಣದಿಂದಾಗಿ.

ಒಮ್ಮೆ ನೀವು ಗುರುವಿನೊಂದಿಗಿದ್ದರೆ, ಮತ್ತೆ ಅಷ್ಟೇ! ನಿಮ್ಮ ಭಕ್ತಿ ಮತ್ತು ಅವರಿಗೆ ನಿಮ್ಮ ಕಡೆಗಿರುವ ಪ್ರೀತಿಯು ಸಂಪೂರ್ಣವಾದುದೆಂದು ತಿಳಿಯಿರಿ. ಅದನ್ನು ಒಂದು ಚೂರೂ ಸಂಶಯಿಸಬೇಡಿ ಅಥವಾ ಪ್ರಶ್ನಿಸಬೇಡಿ. ಗುರುವು ನಿಮ್ಮನ್ನು ಪ್ರೀತಿಸುವರೇ ಅಥವಾ ಇಲ್ಲವೇ ಎಂಬುದಾಗಿ ಯೋಚಿಸಬೇಡಿ, ಯಾಕೆಂದರೆ ಗುರುವೆಂದರೆ ಒಂದು ಶಕ್ತಿ ಹಾಗೂ ಆ ಶಕ್ತಿಯು ನಿಮ್ಮನ್ನು ಬಹಳ ಪ್ರೀತಿಸುತ್ತದೆ. ಅಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲ ಯಾಕೆಂದರೆ, ಪ್ರೀತಿಯೆಂಬುದು ಅದರ ಸ್ವಭಾವವೇ ಆಗಿದೆ.

ಮುಂದಿನ ಶ್ಲೋಕದಲ್ಲಿ ಅವನು ಹೀಗೆಂದು ಹೇಳುತ್ತಾನೆ,

’ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ I
ಮೂಢೋಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ II’  (೭.೨೫)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, ’ನಾನು ಎಲ್ಲರಿಗೂ ಕಾಣಿಸುವುದಿಲ್ಲ ಮತ್ತು ಇದು ಯಾಕೆಂದರೆ ನನ್ನದೇ ಯೋಗಮಾಯೆಯ ಕಾರಣದಿಂದಾಗಿ. ಇದರಿಂದಾಗಿಯೇ ಎಲ್ಲರಿಗೂ ನನ್ನನ್ನು ಗುರುತಿಸಲು ಸಾಧ್ಯವಾಗದೇ ಇರುವುದು. ನನ್ನನ್ನು ತಿಳಿದಿರುವವನೊಬ್ಬನು ಖಂಡಿತವಾಗಿಯೂ ಒಬ್ಬ ಬುದ್ಧಿವಂತ ವ್ಯಕ್ತಿಯಾಗಿರುವನು ಮತ್ತು ಯಾರಿಗೆ ತಿಳಿದಿಲ್ಲವೋ ಅವನು ಅಜ್ಞಾನಿಯಾಗಿರುವನು.’

ಸೂರ್ಯನ ಕಡೆಗೆ ನೋಡಿ, ನಂತರ ನಿಮ್ಮಲ್ಲಿ, ’ಇದು ಸೂರ್ಯನೇ?’ ಎಂದು ಕೇಳುವ ಒಬ್ಬರನ್ನು ನೀವು ಏನೆಂದು ಕರೆಯುವಿರಿ? ಸೂರ್ಯನ ಬಿಸಿಲು ನಿಮ್ಮ ತಲೆಯ ಮೇಲೆ ಬೀಳುತ್ತಿರುವಾಗ, ಅದರ ಉಷ್ಣವು ನಿಮ್ಮ ಸುತ್ತಲಿರುವ ಭೂಮಿಯನ್ನು ಸುಡುತ್ತಿರುವಾಗಲೂ ಒಬ್ಬರು ಅಂತಹ ಒಂದು ಪ್ರಶ್ನೆಯನ್ನು ಕೇಳುವರೇ? ಆ ಪುರಾವೆಯೇ ಅಷ್ಟೊಂದು ಸ್ಪಷ್ಟವಾಗಿದೆ.

ಹಾಗಾಗಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, ’ನನ್ನ ಯೋಗಮಾಯೆಯ ಕಾರಣದಿಂದಾಗಿ, ಎಲ್ಲರಿಗೂ ನನ್ನನ್ನು ನೋಡಲು ಸಾಧ್ಯವಿಲ್ಲ. ಈ ಸಂಪೂರ್ಣ ಸೃಷ್ಟಿಯಲ್ಲಿ, ಸಂಭವಿಸುವ ಎಲ್ಲದರ ಹಿಂದಿರುವ ಅವ್ಯಯನು (ಶಾಶ್ವತವಾದ ತತ್ವ ಅಥವಾ ಎಲ್ಲಾ ಕಾರಣಗಳಿಗೆ ಆಧಾರವಾಗಿರುವ ಕಾರಣ) ನಾನಾಗಿರುವೆನು. ನಾನು ಯಾವುದರಿಂದಲೂ ಕ್ಷೀಣಿಸಲ್ಪಡುವುದಿಲ್ಲ ಮತ್ತು ನಾನು ಯಾವುದರಿಂದಲೂ ವರ್ಧಿಸಲ್ಪಡುವುದಿಲ್ಲ. ನಾನು ಬದಲಾಗದೇ ಉಳಿಯುತ್ತೇನೆ. ನಾನು ಯಾವತ್ತೂ ಹುಟ್ಟಲಿಲ್ಲ ಮತ್ತು ನನಗೆ ಯಾವುದೇ ಅಂತ್ಯವಿಲ್ಲ. ಒಬ್ಬ ಮೂರ್ಖ ವ್ಯಕ್ತಿಗೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ಸ್ವಲ್ಪವಾದರೂ ಬುದ್ಧಿ ಯಾರಲ್ಲಿದೆಯೋ ಅವನಿಗೆ, ನಾನು (ಆತ್ಮ ಅಥವಾ ಶುದ್ಧ ಚೇತನವಾಗಿ) ಹುಟ್ಟಿಯೂ ಇಲ್ಲ ನನಗೆ ಸಾವೂ ಇಲ್ಲವೆಂಬುದು ಒಳಗಿನಿಂದ ತಿಳಿದಿರುತ್ತದೆ. ನನ್ನ ಸುತ್ತಲಿರುವ ಜನರಿಗೆ ನಿರಂತರವಾಗಿ ವಯಸ್ಸಾಗುತ್ತಿದ್ದರೂ ಮತ್ತು ವಯಸ್ಸಿನೊಂದಿಗೆ ಬದಲಾಗುತ್ತಿದ್ದರೂ, ನಾನು ಯಾವತ್ತೂ ಜನನ ಅಥವಾ ಮರಣವನ್ನು ಅನುಭವಿಸಿಲ್ಲ. ನಾನು ಬದಲಾಗದೇ ಇರುವಾಗ, ನಾನು ಮರಣ ಹೊಂದಲು ಹೇಗೆ ಸಾಧ್ಯ?’

ಯಾವುದು ನಿರಂತರವಾಗಿ ಬದಲಾಗುವುದೋ ಅದು ಮಾತ್ರ ಮರಣ ಹೊಂದಲು ಸಾಧ್ಯ.

ನಮ್ಮೊಳಗೆ ಯಾವತ್ತೂ ಬದಲಾಗದೇ ಇರುವ ಏನೋ ಒಂದಿದೆ. ಒಂದಲ್ಲ ಒಂದು ಸಮಯದಲ್ಲಿ, ಯಾವುದೋ ಒಂದು ರೀತಿಯಲ್ಲಿ, ಪ್ರತಿಯೊಬ್ಬರೂ ಇದನ್ನು ಅನುಭವಿಸಿದ್ದೇವೆ. ನಮ್ಮಲ್ಲಿನ ಈ ಬದಲಾಗದಿರುವ ಅಂಶದ ಮೇಲೆ ನಾವು ಹೆಚ್ಚು ಗಮನ ಹರಿಸಿದರೆ, ಆಗ ನಾವು ಶಾಶ್ವತರು; ನಾವು ಎಂದಿಗೂ ಇರುವೆವು ಎಂಬ ಈ ಅನುಭೂತಿಯು ಉದಯಿಸುತ್ತದೆ.
ಹೀಗೆ ಇಲ್ಲಿ ಕೃಷ್ಣ ಪರಮಾತ್ಮನು ಆತ್ಮ ತತ್ವದ ಬಗ್ಗೆ ಮಾತನಾಡುತ್ತಾನೆ. ಈ ಆತ್ಮ ತತ್ವವನ್ನು ತಿಳಿದಿರುವವನೊಬ್ಬನು ನಿಜವಾಗಿಯೂ ಬುದ್ಧಿವಂತನೆಂದು ಅವನು ಹೇಳುತ್ತಾನೆ.

ಮುಂದಿನ ಶ್ಲೋಕದಲ್ಲಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ I
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ II’  (೭.೨೬)

’ನನಗೆ ಎಲ್ಲವೂ ತಿಳಿದಿದೆ. ಭೂತಕಾಲದಲ್ಲಿ ನಡೆದಿರುವುದೆಲ್ಲವನ್ನೂ ನಾನು ತಿಳಿದಿರುವೆನು. ವರ್ತಮಾನದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನಾನು ತಿಳಿದಿರುವೆನು ಮತ್ತು ಭವಿಷ್ಯದಲ್ಲಿ ನಡೆಯಲಿರುವುದನ್ನೆಲ್ಲವನ್ನೂ ಕೂಡಾ ನಾನು ತಿಳಿದಿರುವೆನು’ ಎಂದು ಅವನು ಹೇಳುತ್ತಾನೆ.

ನಮ್ಮೊಳಗೆ ಆಳದಲ್ಲಿರುವ ಆತ್ಮವು ಎಲ್ಲವನ್ನೂ ತಿಳಿದಿದೆ. ಅದಕ್ಕೆ, ಭೂತಕಾಲದಲ್ಲಿ ನಡೆದ ಮತ್ತು ಭವಿಷ್ಯದಲ್ಲಿ ನಡೆಯಲಿರುವ ಎಲ್ಲಾ ಘಟನೆಗಳ ಅರಿವಿದೆ. ಯಾವುದಕ್ಕೆ ತಿಳಿಯಲಿರುವ ಸಾಮರ್ಥ್ಯವಿರುವುದೋ ಅದು ಆತ್ಮವಾಗಿದೆ.

ಹಾಗಾಗಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, ’ನಾನು ಎಲ್ಲವನ್ನೂ ಮತ್ತು ಎಲ್ಲರನ್ನೂ ತಿಳಿದಿರುವೆನು, ಆದರೂ ಎಲ್ಲರೂ ನನ್ನನ್ನು ತಿಳಿದಿಲ್ಲ. ಎಲ್ಲವನ್ನೂ ತಿಳಿಯಲು ಸಮರ್ಥವಾಗಿರುವ ಒಂದೇ ಒಂದು ಶಕ್ತಿಯಿರುವುದು ಮತ್ತು ಅದುವೇ ಆತ್ಮವಾಗಿದೆ. ಸೃಷ್ಟಿಯಲ್ಲಿನ ವಸ್ತುಗಳು ಬೇರೆ ಬೇರೆಯಾಗಿ ಕಾಣಿಸುತ್ತವೆ, ಆದರೂ ಅವುಗಳಲ್ಲಿ ಯಾವುದಕ್ಕೂ ನಿಜವಾಗಿ ನನ್ನನ್ನು ತಿಳಿಯದು, ಆದರೂ ನಾನು ಅವುಗಳೆಲ್ಲವನ್ನೂ ತಿಳಿದಿರುವೆನು.

ಜನರು ಹೆಚ್ಚಾಗಿ ಕೇಳುತ್ತಾರೆ, ’ಇದೆಲ್ಲಾ ನಿಜವಾದರೆ, ಮತ್ತೆ ಯಾಕೆ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ಆಧ್ಯಾತ್ಮಿಕ ಪಥದಲ್ಲಿ ನಡೆಯುವುದಿಲ್ಲ?’

’ಮೂರ್ಖರಿಗೆ ನನ್ನನ್ನು ತಿಳಿಯಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬುದ್ಧಿವಂತರಿರುವುದು ಕೆಲವೇ ಕೆಲವು ಮಂದಿ ಮತ್ತು ಅವರಿಗೆ ಮಾತ್ರ ನನ್ನನ್ನು ಅರಿಯುವ ಸಾಮರ್ಥ್ಯವಿರುವುದು. ಯಾರು ನನ್ನನ್ನು ಅರಿತಿರುವರೋ ಅದುವೇ ಅವರು ಒಬ್ಬ ಬುದ್ಧಿವಂತ ವ್ಯಕ್ತಿಯಾಗಿರುವುದರ ನಿಜವಾದ ಸಂಕೇತ’ ಎಂದು ಹೇಳುತ್ತಾ ಕೃಷ್ಣ ಪರಮಾತ್ಮನು ಇದನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾನೆ.